ಊರಿನ ಹೊರಗಡೆ ಗದ್ದೆಯ ಪಕ್ಕದಿ
ವಾಸಿಸುತಿದ್ದರು ರಾಮಜ್ಜ ||
ಸಂಗಡ ಇದ್ದಳು ಪ್ರೀತಿಯ ತೋರುತ
ಅವರಾ ಹೆಂಡತಿ ರತ್ನಜ್ಜಿ || 1 ||
ದಶಕದ ಪೂರ್ವದಿ ಮಕ್ಕಳ ಕಲರವ
ಆ ಮನೆಯಲ್ಲಿಯು ತುಂಬಿತ್ತು ||
ಅಳುವಿನ ನಗುವಿನ ಜೊತೆಯಲಿ ದಿನಗಳು
ಬದುಕನು ಹಸಿರಾಗಿರಿಸಿತ್ತು || 2 ||
ಕನಸನು ಕಟ್ಟುತ ಸಾಕಿದ ಮಕ್ಕಳು
ಇಂದಿಗೆ ಅವರಾ ಜೊತೆಗಿಲ್ಲ ||
ಪೇಟೆಗೆ ಹೋಗೀ ಮಕ್ಕಳ ಜೊತೆಯಲಿ
ಇರುವುದಕಿವರಿಗೆ ಮನಸಿಲ್ಲ || 3 ||
ಗದ್ದೆಯ ಬಯಲಿನ ನವಿಲಿನ ನರ್ತನ
ಮಗಳಾ ಬಾಲ್ಯವ ನೆನಪಿಪುದು ||
ಮಾವಿನ ಮರದಲಿ ಕೋಗಿಲೆ ಕೂಜನ
ಮಗನಾ ಬಾಲ್ಯವ ಹಾಡಿಪುದು || 4 ||
ಮಕ್ಕಳು ಬರುವರು ಎಂದಿಗೋ ಒಮ್ಮೆ
ಎಂಥಾ ಸಡಗರ ಮನೆಯಲ್ಲಿ ||
ನಾಲ್ಕೇ ದಿನಕೇ ಹೊರಟೇ ಬಿಡುವರು
ಎನ್ನುವ ಸಂಕಟ ಮನದಲ್ಲಿ || 5 ||
ಹಸಿರಿನ ವನಸಿರಿ ಸುತ್ತಮುತ್ತಲೂ
ಶಾಂತಿಯ ಜೀವನ ಇಲ್ಲಿಹುದು ||
ಬದುಕನು ಸೆವೆಸಲು ಇಷ್ಟೇ ಸಾಕೇ ?
ಎನ್ನುವ ಪ್ರಶ್ನೆ ಕಾಡಿಹುದು || 6 ||
- ಸುರೇಖಾ ಭೀಮಗುಳಿ
23.04.2015
No comments:
Post a Comment