Friday, October 6, 2017

ಚಿಟ್ಟೆಯದಿಷ್ಟು ಭೋಗ ಷಟ್ಪದಿಗಳು


ಚಿಟ್ಟೆಯೊಂದು ಹಾರಿ ಬಂದು
ಪುಟ್ಟದೊಂದು ಸುಮವ ಕಂಡು
ನೆಟ್ಟು ಕಾಲ ರೆಕ್ಕೆ ಬಿಡಿಸಿ ಕುಳಿತುಕೊಂಡಿತು ||
ಸೊಟ್ಟಗಿದ್ದ ನನ್ನ ಮನಸು
ಥಟ್ಟನೆಂದು ಹರುಷಗೊಂಡು
ಕಟ್ಟಿತೊಂದು ಹೊಸತು ಕವನ- ಹಾಡತೊಡಗಿತು || ೧ ||

ಚಾಚಿ ಹಿಡಿದು ಹೂವಿನೆಸಳು
ಬಾಚಿ ಮಧುವ ಹೀರುತಿರಲು
ತೋಚಿತಂತೆ ಚಿಟ್ಟೆ ಮನದಿ ಸೃಷ್ಟಿ ಧರ್ಮವು ||
ಆಚೆ ಹೂವ ರೇಣುಗಳನು
ಈಚೆ ಹೂವಿಗುಣಿಸತಿರಲು
ನಾಚಿಕೊಂಡು ನಕ್ಕಿತೊಮ್ಮೆ ಪುಟ್ಟ ಪುಷ್ಪವು || ೨ ||

ಚಂದದಿಂದ ಮಧುವ ಹೀರಿ
ಬಂಧದಿಂದ ಬಿಡಿಸಿಕೊಂಡು
ಅಂದದಲ್ಲಿ ಎಲೆಯ ಹಿಂದೆ ತತ್ತಿಯಿಟ್ಟಿತು ||
ಒಂದೆ ಒಂದು ಮಾತಿನಲ್ಲಿ
’ಕಂದಗಳನು ನೀನು ಸಲಹು’
ಎಂದು ಗಿಡಕೆ ಹೇಳಿ ಚಿಟ್ಟೆ ಹಾರಿ ಹೋಯಿತು || ೩ ||

ಕೆಲವು ದಿನವು ಕಳೆಯುತಿರಲು
ಛಲದಿ ಮೊಟ್ಟೆಯೊಡೆಯುತಿರಲು
ತಲೆಯನೆತ್ತಿ ಬಂತು ಹುಳವು ಬಂಧ ಹರಿಯುತ ||
ಚಲನೆಯಲ್ಲಿ ತೊಡಗಿದೊಡನೆ
ಕಲಿತುಕೊಂಡು ಹಸಿರ ಮೇದು
ಕುಳಿತಿತಲ್ಲ ಸುರುಳಿಸುತ್ತಿ ನಿದಿರೆ ಮಾಡುತ || ೪ ||

ಕೋಶ ಬಂಧವೊಡೆದುಕೊಂಡು
ನಾಶ ಮಾಡಿ ಹಳೆಯ ಗೂಡು
ಜೋಶಿನಿಂದ ರೆಕ್ಕೆ ಬಿಡಿಸಿ ಚಿಟ್ಟೆ ಜನಿಸಿತು ||
ಮೂಸಿ ನೋಡಿ ಅತ್ತ ಇತ್ತ
ಪೋಸು ಕೊಟ್ಟು ಸುತ್ತಮುತ್ತ
ಮೀಸೆ ತಿರುವಿ ಬಾನ ಕಡೆಗೆ ಹಾರಿ ಹೋಯಿತು || ೫ ||

ಚಿಟ್ಟೆಗಿರುವ ರೆಕ್ಕೆಯಲ್ಲಿ
ಇಟ್ಟರಾರು ರಂಗವಲ್ಲಿ
ಪುಟ್ಟ ಹೂವು ಚಿಟ್ಟೆಗದನು ಧಾರೆಯೆರೆಯಿತಾ ? ||
ತಟ್ಟಿತೆನ್ನ ಮನಕೆ ಇಂದು
ಕೊಟ್ಟು ಖುಷಿಯ ನಲಿವ ಬಂಧು
ಸ್ಪಷ್ಟವಾಯ್ತು ಚಿಟ್ಟೆ ಬದುಕು ಸೃಷ್ಟಿಯದ್ಭುತ || ೬ ||

- ಸುರೇಖಾ ಭೀಮಗುಳಿ
06/10/2017
ಚಿತ್ರ : ಅಂತರ್ಜಾಲ
ತಿದ್ದುಪಡಿ ಮಾರ್ಗದರ್ಶನ : Vishwanath ಸರ್.
ಕವನ ಸ್ಫೂರ್ತಿಯ ಜೊತೆಗಾತಿ : Mohini Damle
ಷಟ್ಪದಿಗಾಗಿ ಕೋರಿಕೆಯಿಟ್ಟು ಪ್ರೋತ್ಸಾಹಿಸಿದವರು - Sudarshana Gururajarao

No comments:

Post a Comment