ಕಾರ್ಮೋಡ ಮುಸುಕಿಹುದು ಬಾನಿನಂಗಳದಲ್ಲಿ
ಮಳೆಯು ಧಾರಾಕಾರ ಸುರಿಯಬಹುದು ||
ತಂಪಾಗುವುದು ಧರೆ, ಮರೆತು ಪೋಪುದು ಧಗೆ
ಪ್ರಕೃತಿಯು ಖುಷಿಯಲ್ಲಿ ಬೀಗಬಹುದು || 1 ||
ಹಗಲೆಲ್ಲ ಬಿಸಿಲಿರಲಿ ಇರುಳಲ್ಲಿ ಮಳೆಬರಲಿ
ಮಳೆ ಬರಲು ಮನೆಮಂದಿ ಜೊತೆಯಲಿರಲಿ ||
ನನ್ನ ಕೋರಿಕೆಯನ್ನು ಸಲಿಸಿರುವೆ ವರುಣನಲಿ
ನನ್ನಾಸೆ ಆತನಿಗೆ ಸರಿಯೆನಿಸಲಿ || 2 ||
ಮಿಂಚಿಲ್ಲ ಗುಡುಗಿಲ್ಲ ಸಿಡಿಲಿನಾರ್ಭಟವಿಲ್ಲ
ಮೋಡ ಕವಿಯುತ್ತಿಹುದು ಹಾಡುಹಗಲು ||
ಅರೆನಿಮಿಷ ತಾಳುವೆಯ ? ಮತ್ತೆ ನೀ ಸುರಿದುಬಿಡು
ಶಾಲೆಯೆಡೆ ಹೋದ ಮಗು ಮರಳಿ ಬರಲು || 3 ||
- ಸುರೇಖಾ ಭೀಮಗುಳಿ
04/06/2015
No comments:
Post a Comment