ಒಂದು ದಿನ ಸಂಜೆಯಾ ವಿಶ್ರಮದ ವೇಳೆಯಲಿ
ಬಂದಳೊಬ್ಬಳು ಮುದುಕಿ ನಮ್ಮ ಮನೆಗೆ ||
ಬೆನ್ನು ಗೂನಾಗಿಹುದು, ಮುಖವು ಸಹ ಬಾಡಿಹುದು
ಯಾಕೆ ಬಂದಿಹಳೀಕೆ ಎನ್ನ ಗೃಹಕೆ ? ||೧||
ಏನು ಬೇಕಾಗಿತ್ತು ? ಯಾರ ಕಾಣುವುದಿತ್ತು ?
ನಿನ್ನ ಕಾಣುವುದಿತ್ತು ಮಾತನಾಡುವುದಿತ್ತು
ನನ್ನ ವಿಷಯವನಿಷ್ಟು ಹೇಳಬಹುದೆ ? ||೨||
ದುಷ್ಟೆ ಮಂಥರೆಯೆಂದು ಜರೆಯುವರು ನನ್ನನ್ನು
ನಿಜವನ್ನು ತಿಳಿಯದಾ ಮೂಢರಿವರು ||
ನನ್ನ ಕತೆಯನ್ನೆಲ್ಲ ಬಿಚ್ಚಿಡಲು ಬಂದಿರುವೆ
ಮತ್ತೆ ನಿರ್ಧರಿಸಲೀ ಜಗದ ಜನರು ||೩||
ಬಂದು ನೀ ಕುಳಿತುಕೋ ವಿಶ್ರಮಿಸು ಅರೆಗಳಿಗೆ
ಕತೆಯನ್ನು ಮತ್ತೆ ಹೇಳ್ದರಾಯ್ತು ||
ಕುಡಿವುದಕೆ ಏನ್ಕೊಡಲಿ ಕಾಫಿ, ಮಜ್ಜಿಗೆ ನೀರು
ಪುನರ್ಪುಳಿ ಪಾನಕವೊ ಯಾವುದಾಯ್ತು ? ||೪||
ನನಗೆ ನೀ ಕೊಡಬೇಡ ಏನನ್ನೂ ಓ ಮಗಳೆ
ನನಮಾತ ಕೇಳುವರು ನನಗೆ ಬೇಕು ||
ಆತಿಥ್ಯದಿಚ್ಛೆಯಲಿ ನಾನು ಬಂದವಳಲ್ಲ
ನಿನ್ನ ಬಳಿಯಲಿ ಒಮ್ಮೆ ಕೂರಬೇಕು ||೫||
ಹೇಳಲದೆ ಹಿಂಜರಿಕೆ, ಮುದುಡಿಹೋಗಿಹೆ ನಾನು
ಮೌನವೇ ತುಂಬಿಹುದು ಬಾಳಿನಲ್ಲಿ ||
ನಾನು ಹೇಳುವುದನ್ನು ಕೇಳುವರು ಸಿಗಲಿಲ್ಲ
ಅದಕಾಗಿ ಬಂದಿರುವೆ ನಾನು ಇಲ್ಲಿ ||೬||
ಹಿಂಜರಿಕೆ, ಬಗ್ಗುವಿಕೆ, ತಗ್ಗುವಿಕೆ ಬೇಕಿಲ್ಲ
ನಿನ್ನಳಲು ಆಲಿಸಲು ನಾನಿಲ್ಲವೆ ? ||
ನಿನ್ನ ಮನಸಿಲಿ ಒಮ್ಮೆ ನೆಮ್ಮದಿಯು ಉಕ್ಕಿದರೆ
ಅದು ನನ್ನ ಜೀವಿತದ ಗುರಿಯಲ್ಲವೇ ? ||೭||
ನಾನು ಪೇಳುವುದೆಲ್ಲ ನೀ ಕೇಳು ಮನಸಿಟ್ಟು
ನಿನ್ನಭಿಪ್ರಾಯವನು ಮತ್ತೆ ಹೇಳು ||
ಆಯ್ತು ಮಂಥರೆ ಹೇಳು, ನಾನು ಸುಮ್ಮನೆ ಜರೆಯೆ
ನಡುವೆ ಬಾಯ್ತೆರೆದರೆ ನೀನು ಕೇಳು ||೮||
ನಿನ್ನಯಾ ಮಾತನ್ನು ಮೆಚ್ಚಿದೆನು ಓ ಮಗಳೆ
ಮೂಕ ವಿಸ್ಮಿತಳಾದೆ ನಿನ್ನ ನಡೆಗೆ ||
ತನ್ತನವ ನಿನ್ನಲ್ಲಿ ಬಿಚ್ಚಿಡುವೆ ನಾನಿಂದು
ಜಗವೆಲ್ಲ ನೋಡಲಿ ನನ್ನ ಕಡೆಗೆ ||೯||
ಮಂಥರೆಯ ಸ್ವಗತವನು ನಿಮ್ಮೆದುರು ತೆರೆದಿಡುವೆ
ನಿರ್ಧರಿಪುದೀಗ ನಿಮ್ಮಯಾ ಕೆಲಸ ||
ಒಂದು ಅರೆಗಳಿಗೆಯಾ ಮಂಥರೆಗೆ ಕೊಟ್ಟುಬಿಡಿ
ನೋಯಿಸಾ ಬೇಡಿರೈ ಅವಳ ಮನಸ ||೧೦||
ಸುರೇಖಾ ಭಟ್, ಭೀಮಗುಳಿ
31.01.2015