Saturday, October 24, 2015

" ತವರಿನೆಡೆ ಮುಖಮಾಡಿ ನಿಂತಿರುವ ಮನದನ್ನೆ "

" ತವರಿನೆಡೆ ಮುಖಮಾಡಿ ನಿಂತಿರುವ ಮನದನ್ನೆ "
*****************************************

ತವರಿನೆಡೆ ಮುಖಮಾಡಿ ನಿಂತಿರುವ ಮನದನ್ನೆ
ನನ್ನ ಮಾತನ್ನೊಮ್ಮೆ ನೀನು ಕೇಳೆ..... || ಪಲ್ಲವಿ ||
ನಿನಮಾತುಗಳನೆಲ್ಲ ಪುರಸ್ಕರಿಪ ನನ್ನನ್ನು
ಬಿಟ್ಟೋಡ್ವ ಮನವೇಕೆ ನೀನೆ ಹೇಳೆ || ಅನು ಪಲ್ಲವಿ ||

ಅಮ್ಮನಾರೈಕೆ ಹೆಳೆ ನೀ ಹೊರಟು ನಿಂತಿರುವೆ
ಒಂಟಿಯಾಗಿಸಿ ನನ್ನ ತೆರಳುತಿರುವೆ ||
ನಿನ್ನ ನಾ ಬಿಟ್ಟಗಲಿ ಇರಲಾರೆ ಅರ್ಧಕ್ಷಣ
ನನಮೇಲೆ ಕರುಣೆಯೇ ನಿನಗಿಲ್ಲವೆ ? || 1 ||

ಅತ್ತೆಮಾವನ ಮುದ್ದು ಕೂಸಲ್ಲವೇ ನೀನು
ಹೋದವಳ ಸುಲಭದಲಿ ಬಿಡುವರೇನು ? ||
ಅಪ್ಪ-ಅಮ್ಮನ ಪ್ರೀತಿ ಮಳೆಯಲ್ಲಿ ಮೀಯುತಲಿ
ಬಡಪಾಯಿ ಗಂಡನನು ಮರೆವೆ ನೀನು || 2 ||

ಒಬ್ಬಳನೆ ತವರಿಗೇ ಕಳಿಸಿಕೊಡಲೀ ಹೇಗೆ ?
ನಾನೂನು ಬರುವೆನೂ ನಿನ್ನ ಜೊತೆಗೆ ||
ಆತಿಥ್ಯದಾಸೆಯಲಿ ಬರುವವನು ನಾನಲ್ಲ
ನಿನ್ನ ಬಳಿ ಇರುವುದೇ ಮುಖ್ಯವೆನಗೆ || 3 ||

ನಿಮ್ಮಪ್ಪ ಅಮ್ಮನನು ಇಲ್ಲಿಗೇ ಕರೆಸಿಕೋ
ಬೇಡವೆನ್ನುವೆನೇನು ನನ್ನ ನಲ್ಲೆ ||
ಅವರ ಸೇವೆಯ ಸಮಯ ನಾನೂನು ಜೊತೆ ಕೊಡುವೆ
ಒಂಟಿಯಾಗಿರಲಿಲ್ಲಿ ನಾನು ಒಲ್ಲೆ || 4 ||

- ಸುರೇಖಾ ಭೀಮಗುಳಿ
24/10/2015
ಚಿತ್ರ ಕೃಪೆ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

No comments:

Post a Comment