Wednesday, June 17, 2015

ಸೃಷ್ಟಿ

" ಸೃಷ್ಟಿ " (ದೋಣಿ ಸಾಗಲಿ ಮುಂದೆ ಹೋಗಲಿ ದಾಟಿಯಲ್ಲಿ )
***************************************************

ಬಾಳ ನೌಕೆಯು ತೇಲಿ ಹೋಗಲಿ ಭವದ ಸಾಗರ ದಾಟಲೀ
ಪಯಣದಾಸುಖ, ಗಮ್ಯದಾಹಿತ, ಬದುಕು ಸಾರ್ಥಕವಾಗಲೀ || ಪಲ್ಲವಿ ||

ಮಳೆಯು ಸುರಿಯಲಿ, ಇಳೆಯು ತಣಿಯಲಿ, ಭೂಮಿ ಆಗಸ ಸೇರಲೀ 
ಮಂಜು ಬೀಳಲಿ, ಪುಷ್ಪ ಬಿರಿಯಲಿ, ಪ್ರಕೃತಿ ಸೊಬಗದು ಹೆಚ್ಚಲೀ ||
ಬಿಸಿಲು ಕಾಯಲಿ, ಮೋಡ ಓಡಲಿ, ನೋಟ ಹಬ್ಬವ ಹೂಡಲೀ || 
ಹೊತ್ತು ಮೀರಲಿ, ತಾರೆ ಬೆಳಗಲಿ, ಚಂದ್ರ ಕಾಂತಿಯ ಚೆಲ್ಲಲೀ || ಬಾಳ ನೌಕೆಯು ||

ಗಿಡವು ಚಿಗುರಲಿ, ಮೊಗ್ಗು ಮೂಡಲಿ, ಮೊಗ್ಗು ಹೂವಾಗರಳಲೀ || 
ಹೂವಿನಂದವ ಕಂಡ ದುಂಬಿಯು ಜೇನ ಸವಿಯನು ಉಣ್ಣಲೀ || 
ದುಂಬಿ ಸ್ಪರ್ಶದಿ, ಕಾಯಿ ಕಚ್ಚಲಿ, ಕಾಯಿ ಹಣ್ಣುಗಳಾಗಲೀ ||
ಹೂವು ಕಾಯೋ ಹಣ್ಣೊ ಬೀಜವೊ ಸೃಷ್ಟಿಗುಪಕೃತವಾಗಲೀ || ಬಾಳ ನೌಕೆಯು ||

ಸಕಲ ಸೃಷ್ಟಿಯು ದೇವ ನಿರ್ಮಿತ ಎಂಬ ಸತ್ಯವ ತಿಳಿಯಿರೀ ||
ಸೃಷ್ಟಿಕರ್ತನ ಇಚ್ಚೆಯಂತೆಯೇ ನಮ್ಮ ಜೀವನ ಅರಿಯಿರೀ || 
ಅಂದ ಸವಿಯುವ, ನೋವ ಮರೆಯುವ, ಸೃಷ್ಟಿಕರ್ತನ ನೆನೆಯುವಾ ||
ಸರ್ವ ಕಾಲಕು, ಸರ್ವ ಸೃಷ್ಟಿಗು, ಶಾಂತಿ ಸುಖವನೆ ಬಯಸುವಾ || ಬಾಳ ನೌಕೆಯು ||

- ಸುರೇಖಾ ಭೀಮಗುಳಿ
08/06/2015

ಛಾಯಾಚಿತ್ರ : ಸುಮಂತ ಭೀಮಗುಳಿ

No comments:

Post a Comment