ನನ್ನ ಮನದಂಗಳದಿ ಬೆಳೆದಿರುವ ಪುಷ್ಪಗಳ
ಅರ್ಪಿಸಲು ಕಾದಿರುವೆ ಹೃದಯೇಶ್ವರಿ ||
ಜಾಜಿ ಸಂಪಿಗೆ ಕಮಲ ಮಲ್ಲಿಗೆಯ ದಂಡೆಗಳ
ಸ್ವೀಕರಿಸು ಬಾ ತಾಯಿ ಭುವನೇಶ್ವರಿ || 1 ||
ನಾ ಬರೆದ ಕವನಗಳು ಬರಿಬಿಡಿಯ ಹೂವುಗಳು
ಭಾವ ಲೋಕದಲಿ ವಿಹರಿಸಿದ ಪರಿಣಾಮ ||
ಪರಿಪರಿಯ ಪರಿಮಳದ ಬಗೆಬಗೆಯ ಬಣ್ಣಗಳು
ಅರ್ಪಿಸುವೆ ನಿನ್ನಡಿಗೆ ಮಾಡಿ ಪ್ರಣಾಮ || 2 ||
"ಪ್ರವಾಸ - ಪ್ರಯಾಸ" ನಿಜವಾದ ಕಥನಗಳು
ನಾ ಪಡೆದ ಅನುಭವದ ಹೊನ್ನ ಮೂಟೆ ||
"ಸ್ವಗತಗಳ ಸರಮಾಲೆ" ಪುರಾಣದ ಪಾತ್ರಗಳು
ಪೂರ್ವಜರ ಜೊತೆಯಲ್ಲಿ ನನ್ನ ಹರಟೆ || 3 ||
ಲಘು ಹಾಸ್ಯ ಬರಹಗಳು ಕಲ್ಪನೆಯ ಮಿಶ್ರಬೆಳೆ
ಹಳೆನೆನಪು- ಹೊಸಹುರುಪು- ಮೊಗೆದುಕೊಂಡಷ್ಟು ||
ಹಸಿಸುಳ್ಳು- ಕಟ್ಟುಕತೆ- ಆಮೋದ- ಪ್ರಮೋದ
ಓದುಗರ ಮನವನ್ನು ಸೆಳೆದುಬಿಡಲಿಷ್ಟು || 4 ||
"ಸ್ವಗತಗಳ ಸರಮಾಲೆ" ಕೊರಳಲ್ಲಿನಾ ಹಾರ
ಕವಿತೆಗಳ ಬಿಡಿ ಹೂವು ಪಾದಕಾದೀತೇ ? ||
ಲಘುಹಾಸ್ಯ ಬರಹಗಳು ಕೇಶಕ್ಕೆ ಅಲಂಕಾರ
ಅನುಭವದ ಕಥನಗಳು ನಿನ್ನಿಚ್ಚೆಯಂತೆ || 5 ||
- ಸುರೇಖಾ ಭೀಮಗುಳಿ
04/07/2015
ಚಿತ್ರಕೃಪೆ : ಇಂಟರ್ ನೆಟ್
No comments:
Post a Comment