Friday, April 24, 2015

"ಹಳ್ಳಿ - ಪಟ್ಟಣದ ನಡುವೆ"


ಪಟ್ಟಣಕೆ ಬಂದಿಹೆವು ಹೊಸ ಬದುಕನು ಅರಸಿ
ಹಳ್ಳಿ ಜೀವನ ನಮಗೆ ಬೇಡವೆಂದಲ್ಲ ||
ಪಾಯಸವ ಮೆಲ್ಲುವ ಇರುವೆಯಂದದಿ ನಾವು
ಹಳ್ಳಿಯನು ಸವಿಯುವೆವು - ಅಲ್ಲಿರುವುದಿಲ್ಲ || 1 ||

ಬಾಲ್ಯದಲಿ ಮಾಡಿದಾ ಸಾಹಸವು ನೆನಪಿಹುದು
ನೆಮ್ಮದಿಯ ಜೀವನಕೆ ಭಂಗವಿಲ್ಲ ||
ಪಟ್ಟಣದ ಜೀವನದಿ ಹೊಂದಿಹೋಗಿಹೆವಲ್ಲ
ಹಳ್ಳಿ ಕೆಲಸಗಳಿಗೀಗ ಮೈ ಬಗ್ಗುತ್ತಿಲ್ಲ ! || 2 ||

ಹಳ್ಳಿ ಹಲಸದು ಬೇಕು-ಮಾವು-ಕಬ್ಬಿನ ಹಾಲು
ವರ್ಷಕೊಂದಾವರ್ತಿ ಸಿಕ್ಕಬೇಕು ||
ನಿತ್ಯ ಸುಖ ಜೀವನಕೆ ಪಟ್ಟಣವೆ ಬೇಕೆಮಗೆ
ಆಗಾಗ ಹಳ್ಳಿಯಲಿ ಇದ್ದು ಬರಬೇಕು || 3 ||

ಹಳ್ಳಿಬದುಕನು ನೆನೆದು ಮುದಗೊಳ್ಳುವೆವು ನಾವು
ಬೇಕೆಂದರೂ ಅಲ್ಲಿ ಹೋಗಿ ನಿಲೆವು ||
ಹಳ್ಳಿ ಸುಖಭೋಗಗಳು ಬಿಟ್ಟಿ ಕೊಟ್ಟರು ಬೇಡ
ಪೇಟೆಯಾ ಧೂಳಿನಲಿ ನಮಗೆ ಒಲವು || 4 ||

-ಸುರೇಖಾ ಭೀಮಗುಳಿ
24.04.2015

No comments:

Post a Comment