Monday, April 27, 2015

"ಓ ನನ್ನ ತಾಯೆ ......."


ವಿಶ್ವ ಸಿಂಹಾಸನದಿ ಪವಡಿಸುವ ನಿನ್ನನ್ನು
ಕಣ್ತುಂಬಿಕೊಳಬೇಕು ಎಂಬ ಆಸೆ || 
ನೀನು ಮನ ಮಾಡಿದರೆ ಅಸಾಧ್ಯವೇನಲ್ಲ
ಈ ಜನ್ಮದಲೆ ಅದನು ಕಾಣುವಾಸೆ || 1 ||

ನಿನಗೆ ಬೇಕಾದಂತ ಮಕ್ಕಳನು ಸೃಷ್ಟಿಸುವ 
ಸರ್ವಶಕ್ತಳು ನೀನು ಅರಿತೆ ನಾನು ||
ನಿನ್ನ ಕೀರುತಿಯನ್ನು ಉತ್ತುಂಗಕೇರಿಸುವ
ಸಂತತಿಯ ಸೃಜಿಸಿಬಿಡು ತಾಯೆ ನೀನು || 2 ||

ಪುಣ್ಯಗರ್ಭೆಯು ನೀನು, ನಿನ್ನ ಸಂತತಿ ನಾನು
ಸಾಮಾನ್ಯ ಆತ್ಮಳು ಹೇಗಾದೆನು ? ||
ನನ್ನ ಶಕ್ತಿಯ ಬಗ್ಗೆ ಅರಿವಿಲ್ಲ ನನ್ನಲ್ಲಿ
ಹನುಮಂತನಂತೆಯೇ ನಾನಾದೆನು || 3 ||

ನಿನ್ನ ಪಾದಗಳಲ್ಲಿ ಅರ್ಪಿಸಿಹೆ ನನ್ನನ್ನು
ಎಚ್ಚರಿಸು ಬಾರಮ್ಮ ನನ್ನ ತಾಯೆ ||
ನಿನ್ನ ಸೇವೆಯಲೆನ್ನ ತೊಡಗಿಸಲು ಹೇಳಿಕೊಡು
ತೋರುವೆಯ ನನ್ನಲ್ಲಿ ನಿನ್ನ ಮಾಯೆ || 4 ||

-ಸುರೇಖಾ ಭಟ್, ಭೀಮಗುಳಿ
28/04/2015

ಚಿತ್ರಕೃಪೆ : ಇಂಟರ್ ನೆಟ್

Friday, April 24, 2015

"ಹಳ್ಳಿ - ಪಟ್ಟಣದ ನಡುವೆ"


ಪಟ್ಟಣಕೆ ಬಂದಿಹೆವು ಹೊಸ ಬದುಕನು ಅರಸಿ
ಹಳ್ಳಿ ಜೀವನ ನಮಗೆ ಬೇಡವೆಂದಲ್ಲ ||
ಪಾಯಸವ ಮೆಲ್ಲುವ ಇರುವೆಯಂದದಿ ನಾವು
ಹಳ್ಳಿಯನು ಸವಿಯುವೆವು - ಅಲ್ಲಿರುವುದಿಲ್ಲ || 1 ||

ಬಾಲ್ಯದಲಿ ಮಾಡಿದಾ ಸಾಹಸವು ನೆನಪಿಹುದು
ನೆಮ್ಮದಿಯ ಜೀವನಕೆ ಭಂಗವಿಲ್ಲ ||
ಪಟ್ಟಣದ ಜೀವನದಿ ಹೊಂದಿಹೋಗಿಹೆವಲ್ಲ
ಹಳ್ಳಿ ಕೆಲಸಗಳಿಗೀಗ ಮೈ ಬಗ್ಗುತ್ತಿಲ್ಲ ! || 2 ||

ಹಳ್ಳಿ ಹಲಸದು ಬೇಕು-ಮಾವು-ಕಬ್ಬಿನ ಹಾಲು
ವರ್ಷಕೊಂದಾವರ್ತಿ ಸಿಕ್ಕಬೇಕು ||
ನಿತ್ಯ ಸುಖ ಜೀವನಕೆ ಪಟ್ಟಣವೆ ಬೇಕೆಮಗೆ
ಆಗಾಗ ಹಳ್ಳಿಯಲಿ ಇದ್ದು ಬರಬೇಕು || 3 ||

ಹಳ್ಳಿಬದುಕನು ನೆನೆದು ಮುದಗೊಳ್ಳುವೆವು ನಾವು
ಬೇಕೆಂದರೂ ಅಲ್ಲಿ ಹೋಗಿ ನಿಲೆವು ||
ಹಳ್ಳಿ ಸುಖಭೋಗಗಳು ಬಿಟ್ಟಿ ಕೊಟ್ಟರು ಬೇಡ
ಪೇಟೆಯಾ ಧೂಳಿನಲಿ ನಮಗೆ ಒಲವು || 4 ||

-ಸುರೇಖಾ ಭೀಮಗುಳಿ
24.04.2015

"ಮಿಂಚು-ಗುಡುಗು-ಮಳೆ"


ನಿನ್ನೆ ನಮ್ಮೂರಲ್ಲಿ ಸುರಿದ ಮಳೆಯಿಂದ ಪ್ರಭಾವಿತಗೊಂಡು..... ಬರೆದ ಪದ್ಯ.....

ವರುಣನನು ಬರಮಾಡಿ ಕುಳಿತಿರುವೆ ಜೊತೆಯಲ್ಲಿ
ಅವನೊಡನೆ ಕುಡಿದಿಹೆನು ಬಿಸಿಯ ಕಾಫಿ ||
ಗುಡುಗು ಮಿಂಚುಗಳೆಲ್ಲ ಗುಡುಗುಡಿಸಿ ಕೇಳುತಿವೆ

ನಮಗ್ಯಾಕೆ ಕೊಡದಿರುವೆ- ಮಾಡು ಮಾಫಿ ||1||

ವರುಣನನು ಕಂಡರೆ ನನಗಿಹುದು ಭಯಭಕ್ತಿ
ನಿಮ್ಮನ್ನು ಕಂಡರೆ ಭಯವೇ ಜಾಸ್ತಿ ||
ತಗ್ಗಿ ಬನ್ನಿರಿ ಒಮ್ಮೆ - ಬಗ್ಗಿ ಬಿಡಿ ಇನ್ನೊಮ್ಮೆ
ಹೇಳುವಳು ನಾನಲ್ಲ ನಿಮಗೆ ನಾಸ್ತಿ ||2||

-ಸುರೇಖಾ ಭೀಮಗುಳಿ
23.04.2015

ಮಿಂಚು-ಗುಡುಗು-ಮಳೆಯಲ್ಲಿ ಮಿಂದೆದ್ದ ನಮ್ಮನೆ ಹಲಸಿನ ಮರ......

"ರಾಮಜ್ಜ - ರತ್ನಜ್ಜಿ"


Jaanu Shetty S ಅವರ ಚಿತ್ರಕ್ಕೆ ನನ್ನ ಪದ್ಯ :

ಊರಿನ ಹೊರಗಡೆ ಗದ್ದೆಯ ಪಕ್ಕದಿ
ವಾಸಿಸುತಿದ್ದರು ರಾಮಜ್ಜ ||
ಸಂಗಡ ಇದ್ದಳು ಪ್ರೀತಿಯ ತೋರುತ
ಅವರಾ ಹೆಂಡತಿ ರತ್ನಜ್ಜಿ || 1 ||

ದಶಕದ ಪೂರ್ವದಿ ಮಕ್ಕಳ ಕಲರವ
ಆ ಮನೆಯಲ್ಲಿಯು ತುಂಬಿತ್ತು ||
ಅಳುವಿನ ನಗುವಿನ ಜೊತೆಯಲಿ ದಿನಗಳು
ಬದುಕನು ಹಸಿರಾಗಿರಿಸಿತ್ತು || 2 ||

ಕನಸನು ಕಟ್ಟುತ ಸಾಕಿದ ಮಕ್ಕಳು
ಇಂದಿಗೆ ಅವರಾ ಜೊತೆಗಿಲ್ಲ ||
ಪೇಟೆಗೆ ಹೋಗೀ ಮಕ್ಕಳ ಜೊತೆಯಲಿ
ಇರುವುದಕಿವರಿಗೆ ಮನಸಿಲ್ಲ || 3 ||

ಗದ್ದೆಯ ಬಯಲಿನ ನವಿಲಿನ ನರ್ತನ
ಮಗಳಾ ಬಾಲ್ಯವ ನೆನಪಿಪುದು ||
ಮಾವಿನ ಮರದಲಿ ಕೋಗಿಲೆ ಕೂಜನ
ಮಗನಾ ಬಾಲ್ಯವ ಹಾಡಿಪುದು || 4 ||

ಮಕ್ಕಳು ಬರುವರು ಎಂದಿಗೋ ಒಮ್ಮೆ
ಎಂಥಾ ಸಡಗರ ಮನೆಯಲ್ಲಿ ||
ನಾಲ್ಕೇ ದಿನಕೇ ಹೊರಟೇ ಬಿಡುವರು
ಎನ್ನುವ ಸಂಕಟ ಮನದಲ್ಲಿ || 5 ||

ಹಸಿರಿನ ವನಸಿರಿ ಸುತ್ತಮುತ್ತಲೂ
ಶಾಂತಿಯ ಜೀವನ ಇಲ್ಲಿಹುದು ||
ಬದುಕನು ಸೆವೆಸಲು ಇಷ್ಟೇ ಸಾಕೇ ?
ಎನ್ನುವ ಪ್ರಶ್ನೆ ಕಾಡಿಹುದು || 6 ||

- ಸುರೇಖಾ ಭೀಮಗುಳಿ
23.04.2015

"ನನ್ನ ನೆರಳಿನ ಭೂತ"









































Jaanu Shetty S ಅವರ ಚಿತ್ರಕ್ಕೆ ನನ್ನ ಪದ್ಯ :

ನನ್ನ ನೆರಳಿನ ಭೂತ ಹಿಂದೆ ಬಿದ್ದಿಹುದೆನಗೆ 
ಬೇಡವೆಂದರು ಬಿಡದೆ ನನ್ನ ಕಾಡಿ ||
ಕುಳಿತರೂ ನಿಂತರೂ ನಡೆದರೂ ಓಡಿದರು
ಹಿಂಬಾಲಿಸುತಿದೆ ಎನ್ನ ಮೋಡಿ ಮಾಡಿ || 1 ||

ಬೆಳಕಿಗೆದರಾಗುತಿರೆ ಹಿಂದಟ್ಟಿ ಬೆದರಿಪುದು
ಬೆಳಕನ್ನು ಬಿಟ್ಟೋಡೆ ಮುಂದೆ ಓಡುವುದು ||
ನೆತ್ತಿಯಲಿ ಸೂರ್ಯನಿರೆ ನನ್ನಲೊಂದಾಗುವುದು
ನಾ ಮಲಗಿ ನಿದ್ರಿಸಲು ಕಾಣೆಯಾಗಿಹುದು ! || 2 ||

ಹಿಂದೆ ಮಾಡಿದ ಕರ್ಮ ನನ್ನ ಹಿಂಬಾಲಿಪುದೆ ?
ಭವಿಷ್ಯದಾಭೂತ ನನ್ನ ಕಾಡುವುದೆ ? ||
ನನ್ನ ಇಂದಿನ ಕರ್ಮ ನನ್ನಲೊಂದಾಗಿಹುದೆ ?
ಎನ್ನ ಮುಕ್ತಿಯ ಜೊತೆಗೆ ಮಾಯವಾಗುವುದೆ ? || 3 ||

- ಸುರೇಖಾ ಭೀಮಗುಳಿ
22.04.2015

Saturday, April 18, 2015

"ಜೀವನದ ಅರ್ಥ"

ಉಬ್ಬರಾ-ಇಳಿತಗಳು ಸೋಲುಗೆಲುವುಗಳಂತೆ
ಒಂದರಾ ಹಿಂದೊಂದು ಬರುತಲಿಹುದು ||
ಸೈರಿಸಿಕೋ ಎಲ್ಲವನು ಬಂಡೆಗಲ್ಲಿನ ತೆರದಿ
ಧೃತಿಗೆಡದೆ- ಜೀವನದಿ ಗೆಲ್ಲಬಹುದು ||1||


ಬಂದುದನು ಆಧರಿಸು ಹಸನ್ಮುಖದ ಭಾವದಲಿ
ಬೇಡೆಂದು ಧಿಕ್ಕರಿಸೆ ಯಾರು ನೀನು ? ||
ಅದುವೆ ಜೀವನ ಧರ್ಮ-ಅದುವೆ ನಿನ್ನಯ ಕರ್ಮ
ಬೇರೆ ದಾರಿಯೆ ಇಲ್ಲ ತಿಳಿಯೆ ಏನು ? ||2||


ನೋವಿರಲಿ-ನಲಿವಿರಲಿ ಸಹಿಸಿಕೋ ಬಾಯ್ಮುಚ್ಚಿ
ಬಂದುದನು ಸ್ವೀಕರಿಸಿ ನಡೆಯುವಂತೆ ||
ಅದುವೆ ಜೀವನದರ್ಥ, ಗುದ್ದಾಟಕ್ಕಿಲ್ಲರ್ಥ
ಹೊಂದಿಹೋಗಲಿ ಬಾಳು ಅವನಿಷ್ಟದಂತೆ ||3||


ಕಷ್ಟಗಳು-ಸುಖಗಳು ಸೃಷ್ಟಿಕರ್ತನ ಇಚ್ಚೆ
ಕುಣಿಸುವನು ನಮ್ಮನ್ನು ಇಷ್ಟಬಂದಂತೆ ||
ಸೂತ್ರಧಾರಿಯು ಅವನು ಪಾತ್ರಧಾರಿಗಳ್ ನಾವು
ಪಾಲಿಪನು ಜಗವನ್ನು ತನ್ನಿಷ್ಟದಂತೆ ||4||


-ಸುರೇಖಾ ಭಟ್, ಭೀಮಗುಳಿ

18.04.2015

Friday, April 17, 2015

"ತೆರೆಗಳೊಡ್ಡಿದ ಸವಾಲು"

ಭೋರ್ಗರೆದು ಬರುತಲಿದೆ ತೆರೆಗಳುಬ್ಬರ ಮಾಲೆ
ಧೈರ್ಯವಿದ್ದರೆ ಒಮ್ಮೆ ಸ್ವಾಗತವ ಮಾಡು ||
ಹಠಕಟ್ಟಿ ಎದುರಿಸಲು ಬಂದೆಯಾದರೆ ನಿನ್ನ
ನುಂಗಿಬಿಡುವೆನು ನನ್ನ ಸಾಮರ್ಥ್ಯ ನೋಡು ||1||

ಹುಚ್ಚು ಸಾಹಸ ಬೇಡ, ಎನ್ನ ಕೆಣಕಲು ಬೇಡ
ನನ್ನ ಹಿರಿಮೆಯ ಮುಂದೆ ನಿನ್ನದೇನು ? ||
ತೆರೆಗಳಾಟವು ಚಂದ, ಮೇಲುನೋಟಕ್ಕಂದ
ನನ್ನ ಒಳಗಿನ ಶಕ್ತಿ ಒಮ್ಮೆ ಕಾಣು ||2||

ಹೇಡಿಯಂದದಿ ನಾನು ಹಿಂದಡಿಯನಿಡಲಾರೆ
ನಿನ್ನನ್ನು ಎದುರಿಸಲು ನಾನಂತು ಸಿದ್ಧ ||
ಆದುದಾಗಲಿ ಎಂದು ನಿನ್ನನೆದುರಿಸಿಬಿಡಲೆ ?
ಹೂಡಿಯೇ ಬಿಡಲೇನು ನಿನ್ನಲ್ಲಿ ಯುದ್ಧ ? ||3||

ಸ್ಪರ್ಧೆಯಂಕಣದಲ್ಲಿ ಎದುರುನಿಂತಿಹೆಯೇನು ?
ಪಂಥಕ್ಕೆ ಭಯಪಟ್ಟು ಓಡೆ ನಾನು ||
ಗೆಲುವಿರಲಿ ಸೋಲಿರಲಿ ಹೆಚ್ಚು ಅಂತರವಿಲ್ಲ
ಸಿದ್ಧಗೊಳಿಸಿಹೆ ನನ್ನ ಮನವ ನಾನು ||4||

ನಿನ್ನ ಶಕ್ತಿಯ ನಾನು ಅಲ್ಲಗಳೆಯುವುದಿಲ್ಲ
ಹುಚ್ಚು ಅಹಂಕಾರದ ಭಾವವಿಲ್ಲ ||
ನಿನ್ನ ವಿರೋಧಿಸುವ ಅನಿವಾರ್ಯವೇನಿಲ್ಲ
ಸುಮ್ಮನಿರುವುದು ನನಗೆ ಶೋಭೆಯಲ್ಲ ||5|| 

-ಸುರೇಖಾ ಭಟ್, ಭೀಮಗುಳಿ
17.04.2015



"ನೀವೇದನೆ"

ಭಾರತಮಾತೆಯ ಪಾದವ ತೊಳೆಯಲು
ಅದೆಷ್ಟು ಕಾತುರ ಸಾಗರಕೆ ?
ತೆರೆಗಳನೆತ್ತಿ ಉಕ್ಕುತ ಬರುತಿದೆ
ಚರಣದ ದೂಳನು ತೊಳೆವುದಕೆ || 1 ||

ಮಾತೆಯ ಪಾದವ ತೊಳೆಯುವುದೊಂದು
ಹೆಳೆ ಇರಬಹುದೇ ? ಅನುಮಾನ ||
ತನ್ನಯ ಪಾಪವ ನಿವೇದಿಸಹೊರಟಿದೆ
ಬಯಸಿದೆ ಕೃಪೆಯ ಸಮಾಧಾನ || 2  ||

ತಾಯಿಯ ಪಾದವ ತೊಳೆಯಲು ಬೇಕದು
ಸಿಹಿಸಿಹಿ ನೀರದು - ಪನ್ನೀರು !
ಎಲ್ಲಿಂದ ತರುವನು ಸಮುದ್ರದರಸನು
ತುಂಬಿದೆ ಅವನಲಿ ಉಪ್ನೀರು || 3 ||

ಹರಿದಿವೆ ನದಿಗಳು ಸಿಹಿನೀರಿನ ಜೊತೆ
ಸಾಗರದೆಡೆಗೆ ಮುಖಮಾಡಿ ||
ಆಯಿತೆ ಸಾಗರ ಸಿಹಿ ನೀರಿನ ಕೊಳ
ಬದಲಾಗಲೆ ಇಲ್ಲ ಜೊತೆಗೂಡಿ || 4 ||

ಭಾರತ ಮಾತೆಯು ಕೊಟ್ಟಿಹಳೆಲ್ಲವ 
ಏನನು ಕೊಟ್ಟೆವು ಹಿಂತಿರುಗಿ ?
ಕೊಡುವುದೆ ಇದ್ದರೆ ಒಳಿತನೆ ಕೊಡುವ
ಚಂದದಿ ಬಾಳುವ ತಲೆಬಾಗಿ || 5 ||

-ಸುರೇಖಾ ಭಟ್, ಭೀಮಗುಳಿ
17.04.2015