ವಿಶ್ವ ಸಿಂಹಾಸನದಿ ಪವಡಿಸುವ ನಿನ್ನನ್ನು
ಕಣ್ತುಂಬಿಕೊಳಬೇಕು ಎಂಬ ಆಸೆ ||
ನೀನು ಮನ ಮಾಡಿದರೆ ಅಸಾಧ್ಯವೇನಲ್ಲ
ಈ ಜನ್ಮದಲೆ ಅದನು ಕಾಣುವಾಸೆ || 1 ||
ನಿನಗೆ ಬೇಕಾದಂತ ಮಕ್ಕಳನು ಸೃಷ್ಟಿಸುವ
ಸರ್ವಶಕ್ತಳು ನೀನು ಅರಿತೆ ನಾನು ||
ನಿನ್ನ ಕೀರುತಿಯನ್ನು ಉತ್ತುಂಗಕೇರಿಸುವ
ಸಂತತಿಯ ಸೃಜಿಸಿಬಿಡು ತಾಯೆ ನೀನು || 2 ||
ಪುಣ್ಯಗರ್ಭೆಯು ನೀನು, ನಿನ್ನ ಸಂತತಿ ನಾನು
ಸಾಮಾನ್ಯ ಆತ್ಮಳು ಹೇಗಾದೆನು ? ||
ನನ್ನ ಶಕ್ತಿಯ ಬಗ್ಗೆ ಅರಿವಿಲ್ಲ ನನ್ನಲ್ಲಿ
ಹನುಮಂತನಂತೆಯೇ ನಾನಾದೆನು || 3 ||
ನಿನ್ನ ಪಾದಗಳಲ್ಲಿ ಅರ್ಪಿಸಿಹೆ ನನ್ನನ್ನು
ಎಚ್ಚರಿಸು ಬಾರಮ್ಮ ನನ್ನ ತಾಯೆ ||
ನಿನ್ನ ಸೇವೆಯಲೆನ್ನ ತೊಡಗಿಸಲು ಹೇಳಿಕೊಡು
ತೋರುವೆಯ ನನ್ನಲ್ಲಿ ನಿನ್ನ ಮಾಯೆ || 4 ||
-ಸುರೇಖಾ ಭಟ್, ಭೀಮಗುಳಿ
28/04/2015
ಚಿತ್ರಕೃಪೆ : ಇಂಟರ್ ನೆಟ್
No comments:
Post a Comment