Thursday, June 25, 2015

ಬಿರುಮಳೆ


ತೀರ್ಥಹಳ್ಳಿ - ಹೊಸನಗರದಲ್ಲಿ ಖಂಡಾಬಟ್ಟೇ (ಭಯಂಕರ) ಗಾಳಿ - ಮಳೆಯಂತೆ ! ಬಹಳಷ್ಟು ಲೈಟ್ ಕಂಬಗಳು ಉರುಳಿದ ಪರಿಣಾಮ ಊರಲ್ಲಿ ವಿದ್ಯುಚ್ಛಕ್ತಿ ಇಲ್ಲ.... ಮೊಬೈಲ್ ಗೆ ಚಾರ್ಜ್ ಇಲ್ಲ ! - ನೆಟ್ವರ್ಕ್ ಇಲ್ಲ !!! ( ನಾವಿಲ್ಲಿ ಕಷ್ಟಪಡುತಿದ್ದರೆ ಬೆಂಗಳೂರಲ್ಲಿ ಕುಳಿತುಕೊಂಡು ಪದ್ಯ ಬರಿತಾಳೆ... ಏನು ಉಪಯೋಗ ? ... ಅಂತ ಬೈದುಕೊಳ್ಳಬೇಡಿ. ನಿಮ್ಮ ಪರವಾಗಿ ವರುಣನಿಗೂ ವಾಯುದೇವನಿಗೂ ಅವಹಾಲು ಸಲ್ಲಿಸುತ್ತಿದ್ದೇನೆ - ಈ ಪದ್ಯದ ಮುಖಾಂತರ !)

"ಬಿರುಮಳೆ" - "ಮಲ್ಲಿಕಾಮಾಲಾ ವೃತ್ತ" ಛಂದಸ್ಸಿನಲ್ಲಿ
****************************************

ಗಾಳಿ ಬೀಸಿತು ಮೋಡ ಮುಸುಕಿತು ಕಪ್ಪು ಕತ್ತಲೆ ಕವಿಯಿತು ||
ಗುಡುಗು ಸಿಡಿಲಿನ ಶಬ್ದಕಂಜೀ ಹೃದಯ ಡವಡವ ಎಂದಿತು || ಪಲ್ಲವಿ ||

ಮೋಡ ಕರಗಿತು ಮಳೆಯು ಸುರಿಯಿತು ನೋಡಿ ಎಲ್ಲರು ನಲಿದರು ||
ಭೂಮಿ ದಾಹವು ತೀರಿ ಹೋಯಿತು ಬಿಸಿಲ ಬೇಗೆಯ ಮರೆತರು ||
ಮಳೆಯ ನೀರಲಿ ಆಡಿ ನಲಿದರು ಬಾಲವೃದ್ಧ ಯುವಕರು  ||
ಸುಖದ ಭಾವವು ತುಂಬಿ ತುಳುಕಿತು ಇವರ ಸಂಭ್ರಮ ನೋಡಿರೊ  || ಗಾಳಿ ಬೀಸಿತು ||

ಆರು ದಿನವೂ ನಿಲ್ಲದೇನೇ ಸೊಕ್ಕು ತೋರಿದ ವರುಣನು || 
ಹಿಂದೆ ಮುಂದೇ ನೋಡದೇನೇ ವಾಯು ಜೊತೆಯಾ ಕೊಟ್ಟನು || 
ಮರವು ಮುರಿಯಿತು ಹೆಂಚು ಹಾರಿತು ಛಿದ್ರವಾಯಿತು ಜೀವನ  ||
ದಾರಿ ಮುಂದಕೆ ತೋಚದೇನೇ ಮನುಜ ಕುಸಿದೂ ಕುಳಿತನು || ಗಾಳಿ ಬೀಸಿತು ||

ಸಾಕೊ ನಿಲ್ಲಿಸು ವರುಣ ದೇವನೆ ನಮ್ಮ ಗೋಳನು ಗಮನಿಸು ||
ಭೂಮಿ ಮಕ್ಕಳ ಕಷ್ಟ ಸುಖವು ನಿನ್ನ ನಂಬಿದೆ ವಿಚಾರಿಸು ||
ಹದವನರಿತುಕೊ ವಾಯುದೇವನೆ ನಿನ್ನ ಆರ್ಭಟ ನಿಲ್ಲಿಸು  ||
ಅತಿಯ ಆಡದೆ ಮಿತಿಯ ಮೀರದೆ ನಮ್ಮ ನೀನೇ ರಕ್ಷಿಸು || ಗಾಳಿ ಬೀಸಿತು ||

- ಸುರೇಖಾ ಭಟ್, ಭೀಮಗುಳಿ
25/06/2015
ಚಿತ್ರಕೃಪೆ : ಇಂಟರ್ ನೆಟ್

Tuesday, June 23, 2015

ಕರ್ತವ್ಯ

"ಕರ್ತವ್ಯ"
*******

ಮತ*ವೊಂದು ಬಿತ್ತೆಂದು ಉಬ್ಬದಿರೊ ಓ ಮನುಜ
ಸುಮ್ಮನೇ ಒತ್ತುವರು ನನಗೆ ಅನುಮಾನ ||
ಓದದೆಯೆ ನೋಡದೆಯೆ ಮೆಚ್ಚುವುದು ಸರಿಯಲ್ಲ
ಸಾಹಿತ್ಯ ಲೋಕಕ್ಕೆ ದೊಡ್ಡ ಅಪಮಾನ || 1 ||

ಓದಿ ಸುಖಿಸುವ ಮಂದಿ ಇನ್ನಿಷ್ಟು ಇಹರಲ್ಲ
ಅದುವೆ ನಿಜಾರ್ಥದಲಿ ಸಾಹಿತ್ಯಾಸಕ್ತಿ || 
ಓದುಗರ ಮುಖದಲ್ಲಿ ಪ್ರತಿಫಲಿತವಾದರೆ
ನಿನ್ನ ಕವಿತೆಯಲಿಹುದು ಒಂದಿಷ್ಟು ಶಕ್ತಿ || 2 ||

ಕವಿಯೊಬ್ಬ ಹೊಸೆಯಲೀ ಮತ್ತೊಬ್ಬ ಹಾಡಲೀ
ಎಲ್ಲರನು ಮುಟ್ಟಲೀ ಕನ್ನಡದ ಕವನ ||
ಅವರವರ ಕಾರ್ಯದಲ್ಲಿ ಅವರವರು ಸಹಕರಿಸೆ
ಸಾರ್ಥಕ್ಯವೆನಿಸುವುದು ಕವಿಯ ಜನನ  || 3 ||

ಯಾರು ನೋಡಲಿ ಬಿಡಲಿ ನಿನ್ನ ಕೆಲಸವ ಮಾಡು
ಛಲ ಬಿಡದ ತ್ರಿವಿಕ್ರಮ ನಿನ್ನ ಆದರ್ಶ || 
ಬರೆದಿಟ್ಟುಬಿಡು ಒಮ್ಮೆ ಮನದಲುಕ್ಕಿದ ಭಾವ
ಅದೇ ನಿನ್ನ ಕರ್ತವ್ಯ ಇನ್ನಷ್ಟು ವರ್ಷ || 4 ||

- ಸುರೇಖಾ ಭಟ್ ಭೀಮಗುಳಿ
23/06/2015

* ಲೈಕ್
ಚಿತ್ರಕೃಪೆ : ಇಂಟರ್ ನೆಟ್

Wednesday, June 17, 2015

ಪಾದಪೂಜೆ

"ತಾಯಿ ಭಾರತಿಯ ಪಾದಪದ್ಮಗಳ ಪೂಜಿಸೋಣ ಬನ್ನಿ" ರಾಗದಲ್ಲಿ

" ಪಾದಪೂಜೆ "
*************
ಭಾರತಾಂಬೆಯ ಪಾದಪೂಜೆಯಲಿ | ಭಾಗವಹಿಸ ಬನ್ನೀ || ಭಾಗವಹಿಸ ಬನ್ನೀ ||
ಪಾದದ ಪೂಜೆಯ ವೈಭವವನ್ನು | ನೋಡಿ ತಣಿವ ಬನ್ನೀ || ಧನ್ಯರಾಗ ಬನ್ನೀ || ಪಲ್ಲವಿ ||

ಭಾರತ ಮಾತೆಯ ಪಾದವ ತೊಳೆಯಲು | ಸಾಗರದರಸನು ಕಾದಿಹನು ||
ತಾಯಿ ಭಾರತಿಗೆ ಆರತಿ ಬೆಳಗಲು | ಬಾನಲಿ ಅರುಣನು ಮೂಡಿಹನು ||
ಅರುಣನ ಕಿರಣದ ಜೊತೆಯಲಿ ಸೇರಿ | ಮೇಘನು ಓಕುಳಿ ಚೆಲ್ಲಿಹನು ||
ಪೂಜಾಪರಿಕರ ಕೈಯಲಿ ಹಿಡಿದು | ಆಗಸದರಸನು ನಿಂದಿಹನು || 1 ||

ಸಾಗರದಲೆಗಳು ಮೊರೆಯುವ ಶಬ್ದವೆ | ಸುಪ್ರಭಾತದ ಶುಭದ ನುಡಿ ||
ಬೀಸುವ ಗಾಳಿಯ ತಂಪಿನ ಸ್ಫರ್ಶವೆ | ದೇವನ ಸಂದೇಶದಾಮೋಡಿ ||
ಭಾರತಾಂಬೆಯ ಗುಣವಿಶೇಷಗಳ | ಹಾಡಿ ನಲಿಯುತಿದೆ ಬಾನಾಡಿ ||
ಎಲ್ಲೆಡೆ ಸಂತಸ ಎಲ್ಲೆಡೆ ಸಂಭ್ರಮ | ಸ್ಫೂರ್ತಿಗೊಳ್ಳುವ ಇದನೋಡಿ || 2 ||

ಅಮ್ಮನ ಪ್ರೀತಿಯ ಕರುಣೆಯ ನೋಟವ | ನಾವುಗಳೆಲ್ಲರು ಗಳಿಸೋಣ ||
ಮಾತೃ ಮಮತೆಯ ಕೃಪೆಯನ್ನೊಮ್ಮೆ | ಉಣ್ಣುತ ಸುಖವನು ಹೊಂದೋಣ ||
ಬಿಟ್ಟರೆ ಸಿಕ್ಕದು ಮತ್ತೊಂದು ಅವಕಾಶ | ಮಾತೆಯ ಸೇವೆಯ ಮಾಡೋಣ ||
ಧನ್ಯ ಭಾವದಿ ಶುಭವನು ಕೋರುತ | ತಾಯಿಗೆ ಜಯಜಯವೆನ್ನೋಣ || 3 ||

- ಸುರೇಖಾ ಭಟ್ ಭೀಮಗುಳಿ
17/06/2015

ಛಾಯಾಚಿತ್ರ : 14.06.2015 ರಂದು ಕನ್ಯಾಕುಮಾರಿಯಲ್ಲಿ ನಾನೇ ತೆಗೆದಿದ್ದು.

"ಸ್ಫೂರ್ತಿಯಾತ್ರಾ"

"ಸ್ಫೂರ್ತಿಯಾತ್ರಾ"
***************
ಹೊರಟಿಹೆನು ನಾನಿಂದು ನನ್ನ ಕನಸಿನ ಯಾತ್ರೆ
ಮೂರು ದಿನ ನಿಮಗೆನ್ನ ಕಾಟವಿಲ್ಲ ||
ಪಯಣವದು ನನ್ನದು ಕನ್ಯಾಕುಮಾರಿಯ ಕಡೆಗೆ
ನನ್ನ ಸಂತಸಕಿಂದು ಪಾರವಿಲ್ಲ || 1 ||

ವಿಶ್ವಗುರುವಿನ ಕನಸು ಮನಸಿನಲಿ ತುಂಬಿಹುದು
ಹೋಗಿ ಬರುವೆನು ಒಮ್ಮೆ ಗುರುವಿನೆಡೆಗೆ ||
ಹೊತ್ತು ತರುವೆನು ನಾನು ಒಂದಿಷ್ಟು ಸ್ಫೂರ್ತಿಯನು
ಹುಚ್ಚನ್ನು-ಕಿಚ್ಚನ್ನು ನನ್ನ ಜೊತೆಗೆ || 2 ||

ಚಕ್ರವರ್ತಿಯ ನುಡಿಯು ಹೊಸ ಶಕ್ತಿ ತುಂಬುವುದು 
ನಿರಾಶೆಯ ಭಾವ ಬಿಟ್ಟು ಓಡುವುದು ||
ಪುಣ್ಯಭೂಮಿಯ ಹುಟ್ಟು ಸಾರ್ಥಕ್ಯ ಎನಿಸುವುದು
ಈ ಬದುಕು ದೇವನಾ ಕರುಣೆಯೆನಿಸುವುದು || 3 ||

- ಸುರೇಖಾ ಭಟ್ ಭೀಮಗುಳಿ
11/06/2015 

ಚಿತ್ರಕೃಪೆ : ಇಂಟರ್ ನೆಟ್

ಭೂರಿಬೋಜನ - ಭಾಗ 2

ಭೂರಿಬೋಜನ - ಭಾಗ 2
******************
ಎಲೆಯನ್ನು ತೊಳೆದು ನೀ ಕುಳಿತುಕೋ ಸುಮ್ಮನೇ 
ಎಲ್ಲ ಬಗೆಯನ್ನೊಮ್ಮೆ ಬಡಿಸಿ ಬಿಡಲಿ ||
ಕೊನೆ ಎಲೆವರೆಗನ್ನ ತಲುಪಿದಾ ನಂತರವೆ
ದೇವನಾ ನೆನೆದೂಟ ಶುರುವಾಗಲಿ || 1 ||

ಮೊದಲಾಗಿ ಪಾಯಸದ ಸಿಹಿಯುಣ್ಣಬೇಕಂತೆ
ತೋವೆ-ಅನ್ನದ್ದು ಒಂದು ತುತ್ತಂತೆ ||
ಖಾರ ಸಾರಿನ ಜೊತೆಗೆ ತುಪ್ಪ ಹಪ್ಪಳವಂತೆ
ಅದು ಊಟದ ರೀತಿ ಎಲ್ಲ ಬಲ್ಲಂತೆ || 2 ||

ಸಾಂಬಾರು ರುಚಿಯನ್ನು ನೀ ನೋಡಿ ಬಿಡಬೇಕು
ಕಾಯ್ರಸವ ಬೆರಳಲ್ಲಿ ನೆಕ್ಕಿದರು ಸಾಕು ||
ಮಜ್ಜಿಗೆಯ ಹುಳಿಯನ್ನು ಯಾಕೆ ನೀ ಬಿಡಬೇಕು ?
ಪಲ್ಯ ಕೋಸಂಬರಿಯ ತಿಂದುಬಿಡಬೇಕು || 3 ||

ಹೋಳಿಗೆಯ ಸಮಯಕ್ಕೆ ಸಿದ್ಧರಾಗಿರಬೇಕು
ಕಾಯಿ ಹಾಲಿನ ಜೊತೆಗೆ ಮೆಲ್ಲಬೇಕು ||
ಹಣ್ಣ ಪಾಯಸವನ್ನು ಪೋಡಿ ಜೊತೆ ತಿನಬೇಕು
ಚಿತ್ರನ್ನ, ಸಿಹಿಯನ್ನು ನೋಡಿ ಉಣಬೇಕು || 4 ||

ನಿನಗೆ ಬೇಕಾದಷ್ಟು ಕೇಳಿ ನೀ ಹಾಕಿಸಿಕೋ 
ಊಟವನು ಬಲ್ಲವಗೆ ರೋಗವಿಲ್ಲ ||
ಉಣ್ಣುವಾ ಅನ್ನವದು ಆ ದೇವನಾ ಕರುಣೆ
ಹಾಳು ಮಾಡುವುದೆಂದು ಯೋಗ್ಯವಲ್ಲ || 5 ||

ಮಜ್ಜಿಗೆಯ ಜೊತೆಯಲ್ಲಿ ಮಿಡಿ ಉಪ್ಪಿನಾಕಾಯಿ
ಅಹಾ ಎಂಥಾ ಊಟ ಬಿಟ್ಟರುಂಟೆ ? || 
ಇಂಥ ಊಟವನುಣಲು ಪುಣ್ಯಮಾಡಿರಬೇಕು
ನನ್ನ ಊಟದ ಕವನ ಚಂದವುಂಟೆ ? || 6 ||

- ಸುರೇಖಾ ಭೀಮಗುಳಿ
09/06/2015

ಛಾಯಾಚಿತ್ರ : ಸುಮಂತ ಭೀಮಗುಳಿ

"ಭೂರಿಭೋಜನ" - ಭಾಗ 2


ಪ್ರಾಸವಿಲ್ಲದ ಪದ್ಯ ನಿಂತುಣುವ ಊಟದೊಲು 
ತ್ರಾಸದಾಯಕ ಮನಕೆ ರುಚಿಸಲಿಲ್ಲ ||
ಛ೦ದಸ್ಸಿನೆಲೆಗಳೆಡೆ ವಿಕಸಿಸುವ ಕವನಗಳು
ಮನೆಯೂಟ- ಎಂದಿಗೂ ವರ್ಜ್ಯವಲ್ಲ || 1 ||

ನವ್ಯಕವಿತೆಗಳಲ್ಲಿ ಕ್ರಮವಿಲ್ಲ ಹದವಿಲ್ಲ
ಭಾವ-ಪದ ಸಂಪದಕೆ ಕೊರತೆಯಿಲ್ಲ ||
ರುಚಿಶುಚಿಗಳಿದ್ದರೂ ಬಗೆಬಗೆಗಳಿದ್ದರೂ
ನಿಂತು ಉಣ್ಣುವುದೊಂದು ಊಟವಲ್ಲ || 2 ||

ಶಾಂತಿಯಿಂದುಣಬೇಕು ಮೆಚ್ಚಿಕೊಂಡುಣಬೇಕು
ಭೋಜನಕೆ ಅದರದೇ ಕ್ರಮವು ಉಂಟು ||
ಒಲವಿನಿ೦ ಬಡಿಸುತಿರೆ ನಲಿವಿನಿ೦ ಉಣ್ಣುತಿರೆ
"ಭೂರಿಭೋಜನ"ದ ಮುಂದಾವುದುಂಟು ? || 3 ||

- ಸುರೇಖಾ ಭೀಮಗುಳಿ
09/06/2015

ಛಾಯಾಚಿತ್ರ : ಸುಮಂತ ಭೀಮಗುಳಿ

ಸೃಷ್ಟಿ

" ಸೃಷ್ಟಿ " (ದೋಣಿ ಸಾಗಲಿ ಮುಂದೆ ಹೋಗಲಿ ದಾಟಿಯಲ್ಲಿ )
***************************************************

ಬಾಳ ನೌಕೆಯು ತೇಲಿ ಹೋಗಲಿ ಭವದ ಸಾಗರ ದಾಟಲೀ
ಪಯಣದಾಸುಖ, ಗಮ್ಯದಾಹಿತ, ಬದುಕು ಸಾರ್ಥಕವಾಗಲೀ || ಪಲ್ಲವಿ ||

ಮಳೆಯು ಸುರಿಯಲಿ, ಇಳೆಯು ತಣಿಯಲಿ, ಭೂಮಿ ಆಗಸ ಸೇರಲೀ 
ಮಂಜು ಬೀಳಲಿ, ಪುಷ್ಪ ಬಿರಿಯಲಿ, ಪ್ರಕೃತಿ ಸೊಬಗದು ಹೆಚ್ಚಲೀ ||
ಬಿಸಿಲು ಕಾಯಲಿ, ಮೋಡ ಓಡಲಿ, ನೋಟ ಹಬ್ಬವ ಹೂಡಲೀ || 
ಹೊತ್ತು ಮೀರಲಿ, ತಾರೆ ಬೆಳಗಲಿ, ಚಂದ್ರ ಕಾಂತಿಯ ಚೆಲ್ಲಲೀ || ಬಾಳ ನೌಕೆಯು ||

ಗಿಡವು ಚಿಗುರಲಿ, ಮೊಗ್ಗು ಮೂಡಲಿ, ಮೊಗ್ಗು ಹೂವಾಗರಳಲೀ || 
ಹೂವಿನಂದವ ಕಂಡ ದುಂಬಿಯು ಜೇನ ಸವಿಯನು ಉಣ್ಣಲೀ || 
ದುಂಬಿ ಸ್ಪರ್ಶದಿ, ಕಾಯಿ ಕಚ್ಚಲಿ, ಕಾಯಿ ಹಣ್ಣುಗಳಾಗಲೀ ||
ಹೂವು ಕಾಯೋ ಹಣ್ಣೊ ಬೀಜವೊ ಸೃಷ್ಟಿಗುಪಕೃತವಾಗಲೀ || ಬಾಳ ನೌಕೆಯು ||

ಸಕಲ ಸೃಷ್ಟಿಯು ದೇವ ನಿರ್ಮಿತ ಎಂಬ ಸತ್ಯವ ತಿಳಿಯಿರೀ ||
ಸೃಷ್ಟಿಕರ್ತನ ಇಚ್ಚೆಯಂತೆಯೇ ನಮ್ಮ ಜೀವನ ಅರಿಯಿರೀ || 
ಅಂದ ಸವಿಯುವ, ನೋವ ಮರೆಯುವ, ಸೃಷ್ಟಿಕರ್ತನ ನೆನೆಯುವಾ ||
ಸರ್ವ ಕಾಲಕು, ಸರ್ವ ಸೃಷ್ಟಿಗು, ಶಾಂತಿ ಸುಖವನೆ ಬಯಸುವಾ || ಬಾಳ ನೌಕೆಯು ||

- ಸುರೇಖಾ ಭೀಮಗುಳಿ
08/06/2015

ಛಾಯಾಚಿತ್ರ : ಸುಮಂತ ಭೀಮಗುಳಿ

ಚಂಚಲೆ


" ಚಂಚಲೆ "

ಪ್ರಕೃತಿಯು ಹೆಣ್ಣೆಂದು ಗುರುತಿಸುವುದೀಜಗವು
ಅರಿವಾಯ್ತು ಏಕೆಂದು ಇಂದು ನನಗೆ ||
ಸ್ತ್ರೀಯು ಚಂಚಲೆಯೆಂದು ಜರೆಯುವುದು ಮೂರ್ಲೋಕ
ಸ್ಥಿರವಿರದು ಅವಳ ಮನ ಅರ್ಧ ಗಳಿಗೆ || 1 ||

ಇಂದಿತ್ತು ಹೊಂಬಿಸಿಲು, ನಿನ್ನೆ ಸುರಿದಿತ್ತು ಮಳೆ
ಮಂಜು ಮುಸುಕಿತ್ತು ಬೆಳಗಿನಾ ಜಾವ ||
ಚಣಚಣಕೆ ಮನವನ್ನು ಬದಲಿಸುವ ಪರಿಯೇನು ?
ಅದು ತಾನೆ ಷೋಡಶದ ಹೆಣ್ಣ ಭಾವ ? || 2 ||

ಹೆಣ್ಣಿನಾ ಮನವನ್ನು ಅರಿಯಬಲ್ಲವರಿಲ್ಲ
ಸೃಷ್ಟಿ ನಿಯಮದ ಮುಂದೆ ಯಾರದೇನು ? ||
ಆಗಾಗ ಬದಲಾಗಿ ಮುದಗೊಳಲಿ ಪ್ರಕೃತಿಯು
ತನ್ಮಯದಿ ಗಮನಿಸುವೆ ಅದನು ನಾನು || 3 ||

- ಸುರೇಖಾ ಭೀಮಗುಳಿ
05/06/2015

ಚಿತ್ರಕೃಪೆ : ಅಂತರ್ ಜಾಲ
ಚಿತ್ರ ಸಂಯೋಜನೆ : ಸುಮಂತ ಕಶ್ಯಪ್

"ಕೋರಿಕೆ"


ಕಾರ್ಮೋಡ ಮುಸುಕಿಹುದು ಬಾನಿನಂಗಳದಲ್ಲಿ
ಮಳೆಯು ಧಾರಾಕಾರ ಸುರಿಯಬಹುದು ||
ತಂಪಾಗುವುದು ಧರೆ, ಮರೆತು ಪೋಪುದು ಧಗೆ
ಪ್ರಕೃತಿಯು ಖುಷಿಯಲ್ಲಿ ಬೀಗಬಹುದು || 1 ||

ಹಗಲೆಲ್ಲ ಬಿಸಿಲಿರಲಿ ಇರುಳಲ್ಲಿ ಮಳೆಬರಲಿ
ಮಳೆ ಬರಲು ಮನೆಮಂದಿ ಜೊತೆಯಲಿರಲಿ ||
ನನ್ನ ಕೋರಿಕೆಯನ್ನು ಸಲಿಸಿರುವೆ ವರುಣನಲಿ
ನನ್ನಾಸೆ ಆತನಿಗೆ ಸರಿಯೆನಿಸಲಿ || 2 ||

ಮಿಂಚಿಲ್ಲ ಗುಡುಗಿಲ್ಲ ಸಿಡಿಲಿನಾರ್ಭಟವಿಲ್ಲ
ಮೋಡ ಕವಿಯುತ್ತಿಹುದು ಹಾಡುಹಗಲು ||
ಅರೆನಿಮಿಷ ತಾಳುವೆಯ ? ಮತ್ತೆ ನೀ ಸುರಿದುಬಿಡು
ಶಾಲೆಯೆಡೆ ಹೋದ ಮಗು ಮರಳಿ ಬರಲು || 3 ||

- ಸುರೇಖಾ ಭೀಮಗುಳಿ
04/06/2015

Wednesday, June 10, 2015

"ಸ್ಫೂರ್ತಿಯಾತ್ರಾ"

"ಯುವ ಬ್ರಿಗೇಡ್" ಜೊತೆ ಕನ್ಯಾಕುಮಾರಿ "ಸ್ಫೂರ್ತಿಯಾತ್ರಾ"ದಲ್ಲಿ ಪಾಲ್ಗೊಳ್ಳುತ್ತಿರುವ ಸಂತಸದಲ್ಲಿ .....

ಹೊರಟಿಹೆನು ನಾನಿಂದು ನನ್ನ ಕನಸಿನ ಯಾತ್ರೆ
ಮೂರು ದಿನ ನಿಮಗೆನ್ನ ಕಾಟವಿಲ್ಲ ||
ಪಯಣವದು ನನ್ನದು ಕನ್ಯಾಕುಮಾರಿಯ ಕಡೆಗೆ
ನನ್ನ ಸಂತಸಕಿಂದು ಪಾರವಿಲ್ಲ || 1 ||

ವಿಶ್ವಗುರುವಿನ ಕನಸು ಮನಸಿನಲಿ ತುಂಬಿಹುದು
ಹೋಗಿ ಬರುವೆನು ಒಮ್ಮೆ ಗುರುವಿನೆಡೆಗೆ ||
ಹೊತ್ತು ತರುವೆನು ನಾನು ಒಂದಿಷ್ಟು ಸ್ಫೂರ್ತಿಯನು
ಹುಚ್ಚನ್ನು-ಕಿಚ್ಚನ್ನು ನನ್ನ ಜೊತೆಗೆ || 2 ||

ಚಕ್ರವರ್ತಿಯ ನುಡಿಯು ಹೊಸ ಶಕ್ತಿ ತುಂಬುವುದು 
ನಿರಾಶೆಯ ಭಾವ ಬಿಟ್ಟು ಓಡುವುದು ||
ಪುಣ್ಯಭೂಮಿಯ ಹುಟ್ಟು ಸಾರ್ಥಕ್ಯವೆನಿಸುವುದು
ಈ ಜನುಮ ದೇವನಾ ಕರುಣೆಯೆನಿಸುವುದು || 3 ||

- ಸುರೇಖಾ ಭಟ್ ಭೀಮಗುಳಿ
11/06/2015 

Thursday, June 4, 2015

ಕಾದಿಹಳು ರುಕ್ಮಿಣಿ......


ಸ್ವಾತಿ ಭಟ್ ಅವರ ಕುಂಚಪ್ರಪಂಚದಲ್ಲಿ ಮೂಡಿದ ಚಿತ್ರ...'ಕೃಷ್ಣಾ ನೀ ಬೇಗನೇ ಬಾರೋ' .

ರುಕ್ಮಿಣಿಯು ಕಾದಿಹಳು ನಿನ್ನದೇ ದಾರಿಯನು
ಹಲವಾರು ಆಸೆಗಳ ಹೊತ್ತುಕೊಂಡು ||
ಕಣ್ಣಲ್ಲಿ ಕನಸುಗಳು ಮನದಲ್ಲಿ ಬಯಕೆಗಳು
ನೆನೆದಿಹಳು ಕರೆದೊಯ್ವೆ ಎಂದುಕೊಂಡು || ೧ ||

ನಿನ್ನದೇ ನಿರೀಕ್ಷೆ ಚಡಪಡಿಸುತಿಹಳವಳು
ಬಂದುಬಿಡು ನೀನಿಂದು ತಡಮಾಡದೆ ||
ಅವಳಣ್ಣ ರುಕ್ಮನಿಂದಾಕೆಯನು ರಕ್ಷಿಸಲು
ಓ ಹರಿಯೆ ನೀ ಬೇಗ ಬರಬಾರದೆ ? || ೨ ||


-ಸುರೇಖಾ ಭಟ್ ಭೀಮಗುಳಿ
30/05/2015

"ನಮ್ರತೆಯ ನಮನ"



ನೀಲಿಯಾ ಗಗನದಲಿ ಬಿಳಿಯ ಬಣ್ಣದ ಮೋಡ
ಪರಿಶುದ್ಧ ಆಗಸ- ಕಣ್ತುಂಬಿಕೊಳ್ಳಿ ||
ಸಸ್ಯಶ್ಯಾಮಲೆ ತಾಯಿ- ಜೀವ ಜಾಲವೆ ಅಸ್ತಿ
ಬಡಬಡಿಸದೆ ಬಾಯನು ಮುಚ್ಚಿಕೊಳ್ಳಿ || 1 ||

ಭೂಮಿ ನಡುಗಿದಳು- ಪ್ರಕೃತಿ ಮುನಿದಿಹಳು
ಎಂದೇಕೆ ಹಲಬುವಿರಿ ವ್ಯರ್ಥವಾಗಿ ||
ಎಷ್ಟೊವರ್ಷಕೆ ಒಮ್ಮೆ, ಜಾತೆ ಮೈಕೊಡವಿದರೆ
ಜೀವಿಗಳ ತಳಮಳವು ಸಹಜವಾಗಿ || 2 ||

ಭೂಮಿ ಮಾತೆಯು ತನ್ನ ಸರ್ವವನು ಕಾಪಿಟ್ಟು
ಕುಳಿತಿಹಳು ಕಾಯುತ್ತ ಶುಭವ ಕೋರಿ ||
ಅವಳ ಮಹಿಮೆಯ ಸಿರಿಯ ನೋಡಿ ಆನಂದಿಸುವ
ಮನವ ಹೊಂದುವುದೊಂದೆ ಈಗ ದಾರಿ || 3 ||

ಧರಣಿ ದೇವಿಯ ಪೂಜ್ಯ ಪಾದ ಪದ್ಮಗಳಲ್ಲಿ
ನಮ್ರತೆಯ ನಮನಗಳ ಸಲಿಸಿಬಿಡುವ ||
ಭೂಮಿ ಮೇಲಿನ ಬದುಕು ನಮಗೆ ಅವಳಿತ್ತ ಕೃಪೆ
ಕೃತಜ್ಞತೆಯ ಭಾವದಲಿ ಕರಗಿ ಬಿಡುವ || 4 ||

- ಸುರೇಖಾ ಭಟ್ ಭೀಮಗುಳಿ
28/05/2015

ಚಿತ್ರಕೃಪೆ: Rohini Hs- ನಮ್ ನಗರ ಗ್ರೂಪ್