ಭೋರ್ಗರೆದು ಬರುತಲಿದೆ ತೆರೆಗಳುಬ್ಬರ ಮಾಲೆ
ಧೈರ್ಯವಿದ್ದರೆ ಒಮ್ಮೆ ಸ್ವಾಗತವ ಮಾಡು ||
ಹಠಕಟ್ಟಿ ಎದುರಿಸಲು ಬಂದೆಯಾದರೆ ನಿನ್ನ
ನುಂಗಿಬಿಡುವೆನು ನನ್ನ ಸಾಮರ್ಥ್ಯ ನೋಡು ||1||
ಹುಚ್ಚು ಸಾಹಸ ಬೇಡ, ಎನ್ನ ಕೆಣಕಲು ಬೇಡ
ನನ್ನ ಹಿರಿಮೆಯ ಮುಂದೆ ನಿನ್ನದೇನು ? ||
ತೆರೆಗಳಾಟವು ಚಂದ, ಮೇಲುನೋಟಕ್ಕಂದ
ನನ್ನ ಒಳಗಿನ ಶಕ್ತಿ ಒಮ್ಮೆ ಕಾಣು ||2||
ಹೇಡಿಯಂದದಿ ನಾನು ಹಿಂದಡಿಯನಿಡಲಾರೆ
ನಿನ್ನನ್ನು ಎದುರಿಸಲು ನಾನಂತು ಸಿದ್ಧ ||
ಆದುದಾಗಲಿ ಎಂದು ನಿನ್ನನೆದುರಿಸಿಬಿಡಲೆ ?
ಹೂಡಿಯೇ ಬಿಡಲೇನು ನಿನ್ನಲ್ಲಿ ಯುದ್ಧ ? ||3||
ಸ್ಪರ್ಧೆಯಂಕಣದಲ್ಲಿ ಎದುರುನಿಂತಿಹೆಯೇನು ?
ಪಂಥಕ್ಕೆ ಭಯಪಟ್ಟು ಓಡೆ ನಾನು ||
ಗೆಲುವಿರಲಿ ಸೋಲಿರಲಿ ಹೆಚ್ಚು ಅಂತರವಿಲ್ಲ
ಸಿದ್ಧಗೊಳಿಸಿಹೆ ನನ್ನ ಮನವ ನಾನು ||4||
ನಿನ್ನ ಶಕ್ತಿಯ ನಾನು ಅಲ್ಲಗಳೆಯುವುದಿಲ್ಲ
ಹುಚ್ಚು ಅಹಂಕಾರದ ಭಾವವಿಲ್ಲ ||
ನಿನ್ನ ವಿರೋಧಿಸುವ ಅನಿವಾರ್ಯವೇನಿಲ್ಲ
ಸುಮ್ಮನಿರುವುದು ನನಗೆ ಶೋಭೆಯಲ್ಲ ||5||
-ಸುರೇಖಾ ಭಟ್, ಭೀಮಗುಳಿ
17.04.2015
No comments:
Post a Comment