Friday, January 16, 2015

" ಇದು ಕವಿತ್ವವೋ - ಕಪಿತ್ವವೋ ? "

ಚೌಪದಿಯ ರೀತಿಯಲಿ ಬರೆಯಹೊರಟಿಹೆ ನಾನು
ಕುತ್ತಿಗೆಗೆ ಕೈ ಹಾಕಿ ದಬ್ಬಬೇಡಿ ||
ಪ್ರಾಸ ಕೂಡಿಸುವಲ್ಲಿ ಮೋಸವಾದರು ಒಮ್ಮೆ
ಇವಳೇಕೆ ಹೀಗೆಂದು ಬೈಯ್ಯಬೇಡಿ || 1 ||

ನನ್ನ ಕವಿತ್ವವನು ಕಪಿತ್ವವೆಂದೆನಬೇಡಿ
ಒಂದೊಂದೆ ಅಕ್ಷರವು ಹೆಚ್ಚು ಕಡಿಮೆ ||
ಕಪಿಶ್ರೇಷ್ಠ ಹನುಮಂತ ನನ್ನ ಪಕ್ಷದಲಿಹನು
ಗೊತ್ತಿಲ್ಲದವರುಂಟೆ ಅವನ ಮಹಿಮೆ ||2||

ಕಗ್ಗದಾ ಸವಿಯನ್ನು ಅರೆದು ಕುಡಿದಿಹೆ ನಾನು
ನೆತ್ತಿಗೇರುವುದೇನು ಕುಡಿದ ಅಮಲು ||
ಪದ್ಯದಾ ಮಧ್ಯದಲಿ ಗುಂಡಪ್ಪ ಇಣುಕಿದರೆ
ಬಂದರೂ ಬರಬಹುದು ಕಗ್ಗ ಘಮಲು ||3||

ಪದ್ಯಗಳ ಗುಂಗಿನಲಿ ಕಳೆದುಹೋಗಿಹೆ ನಾನು
ಕುಂತಲ್ಲಿ ನಿಂತಲ್ಲಿ ಹೊಳೆವ ಸಾಲು ||
ನನ್ನ ಬರೆ ನನ್ನ ಬರೆ ಎಂದು ಕಾಡಿವೆ ನೋಡಿ
ಹಿಡಿದೆಳೆಯುತಿವೆಯಲ್ಲ ನನ್ನ ಕಾಲು ! ||4||

-ಸುರೇಖಾ ಭಟ್, ಭೀಮಗುಳಿ
16.01.2015

No comments:

Post a Comment