Tuesday, December 19, 2017

"ಏನಾಯ್ತ್ಹೇಳೇ....."


ಏನಾಯ್ತೆ ಸಿಂಗಾರಿ ಸಿರಿಮೊಗದ ಬಂಗಾರಿ
ಏನಮ್ಮ ನಿನಚಿಂತೆ ಹೇಳ್ಬಾರದೆ ? ||
ಮೌನವಾಚರಿಸುತ್ತ ಕುಳಿತೆಯೇತಕೆ ಹೀಗೆ
ನಿನ್ನನರಿಯುವುದೆಂತು ನೀನ್ಹೇಳದೆ ? || ೧ ||

ತಿದ್ದಿ ತೀಡಿದ ರೂಪ ಕಳೆದುಕೊಂಡಿದೆ ಕಳೆಯ
ಮುದ್ದು ಸುರಿಯುವ ತುಟಿಗೆ ನಗುವಿಲ್ಲದೆ ||
ಸದ್ದಿರದೆ ಹೊಳೆಯುತಿದೆ ಕಿವಿಯ ಚಿನ್ನಾಭರಣ
ಬಿದ್ದುಕೊಂಡಿದೆ ಕೇಶ ಒಪ್ಪವಿರದೆ || ೨ ||

ಖಾಲಿ ಹಣೆಯಿದುಯೇಕೆ ದೃಷ್ಟಿ ಕೆಳಗಿಹುದೇಕೆ
ಬೋಳುಗುಡುತಿದೆಯಲ್ಲ ನಿನ್ನ ಕೊರಳು ||
ಸೋಲೆಂಬ ಭಾವವದು ನಿನ್ನ ಕಾಡಿಹುದೇನು ?
ಗೆಲ್ಲುವೆನು ನಾನೆಂದು ತಿರುಗಿ ಮರಳು || ೩ ||

ಕೊರಳಲ್ಲಿ ಸರವಿರಿಸು ಹಣೆಗೊಂದು ಬೊಟ್ಟನಿಡು
ಜರತಾರಿ ದಿರಿಸೊಡತಿ ಚಂದ ಬಾಲೆ ||
ಧರಿಸೊಂದು ನಗುವನ್ನು ಪುಟ್ಟ ತುಟಿಗಳ ಮೇಲೆ
ಇರಿಸು ದೃಷ್ಟಿಯ ಚುಕ್ಕಿ ಕೆನ್ನೆ ಮೇಲೆ || ೪ ||

- ಸುರೇಖಾ ಭೀಮಗುಳಿ
19/12/2017
ಚಿತ್ರ : ಅಂತರ್ಜಾಲ

Thursday, November 23, 2017

" ನಮ್ ಹುಡುಗಿ ... ಕಣ್ ಹಾಕ್ಬೇಡಿ..." - ಕುಸುಮ ಷಟ್ಪದಿಯಲ್ಲಿ ಒಂದು ರಚನೆ


ಮಳೆಯೂರಿನಾ ಹುಡುಗಿ
ಹೊಳೆಯ ನೀರಲಿ ನಡುಗಿ
ಬಳಸಿ ನಿಂತಿಹಳವಳು ಬಿಂದಿಗೆಯನು ||
ಎಳೆನಿಂಬೆಯಂತಿಹಳು
ಹೊಳೆವ ಕಿರುಗಣ್ಣವಳು
ಕಳಿಸಿಹಳು ಸೆರೆಹಿಡಿದ ಚಿತ್ರವನ್ನು || ೧ ||

ನೀರು ತಾರಲು ಹೋಗಿ
ಜಾರಿ ಬಿದ್ದಿಹಳಾಗಿ
ಬಾರೆಂದು ಕರೆದಿಹಳು ಕರೆಯ ಮಾಡಿ ||
ತೌರಿನೆಡೆ ಸುಳಿವುದಕೆ
ಬೇರೆ ಕಾರಣ ಬೇಕೆ
ಸಾರಿ ಹೊರಟಿಹೆನು ನಾನೇರಿ ಗಾಡಿ || ೨ ||

ತೌರಿನಲ್ಲರಳುತಿಹ
ಪಾರಿಜಾತದ ಪುಷ್ಪ
ಮಾರುಹೋಗಿನೆನಿವಳ ನಗುವ ನೋಡಿ ||
ದಾರಿಗಡ್ಡವ ಕಟ್ಟಿ
ಮೂರು ಮುತ್ತನ್ನಿಕ್ಕಿ
’ಬಾರತ್ತೆ’ಯೆನ್ನುವಳು ತನ್ನ ಜೋಡಿ || ೩ ||

ಸಣ್ಣ ಪ್ರಾಯದ ಹುಡುಗಿ
ಕಣ್ಣ ಸೆಳೆಯುವ ಬೆಡಗಿ
ಅಣ್ಣನಾ ಮಗಳೀಕೆ ನನ್ನ ಸೊಸೆಯು ||
ತಣ್ಣಗಿಹಳಿವಳೆಂದು
ಬಣ್ಣನೆಯ ಮಾಡಿದರೆ
ಮಿಣ್ಣಗಿಣುಕುವುದೊಂದು ಪುಟ್ಟ ನಗೆಯು || ೪ ||

- ಸುರೇಖಾ ಭೀಮಗುಳಿ
23/11/2017
ಚಿತ್ರ : ಅಂತರ್ಜಾಲ
ತಿದ್ದುಪಡಿ ಮಾರ್ಗದರ್ಶನ :  Vishwanath Kukian K ಸರ್

Tuesday, November 21, 2017

" ಮೂರು ತುಂಡಿನ ದಿರಿಸು "


ನನ್ನ ಮಗಳಿಗೆಯಿನ್ನು ಸಧ್ಯದಲ್ಲಿಯೆ ಮದುವೆ
ಮುನ್ನವುಳಿದಿಹ ಕೆಲಸ ಸಾಕಷ್ಟಿದೆ ||
ಚಿನ್ನ ಮಾಡಿಸಬೇಕು ಜವಳಿ ಕೊಳ್ಳಲುಬೇಕು
ನನ್ನ ಸಂಭ್ರಮ ನಿಮಗೆ ಗೊತ್ತೇಯಿದೆ ||

ಮೂರು ತುಂಡಿನ ದಿರಿಸು ಸ್ಯಾಟಿನ್ನು ಬಟ್ಟೆಯದು
ಮಾರುಕಟ್ಟೆಗೆ ಬಂದ ರಾತ್ರಿಯುಡುಪು ||
ಜಾರು ಬಟ್ಟೆಯ ಅಂದ ಆಹಾಹವೇನ್ಚಂದ
ತೋರಿಸಿದೆ ಮಗಳಿಂಗೆ ವಸ್ತ್ರದೊನಪು ||

ಬೆಲೆಯಿದ್ದರೇನಂತೆ ಕೊಳ್ಳೋಣ ನಿನಗೊಂದು
ಚಲುವೆ- ಮದುವೆಯ ರಾತ್ರಿ ಧರಿಸು ನೀನು ||
ಮೆಲುನುಡಿದು ಕೊಡಿಸಿದೆನು ಮಗಳ ಖುಷಿಪಡಿಸಿದೆನು
ಸಲುಗೆಯಲ್ಲವಳ ಭುಜ ತಬ್ಬಿ ನಾನು ||

ಮುದದಿ ಧಿರಿಸನು ನೋಡಿ ಪಿಸುನುಡಿದಳೋ ಗೆಳತಿ
’ಮೊದಲ ರಾತ್ರಿಗೆ ಧಿರಿಸದೇನಕಂತೆ ?’ ||
ಬದಲಾದ ಕಾಲದಿಹ ಹೆಣ್ಣು ಮಕ್ಕಳ ಮಾತು
ಕದಪು ಕೆಂಪೇರಿಹುದು ಮನಸು ಸಂತೆ ||

- ಸುರೇಖಾ ಭೀಮಗುಳಿ
21/11/2017
ಚಿತ್ರ : ಅಂತರ್ಜಾಲ
ತಿದ್ದುಪಡಿ ಮಾರ್ಗದರ್ಶನ : ವಿಶ್ವನಾಥ್ ಸರ್.

ಹಿನ್ನೆಲೆ : ಕಾರ್ಪೋರೇಷನ್ ಸಮೀಪದ YWCA ಸ್ವಯಂ ಅಡುಗೆ ವಸತಿಗೃಹದಲ್ಲಿದ್ದ ದಿನಗಳವು... ವಯಸ್ಸು ಇಪ್ಪತ್ತು ದಾಟಿತ್ತು. ಆಗಷ್ಟೇ ಮೂರು ತುಂಡಿನ ರಾತ್ರಿಯುಡುಪು ( 3 ಪೀಸ್ ನೈಟಿ) ಮಾರುಕಟ್ಟೆ ಪ್ರವೇಶಿಸಿತ್ತು. ಸಾಧಾರಣ ಚೂಡಿದಾರಗಳು ನೂರಿನ್ನೂರು ರೂಪಾಯಿಗೆ ದೊರೆಯುತ್ತಿದ್ದ ಕಾಲದಲ್ಲಿ ಈ ತ್ರೀಪೀಸ್ ನೈಟಿಯ ಬೆಲೆ ನಾನೂರರ ಮೇಲೆ ! ನಮಗೋ ಅಂತದ್ದೊಂದು ಕೊಳ್ಳುವ ಬಯಕೆ ! ಆಗಲೇ ರೂಂಮೇಟ್ ಒಬ್ಬಳಿಗೆ ಮದುವೆ ನಿಗದಿಯಾಯ್ತು. ಆವಳು ತ್ರೀಪೀಸ್ ನೈಟಿ ಕೊಂಡಳು... ಮತ್ತದನ್ನು ಮೊದಲರಾತ್ರಿ ಧರಿಸುವುದೆಂದು ನಿರ್ಧರಿಸಿದಳು. ಆಗ ಹಾಸ್ಟೆಲ್ ನಲ್ಲಿದ್ದ ಸ್ವಲ್ಪ ಮುಂದುವರೆದವಳಿಂದ ಬಂದ ಮಾತು ’ಮೊದಲ ರಾತ್ರಿಗೆ ನೈಟಿ ಎಂತಕ್ಕೆ ?’.... ಆಗಿನ ಕಾಲಕ್ಕೆ ನಮಗೆ ಅದೊಂದು ಹೊಸ ಕಲ್ಪನೆ ! ನಾವೋ... ನಮ್ಮ ಮುಗ್ಧತೆಯೋ.... ಕೊನೆಗೂ ನನ್ನ ತ್ರೀಪೀಸ್ ನೈಟಿ ಕನಸು ನನಸಾಗಲೇ ಇಲ್ಲ.... ಹ ಹ ಹಾ...

"ನನ್ನೊಳಗಿನ ಕಾವ್ಯಕನ್ನಿಕೆ"


ನನ್ನ ಕನ್ನಿಕೆಗೀಗ ವಯಸು ಇಪ್ಪತ್ತೊಂದು
ಕನ್ನೆಯವಳಿಗೆ ಬರಿದೆ ಹಗಲುಗನಸು ||
ಚೆನ್ನ ಕವನವ ಬರೆಯಲೆನ್ನ ಕಾಡುತ್ತಿಹಳು
ಮೊನ್ನೆಯಿಂದಲು ಲೀನವೆನ್ನ ಮನಸು || ೧ ||


ಕಟ್ಟಿ ಕೊಟ್ಟಿಹಳೆನಗೆ ತನ್ನ ಕನಸನ್ನೆಲ್ಲ
ಬೆಟ್ಟದಷ್ಟಿಹುದವಳ ನಿಯಮಾವಳಿ ||
ದೃಷ್ಟಿ ತೆಗೆಯುತ್ತವಳ ಹೊಸ ಕವನ ಹೊಸೆದಿರಲು
ಸೃಷ್ಟಿಗೊಂಡಿಹುದಿಲ್ಲಿ ದೀಪಾವಳಿ || ೨ ||


ಮೊದಲು-ಕೊನೆಯಲಿ ಪ್ರಾಸ ಕೂಡಿ ಬರಲೇ ಬೇಕು
ಮಧುರ ಪ್ರೇಮವು ಉಕ್ಕಿ ಹರಿಯಬೇಕು ||
ಬದುಕು ಭಾವವು ಬೇಕು ಮೋಹದುಸಿರೂ ಬೇಕು
ಕದ ತೆರೆದು ಕನಸಿನೊಳ ಜಾರಬೇಕು || ೩ ||


ಮೊಗೆಮೊಗೆದು ಕನಸುಗಳ ಹಿಡಿದಿಡುವ ಸಂಭ್ರಮದಿ
ಮೊಗವರಳುತಿದೆಯಲ್ಲ ಯಾಕೆ ಹೀಗೆ ? ||
ಸೊಗಸು ಕವನವು ಮೂಡೆ ಚಿಗುರುತಿಹುದನುಮಾನ
ಮಗಳರಳುತಿಹಳೇನು ನನ್ನ ಒಳಗೆ ? || ೪ ||


- ಸುರೇಖಾ ಭೀಮಗುಳಿ
17/11/2017
ಚಿತ್ರ : ಅಂತರ್ಜಾಲ
ಸಹಕಾರ : ಮೋಹಿನಿ ದಾಮ್ಲೆ

Wednesday, November 15, 2017

" ಕಾಡುತಿಹ ಕನಸು "


ಹೊಚ್ಚಹೊಸ ಪರಿಸರದಿ ತಂಪು ಸಂಜೆಯ ಸಮಯ
ಬಿಚ್ಚಿಡುವೆ ನಿನ್ನೆದುರು ನನ್ನ ಕನಸು || ಪಲ್ಲವಿ ||
ಮೆಚ್ಚಿ ಬೆಸಗೊಂಡಿರುವ ಮಧುರ ಸಂಬಂಧವಿದು
ಹುಚ್ಚೆದ್ದು ಕುಣಿದಿರುವುದೆನ್ನ ಮನಸು || ಅನುಪಲ್ಲವಿ ||

ಸದ್ದು ಮಾಡದೆಯೆದ್ದು ತಲೆಗೆ ಸ್ನಾನವ ಮಾಡಿ
ಎದ್ದೇಳಿ ಬೆಳಗಾಯಿತೆನ್ನಬೇಕು ||
ಮುದ್ದು ಮಾಡುತ ನೀನು ನನ್ನನೆಬ್ಬಿಸುವಾಗ
ನಿದ್ದೆ ಮಾಡಿದ ತೆರದಿ ನಟಿಸಬೇಕು || ೧ ||

ನಸುಮುನಿಸು ತೋರುತಲಿ ನೀನೆದ್ದು ಹೊರಟಾಗ
ಮುಸುಕು ಸರಿಸುತ ನಿನ್ನನೆಳೆಯಬೇಕು ||
ಹುಸಿಕೋಪದಲಿ ನೀನು 'ಸಾಕುಬಿಡಿ'ರೆನ್ನುತ್ತ
ಕೊಸರಾಡಿ ನನ್ನೊಳೊಂದಾಗಬೇಕು || ೨ ||

- ಸುರೇಖಾ ಭೀಮಗುಳಿ
03/11/2017
ಚಿತ್ರಮೂಲ : ಅಂತರ್ಜಾಲ
ತಿದ್ದುಪಡಿ ಮಾರ್ಗದರ್ಶನ : ವಿಶ್ವನಾಥ್ ಸರ್

" ಜಾತ್ರೆಯ ನೆಪದಲ್ಲಿ ..."


ತುಂಬು ಗಲ್ಲದ ಹುಡುಗ ಹೇಳುವೆನು ನನ್ನೊಳಗ
ತುಂಬಿರುವುದೆನ್ನೊಳಗೆ ನಿನ್ನ ಬಿಂಬ || ಪಲ್ಲವಿ ||
ನಂಬಿರುವ ಮನದನ್ನೆ ಹೇಳುವುದ ನೀ ಕೇಳು
ಸಂಭ್ರಮದಿ ಬದುಕೋಣ ಬಿಟ್ಟು ಜಂಭ || ಅನುಪಲ್ಲವಿ ||

ನಮ್ಮೂರ ಜಾತ್ರೆಯಲಿ ತಿರುಗೋಣ ಬಾರೊಮ್ಮೆ
ಸುಮ್ಮನೆಯೆ ಕೈ ಹಿಡಿದು ಸಡಗರದಲಿ ||
ಘಮ್ಮೆನುವ ಮಲ್ಲಿಗೆಯ ನೀನು ಮುಡಿಸಿದರಾಗ
ಜುಮ್ಮೆನುವುದೆನ್ನ ಮನ ಸಂತಸದಲಿ || ೧ ||

ಬಾನಿನೆತ್ತರವಿರುವ ಚಕ್ರ ತೊಟ್ಟಿಲಿನಲ್ಲಿ
ನಾ ನಿನ್ನ ಜೊತೆಯಲ್ಲಿ ಕೂರುವಾಸೆ ||
ಕಾಣುತಿರೆ ಪಾತಾಳ ಭಯಗೊಂಡು ಬೆದರುತ್ತ
ಕಣ್ಮುಚ್ಚಿ ನಿನ್ನ ತೋಳ್ತಬ್ಬುವಾಸೆ || ೨ ||

ಸುತ್ತ ಜಾತ್ರೆಯ ಗೌಜಿ - ಬೀದಿಯಂಗಡಿ ಸಾಲು
ಹತ್ತು ಮೇಲೆರಡು ಬಳೆ ಕೊಡಿಸಬೇಕು ||
ಮುತ್ತುಸರ ಕೇಳಿದೊಡೆ ನೀಕಣ್ಣು ಮಿಟುಕಿಸುತ
ಮತ್ತೆ ಮನೆಯಲಿ ಕೊಡುವೆನೆನ್ನಬೇಕು || ೩ ||

- ಸುರೇಖಾ ಭೀಮಗುಳಿ
14/11/2017
ಚಿತ್ರ : ಜಾನು ಶೆಟ್ಟಿ ಎಸ್
ತಿದ್ದುಪಡಿ ಮಾರ್ಗದರ್ಶನ : Vishwanath Kukian K ಸರ್

Wednesday, October 25, 2017

ವಿರಹ -cum- ಪ್ರೇಮಗೀತೆ !


ಇಷ್ಟು ಕಾಡುವುದೇಕೆ ಕರುಣೆಯಿಲ್ಲದೆ ಹೀಗೆ
ನಷ್ಟವಾಗುತ್ತಿಹುದು ಸುಖದ ಘಳಿಗೆ ||
ಸ್ಪಷ್ಟವಿಲ್ಲವೆ ಹೇಳು ಮನದೊಡಲ ಮಾತುಗಳು
ಕಷ್ಟವಾಗುತ್ತಿಹುದು ನಿಜದಿ ನನಗೆ || ೧ ||

ದಿಡ್ಡಿ ಬಾಗಿಲಿನಲ್ಲೆ ನಾನಡ್ಡ ನಿಂತಿರುವೆ
ಒಡ್ಡುತೆನ್ನಯ ತನುವ ತಂಗಾಳಿಗೆ ||
ದಡ್ಡನಂತಾಡದೆಲೆ ಬಳಿಬಂದು ಸಡಗರಿಸು
ದೊಡ್ಡ ಸಂಪತ್ತಿದುವೆ ಸಿರಿಬಾಳಿಗೆ || ೨ ||

ಗುಬ್ಬೆತೋಳಿನ ರವಿಕೆ, ದಟ್ಟನೀಲಿಯ ಸೀರೆ
ತಬ್ಬಿಕೊಂಡಿದೆ ಮುಡಿಯ ಮಲ್ಲಿಗೆಯ ಮಾಲೆ ||
ಕೊಬ್ಬುತೋರುವುದೇಕೆ ಬಿರುನುಡಿಯ ಮೊನಚೇಕೆ
ಹಬ್ಬ ಮಾಡುವ ಬಾರೊ-ನಾನು ನಿನ್ನವಳೆ || ೩ ||

- ಸುರೇಖಾ ಭೀಮಗುಳಿ
25/10/2017
ಚಿತ್ರ : ಬೇರೆಯವರ ಗೋಡೆಯಿಂದ ಕದ್ದದ್ದು.

http://bhaavabhitti.weebly.com/

ಥೋ ! ಕರ್ಮಕಾಂಡ ! ವಿರಹದ ಬಗ್ಗೆ ಅನುಭವನೇ ಇಲ್ಲದ್ದೋಳು ವಿರಹಗೀತೆ ಬರೆದ್ರೆ ಹೀಗೇ ಆಗೋದು.... ಇದು ವಿರಹ ಗೀತೆನಾ ? ಅಥವಾ  ಪ್ರೇಮಗೀತೆನಾ ? ಅಂಥ ನನಗೇ ಕನ್ಫೂಷನ್ನು.... ಅಂಥದ್ದೆಲ್ಲ ಏನಿಲ್ಲ ಮಾರಾಯ್ರೇ ... ಯಾರದ್ದೋ ಗೋಡೆಯಲ್ಲಿ ಸಿಕ್ಕಿದ ಚಿತ್ರಕ್ಕೆ ಕವನ ಬರೆದದ್ದು ಅಷ್ಟೇ....

Friday, October 6, 2017

ಚಿಟ್ಟೆಯದಿಷ್ಟು ಭೋಗ ಷಟ್ಪದಿಗಳು


ಚಿಟ್ಟೆಯೊಂದು ಹಾರಿ ಬಂದು
ಪುಟ್ಟದೊಂದು ಸುಮವ ಕಂಡು
ನೆಟ್ಟು ಕಾಲ ರೆಕ್ಕೆ ಬಿಡಿಸಿ ಕುಳಿತುಕೊಂಡಿತು ||
ಸೊಟ್ಟಗಿದ್ದ ನನ್ನ ಮನಸು
ಥಟ್ಟನೆಂದು ಹರುಷಗೊಂಡು
ಕಟ್ಟಿತೊಂದು ಹೊಸತು ಕವನ- ಹಾಡತೊಡಗಿತು || ೧ ||

ಚಾಚಿ ಹಿಡಿದು ಹೂವಿನೆಸಳು
ಬಾಚಿ ಮಧುವ ಹೀರುತಿರಲು
ತೋಚಿತಂತೆ ಚಿಟ್ಟೆ ಮನದಿ ಸೃಷ್ಟಿ ಧರ್ಮವು ||
ಆಚೆ ಹೂವ ರೇಣುಗಳನು
ಈಚೆ ಹೂವಿಗುಣಿಸತಿರಲು
ನಾಚಿಕೊಂಡು ನಕ್ಕಿತೊಮ್ಮೆ ಪುಟ್ಟ ಪುಷ್ಪವು || ೨ ||

ಚಂದದಿಂದ ಮಧುವ ಹೀರಿ
ಬಂಧದಿಂದ ಬಿಡಿಸಿಕೊಂಡು
ಅಂದದಲ್ಲಿ ಎಲೆಯ ಹಿಂದೆ ತತ್ತಿಯಿಟ್ಟಿತು ||
ಒಂದೆ ಒಂದು ಮಾತಿನಲ್ಲಿ
’ಕಂದಗಳನು ನೀನು ಸಲಹು’
ಎಂದು ಗಿಡಕೆ ಹೇಳಿ ಚಿಟ್ಟೆ ಹಾರಿ ಹೋಯಿತು || ೩ ||

ಕೆಲವು ದಿನವು ಕಳೆಯುತಿರಲು
ಛಲದಿ ಮೊಟ್ಟೆಯೊಡೆಯುತಿರಲು
ತಲೆಯನೆತ್ತಿ ಬಂತು ಹುಳವು ಬಂಧ ಹರಿಯುತ ||
ಚಲನೆಯಲ್ಲಿ ತೊಡಗಿದೊಡನೆ
ಕಲಿತುಕೊಂಡು ಹಸಿರ ಮೇದು
ಕುಳಿತಿತಲ್ಲ ಸುರುಳಿಸುತ್ತಿ ನಿದಿರೆ ಮಾಡುತ || ೪ ||

ಕೋಶ ಬಂಧವೊಡೆದುಕೊಂಡು
ನಾಶ ಮಾಡಿ ಹಳೆಯ ಗೂಡು
ಜೋಶಿನಿಂದ ರೆಕ್ಕೆ ಬಿಡಿಸಿ ಚಿಟ್ಟೆ ಜನಿಸಿತು ||
ಮೂಸಿ ನೋಡಿ ಅತ್ತ ಇತ್ತ
ಪೋಸು ಕೊಟ್ಟು ಸುತ್ತಮುತ್ತ
ಮೀಸೆ ತಿರುವಿ ಬಾನ ಕಡೆಗೆ ಹಾರಿ ಹೋಯಿತು || ೫ ||

ಚಿಟ್ಟೆಗಿರುವ ರೆಕ್ಕೆಯಲ್ಲಿ
ಇಟ್ಟರಾರು ರಂಗವಲ್ಲಿ
ಪುಟ್ಟ ಹೂವು ಚಿಟ್ಟೆಗದನು ಧಾರೆಯೆರೆಯಿತಾ ? ||
ತಟ್ಟಿತೆನ್ನ ಮನಕೆ ಇಂದು
ಕೊಟ್ಟು ಖುಷಿಯ ನಲಿವ ಬಂಧು
ಸ್ಪಷ್ಟವಾಯ್ತು ಚಿಟ್ಟೆ ಬದುಕು ಸೃಷ್ಟಿಯದ್ಭುತ || ೬ ||

- ಸುರೇಖಾ ಭೀಮಗುಳಿ
06/10/2017
ಚಿತ್ರ : ಅಂತರ್ಜಾಲ
ತಿದ್ದುಪಡಿ ಮಾರ್ಗದರ್ಶನ : Vishwanath ಸರ್.
ಕವನ ಸ್ಫೂರ್ತಿಯ ಜೊತೆಗಾತಿ : Mohini Damle
ಷಟ್ಪದಿಗಾಗಿ ಕೋರಿಕೆಯಿಟ್ಟು ಪ್ರೋತ್ಸಾಹಿಸಿದವರು - Sudarshana Gururajarao

Thursday, August 24, 2017

"ಮಲೆನಾಡಿನಲ್ಲೊಂದು ಮಳೆಸಂಜೆ"



ತಿರೆಯೆಲ್ಲ ಹಸಿಹಸಿರು
ಪರಿಶುದ್ಧ ಪರಿಸರವು
ಚುರುಕಾಗಿ ನಡೆಯುತಿದೆ ಜಗದ ಲೀಲೆ ||
ತೊರೆಯಲ್ಲಿ ಸಿಹಿನೀರು
ತರುಲತೆಗೆ ಹೊಸ ಬಸಿರು
ಹೊರಜಗದ ಬೆರಗೆದುರು ನಾನು ಬಾಲೆ ||⁠⁠⁠⁠ ೧ ||


ಧರೆಯೆಲ್ಲ ತನದೆನುತ
ಪರಿಪರಿಯ ಕೀಟಗಳು
ಮೆರೆದಿಹವು ಮಳೆಗಾಲ ಸಂಜೆಯಲ್ಲಿ ||
ಕಿರಿಯ ಜೀವಗಳೆಲ್ಲ
ಹಿರಿಯ ದನಿಯನು ತೆಗೆದು
ಇರುವಿಕೆಯನೊರೆಯುತಿಹ ಹಬ್ಬವಿಲ್ಲಿ || ೨ ||


ಟಿರಿಟಿರಿಯ ಶಬ್ದವನು
ಮೊರೆಯುತಿಹ ಬಿರಿಬಿಟ್ಟಿ
ದೊರೆತನದ ಹಮ್ಮಿನಲಿ ಮೆರೆಯುತಿಹುದು ||
ಪರರ ಚಿಂತೆಯ ಬಿಟ್ಟು
ಸರಸಕ್ಕೆ ಹಾತೊರೆಯು-
ತರಸಿಯನ್ನರಸುತ್ತ ತಪಿಸುತಿಹುದು || ೩ ||


- ಸುರೇಖಾ ಭೀಮಗುಳಿ
23/08/2017
ಸ್ಥಳ/ಚಿತ್ರ : ನಮ್ ಹೆಡ್ಡಾಫೀಸು- ಪಾಲಾಲೆ ಮನೆ
ಛಾಯಾಗ್ರಾಹಕ : ಸುಮಂತ ಭೀಮಗುಳಿ 


ಕವನಕ್ಕೊಂದಿಷ್ಟು ವಿವರಣೆ :
ಈ ಕವನ ಕುಸುಮ ಷಟ್ಪದಿಯಲ್ಲಿದೆ.
ತಿದ್ದುಪಡಿ ಮಾರ್ಗದರ್ಶನ : ವಿಶ್ವ ಸರ್ ..
ಬಿರಿಬಿಟ್ಟಿ =ಇರಿಂಟಿ = ಜೀರುಂಡೆ

Friday, August 4, 2017

" ನಾನ್ ಹೇಳೋದ್ ಕೇಳ್ರೀ..... " (ವಿ.ಸೂ. : ವಿವಾಹಯೋಗ್ಯರಿಗಾಗಿ ಈ ಕವನ)

ಹರೆಯದಲ್ಲಿ ಅಪ್ಪಿತಪ್ಪಿ
ಕಂಡ ಪುಟ್ಟ ಕನಸಿಗೆ ||
ವಿಧಿಯ ನಿಯಮ ಬಿದ್ದುಬಿಟ್ಟೆ
ಇವಳ ಪ್ರೀತಿ ಬುಟ್ಟಿಗೆ || ೧ ||

ಭಯದ-ಭಕುತಿ ಕೇಳಬೇಡಿ
ಗಂಡನಲ್ಲಿ ಈಕೆಗೆ ||
ವಿನಯವೆಂದರೇನು ಎಂಬ
ದೊಡ್ಡ ಪ್ರಶ್ನೆಯಾಕೆಗೆ || ೨ ||

ಕಣ್ಣಸನ್ನೆಯಲ್ಲೆ ನನ್ನ
ಹಿಡಿತದಲ್ಲಿಯಿಡುವಳು ||
ಪ್ರೀತಿಯೆಂಬ ಅಸ್ತ್ರದಲ್ಲಿ
ಕಟ್ಟಿ ಹಾಕಿ ಬಿಡುವಳು || ೩ ||

ತನ್ನದೆಲ್ಲ ಬಿಟ್ಟುಕೊಟ್ಟು
ಹೆಮ್ಮೆಯಿಂದ ನಗುವಳು
’ನೀನು ನನಗೆ ಸ್ವಂತ ಕಾಣೊ ’
ಎನುತ ಲಲ್ಲೆಗರೆವಳು || ೪ ||

ಪ್ರೇಮಪಾಶವೆಂಬ ಬಂಧ
ಚಂದವಿಹುದು ಕೇಳಿರಿ ||
ಇಂಥ ಸವಿಯು ನಿಮಗು ಸಿಗಲಿ
ಬೇಗ ಮದುವೆಯಾಗಿರಿ || ೫ ||

 - ಸುರೇಖಾ ಭೀಮಗುಳಿ
03/08/2017
ಚಿತ್ರ : ಅಂತರ್ಜಾಲ

Thursday, August 3, 2017

" ದಾಂಪತ್ಯ ಗೀತೆ "

ಹಲವು ವರುಷ ಕಳೆದು ಹೋಯ್ತು
ಜಂಟಿಬಾಳಿನಂಟಿಗೆ ||
ದಿನವು ದಿನವು ಹೊಸತು ಹರೆಯ
ನನ್ನ- ಅವನ ಜೋಡಿಗೆ || ೧ ||

ಭಕ್ತಿಭಾವವೇನುಯಿಲ್ಲ
ಎಂಬ ವಿಷಯ ಸತ್ಯವೆ ||
ಅದರ ಮೀರಿ ಪ್ರೀತಿಯುಂಟು
ಎನ್ನದಿರಲು ಸಾಧ್ಯವೆ ? || ೨ ||

ಸಣ್ಣ-ಪುಟ್ಟ ಮುನಿಸುಗಳಿವೆ
ಎಂದು ನಾನು ಒಪ್ಪುವೆ ||
ಅಷ್ಟಕಾಗಿಯವನ ದೂರಿ
ದೂರ ನಿಲುವುದುಚಿತವೆ ? || ೩ ||

ಕಷ್ಟ-ನಷ್ಟ ಯಾರಿಗಿಲ್ಲ
ಸಹಜವದುವು ಬಾಳಲಿ ||
ಶಿಷ್ಟನವನು ಎಂಬ ವಿಷಯ
ಸ್ಪಷ್ಟವಿಹುದು ನನ್ನಲಿ || ೪ ||

ಸರಸ-ವಿರಸ, ನೋವು-ನಲಿವು
ಜೋಡಿ ಪದಗಳಲ್ಲವೆ ?  ||
ಕೆಲವು ಮಾತ್ರ ನನಗೆ ಬೇಕು
ಎಂಬ ನಿಲುವು ಸಾಧುವೆ ? || ೫ ||

ಗಂಡ-ಹೆಂಡಿರೆಂಬ ಜೋಡಿ
ದೈವವಿತ್ತ ವರವದು ||
ಉಳಿದ ನಮ್ಮ ಬಂಧವೆಲ್ಲ
ನಾವು ಮಾಡಿಕೊಂಡುದು ||  ೬ ||

ನಿಮ್ಮ ಸ್ನೇಹ ಪ್ರೀತಿಯಲ್ಲಿ
ಇಲ್ಲ ತಪ್ಪು ಬಲ್ಲೆನು ||
ನನ್ನ-ಅವನ ಪರಿಧಿಯಲ್ಲಿ
ಬೇರೆಯವರನೊಲ್ಲೆನು  || ೭ ||

- ಸುರೇಖಾ ಭೀಮಗುಳಿ
03/08/2017
ಚಿತ್ರ : ಆಂತರ್ಜಾಲ

ತಿದ್ದುಪಡಿ ಮಾರ್ಗದರ್ಶನ : ವಿಶ್ವ ಸರ್.

Tuesday, August 1, 2017

" ತಪ್ಪೇನು ? ನೀವಾದ್ರೂ ಹೇಳಿ "



ಮದುವೆಯಾಗಿ ತಿಂಗಳಿಲ್ಲ
ನೋಡಿರಣ್ಣ ಹೀಗಿದೆ || 
ಮಡದಿ ಹೇಳಿದಂತೆಯೆಲ್ಲ
ಕೇಳುವಂತೆ ಆಗಿದೆ ! || ೧ ||

ಅಡುಗೆ ಮಾಡಿ ಬಟ್ಟಲಿಟ್ಟು
ಉಣ್ಣಬನ್ನಿರೆನುವಳು ||
ಕೈಯ್ಯತುತ್ತು ಕೇಳಿದೊಡನೆ
ಬಾಯ್ಗೆ ತುತ್ತನೀವಳು || ೨ ||

ಸಂಜೆಯಲ್ಲಿ ಬೀಸುನಡಿಗೆ
ಜೊತೆಯ ಬಿಡದೆ ಸಾಗಿದೆ ||
ದಿನಸಿಯಂಗಡೀಗು ಕೂಡ
ಒಂಟಿಪಯಣ ನಿಂತಿದೆ || ೩ ||

ದಿನದಲೊಮ್ಮೆ ಮೀಯಿರೆಂದು
ಬಚ್ಚಲೆಡೆಗೆ ನೂಕ್ವಳು ||
’ಜೊತೆಗೆ ಬಾರೆ ನೀನು’ ಎನಲು
’ಹೋಗಿ ಪೋಲಿ !’ ಎನುವಳು || ೪ ||

ಹಗಲು-ರಾತ್ರಿಯವಳ ಜೊತೆಗೆ
ಜೀವಜಂಟಿಯಾಗಿದೆ ||
ನನ್ನ ಕರೆಯಲೇನು ತಪ್ಪು
ನನಗೆ ತಿಳಿಯದಾಗಿದೆ ! || ೫ ||

ಆಕೆಯೇನು ನುಡಿದರೂನು
ಎದುರು ಮಾತು ಮರೆತಿದೆ ||
ಅವಳ ಕೆನ್ನೆ ಕೆಂಪ ನೋಡಿ
ಮನಸು ಸಂತೆಯಾಗಿದೆ || ೬ ||

- ಸುರೇಖಾ ಭೀಮಗುಳಿ
01/08/2017
ಚಿತ್ರ : ಅಂತರ್ಜಾಲ
ತಿದ್ದುಪಡಿ ಮಾರ್ಗದರ್ಶನ : ವಿಶ್ವ ಸರ್.

Tuesday, July 25, 2017

" ಶ್ರಾವಣ ಸಂಭ್ರಮ... ! "

ದ.ರಾ.ಬೇಂದ್ರೆಯವರ
’ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ
ಮಿಂಚುಬಳಗ ತೆರೆತೆರೆಗಳಾಗಿ ಅಲೆಯುವುದು ಪುಟ್ಟಪೂರಾ’
ಹಾಡಿನ ರಾಗದಲ್ಲಿ ಹಾಡಿಕೊಳ್ಳಿ.....

ತೊಂಬತ್ತರ ದಶಕದ ಪ್ರೇಮಗೀತೆ ಅಂದ್ಕೊಳ್ಳಿ ಆಯ್ತಾ .....

ಇನ್ನು ಚಿತ್ರ ಅಂತರ್ಜಾಲದಿಂದ ಎತ್ತಿಕೊಂಡದ್ದು... ಚಿತ್ರದಲ್ಲಿರುವ ಹುಡುಗನ ಕಣ್ಣಲ್ಲಿ ಪ್ರಾಮಾಣಿಕತೆ ಕಾಣಿಸ್ತು ನಂಗೆ... ಜೊತೆಗೆ dairy milk shots ನೆನೆಪು ಬಂತು.... ಈಗಿನ ಕವಿಗಳೆಲ್ಲ ಬರೀ ಹುಡುಗಿಯರ ಚಿತ್ರ ಹಾಕ್ಕೊಂಡು ಕವನ ಬರೀತಾರೆ.... ಆದ್ರೆ ಹುಡುಗರ ಚಿತ್ರ ಹಾಕಿ ಕವನ ಬರೆಯೋರೆ ಇಲ್ಲ ಕಣ್ರೀ.... ಅದಕ್ಕೇ ಸ್ವಲ್ಪ ಬದಲಾವಣೆ ಇರಲಿ ಅಂಥ ಈ ಫೋಟೋ... ಅಷ್ಟು ಬಿಟ್ಟರೆ ಈ ಫೋಟೋಗೂ ನನಗೂ ಏನೂ ಸಂಬಂಧ ಇಲ್ಲ ಕಣ್ರೀ.... ನನ್ನನ್ನು ನಂಬಿ... ಹ ಹ ಹಾ....

" ಶ್ರಾವಣ ಸಂಭ್ರಮ... ! "

ಹಲದಿನಗಳಿಂದ ಮನಸೆಳೆದ ಗೆಳತಿ ಬಂದಿಹಳು ನನ್ನ ಮನೆಗೆ ||
ಬಲುತೋಷದಿಂದ ಹುಚ್ಚಾಯ್ತು ಮನವು ತುಸುಹಿಡಿತ ತಪ್ಪಿತೆನಗೆ || ೧ ||

ಬರಬಾರದಿತ್ತೆ ? ರಸಭಂಗವಾಯ್ತೆ ? ಕೇಳುತಿರೆ ಗೆಳತಿಯಾಗ ||
ಕರೆದಾಗ ಬರದೆಯಿಂದೇನು ಬಂದೆ ದಯಮಾಡಿಸೆಂದೆನಾಗ || ೨ ||

ಮನವಿರದ ಸಮಯ ಬಂದದ್ದು ತಪ್ಪು ನಾ ಹೊರಟೆನೆಂದಳಾಕೆ ||
ಕನಸಲ್ಲಿ ನೆನೆದ ರಸಘಳಿಗೆಯೊದಗೆ ನಾ ಬಿಟ್ಟುಬಿಡುವುದ್ಯಾಕೆ ? || ೩ ||

ಎಸೆದಾಕೆಯೆಡೆಗೆ ನಸುನಗೆಯ ಬಾಣ ಬಾರೆಂದೆ ಮನೆಯ ಒಳಗೆ
ತುಸುಬಿಂಕ ತೋರಿ ಕಣ್ಣಲ್ಲೆ ನಕ್ಕಳಾಕೆಯದು ಹಂಸ ನಡಿಗೆ || ೪ ||

ಒಪ್ಪಾದ ಹುಡುಗಿ ಬಳಕುತ್ತ ನಾಚಿ ಪಿಸುಮಾತನುಲಿಯುತಿರಲು 
’ಒಪ್ಪಿಹರು ನಮ್ಮ ಮನೆಮಂದಿಯೆಲ್ಲ- ಕಳುಹಿಹರು ಕರೆದು ತರಲು’ || ೫ ||

ಕಹಿದಿನವು ಕಳೆದು ಶ್ರಾವಣವು ಬಂತು ಬಾಳಾಯ್ತು ಹಬ್ಬದಡುಗೆ ||
ಸಿಹಿಲಾಡು ಬಂದು ಬಾಯೊಳಗೆ ಬಿತ್ತು ಹೋಳಿಗೆಯ ಕವಳ ನಿಮಗೆ || ೬ ||

- ಸುರೇಖಾ ಭೀಮಗುಳಿ
25/07/2017
ಚಿತ್ರ : ಅಂತರ್ಜಾಲ

ತಿದ್ದುಪಡಿ ಮಾರ್ಗದರ್ಶನ : Vishwanath Kukian K ಸರ್.

ಮಧ್ಯಮಾವರ್ತಲಯ.
೨ ೩ ೩ ೨ ೩ ೩ ೨ ೩ ೩ ೩ = ೨೭
೫ ೩ ೫ ೩ ೫ ೩ ೩ = ೨೭

Thursday, July 6, 2017

ಮುತ್ತಿನಂತಹ ಹುಡುಗಿ .....

ವರ್ಷದ ಹಿಂದೆ... Mohini Damle - Krishna Koulagi ಯವರೊಂದಿಗಿನ ಜುಗಲ್ಬಂದಿಯಲ್ಲಿ ಅರಳಿದ ಕವನ. ಈಗ ಆದಿಪ್ರಾಸಕ್ಕೆ ಅನುಗುಣವಾಗಿ.... ವಿಶ್ವ ಸರ್ ಮಾರ್ಗದರ್ಶನದೊಂದಿಗೆ...
ಚಿತ್ರ : divakara Dongre M ಅವರ ಗೋಡೆಯಿಂದ...

ಮುತ್ತಿನಂತಹ ಹುಡುಗಿ .....

ಮುತ್ತಿನಂತಹ ಹುಡುಗಿ ಕನಸುಗಣ್ಣಿನ ಬೆಡಗಿ
ಸುತ್ತೇಳು ಲೋಕಕ್ಕೆ ಬಲುಸೊಬಗಿನರಸಿ ||
ಕತ್ತಲ್ಲಿವೊಂದೆಳೆಯ ಸಣ್ಣಸರ-ಮಣಿಪದಕ
ಮತ್ತೆ ಜೇನ್ದುಟಿಯಲ್ಲಿ ನಸುನಗುವ ಮೆರೆಸಿ || ೧ ||

ಕೆಂಪು ರವಿಕೆಯ ಕುವರಿ ಬಿಂಕದಲಿ ನೋಡಿಹಳು
ತಂಪು ಬಾಲ್ಯವು ನನ್ನ ಕಣ್ಣ ಮುಂದೆ ||
ಸಂಪಿಗೆಯ ಮರದ ಕೆಳಗಾಡೋಣವೆಂದಿಹಳು
ಗುಂಪಿನಲಿ ಹೊರಡೋಣವವಳ ಹಿಂದೆ || ೨ ||

ಕಾಡುಮೇಡುಗಳಲ್ಲಿ ಗದ್ದೆಬಯಲುಗಳಲ್ಲಿ
ಆಡುವಾಸೆಯು ನಿಮ್ಮದಲ್ಲವೇನು? ||
ಜೋಡಿಯಾಗಿರಿ ನನ್ನ ಬಾಲ್ಯದೆಡೆ ಪಯಣಕ್ಕೆ 
ದೂಡಿ ಹೊರೆ ದುಗುಡಗಳ ಬರುವಿರೇನು ? || ೩ ||

ಪೋರಿಯೋಡಿಹಳಲ್ಲ ನನ್ನ ಸೆಳೆಯುತ ಹೀಗೆ
ಬಾರೆಬಾ ಜೊತೆಗೂಡುಯೆನ್ನುವಂತೆ ||
ಜಾರಿ ಹೋಗಿಹುದೆನ್ನ ವಾಸ್ತವದ ನೆನಪುಗಳು
ತೋರಿಹುದು ನಾನಾಕೆಯೆನ್ನುವಂತೆ || ೪ ||

- ಸುರೇಖಾ ಭೀಮಗುಳಿ
06/07/2017

Wednesday, June 14, 2017

ಹೂ ಹುಡುಗಿ ........


ಮಾರುದ್ದ ಹೂಕೋದು ಬುಟ್ಟಿಯಲಿ ತುಂಬಿಸುತ
ಮಾರಹೊರಟಿಹಳವಳು ಹೂವ ಹುಡುಗಿ ||
ದಾರಿಯಲಿ ಕಂಡೆಲ್ಲ ಮಂದಿಯಲಿ ಕೋರುವಳು
ಬಾರಿ ಚಂದದ ಮೊಲ್ಲೆ - ಕೊಳ್ವರಾಗಿ || ೧ ||


ಕಾರಿನಲಿ ಬಂದವರೆ ಹೂವು ಬೇಡವೆ ನಿಮಗೆ ?
ಸೀರೆಯೊಡತಿಯೆ ಕೊಂಚ ಹೂವ ಕೊಡಲೆ ? ||
ಚೂರು ಹೂ ಮುಡಿಗೇರೆ ಎಂಥ ಲಕ್ಷಣ ನೀವು !
ದಾರಿಹೋಕರ ದೃಷ್ಟಿ ತೆಗೆದು ಬಿಡಲೆ ? || ೨ ||


ಕೆಲಜನರು ಹೇಳುವರು ಕೈಯಳತೆ ಕಿರಿದಾಯ್ತು
ಹಲವು ಮಂದಿಗೆ ಬೇಡವವಳ ಹೂವು ||
ಮಲತಾಯಿ ಕಾಟದಲಿ ಬೆಂದಿರುವ ಮೃದುಮನವು
ತಲೆಯೊಳಗೆ ಚಿಂತೆಗಳು ಬಿಡದ ನೋವು || ೩ ||


ಸರಳ ಮನಸಿನ ಹುಡುಗ ಮೊಳ ಹೂವ ಕೊಳ್ಳುತಲಿ
ಬಿರಿದಿತ್ತು ಸಂತಸದಿ ಹುಡುಗಿ ಮೊಗವು ||
ದರದ ಮುಖ ನೋಡದೆಲೆ ಹೂವ ಕೊಳ್ಳುವರಿರಲು
ಮರೆಯಿತಂದಿನ ಕಷ್ಟವರಳಿ ನಗುವು || ೪ ||


ಕೊಂಡು ಕಟ್ಟಿದ ಹೂವು ಮಾರಿ ಮುಗಿಸುವ ಮುನ್ನ
ಉಂಡು ಮಲಗುವ ಯೋಗವಾಕೆಗಿಲ್ಲ ||
ಕೊಂಡುಕೊಳ್ಳಲು ಮಂದಿ- ಹಗುರಾಯ್ತು ಹೂಬುಟ್ಟಿ
ಬೆಂಡಾಯ್ತು ಹೂಹುಡುಗಿ - ಮೊಲ್ಲೆಯಲ್ಲ ! || ೫ || 


- ಸುರೇಖಾ ಭೀಮಗುಳಿ
14/06/2017
ಚಿತ್ರ : ಅಂತರ್ಜಾಲ
ಸ್ಫೂರ್ತಿ : ’ಸಹೆ’ ಕವನಗಳು

ನಂದೂ - ಮೋಹಿನಿದೂ ಕಥೆ !


ಕಬ್ಬ ಹಬ್ಬದ ಹೆಳೆಯ ಹಿಡಿಯುತ
ಬಂದ ಗೆಳತಿಯು ಮೋಹಿನಿ ||
ನಮ್ಮ ಊರಿನ ಹಲಸು ತೋಟದಿ
ಸವಿದ ಸ್ನೇಹದ ಮಧುಹನಿ || ೧ ||


ವನವಿಹಾರದಿ ದಾಳಿಯಿಟ್ಟವು
ಸೊಳ್ಳೆ ದಂಡದು ಒಮ್ಮೆಗೆ ||
ಕಚ್ಚಿದೊಡನೆಯೆ ಪ್ರಾಣ ಬಿಟ್ಟವು
ನಮ್ಮ ಮುದ್ದಿನ ಪೆಟ್ಟಿಗೆ || ೨ ||


ಸಣ್ಣ ಗುಜ್ಜೆಯ ಬಲಿತ ಕಾಯಿಯ
ಹಲಸು ಹಣ್ಣನು ಕೊಂಡಳು ||
ಅಲ್ಲೆ ಮೇಯುತಲಿದ್ದ ಹಸುವನು
ಬಿಡದೆ ಮುದ್ದಿಸಿ ಹೋದಳು || ೩ ||


ಹಲಸು ಬಾಗಿನ ಕೊಟ್ಟು ಕಳಿಸಿಹೆ
ನಮ್ಮ ಸರಸತಿ ಕೂಸಿಗೆ ||
ನಮ್ಮನೆಲ್ಲರ ನೆನೆದು ಸವಿಯಲಿ
ಗುಜ್ಜೆ ಪಲ್ಯವ ಮೆಲ್ಲಗೆ || ೪ ||


- ಸುರೇಖಾ ಭೀಮಗುಳಿ
13/06/2017
ಚಿತ್ರ : ರಾಮಕೃಷ್ಣ ದಾಮ್ಲೆ ಸರ್

Tuesday, June 6, 2017

" ಶೃಂಗಾರ ಗೀತೆ ! "



ಈ ವಯಸ್ಸಲ್ಲಿ ಶೃಂಗಾರ ಗೀತೆ ಬರೀಬಾರ್ದಾ ? ಬರೆಯೋದಕ್ಕೆ ಏನಡ್ಡಿ ?
ವಯಸ್ಸಿಗೂ ರಚಿಸುವ ಕವನಕ್ಕೂ ಸಂಬಂಧ ಇದೆಯಾ ?
ಪ್ರಬುದ್ಧತೆಯ ಈ ವಯಸ್ಸಲ್ಲಿ ಪ್ರೀತಿ-ಪ್ರೇಮದ ಬಗ್ಗೆ ಬರೆದರೆ ಸರಿ ಕಾಣಲ್ಲ ಅನ್ಸತ್ತೆ ನಂಗೆ !
ಅಷ್ಟಕ್ಕೂ ’ಶೃಂಗಾರ’ ಅಂದರೆ ಏನು ? ಅಲಂಕಾರ ಅಂಥ ಅರ್ಥ. ಅಷ್ಟೇ ತಾನೆ ?
ಅನುಪ್ರಾಸ - ಅಂತ್ಯಪ್ರಾಸದೊಂದಿಗೆ ನನ್ನದೊಂದಿಷ್ಟು ಪ್ರಯತ್ನ...
ತಪ್ಪಿದ್ರೆ ನಂಗೇಳಿ.... ತಿದ್ದೋಣ್ವಂತೆ.....

" ಶೃಂಗಾರ ಗೀತೆ ! "
=====================
ನನ್ನ ಕೇಶದ ಗಂಧ ಘಮ್ಮೆಂದರೂ ಕೂಡ
ಚೆನ್ನಮಲ್ಲಿಗೆ ದಂಡೆ ಬೇಕು ಮುಡಿಗೆ ||
ಹೊನ್ನ ಕೊಡಿಸೆನ್ನುತ್ತ ನಿನ್ನ ಕಾಡುವುದಿಲ್ಲ
ಚಿನ್ನ ನೀನಾಗಿರುವೆ ಸಿರಿಬಾಳಿಗೆ || ೧ ||


ಕೆಂಡಸಂಪಿಗೆ ಹೂವು ಗಾಢ ಪರಿಮಳವಹುದು
ಮಂಡೆ ನೋಯುವುದೆನಗೆ ದಟ್ಟ ವಾಸನೆಗೆ ||
ಕೊಂಡು ತಂದರೆಯದನು ನಾನು ಮುಡಿಯುವುದಿಲ್ಲ
ದಂಡವೆನ್ನುತ ನನ್ನ ದೂರದಿರು ಕೊನೆಗೆ || ೨ ||


ಝಲ್ಲೆ ಹೂವನು ತಂದು ಕಣ್ಣೆದುರಿನಲ್ಲಿಡುತ
ಗೆಲ್ಲ ಹೊರಡಲು ಬೇಡ ನನ್ನ ಮನವ ||
ಒಲ್ಲೆ ಮುಡಿಯಲು ನಾನು ಸೀತಾಳ ದಂಡೆಯನು
ಮೊಲ್ಲೆ ಮಾಲೆಯ ತಂದು ತಣಿಸು ತನುವ || ೩ ||


ಬೊಟ್ಟಿಟ್ಟು ಬೈತಲೆಗೆ ಕಿವಿಗೆ ಜುಮುಕಿಯನಿಟ್ಟು
ತೊಟ್ಟಿರುವೆ ಕೊರಳಲ್ಲಿ ಚಂದ್ರಹಾರ ||
ಪುಟ್ಟನೆಯ ತುಟಿಗಿಷ್ಟು ನಸುಗೆಂಪು ಮೆತ್ತಿರುವೆ
ಜುಟ್ಟಿನಲಿ ಘಮಘಮಿಪ ಮೊಲ್ಲೆ ಹಾರ || ೪ ||


ಮಾರುದ್ದ ಮಲ್ಲಿಗೆಯ ನಾನು ಕೇಳಲೆಯಿಲ್ಲ
ಬೇರೇನು ಬೇಡಿಕೆಯು ನನ್ನದಿಲ್ಲ ||
ಮಾರುಹೋಗಿಹ ಮೊಲ್ಲೆ ನನ್ನ ಕೊರಳನು ಬಳಸಿ
ಚಾರುಲತೆ ನೀನೆಂದು ನುಡಿದವಲ್ಲ || ೫ ||


- ಸುರೇಖಾ ಭೀಮಗುಳಿ
06/06/2017
ಚಿತ್ರ : Chandrika Khadilkar
ಕವನಕ್ಕೆ ಸ್ಫೂರ್ತಿ : ಸಹೆ ಕವನಗಳು
ತಿದ್ದುಪಡಿ : ವಿಶ್ವ ಸರ್

Thursday, June 1, 2017

"ಸೀತಾಳದಂಡೆ" ಕುರಿತ ನನ್ನ ಭಾಮಿನಿಗಳು.....


ಮುತ್ತಿನಂತಹ ಮುದ್ದು ಹೂಗಳು
ಒತ್ತುವೊತ್ತಾಗರಳಿ ನಗುತಿವೆ
ಸುತ್ತ ಬನವನು ಮರೆಸುವಂತಹ ಸೆಳೆತವೇಕಿವಕೆ ? ||
ಕತ್ತಲೆಯ ಮಳೆಸಂಜೆ ಸಮಯದಿ
ಪತ್ತೆಹಚ್ಚಲು ಗಂಧ ಬೀರದೆ
ಹತ್ತಿ ಕುಳಿತಿವೆ ಮರದ ಮೇಗಡೆ ಯಾತಕಿವು ಹೀಗೆ ? || ೧ ||

ಮುಡಿವೆವೆಂದರೆ ಮುಡಿಯಲಾಗದು
ಬಿಡಿಸಿ ತಿರುಗಿಸಿ ಕಟ್ಟಲಾಗದು
ಕಡೆಗೆ ಬರಿದೇ ನೋಡಿ ತಣಿವುದು ಸಾಧ್ಯವಿದೆಯೆಮಗೆ ||
ಪಡೆದೆನೆಂಬುವುದೊಂದೆ ಸಂಭ್ರಮ
ಜಡೆಯಲಿರಿಸುವ ಖುಷಿಯ ದಕ್ಕದು
ಕಡಿದು ತಾರದೆ ಮರದಲುಳಿಸುವುದದುವೆವೊಳಿತೆಮಗೆ || ೨ ||

ತರಿದು ತಂದರೆ ಉಳಿಯಲಾರದು
ಮುರುಟಿಕೊಳ್ಳುವವೆಲ್ಲ ಹೂಗಳು
ಮರದಲಿದ್ದರೆ ನಗುತಲುಳಿವವುವಿನ್ನು ನಾಲ್ಕು ದಿನ |||
ಸರದ ತರದಲಿ ಕಟ್ಟಲಾರೆವು
ಕೊರಳ ಹಾರವ ಮಾಡಲಾರೆವು
ಇರಲಿ ವನದೇವತೆಯ ಮಡಿಲಲಿ ಸೆಳೆಯುತೆಮ್ಮ ಮನ || ೩ ||

- ಸುರೇಖಾ ಭೀಮಗುಳಿ
02/06/2017
ಚಿತ್ರಕೃಪೆ : ಶ್ರೀವತ್ಸ ಜೋಷಿಯವರ ಗೋಡೆಯಿಂದ ಹಾರಿಸಿದ್ದು .....

Monday, January 16, 2017

" ಮಾಗಿಚಳಿ ವ್ಯಾಮೋಹ "


ಮೆತ್ತನೆಯ ಹಾಸಿಗೆಯು ನನ್ನನ್ನು ಸೆಳೆಯುವುದು
ಹತ್ತಿಯಾ ದಿಂಬೆನ್ನ ಹಿಡಿದೆಳೆವುದು ||
ಮುತ್ತುವುದು ನನ್ನನ್ನು ಸವಿನಿದ್ದೆಯಾ ಜೋಂಪು
ಕತ್ತಲೆಯ ಮುಂಜಾವು ಏಳಬಿಡದು || ೧ ||

ಸದ್ದಿಲ್ಲದೆನ್ನ ಮನ ಪ್ರಶ್ನೆಯನ್ನೆಸೆಯುವುದು
’ಎದ್ದೇನು ಸಾಧಿಸುವೆ ?’ ಎಂದೆನುವುದು ||
ನಿದ್ದೆ ಸುಖದಾ ಮುಂದೆ ಜಗವೆ ತೃಣವೆನಿಸುವುದು
ಬಿದ್ದು ಒರಗುವ ಆಸೆ ಚಿಗುರೊಡೆವುದು || ೨ ||

ಮಾಗಿಚಳಿ ಮಧುರತೆಗೆ ಮನ ಸೋಲದಿರಬೇಕೆ ?
ತೂಗುತಿಹ ಮನಸನ್ನು ಹದಕೆ ತರಬೇಕೆ ? ||
ಬೇಗೆದ್ದು ಕೆಲಸದಲಿ ತೊಡಗಿಕೊಳ್ಳಲೆ ಬೇಕೆ ?
ಸೊಗಸಾದ ಸವಿನಿದ್ದೆ ಕಳೆದುಕೊಳಬೇಕೆ ? || ೩ ||

- ಸುರೇಖಾ ಭೀಮಗುಳಿ
16/01/2017
ಚಿತ್ರ : ಅಂತರ್ಜಾಲ