Saturday, October 31, 2015

" ಜೇನು ಮರಿಗೊಂದು ಶೋಕಗೀತೆ "

" ಜೇನು ಮರಿಗೊಂದು ಶೋಕಗೀತೆ "
*******************************
ಒಂದು ದಿನ ಜೇನು ಮರಿಯು
ಏನು ಮಾಡಿತು ? ||
ಮಧುವ ಹುಡುಕಲೆಂದು ಅದು
ಗೂಡು ಬಿಟ್ಟಿತು || ೧ ||

ಹೂವು ಹುಡುಕ ಹೊರಟ ಮರಿಗೆ
ಬೆಲ್ಲ ಕಂಡಿತು ||
ಅದರ ರುಚಿಯ ನೋಡ್ವ ಎಂದು
ನೆಕ್ಕಿ ನೋಡಿತು || ೨ ||

ನೊರೆಯ ಬೆಲ್ಲದಲ್ಲಿ ಕಾಲು
ಸಿಕ್ಕಿಕೊಂಡಿತು ||
ಕಷ್ಟಪಟ್ಟರೂನು ಹೊರಗೆ
ಬಾರದಾಯಿತು || ೩ ||

ಅಷ್ಟರೊಳಗೆ ನೊರೆಯ ಬೆಲ್ಲ
ಗಟ್ಟಿಯಾಯಿತು ||
ಬೆಲ್ಲದಚ್ಚಿನಲ್ಲಿ ಮರಿಯು
ಪ್ರಾಣ ಬಿಟ್ಟಿತು ! || ೪ ||

ಏನೋ ಮಾಡ ಹೋಗಿ ಅದುವು
ಏನೋ ಆಯಿತೆ ? ||
ನೊರೆಯ ಬೆಲ್ಲ ಆಸೆಗಾಗಿ
ಜೀವ ಹೋಯಿತೆ ? || ೫ ||

ಶೋಕಗೀತೆ ಬರೆವುದಕಿದು
ನಾಂದಿಯಾಯಿತೆ ?
ಸತ್ತ ಜೇನಿನಾತ್ಮಕಿಂದು
ಮುಕ್ತಿ ಸಿಕ್ಕಿತೆ ? || ೬ ||

- ಸುರೇಖಾ ಭೀಮಗುಳಿ
31/10/2015
ಚಿತ್ರ : Rajesh Srivatsa (ಕಾಜಾಣ - Kaajaana ಗ್ರೂಪ್)
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Wednesday, October 28, 2015

" ಶಿವಪ್ಪ ನಾಯ್ಕನನ್ನು ನೆನೆದು .................."


" ಶಿವಪ್ಪ ನಾಯ್ಕನನ್ನು ನೆನೆದು .................."
***********************************

ಬಿದನೂರಿನ ಹಸಿರು ಕೋಟೆ
ಎಷ್ಟು ಭವ್ಯವಾಗಿದೆ ||
ಮನದ ಕ್ಲೇಶವೆಲ್ಲ ಬಿಟ್ಟು
ನೋಡ ಬನ್ನಿ ಎಂದಿದೆ || ೨ ||

ನಮ್ಮ ಊರ ಕೋಟೆ ಕೆರೆಯು
ಶಾಂತವಾಗಿ ಮೆರೆದಿದೆ ||
ಮೂರು ಬಾಹು ಹೊಂದಿಕೊಂಡು
ತುಂಬಿಕೊಂಡು ನಿಂತಿದೆ || ೧ ||

ಕೋಟೆ ಮೇಲೆ ಬಿದ್ದ ನೀರು
ಕೆರೆಗೆ ಮೂಲವಾಯಿತೆ ? ||
ಕೆರೆಯು ತುಂಬಿ ಉಕ್ಕಿ ಹರಿದು
ಊರ ಹಳ್ಳ ಸೇರಿತೆ ? || ೩ ||

ಊರ ನಾಯ್ಕ ಕಾಲವಾಗಿ
ಎಷ್ಟೋ ವರ್ಷವಾಯಿತು ||
ಕೋಟೆ ನೋಡುವಾಗ ಮನವು
ನಾಯ್ಕರನ್ನು ನೆನೆಯಿತು || ೪ ||

ಕೋಟೆ - ಕೆರೆಯು ಇರುವವರೆಗೆ
ಶಿವಪ್ಪ ನಾಯ್ಕ ಅಮರನು ||
ನಮ್ಮ ಊರ ಹಳೆಯ ಕತೆಯ
ನೆನಪುಮಾಡುತಿರುವನು || ೫ ||

- ಸುರೇಖಾ ಭೀಮಗುಳಿ
29/10/2015
ಚಿತ್ರ : Supreeth Dsouza, Dominic Kabale (ನಗರ ಗ್ರೂಪ್)

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Tuesday, October 27, 2015

ನನ್ನ ಬಿದನೂರ ಕೋಟೆ ಕೆರೆ

" ನನ್ನ ಬಿದನೂರ ಕೋಟೆ ಕೆರೆ "
***************************
ಸ್ವಚ್ಛ ಬಾನು ಸುತ್ತ ಕಾನು
ಮಧ್ಯೆ ಕೋಟೆ ಕೆರೆಯಿದೆ ||
ಸುತ್ತ ಹಸಿರು ನೆಲದ ಹಾಸು
ಕೈಯ ಬೀಸಿ ಕರೆದಿದೆ || ೧ ||


ಶುದ್ಧ ಗಾಳಿ ಸ್ತಬ್ಧ ಜಲವು
ಮೂಕವಾಗಿ ನಿಂತಿದೆ ||
ಪ್ರಕೃತಿಯಾ ಧ್ಯಾನದಂತೆ
ನನ್ನ ಮನಕೆ ಕಂಡಿದೆ || ೨ ||

ತನ್ನ ನೈಜ ಚಂದದಿಂದ
ಕೆರೆಯ ಸೊಬಗು ಮೆರೆದಿದೆ ||
ದಾರಿಯಲ್ಲಿ ಹೋಗುವವರ
ಮನವ ಸೂರೆಗೊಂಡಿದೆ || ೩ ||

ಕೆರೆಯ ಸುತ್ತ ಹೂವ ತೋಟ
ಕಾಣುವಂತ ಕನಸಿದೆ ||
ಕೆರೆಯ ನೀರಿನಲ್ಲಿ ಒಮ್ಮೆ
ಈಜಬೇಕು ಎನಿಸಿದೆ ! || ೪ ||

- ಸುರೇಖಾ ಭೀಮಗುಳಿ
27/10/2015
ಚಿತ್ರ : Dominic Kabale (ನಮ್ ನಗರ ಗ್ರೂಪ್)
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

ತವರಲ್ಲೆ ಉಳಿದಿರುವ ಓ ನನ್ನ ಮನದನ್ನೆ

"
ತವರಲ್ಲೆ ಉಳಿದಿರುವ ಓ ನನ್ನ ಮನದನ್ನೆ "
*********************************

ತವರಲ್ಲೆ ಉಳಿದಿರುವ ಓ ನನ್ನ ಮನದನ್ನೆ
ನನ್ನ ಮಾತನ್ನೊಮ್ಮೆ ನೀನು ಕೇಳೆ..... || ಪಲ್ಲವಿ ||
ಒಂಟಿಯಾಗಿಹ ನನ್ನ ಸಂಕಟದ ಭಾವಕ್ಕೆ
ಒಂದು ಪದದುತ್ತರವ ನೀನೆ ಹೇಳೆ || ಅನು ಪಲ್ಲವಿ ||


ಹಿರಿಯರೊತ್ತಾಯದಲಿ ನೀನು ತವರಲ್ಲುಳಿದೆ
ನಮ್ಮ ಮನೆ ನನ್ನನ್ನು ಕರೆದೆಳೆಯಿತು ||
ಹೆಚ್ಚು ದಿನ ಉಳಿದರೇ ನನ ಗೌರವಕೆ ಕುಂದು
ಎಂದು ನನ ಒಳಮನಸು ಎಚ್ಚರಿಸಿತು || ೧ ||


ನಗುವಿಲ್ಲ ಮುನಿಸಿಲ್ಲ ಕೈಬಳೆಯ ದನಿಯಿಲ್ಲ
ಜೀವ ತುಂಬುವರಿಲ್ಲ ನನಕವನಕೆ ||
ನೀನು ಇಲ್ಲದ ಮನೆಯ ಮನೆಯೆಂದು ಹೇಳುವರೆ ?
ಜೀವ ಚೈತನ್ಯವೇ ಇಲ್ಲವಿದಕೆ || ೨ ||


ಒಲೆ ಮೇಲೆ ಹಾಲಿಟ್ಟು ಬೇರೆ ಕೆಲಸಕೆ ಹೋದೆ
ಹಾಲು ಬತ್ತಿದ ಬಗ್ಗೆ ಗಮನವಿಲ್ಲ ||
ನನ್ನಡುಗೆಗಳಿಗೆಲ್ಲ ಯಾಕೊ ರುಚಿಯೇ ಇಲ್ಲ
ಗಂಜಿಯುಣ್ಣದೆ ಬೇರೆ ಮಾರ್ಗವಿಲ್ಲ || ೩ || 


ಮುನಿಸ ತೋರುವ ಮುನ್ನ ನೀನಾಗೆ ಬಂದುಬಿಡು
ಬಾರದಿದ್ದರೆ ನೋಡು ನಿನಗೆ ನಷ್ಟ ||
ನೀ ಬೇಗ ಬಾರದಿರೆ ಅಮ್ಮ ಬರುತಾಳಂತೆ !
ಅವಳಡುಗೆ ರುಚಿಯೂನು ನನಗೆ ಇಷ್ಟ || ೪ ||


- ಸುರೇಖಾ ಭೀಮಗುಳಿ
26/10/2015
ಚಿತ್ರ : ಅಂತರ್ಜಾಲ


ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ...... https://www.facebook.com/surekha.bheemaguli

Saturday, October 24, 2015

" ತವರಿನೆಡೆ ಮುಖಮಾಡಿ ನಿಂತಿರುವ ಮನದನ್ನೆ "

" ತವರಿನೆಡೆ ಮುಖಮಾಡಿ ನಿಂತಿರುವ ಮನದನ್ನೆ "
*****************************************

ತವರಿನೆಡೆ ಮುಖಮಾಡಿ ನಿಂತಿರುವ ಮನದನ್ನೆ
ನನ್ನ ಮಾತನ್ನೊಮ್ಮೆ ನೀನು ಕೇಳೆ..... || ಪಲ್ಲವಿ ||
ನಿನಮಾತುಗಳನೆಲ್ಲ ಪುರಸ್ಕರಿಪ ನನ್ನನ್ನು
ಬಿಟ್ಟೋಡ್ವ ಮನವೇಕೆ ನೀನೆ ಹೇಳೆ || ಅನು ಪಲ್ಲವಿ ||

ಅಮ್ಮನಾರೈಕೆ ಹೆಳೆ ನೀ ಹೊರಟು ನಿಂತಿರುವೆ
ಒಂಟಿಯಾಗಿಸಿ ನನ್ನ ತೆರಳುತಿರುವೆ ||
ನಿನ್ನ ನಾ ಬಿಟ್ಟಗಲಿ ಇರಲಾರೆ ಅರ್ಧಕ್ಷಣ
ನನಮೇಲೆ ಕರುಣೆಯೇ ನಿನಗಿಲ್ಲವೆ ? || 1 ||

ಅತ್ತೆಮಾವನ ಮುದ್ದು ಕೂಸಲ್ಲವೇ ನೀನು
ಹೋದವಳ ಸುಲಭದಲಿ ಬಿಡುವರೇನು ? ||
ಅಪ್ಪ-ಅಮ್ಮನ ಪ್ರೀತಿ ಮಳೆಯಲ್ಲಿ ಮೀಯುತಲಿ
ಬಡಪಾಯಿ ಗಂಡನನು ಮರೆವೆ ನೀನು || 2 ||

ಒಬ್ಬಳನೆ ತವರಿಗೇ ಕಳಿಸಿಕೊಡಲೀ ಹೇಗೆ ?
ನಾನೂನು ಬರುವೆನೂ ನಿನ್ನ ಜೊತೆಗೆ ||
ಆತಿಥ್ಯದಾಸೆಯಲಿ ಬರುವವನು ನಾನಲ್ಲ
ನಿನ್ನ ಬಳಿ ಇರುವುದೇ ಮುಖ್ಯವೆನಗೆ || 3 ||

ನಿಮ್ಮಪ್ಪ ಅಮ್ಮನನು ಇಲ್ಲಿಗೇ ಕರೆಸಿಕೋ
ಬೇಡವೆನ್ನುವೆನೇನು ನನ್ನ ನಲ್ಲೆ ||
ಅವರ ಸೇವೆಯ ಸಮಯ ನಾನೂನು ಜೊತೆ ಕೊಡುವೆ
ಒಂಟಿಯಾಗಿರಲಿಲ್ಲಿ ನಾನು ಒಲ್ಲೆ || 4 ||

- ಸುರೇಖಾ ಭೀಮಗುಳಿ
24/10/2015
ಚಿತ್ರ ಕೃಪೆ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Wednesday, October 21, 2015

" ಒಂದು ಬೆಳಗಿನ ಜಾವ....."

" ಒಂದು ಬೆಳಗಿನ ಜಾವ....."
****************************
ಇಬ್ಬನಿ ತಬ್ಬಿದ ಪ್ರಕೃತಿಮಾತೆ
ನೇಸರನುದಯಕೆ ಕಾದಿಹಳೇ ? ||
ರವಿಯನ್ನೆತ್ತುವ ಕಾತುರದಿಂದಲಿ
ತನ್ನಯ ಇರವನೆ ಮರೆತಿಹಳೇ ? || 1 ||

ದಾಸಿವಾಳದಾ ಮೋಹಕ ಮೊಗ್ಗದು
ಹೂವಾಗರಳಲು ಕಾದಿದೆಯೇ ? ||
ಪಾರಿಜಾತದಾ ತಾಜಾ ಹೂಗಳು
ರಂಗವಲ್ಲಿಯಾ ಬಿಡಿಸಿವೆಯೇ ? || 2 ||

ಮುಳ್ಳಿನ ಗಿಡದಲಿ ಘಮಘಮ ಜಾಜೀ
ಸುಮಧುರ ಪರಿಮಳ ಸೂಸಿದೆಯೇ ? ||
ಎಲೆಯಾ ಮೇಲಿನ ಇಬ್ಬನಿ ಹನಿಯೂ
ಮೆಲ್ಲನೆ ಧರೆಗೆ ಜಾರಿದೆಯೇ ? || 3 ||

ನಿದ್ದೆಯ ಬಿಡದಿಹ ಪುಟಾಣಿ ಕಂದನು
ಅಮ್ಮನ ಬಿಡದೇ ತಬ್ಬಿಹನೇ ? ||
ದಿನಕರನಿಗೆ ನಾ ರಜೆಯಕೊಟ್ಟಿಹೆನು
ಏಳದಿರಮ್ಮಾ ಎನುತಿಹನೇ ? || 4 ||

- ಸುರೇಖಾ ಭೀಮಗುಳಿ
21/10/2015
ಚಿತ್ರ : Sumana Rajesh

Tuesday, October 20, 2015

" ಭಾವ ಭಿತ್ತಿಯ ಆಶಯ "

" ಭಾವ ಭಿತ್ತಿಯ ಆಶಯ "
*********************
ಶಾರದಾಂಬೆಯ ಕೃಪೆಯು ಎಂದೆಂದು ನಮಗಿರಲಿ
ಮನದ ಸ್ವಾಸ್ಥ್ಯವನೆಂದು ಕಾಯುವುದಕೆ ||
ಮನದ ಮಾತುಗಳೆಲ್ಲ ಮೃದುವಾಗಿ ಹೊರಬರಲಿ
ಭಾವ ಭಿತ್ತಿಗೆ ಮೆರುಗು ತುಂಬುವುದಕೆ || 1 ||

ಲಕ್ಷ್ಮಿದೇವಿಯ ಕರುಣೆ ನಮ್ಮ ಜೊತೆಯಲ್ಲಿರಲಿ
ಮನದಲ್ಲಿ ಸ್ಥೈರ್ಯವನು ಹೊಂದುವುದಕೆ ||
ಹಣವೊ ಆಭರಣವೋ ಸಮಯಕ್ಕೆ ಒದಗಲೀ
ಸಂಕಟದ ಕಡುಕಷ್ಟ ನೀಗುವುದಕೆ || 2 ||

ದುರ್ಗಮಾತೆಯ ದಯೆಯು ನಮ್ಮ ಪೊರೆಯುತ್ತಿರಲಿ
ಬರುವ ಬವಣೆಯನೆಲ್ಲ ತರಿಯುವುದಕೆ ||
ನಷ್ಟದಲಿ ನಲುಗದೇ ಕಷ್ಟದಲಿ ಕರುಬದೇ
ಸಡ್ಡು ಹೊಡೆಯುವ ಧೈರ್ಯ ಹೊಂದುವುದಕೆ || 3 ||

ಅನ್ನಪೂರ್ಣೆಯ ಮಮತೆ ನಮ್ಮ ಕಾಯುತ್ತಿರಲಿ
ಇಚ್ಚಿಸಿದ ಭಕ್ಷ್ಯಗಳ ಮೆಲ್ಲುವುದಕೆ ||
ಜಠರದಲ್ಲಿಹ ಅಗ್ನಿ ಉಪಶಮನಗೊಳುತಿರಲಿ
ಶಕ್ತಿ ರೂಪದಿ ನಮ್ಮ ಪೊರೆಯುವುದಕೆ || 4 ||

- ಸುರೇಖಾ ಭೀಮಗುಳಿ
19/10/2015

Saturday, October 17, 2015

" ಮನದ ಹಾಡು "


" ಮನದ ಹಾಡು "
****************
ದಟ್ಟ ಕಾಡ ಮೇಲಿನಿಂದ
ಮೇಘದೋಟ ಸಾಗಿದೆ ||
ಹಚ್ಚ ಹಸಿರ ಚಂದದಲ್ಲಿ
ಪ್ರಕೃತಿಯು ನಲಿದಿದೆ || 1 ||


ಗದ್ದೆ ಬಯಲ ಮಧ್ಯದಲ್ಲಿ
ಹೂಟಿ ಕೆಲಸ ನಡೆದಿದೆ ||
ಹೆಂಚು ಹೊದ್ದ ಮನೆಯ ಒಳಗೆ
ಬಿಸಿಯ ಬೋಂಡ ಕಾದಿದೆ || 2 ||


ಇಂಥ ಚಂದದೂರಿನಲ್ಲಿ
ನನಗು ಮನೆಯು ಬೇಕಿದೆ ||
ಹಳ್ಳಿ ಕೆಲಸ ಮಾಡಲಾರೆ
ಎಂದು ತನುವು ಕೂಗಿದೆ || 3 ||


ಸೊಬಗು ಬೇಕು ಹಸಿರು ಬೇಕು
ಶುದ್ಧ ಗಾಳಿ ಬೇಕಿದೆ ||
ಕಷ್ಟ ಬೇಡ ಶ್ರಮವು ಬೇಡ
ಎಂದು ಮನವು ಹಾಡಿದೆ ! || 4 ||


- ಸುರೇಖಾ ಭೀಮಗುಳಿ
15/10/2015
ಚಿತ್ರ : Vijay Nayak (ನಮ್ ನಗರ ಗ್ರೂಪ್)

Wednesday, October 14, 2015

" ಯಕ್ಷರಂಗದಲ್ಲೊಂದು ಸುತ್ತು "



" ಯಕ್ಷರಂಗದಲ್ಲೊಂದು ಸುತ್ತು "
*****************************

ಕೃಷ್ಣ ಹೀಗಿದ್ದನೇ ? ನನಗೇನು ಗೊತ್ತುಂಟು
ಆಗಿದ್ದೆನೇ ದ್ವಾರಕೆಯ ದ್ವಾರಪಾಲ ? ||
ಯಕ್ಷರಂಗದೊಳಗವನ ಮತ್ತೊಮ್ಮೆ ಸೃಜಿಸಿದಿರಿ
ಕಲ್ಪನೆಯ ಲೋಕದಲಿ ವರ್ಷ ಕಾಲ || 1 ||

ಪುರಾಣದ ಪಾತ್ರಗಳು ಕಲ್ಪನೆಯ ಪರದೆಯಲಿ
ಅಚ್ಚನೊತ್ತಿವೆ ಇಂದು ನಿಮ್ಮ ನೋಡಿ ||
ನಿಮ್ಮ ಜಾಗದಲೊಮ್ಮೆ ದೇವರನೆ ಕಲ್ಪಿಸಿದೆ
ಪಾತ್ರಗಳೆ ಮಾಡಿದವು ನನಗೆ ಮೋಡಿ || 2 ||

ಸುದಾಮ - ಕೃಷ್ಣರ ಕಂಡೆ ರಂಗಮಂಟಪದಲ್ಲಿ
ಕೃಷ್ಣ ಕಾರುಣ್ಯವನು ಅನುಭವಿಸಿದೆ ||
ಪಾತ್ರಗಳ ದುಃಖದಲಿ ನಾನು ಕಣ್ಣೀರಾದೆ
ಭಾವಲೋಕದಲವರ ಭೇಟಿಯಾದೆ || 3 ||

- ಸುರೇಖಾ ಭೀಮಗುಳಿ
13/10/2015
ಚಿತ್ರ : ಕೃಷ್ಣ - Paneyala Raviraja
ಸುದಾಮ - Balakrishna Maniyani Movear
ಚಿತ್ರಗ್ರಹಣ : Kongot Radhakrishna Bhat

Friday, October 9, 2015

" ಹೊಸಭಾವ "

" ಹೊಸಭಾವ "
***************

ಮನದಲ್ಲಿ ಭಾವಗಳು ಜಾತ್ರೆ ಹೊರಟಿಹವೇನು ?
ಜಗವೆಲ್ಲ ಹೊಸತೆಂದು ಕಾಣುತಿದೆಯಲ್ಲ ||
ಏಕೆಂಬ ಪ್ರಶ್ನೆಗೆ ಉತ್ತರವು ದೊರೆತಿಲ್ಲ
ಅಂತರಂಗದಿ ಭಾವ ಉಕ್ಕುತಿದೆಯಲ್ಲ || 1 ||

ಕಳೆದು ಹೋಯಿತು ಬಾಲ್ಯ ಏನೊಂದು ತಿಳಿಯದೇ
ಜೀವನದ ಹೋರಾಟ ಯೌವ್ವನದ ದಿನದಿ ||
ಸಂಸಾರ ಜೀವನದಿ ಮಾಗಿಹೆನು ನಾನಿಂದು
ಕಣ್ಬಿಟ್ಟು ಕುಳಿತಿರುವೆ ನಾನು ಈ ಕ್ಷಣದಿ || 2 ||

ವ್ಯವಧಾನವಿರಲಿಲ್ಲ ಯೌವ್ವನದ ದಿನಗಳಲಿ
ಲೋಕದಚ್ಚರಿಗಳನು ಗಮನಿಸಲೆ ಇಲ್ಲ ||
ಇಂದು ತಣ್ಣನೆ ಕುಳಿತು ಆಸ್ವಾದಿಸುತ್ತಿರುವೆ
ಈಗಲಾದರು ಇದಕೆ ಸಮಯ ಬಂತಲ್ಲ ! || 3 ||

ನನ್ನಂತರಂಗವನು ತೆರೆದಿರುವೆ ನಿಮ್ಮೆದುರು
ಹುಚ್ಚು ಆಸೆಗಳಿಲ್ಲ ನನ್ನ ಮನದಲ್ಲಿ ||
ತಲೆಯಲ್ಲಿ ಮುಡಿದಿರುವ ಮಲ್ಲಿಗೆಯ ಪರಿಮಳವ
ಆಘ್ರಾಣಿಸುತ್ತಿರುವೆ ಹೊಸ ಭಾವದಲ್ಲಿ ||

- ಸುರೇಖಾ ಭೀಮಗುಳಿ
09/10/2015
ಚಿತ್ರ: ಅಂತರ್ಜಾಲ

" ಪುಟ್ಟನಿಗೊಂದು ಪದ್ಯ "

" ಪುಟ್ಟನಿಗೊಂದು ಪದ್ಯ "
**********************

ಇದೋ ನೋಡಿ ನಮ್ಮ ಪುಟ್ಟ
ಬಾಲ್ಯಕೆನ್ನ ಒಯ್ದೆ ಬಿಟ್ಟ ||
ನನ್ನ ಮನವ ಸೆಳೆದುಬಿಟ್ಟ
ಹಳೆಯ ನೆನಪ ತಂದು ಕೊಟ್ಟ || 1 ||

ಚಿಕ್ಕ ಸಸಿಯ ಕೈಯಲಿಟ್ಟು
ಪುಟ್ಟ ಗೊರಬ ನೆತ್ತಿಲಿಟ್ಟು ||
ಹೊರಟ ನೋಡಿ ನಮ್ಮ ಪುಟ್ಟು
ನೆಟ್ಟಿ ನೆಡುವ ಗಮನವಿಟ್ಟು || 2 ||

ಮಣ್ಣು ಕೆಸರು ಗಮನವಿಲ್ಲ
ಚಳಿಯು ಮಳೆಯು ಬರಲಿ ಎಲ್ಲ ||
ಕೃತಕತೆಯ ಸೋಂಕು ಇಲ್ಲ
ಮನದಿ ನೋವಿನೆಳೆಯು ಇಲ್ಲ || 3 ||

ಅಂಗಿ ತೊಟ್ಟ ಚಂದ ನೋಡಿ
ಯಾವ ತೂತು ಯಾವ ಗುಂಡಿ ||
ಅಂಗಿ ಮಣ್ಣು ಆಗಲಿ ಬಿಡಿ
ಚಡ್ಡಿ ಒದ್ದೆ ಇರಲಿ ಬಿಡಿ || 4 ||

ಇವನ ನೋಡಿ ಪದ್ಯ ಬರೆವ
ಹುಚ್ಚು ಎನಗೆ ಹತ್ತಿತಲ್ಲ ||
ನಿಮ್ಮ ಬಾಲ್ಯ- ಹಳೆಯ ನೆನಪು
ನನ್ನ ಕೆಲಸವಾಯಿತಲ್ಲ ||

- ಸುರೇಖಾ ಭೀಮಗುಳಿ
09/10/2015
ಚಿತ್ರ : Rathnakar joshi ಅವರ ಟೈಂ ಲೈನ್ ನಿಂದ ಕದ್ದಿದ್ದೇನೆ !

Thursday, October 8, 2015

" ಕಾಮನ ಬಿಲ್ಲು / ಕಮಾನು ಬಿಲ್ಲು ... ಯಾವುದು ಸರಿ ? "

" ಕಾಮನ ಬಿಲ್ಲು / ಕಮಾನು ಬಿಲ್ಲು ... ಯಾವುದು ಸರಿ ? "
**************************************************

ಒಂದು ಕಡೆಯಲಿ ಬಿಸಿಲು ಮತ್ತೊಂದೆಡೆಯಲಿ ಮೋಡ
ನಡುವೆ ಮೂಡಿಹುದೊಂದು ಕಾಮನಾ ಬಿಲ್ಲು ||
ಹಸಿರಾಗಿ ಮೆರೆಯುತಿಹ ಪ್ರಕೃತಿಯ ನೋಡುತ್ತ
ಹೊಸಭಾವ ಉಕ್ಕಿಹುದು ನನ್ನ ಮನದಲ್ಲು || 1 ||

ಸುರಪಾಲ ನಿನ್ನನ್ನು ಕಳೆದುಕೊಂಡಿಹನೇನು ?
ರತಿಯರಸ ಮನ್ಮಥನು ನಿನ್ನೊಡೆಯನೇನು ? ||
ನಿನಹೆಸರ ಮರ್ಮವನು ತಿಳಿಯಪಡಿಸುವೆಯೇನು ?
ಬಾಗಿರುವ ಕಾರಣಕೆ ಅನ್ವರ್ಥವೇನು ? || 2 ||

ಎಳೆಬಿಸಿಲು ಮಳೆಹನಿಯು ಒಂದಾಗಿ ಬೆರೆಯುತಿರೆ
ಮೂಡುವುದು ಬಾನಲ್ಲಿ ಮನ್ಮಥನ ಬಿಲ್ಲು ||
ಸೋಜಿಗದ ದೃಷ್ಟಿಯಲಿ ಪ್ರಕೃತಿಯ ವೀಕ್ಷಿಸಲು
ಸೊಬಗಿನಾ ದೃಶ್ಯಗಳು ಕಾಣ್ವುದೆಲ್ಲೆಲ್ಲು || 3 ||

ಮೇಘರಾಜನು ಬರಲಿ ಭಾನು ಪ್ರಕಾಶಿಸಲಿ
ವಿರಚಿಸಲಿ ಆಗಸದಿ ಧರ್ಮ ಸಭೆಯ ||
ವರುಣ ಹೊಯ್ದಾಡಲೀ ಭೂದೇವಿ ತಣಿಯಲೀ
ಕುಡಿದು ನಲಿಯುವ ನಾವು ಅವಳ ಸುಧೆಯ || 4 ||

- ಸುರೇಖಾ ಭೀಮಗುಳಿ
08/10/2015
ಚಿತ್ರ : Sunil Udupa

Thursday, October 1, 2015

" ಶುಭಾಶಯ................"

" ಶುಭಾಶಯ................"
**************************

ನೀವೆಲ್ಲ ಹೊರಟಿಹಿರಿ ಸಾಹಸದ ಯಾತ್ರೆಗೆ
ನನ್ನ ಮನ ಹೊರಟಿಹುದು ನಿಮ್ಮ ಜೊತೆಗೆ ||
ನಮ್ಮ ಯೋಧರನೊಮ್ಮೆ ಮಾತನಾಡಿಸಿ ಸುಖಿಸಿ
ಅದು ತಾನೆ ಯಾತ್ರೆಯ ಶುಭದ ಘಳಿಗೆ ||

ಇಚ್ಚೆ ಇದ್ದರು ಕೂಡ ಬರಲಾರೆ ನಿಮ್ಮೊಡನೆ
ಇಲ್ಲ ನನ್ನಲಿ ಇಂದು ನಿಮ್ಮ ಹರಯ ||
ಗಡಿಯ ಯೋಧರಿಗೆಲ್ಲ ಹೇಳಿ ಬರಲಾರಿರಾ ?
ನನ್ನ ಕಡೆಯಿಂದೊಂದು ಶುಭ ಆಶಯ ||

ಹೊಸ ಸ್ಫೂರ್ತಿ ತುಂಬಲೀ ನಿಮ್ಮ ಆಂತರ್ಯದಲಿ
ಸಂಪನ್ನಗೊಳ್ಳಲೀ ನಿಮ್ಮ ಬಯಕೆ ||
ತಾಯಿ ಭಾರತಿಯ ರಕ್ಷೆ ನಿಮ್ಮೊಂದಿಗಿರಲೆಂದು
ಇಲ್ಲಿಂದಲೇ ನಿಮಗೆ ನನ್ನ ಹರಕೆ ||

- ಸುರೇಖಾ ಭೀಮಗುಳಿ
01/10/2015
ಚಿತ್ರಕೃಪೆ: Neelesh Jadhav ಅವರ ಟೈಂಲೈನ್ ನಿಂದ.