ಒಂದು ದಿನ ಬೆಳಗಿನಲಿ ನನ್ನಷ್ಟಕೇ ನಾನು
ಮುಳುಗಿದ್ದೆನೆನ್ನ ಮನೆಗೆಲಸದಲ್ಲಿ ||
ಕರಗಂಟೆ ಸದ್ದಾಯ್ತು ಯಾರೊ ಬಂದಿರಬೇಕು
ಯಾಕೆ ಬಂದಿಹರೊ ಈ ಸಮಯದಲ್ಲಿ ? ||೧||
ಬಂದವನು ಶ್ರೀರಾಮ ಮೈ ಚಿವುಟಿಕೊಂಡೆ ನಿಜ
ಕರೆದದ್ದು ಲಕ್ಷ್ಮಣನ ಬಂದವನು ರಾಮನಿವ
ಯಾಕೆ ಬಂದಿಹನೆಂದು ತಿಳಿಯಲಿಲ್ಲ. ||೨||
ಬಂದದ್ದು ಶುಭಗಳಿಗೆ ಸಂತಸವಾಯ್ತೆನಗೆ
ನಿನ್ನ ತಮ್ಮನ ನಾನು ಕಾಣಲಿತ್ತು ||
ಬಾರನೇನೋ ಅವನು ನಮ್ಮ ಮನೆಯಂಗಳಕೆ
ಅವನೊಡನೆ ಮಾತಾಡಿ ತಿಳಿಯಲಿತ್ತು ||೩||
ನಸುನಕ್ಕ ಶ್ರೀರಾಮ ಹುಸಿಮುನಿಸ ತೋರುತಲಿ
ಒಳಗೆ ಬಾರದೆ ನಿಂದ ದ್ವಾರದಲ್ಲಿ ||
ಕೇಳಿದ್ದು ತಪ್ಪಾಯ್ತೆ ? ತೆಪ್ಪಗಿರಬೇಕಿತ್ತೆ ?
ಹೊರಟು ಬಿಡುವನೊ ಹಾಗೆ ಕೋಪದಲ್ಲಿ ||೪||
ನಾನೆಲ್ಲಿ ಹಾಗಂದೆ ? ನೀನು ನನ್ನಯ ತಂದೆ
ನಿನ್ನ ಮಗಳಾ ಮನೆಯು ಇದಲ್ಲವೇ ? ||
ಕೋಪ ಮಾಡದಿರಯ್ಯ ಬೇಸರಿಸ ಬೇಡಯ್ಯ
ಕಾದಿದ್ದೆ ಲಕ್ಷ್ಮಣನ ಗೊತ್ತಿಲ್ಲವೆ ? ||೫||
ಲಕ್ಷ್ಮಣನು ಬಂದಿಹನು ಬೀದಿಯಲಿ ನಿಂದಿಹನು
ರಥವ ನಿಲ್ಲಿಸಿ ಬರುವ ತಾಳು ಮಗಳೆ ||
ಅವನು ಒಬ್ಬನೆ ಬರನು ಎಂಬ ನಿಜವರಿತಾಗ
ಕರೆತಂದೆ ತಡೆಯದೇ ನಿನ್ನ ರಗಳೆ ||೬||
ಅಷ್ಟರಲಿ ಬಂದನಾ ಸೌಮಿತ್ರಿ ದ್ವಾರದಲಿ
ಕೇಳಿದನು ಅಪ್ಪಣೆಯ ಬರಲು ಒಳಗೆ ||
ಬಾರಯ್ಯ ಬಾರೊ ನೀ ನಿನ್ನ ಕಾಯುತಲಿದ್ದೆ
ಎಷ್ಟು ಕಾಯಿಸಿಬಿಟ್ಟೆ ಬರಲು ಬಳಿಗೆ ||೭||
ಕಾಯುತ್ತ ನಿ೦ದೆನ್ನ ದೇಹ ಬಳಲುತಲಿಹುದು
ಶಬರಿಯದೆ ಕತೆಯಾಯ್ತು ನನ್ನದೂನು ||
ನಿನ್ನ ನೋಡಲು ಬೇಕು, ಮಾತನಾಡಿಸಬೇಕು
ಭೇಟಿ ಮಾಡದೆ ಹೇಗೆ ಉಳಿವೆ ನಾನು ? ||೮||
ಬನ್ನಿ ಕೂಡಿರಿ ಒಮ್ಮೆ, ದಣಿವನಾರಿಸಿಕೊಳ್ಳಿ
ಕುಡಿದು ತಂಪಿನ ನೀರು ಜೊತೆಗೆ ಬೆಲ್ಲ ||
ಹೇಗೆ ಆಯಿತು ಪಯಣ ? ಸುಖಕರವದಾಗಿತ್ತೆ ?
ಯಾವಾಗಲೂ ಬರುವ ದಾರಿಯಲ್ಲ ||೯||
ಬಗೆಬಗೆಯ ಆಡುಗೆಗಳ ಸಿದ್ಧ ಮಾಡಿದೆ ನಾನು
ಅಪರೂಪದಲಿ ಬಂದ ಅತಿಥಿಗಳಿಗೆ ||
ಗಸಗಸೆಯ ಪಾಯಸವ ಮೆಚ್ಚಿ ತಿಂದನು ರಾಮ
ಚಿತ್ರಾನ್ನ ಹಿಡಿಸಿತಾ ಲಕ್ಷ್ಮಣನಿಗೆ ||೧೦||
ಹೇಳು ಲಕ್ಷ್ಮಣದೇವ ನಿನ್ನ ಜೀವನಕತೆಯ
ಲೋಕಕ್ಕೆ ತಿಳಿಯಲೀ ನಿನ್ನ ವಿಷಯ ||
ಹೇಳು ನೀ ಸೌಮಿತ್ರಿ ನಿನ್ನ ಯುದ್ಧದ ಕತೆಯ
ಅದು ಹೇಗೆ ನೀ ಕೊಂದೆ ಇಂದ್ರಾರಿಯ ? ||೧೧|
ನನದೇನು ಹೊಸತಿಲ್ಲ ರಾಮಕತೆ ಬರೆದುಬಿಡು
ನನ್ನದೆನ್ನುವ ವಿಷಯ ಬೇರೆಯಿಲ್ಲ ||
ನಾನು ರಾಮನ ತಮ್ಮ, ರಾಮ ನನ್ನಯ ಅಣ್ಣ
ಹೊಸತು ಬಿರುದುಗಳಲ್ಲಿ ಹಸಿವೆಯಿಲ್ಲ ||೧೨||
ಶ್ರೀರಾಮನಾ ಕತೆಯ ಎಲ್ಲರೂ ತಿಳಿದಿಹರು
ನನಗೆ ಬೇಕೆನಿಸಿದ್ದು ನಿನ್ನ ಕುರಿತೇ ||
ರಾಮನಾ ಮುಖವನ್ನು ತಾ ನೋಡಿ ಸೌಮಿತ್ರಿ
ಹೇಳಲೇ ಬೇಕೇನು ನನ್ನ ಚರಿತೇ ? ||೧೩||
ಹೇಳಿಬಿಡು ಸೌಮಿತ್ರಿ ಅವಳ ಕಾಯಿಸಬೇಡ
ಅವಳು ಪಾಪದ ಹುಡುಗಿ ಬೇರೆಯಲ್ಲ ||
ಮನದಲಿರುವುದ ಹೇಳು ಬರೆದುಕೊಳ್ಳಲಿ ಅವಳು
ಸಂಕೋಚ ಎಳ್ಳಷ್ಟು ನಿನಗೆ ಸಲ್ಲ ||೧೪||
ಅಣ್ಣನಾಜ್ಞೆಯ ಕೇಳಿ ತೆರೆದಿಟ್ಟ ಸೌಮಿತ್ರಿ
ಚಂದದಲಿ ತೋರಿದನು ಬಾಳ ದಾರಿ ||
ಮುಚ್ಚಿಡದೆ ಹೇಳಿದನು ತನ್ನ ಬದುಕಿನ ನಡೆಯ
ಸಾಕಲ್ಲವೇ ಎಂಬ ಬಿಂಕ ತೋರಿ ||೧೫||
ಅಣ್ಣನಿಗೆ "ಶ್ರೀ" ಉಂಟು ನಿನಗೆ ಮಾತ್ರವೆ ಇಲ್ಲ
ಬೇಕಿಲ್ಲವೇನಯ್ಯ ನಿನಗೆ ಬಿರುದು ||
ಶ್ರೀ ಎಂಬ ಉಪನಾಮ ಅಣ್ಣನಿಗೆ ಇರಲಿ ಬಿಡು
ಅಣ್ಣನೇ ಬಂದಿಹನು ನನಗೆ ಒಲಿದು ||೧೬||
ಸಾಕಷ್ಟು ಪಟ್ಟಾಂಗ ನಡೆಯಿತದು ನಮ್ಮಲ್ಲಿ
ಹರಿಯಿತ೦ದಿನ ದಿವಸ ಹಾಸ್ಯಹೊನಲು ||
ಮತ್ತೆ ಕಾಣುವ ಎಂದು ಹೊರಟ ಸಮಯದಲೊಮ್ಮೆ
ಕಣ್ಣಂಚು ನೀರು ಸಂತಸದ ಕಡಲು ||೧೭||
ನಾನಿಂದು ಹೇಳುತಿಹೆ ಲಕ್ಷ್ಮಣನ ಕತೆಯನ್ನು
ಸುವಿಸಾರವಾಗಿಯೇ ಕೇಳಿಕೊಳ್ಳಿ ||
ಸಮಯ ಹೊಂದಿಸಿಕೊಂಡು ನೋಡಿಬಿಡಿ ಹಾಗೊಮ್ಮೆ
ಸಂತಸವ ನಿಮ್ಮಲ್ಲು ತುಂಬಿಕೊಳ್ಳಿ ||೧೮||
-ಸುರೇಖಾ ಭಟ್, ಭೀಮಗುಳಿ
21.01.2015
No comments:
Post a Comment