Thursday, June 25, 2015

ಬಿರುಮಳೆ


ತೀರ್ಥಹಳ್ಳಿ - ಹೊಸನಗರದಲ್ಲಿ ಖಂಡಾಬಟ್ಟೇ (ಭಯಂಕರ) ಗಾಳಿ - ಮಳೆಯಂತೆ ! ಬಹಳಷ್ಟು ಲೈಟ್ ಕಂಬಗಳು ಉರುಳಿದ ಪರಿಣಾಮ ಊರಲ್ಲಿ ವಿದ್ಯುಚ್ಛಕ್ತಿ ಇಲ್ಲ.... ಮೊಬೈಲ್ ಗೆ ಚಾರ್ಜ್ ಇಲ್ಲ ! - ನೆಟ್ವರ್ಕ್ ಇಲ್ಲ !!! ( ನಾವಿಲ್ಲಿ ಕಷ್ಟಪಡುತಿದ್ದರೆ ಬೆಂಗಳೂರಲ್ಲಿ ಕುಳಿತುಕೊಂಡು ಪದ್ಯ ಬರಿತಾಳೆ... ಏನು ಉಪಯೋಗ ? ... ಅಂತ ಬೈದುಕೊಳ್ಳಬೇಡಿ. ನಿಮ್ಮ ಪರವಾಗಿ ವರುಣನಿಗೂ ವಾಯುದೇವನಿಗೂ ಅವಹಾಲು ಸಲ್ಲಿಸುತ್ತಿದ್ದೇನೆ - ಈ ಪದ್ಯದ ಮುಖಾಂತರ !)

"ಬಿರುಮಳೆ" - "ಮಲ್ಲಿಕಾಮಾಲಾ ವೃತ್ತ" ಛಂದಸ್ಸಿನಲ್ಲಿ
****************************************

ಗಾಳಿ ಬೀಸಿತು ಮೋಡ ಮುಸುಕಿತು ಕಪ್ಪು ಕತ್ತಲೆ ಕವಿಯಿತು ||
ಗುಡುಗು ಸಿಡಿಲಿನ ಶಬ್ದಕಂಜೀ ಹೃದಯ ಡವಡವ ಎಂದಿತು || ಪಲ್ಲವಿ ||

ಮೋಡ ಕರಗಿತು ಮಳೆಯು ಸುರಿಯಿತು ನೋಡಿ ಎಲ್ಲರು ನಲಿದರು ||
ಭೂಮಿ ದಾಹವು ತೀರಿ ಹೋಯಿತು ಬಿಸಿಲ ಬೇಗೆಯ ಮರೆತರು ||
ಮಳೆಯ ನೀರಲಿ ಆಡಿ ನಲಿದರು ಬಾಲವೃದ್ಧ ಯುವಕರು  ||
ಸುಖದ ಭಾವವು ತುಂಬಿ ತುಳುಕಿತು ಇವರ ಸಂಭ್ರಮ ನೋಡಿರೊ  || ಗಾಳಿ ಬೀಸಿತು ||

ಆರು ದಿನವೂ ನಿಲ್ಲದೇನೇ ಸೊಕ್ಕು ತೋರಿದ ವರುಣನು || 
ಹಿಂದೆ ಮುಂದೇ ನೋಡದೇನೇ ವಾಯು ಜೊತೆಯಾ ಕೊಟ್ಟನು || 
ಮರವು ಮುರಿಯಿತು ಹೆಂಚು ಹಾರಿತು ಛಿದ್ರವಾಯಿತು ಜೀವನ  ||
ದಾರಿ ಮುಂದಕೆ ತೋಚದೇನೇ ಮನುಜ ಕುಸಿದೂ ಕುಳಿತನು || ಗಾಳಿ ಬೀಸಿತು ||

ಸಾಕೊ ನಿಲ್ಲಿಸು ವರುಣ ದೇವನೆ ನಮ್ಮ ಗೋಳನು ಗಮನಿಸು ||
ಭೂಮಿ ಮಕ್ಕಳ ಕಷ್ಟ ಸುಖವು ನಿನ್ನ ನಂಬಿದೆ ವಿಚಾರಿಸು ||
ಹದವನರಿತುಕೊ ವಾಯುದೇವನೆ ನಿನ್ನ ಆರ್ಭಟ ನಿಲ್ಲಿಸು  ||
ಅತಿಯ ಆಡದೆ ಮಿತಿಯ ಮೀರದೆ ನಮ್ಮ ನೀನೇ ರಕ್ಷಿಸು || ಗಾಳಿ ಬೀಸಿತು ||

- ಸುರೇಖಾ ಭಟ್, ಭೀಮಗುಳಿ
25/06/2015
ಚಿತ್ರಕೃಪೆ : ಇಂಟರ್ ನೆಟ್

No comments:

Post a Comment