
ಬಾಳಿನಾ ದಾರಿಯಲಿ ಏರುಮುಖದಾ ಪಯಣ
ಪಯಣಿಸಲು ನಮ್ಮ ಮನ ಸಿದ್ಧವಿರಲಿ ||
ಗುರಿಯ ಮುಟ್ಟಿದ ಮೇಲೆ ನೋಡುವಾ ದೃಶ್ಯಗಳು
ಪಯಣದಾ ಕಷ್ಟಗಳ ಮರೆಸಿಬಿಡಲಿ || 1 ||
ಒಮ್ಮೆ ಏರುವ ದಾರಿ, ಮತ್ತೆ ಇದೆ ಸಮತಟ್ಟು
ಎದುರಿಸುವ ಕೆಚ್ಚು ಅದು ಹೆಚ್ಚುತಿರಲಿ ||
ಇದೆ ದಾರಿ ಬೇಕೆಂಬ ಆಯ್ಕೆಯು ನಮಗಿಲ್ಲ
ಕಲ್ಲು ಮುಳ್ಳಿನ ದಾರಿ ಮರೆಯದಿರಲಿ || 2 ||
ಕಷ್ಟಗಳು ಬಂದಾಗ ಎದುರಿಸುವ ಮನ ಬೇಕು
ಸುಖವೆನ್ನುವುದರ ಬೆಲೆ ಹೆಚ್ಚು ಆಗ ||
ನಷ್ಟಗಳು ಬಾರದೇ ನೋವಿನನುಭವವಿರದೆ
ನಮ್ಮ ಅರಿವಿಗೆ ಬರದು ರಾಜ ಯೋಗ || 3 ||
ದೇವನುದ್ಯಾನದಲಿ ಬೆಳೆದ ಗಿಡಗಳು ನಾವು
ಹೇಗೆ ಬಾಳಿಸಬೇಕು ಅವನ ಹಕ್ಕು ||
ತೋಟದಾ ಮಾಲೀಕ, ಮಾಲಿಯೂ ಆತನೇ
ಅವನೆದುರು ನಡೆದೀತೆ ನಮ್ಮ ಸೊಕ್ಕು ? || 4 ||
ಸುರೇಖಾ ಭೀಮಗುಳಿ
08/05/2015
ಛಾಯಾಚಿತ್ರ : ಸುಮಂತ ಭೀಮಗುಳಿ
ಸ್ಥಳ : ಗಡಾಯಿಕಲ್ - ಉಜಿರೆ ಸಮೀಪ
ಸಂದರ್ಭ : 2013 ಫೆಬ್ರವರಿ 10. ಮೈಸೂರು ಯೂತ್ ಹಾಸ್ಟೆಲ್ ನವರ ಜೊತೆ ನಮ್ಮ ಕುಟುಂಬದ ಟ್ರಕ್ಕಿಂಗ್ ಸವಿನೆನಪು....
No comments:
Post a Comment