Friday, January 23, 2015

" ಭಾವ-ಭಂಗಿ "

ಪೋಣಿಸಲು ಹೊರಟಿಹೆನು "ಸ್ವಗತಗಳ ಸರಮಾಲೆ"
ಪರಿಪರಿಯ ಹೂಗಳಿವೆ ಮೊಲ್ಲೆ ಜಾಜಿ ||
ಚಂದದಾ ಪರಿಮಳವ ತಾ ಸೂಸುತಿಹವಿಲ್ಲಿ
ಅವುಗಳಾ ಜೊತೆಯಲ್ಲಿ ನಾನು ರಾಜಿ ||1||

ಸೃಷ್ಠಿಕರ್ತನ ಮನೆಯ ಆಟದಾ ಬಯಲಿನಲಿ
ವೇಷವಾ ತೊಟ್ಟಿಹರು ಜಗದ ಮುಂದು ||
ತಂತನವ ಬಿಚ್ಚಿಡುವ ಹವಣಿಕೆಯ ಹಾದಿಯಲಿ 
ಹೇಳಿಕೊಳ್ಳುತ್ತಿಹರು ನನ್ನೊಳಿ೦ದು ||2||

ಧ್ಯಾನಿಸುತ ಕುಳಿತೊಡನೆ ಎಡಬಿಡದೆ ಮೂರುದಿನ
ಕುಣಿಕುಣಿದು ಬರುತಾವೆ ನನ್ನ ಮನಕೆ ||
ಹೇಳಿಕೊಳ್ಳುವವು ತಮ್ಮೊಡಲಿನಾಳದ ತುಡಿತ
ಬಿಡದೆ ತೀರಿಸುತಾವೆ ನನ್ನ ಬಯಕೆ ||3||

ಅಂದಚಂದದ ಪಾತ್ರ ಕಣ್ಮುಂದೆ ಬರುತಲಿವೆ
ಕರೆದಾಗ ಬರುತಾವೆ ಎನದೆ ಇಲ್ಲ ||
ತಪ್ಪಿಸುತ ಸರತಿಯನು ಕೀಟಲೆಯ ಮಾಡುತಿವೆ
ಶಿಸ್ತಿನಲ್ಲಿರುವುದಕೆ ಇಷ್ಟವಿಲ್ಲ ||4||

ಇದ್ದುದನು ಸರಿಯಾಗಿ ನಿಮ್ಮೊಡನೆ ಹೇಳುವೆನು
ಗೊತ್ತಿರುವ ಪಾತ್ರದಾ ಭಾವ-ಭಂಗಿ ||
ಅವರು ಹೇಳಿದ ಕತೆಯ ಬಿಡದೆ ಬಿತ್ತರಿಸುವೆನು
ನಾನವರ ನಡುವಿನಲಿ ಪುಟ್ಟ ತಂಗಿ ! ||5||

ಸುರೇಖಾ ಭಟ್, ಭೀಮಗುಳಿ
23.01.2015

No comments:

Post a Comment