Wednesday, November 30, 2016

" ಓ ಹರೆಯವೇ.... " (ನನ್ನ 129 ನೆಯ ಕವನ)

’ಜೀವನದಲ್ಲಿ ನನಗೆ ಬೇಕೆನ್ನಿಸಿ ಸಿಗದೇ ಹೋದದ್ದು.....’ ಎಂದು ನಾನಂದುಕೊಳ್ಳುವುದು...  ನಾನು ಎಂದಿಗೂ ’ಛೇ.. ! ಅದೊಂದು ಸಿಕ್ಕಿದ್ರೆ ಚೆನ್ನಾಗಿರ್ತಿತ್ತು ’ ಅಂದು ಕೊಳ್ಳುವುದು ಕಾಲೇಜು ದಿನಗಳ ಬಗ್ಗೆ ... ನನ್ನದೇ ಅನಿವಾರ್ಯ ಕಾರಣಗಳಿಂದ ಕಾಲೇಜು ಮೆಟ್ಟಿಲು ಹತ್ತಲಾಗದೆ ಡಿಪ್ಲೋಮಾ ... ಅದೂ ಮಹಿಳಾ ಪಾಲಿಟೆಕ್ನಿಕ್.... ಸೇರಿದ ಪರಿಣಾಮ ಜೀವನದ ಅದೊಂದು ಘಟ್ಟ ನನ್ನ ಅನುಭವಕ್ಕೆ ಬಾರದೇ ಹೋಯಿತು ......  ನನ್ನ ಕಾಲಕ್ಕೆ ಮಿಡಿ-ಚೂಡೀಧಾರಗಳು ಬಳಕೆಗೆ ಬಂದ ಕಾರಣ ಉದ್ದ ಲಂಗ... ಲಂಗ-ದಾವಣಿಯನ್ನು ಧರಿಸುವ ಅವಕಾಶವನ್ನೂ ನಾನು ಕಳೆದುಕೊಂಡೆ....   ಯಾರಾದರೂ ’ನನ್ನ ಕಾಲೇಜು ದಿನಗಳಲ್ಲಿ.... ’ ಎಂದು ಮಾತಿಗಾರಂಭಿಸಿದರೆ ನನ್ನ ಕರುಳಲ್ಲೆಲ್ಲ ವಿಪರೀತ ಸಂಕಟ ... !    ಹ್ಹ ಹ್ಹ ಹ್ಹಾ......

ಓ ಹರೆಯವೇ ನೀನು ಮತ್ತೊಮ್ಮೆ ಸಂಭವಿಸು
ಹಲವು ಕೆಲಸಗಳಿನ್ನು ಇಹವು ಬಾಕಿ ||
ಜವ್ವನದ ದಾರಿಯಲಿ ಅಡ್ಡಾಡಿ ಬರಬೇಕು
ಹಗಲು ಕನಸಿನ ದಿನಕೆ ಲಗ್ಗೆ ಹಾಕಿ || ೧ ||

ಬಾಲ್ಯ ದಿನವದು ಬೇಡ ಏರು ಜವ್ವನ ಬೇಕು
ನಾನೊಮ್ಮೆ ಆ ದಿನಕೆ ಹೋಗಬೇಕು ||
ಲಂಗದಾವಣಿ ಧರಿಸಿ ಮಲ್ಲಿಗೆಯ ಹೂಮುಡಿದು
ಅಂಗಳದಿ ರಂಗೋಲಿ ಹಾಕಬೇಕು || ೨ ||

ಕಾಲೇಜು ದಾರಿಯಲಿ ಗೆಳತಿಯರ ಗುಂಪಿನಲಿ
ಮನಬಿಚ್ಚಿ ಲಘುಹರಟೆ ಕೊಚ್ಚಬೇಕು ||
ಪಾಠದಲಿ ಮುಂದಿದ್ದು ಗುರುಗಳನು ಮೆಚ್ಚಿಸುತ
ಸಹಪಾಠಿಗಳ ಗಮನ ಸೆಳೆಯಬೇಕು || ೩ ||

ರೇಷ್ಮೆ ಸೀರೆಯನುಟ್ಟು ಕೇದಗೆಯ ಘಮ ಹೀರಿ
ಕಾಲ್ಗೆಜ್ಜೆ ಸಪ್ಪಳದಿ ಬೀಗಬೇಕು ||
ಮಳೆಯ ಹನಿಹನಿಯಲ್ಲಿ ನನ್ನ ಧ್ವನಿಯನು ಬೆರೆಸಿ
ಮೆಲುವಾಗಿ ಹಾಡೊಂದ ಹಾಡಬೇಕು || ೪ ||

ಅಡಿಕೆ ಚಪ್ಪರದಲ್ಲಿ ಕಾಲ್ನೀಡಿ ಕುಳಿತೊಮ್ಮೆ
ರಾತ್ರಿ ನಕ್ಷತ್ರಗಳ ಎಣಿಸಬೇಕು ||
ಆಗಸದ ಮೋಡಗಳ ಮಾತನಾಡಿಸುತೊಮ್ಮೆ
ಅಪ್ಪನಳಿಯನ ಕನಸ ಕಾಣಬೇಕು || ೫ ||

- ಸುರೇಖಾ ಭೀಮಗುಳಿ
30/11/2016
ಚಿತ್ರ : ಅಂತರ್ಜಾಲ

Monday, November 28, 2016

" ಓ ಬ್ರಹ್ಮ .... ಉತ್ತರಿಸು......." (ನನ್ನ 128 ನೆಯ ಕವನ)


ಓ ಬ್ರಹ್ಮ ಉತ್ತರಿಸು ನನ್ನ ಕಾಡಿಹ ಪ್ರಶ್ನೆ
ಮನದಲ್ಲಿ ಇಷ್ಟೊಂದು ಚಂಚಲತೆ ಯಾಕೊ ?
ಕಾರಣವ ತಿಳಿಸಿಬಿಡು ತಿದ್ದುಪಡಿ ಮಾಡಿಕೊಡು
ಹದದೊಳಿರಿಸುವ ಪರಿಯ ತಿಳಿಸಿಬಿಡು ಸಾಕೊ || ೧ ||

ದೂರ ಸರಿದವರನ್ನು ಹತ್ತಿರಕೆ ಕರೆಯುವುದು
ಹತ್ತಿರವೆ ಇದ್ದವರ ಕಡೆಗಣಿಪುದು ||
ಮಾತಾಡ ಬಯಸುವರ ಬಹುದೂರ ತಳ್ಳುವುದು
ಮೌನದಲಿ ಕಾಡುವರ ನೆನೆದಳುವುದು || ೨ ||

ಸಂಕಟದ ಸಮಯದಲಿ ಬದುಕು ಸಾಕೆನ್ನುವುದು
ಜೀವ ಹೋದರೆ ಸಾಕು ಎಂದಳುವುದು ||
ಸಾವು ಹತ್ತಿರ ಬರಲು ಬದುಕ ಬೇಕೆನ್ನುವುದು
ಆಯುಷ್ಯ ಹೆಚ್ಚಿಸಲು ಗೋಳಿಡುವುದು || ೩ ||

ಮನದ ವ್ಯಾಪಾರವದೊ ಬಲು ಭಿನ್ನವಾಗಿಹುದು
ಚಂಚಲತೆಯಿಂದಲೇ ಹಿಂಸಿಸುವುದು ||
ಇರುವುದೆಲ್ಲವ ಬಿಟ್ಟು ಇಲ್ಲದ್ದ ಕೇಳುವುದು
ಸಭ್ಯತೆಯ ಪರಿಧಿಯಲಿ ಬದುಕಬಿಡದು || ೪ ||

- ಸುರೇಖಾ ಭೀಮಗುಳಿ
28/11/2016
ಚಿತ್ರ : ಅಂತರ್ಜಾಲ

Sunday, November 27, 2016

" ಕೋತಿಯ ಅಳಲು " (ನನ್ನ 127 ನೆಯ ಕವನ )



ಕಾಡುಮೇಡಿನಲಿದ್ದ ಫಲಗಳನೆ ನಂಬಿದ್ದ
ಕೋತಿಗಳ ಗುಂಪಿನಾ ಪ್ರಮುಖ ನಾನು ||
ನಮ್ಮೊಡಲ ಸಂಕಟವ ಬಲ್ಲವರು ಯಾರಿಹರು ?
ನಮ್ಮ ಇಂದಿನ ಕಥೆಯ ಹೇಳಲೇನು ? || ೧ ||

ಮಾವು ಹಲಸಿನ ಮರವ ನಾಟವೆನ್ನುತ ಕಡಿದು
ಬರಿದಾಗಿ ಮಾಡಿದಿರಿ ಕಾಡ ಬೊಗಸೆ ||
ನೇರಳೆಯ ಹಣ್ಣಿಲ್ಲ ಹೆಬ್ಬಲಸು ಸಿಗಲಿಲ್ಲ
ನಮ್ಮಶ್ರು ಬಿಂದುಗಳು ನಿಮಗೆ ಸೊಗಸೆ ? || ೨ ||

ಮನೆಯೊಳಗೆ ಕುಳಿತು ನೀವ್ ಬಿಸಿಯಡುಗೆ ಉಣ್ಣುವಿರಿ
ಹಸಿದೊಟ್ಟೆ ಸಂಕಟವ ಬಲ್ಲಿರೇನು ? ||
ನಿಮ್ಮ ತೋಟದೊಳಿರುವ ಎಳನೀರು ಕುಡಿಯುತಿರೆ
ಕಲ್ಲನೊಗೆಯುತ ನಮ್ಮ ಬೈವದೇನು ? || ೩ ||

ಸುಮ್ಮಸುಮ್ಮನೆ ಕಿತ್ತು ಹಾಳುಮಾಡುವುದಿಲ್ಲ
ನಾಳೆಗೆನ್ನುತ ಎತ್ತಿ ಕದ್ದಿಡುವುದಿಲ್ಲ ||
ಹೊಟ್ಟೆ ತುಂಬುತ್ತಲೇ ಹೊರಟುಬಿಡುತೇವಲ್ಲ
ಇನ್ನು ನಾಳೆಯವರೆಗೆ ಚಿಂತೆ ಇಲ್ಲ || ೪ ||

ನಮಗು ಈ ದಿನಗಳಲಿ ನಿಮ್ಮ ತೋಟವೆ ಗತಿಯು
ತೋಚುತಲೆ ಇಲ್ಲೆಮಗೆ ಬೇರೆ ದಾರಿ ||
ಬಿಸಿಯುಸಿರ ಹೊರಹಾಕಿ ನಮ್ಮನ್ನು ಶಪಿಸದಿರಿ
ಬಾಳೆತೋಟದಲಿಷ್ಟು ಜಾಗಕೊಡಿರಿ || ೫ ||

- ಸುರೇಖಾ ಭೀಮಗುಳಿ
27/11/2016
ಚಿತ್ರ : ಸುಮಂತ ಭೀಮಗುಳಿ

shanaka hebbar ಅವರ ಕೋರಿಕೆಯ ಮೇರೆಗೆ ಬರೆದದ್ದು....
(ಕೋತಿಗಳಿಂದ ಕೃಷಿಕನಿಗೆ ಆಗುತ್ತಿರುವ ಸಂಕಟಗಳ ಬಗ್ಗೆ ಪದ್ಯ ಬರೆಯಲು ಅವರು ಕೇಳಿದ್ದು .... ಆದರೆ ಪದ್ಯ ಬರೆಸಿ ಕೊಂಡದ್ದು ಬಡಕೋತಿ ..ಹ್ಹಹ್ಹಹ್ಹಾ.. !)

Saturday, November 26, 2016

" ಕೋಳಿ ಕಥೆ ! " (ನನ್ನ 126 ನೆಯ ಕವನ)



ಕೋಳಿ ಕೂಗಿದ ಶಬ್ದ ಕೇಳಿಯೆ
ಹಲವು ವರ್ಷಗಳಾಯಿತು ||
ಯಾರದೋ ಮನೆ ಮೇಲೆ ಕುಳಿತಿಹ
ಹುಂಜ ನೆನಪಿಗೆ ಬಂದಿತು || ೧ ||


ಸೂರ್ಯ ಉದಯದ ಮೊದಲ ಕ್ಷಣಕೇ
ಕೂಗುತಿತ್ತದು ಕೋಳಿಯು ||
ಮನೆಯ ಮಂದಿಯು ಏಳುತಿದ್ದರು
ಸಾಂಗ ನಿತ್ಯದ ವಾರ್ತೆಯು || ೨ ||


ಕೋಳಿ ಬೇಡವು ನಮ್ಮ ಜನರಿಗೆ
ಮೊಟ್ಟೆ ಬೇಕಿದೆ ಅನುದಿನ ||
ಹೊಟ್ಟೆ ತುಂಬಿದ ಸುಖದಿ ಮೆರೆಯುತ
ಕೋಳಿ ಮರೆವರು ಈ ಜನ || ೩ ||


ಒಂದು ಸ್ವಲ್ಪವೆ ಅನ್ನ ಸಿಕ್ಕರು
ಕೋಳಿ ಬಳಗವ ಕರೆವುದು ||
ಸಿರಿಯು ಬಂದರೆ ಮನುಜ ಕುಲವದು
ಮನೆಯ ಮಂದಿಯ ಮರೆವುದು || ೪ ||


- ಸುರೇಖಾ ಭೀಮಗುಳಿ
26/11/2016
ಚಿತ್ರ : ಅಂತರ್ಜಾಲ

Friday, November 25, 2016

" ಬೆಕ್ಕಿನ ಕಥೆ ! " (ನನ್ನ 125 ನೆಯ ಕವನ )


ಮನೆಯ ಸುತ್ತ ತಿರುಗುತಿಹುದು
ಅಬ್ಬೆಪಾರಿ ಬೆಕ್ಕು ||
ಜನರ ಹಂಗು ಇಲ್ಲ ಇದಕೆ
ಮುಖದಲೇನೊ ಸೊಕ್ಕು || ೧ ||

ಅರ್ಧರಾತ್ರಿಯಲ್ಲಿ ಗೋಳು
ಅಳುವು ಇದರ ರೋಗ ||
ನಿದ್ದೆ ಹಾಳು ಮನದಿ ನೋವು
ಕೇಳಿಯದರ ರಾಗ || ೨ ||

ಹಾಲು ಅನ್ನ ಕರಿದ ತಿಂಡಿ
ಸೆಳೆಯದಿದರ ಮನಸು ||
ಹೆಗ್ಗಣ ಇಲಿ ಓತಿಕ್ಯಾತ
ಇದುವೆ ಅದರ ತಿನಿಸು || ೩ ||

ನಮ್ಮ ಮನೆಯ ಬಾಗಿಲಲ್ಲೆ
ಬೆಕ್ಕಬೇಟೆ ತಾಣ ||
ರಕ್ತ-ಮಾಂಸ ಚಲ್ಲಪಿಲ್ಲಿ
ಹಿಂಸೆ ಅದಕೆ ಕಾಣ || ೪ ||

ಹಗಲು ಪೂರ ಸೊಂಪು ನಿದ್ದೆ
ಕಾರ ಕೆಳಗೆ ಗೊರಕೆ ||
ಓಡಿಸಿದರು ಗಮನವಿಲ್ಲ
ಭಯವೆ ಇಲ್ಲವದಕೆ || ೫ ||

ಬೆಕ್ಕನಿಷ್ಟಪಡುವ ಜನರೆ
ಬನ್ನಿ ನಮ್ಮ ಮನೆಗೆ ||
ಕೊಂಡು ಹೋಗಿ ಸಾಕಿಕೊಳ್ಳಿ
ಶರಣು ನಾನು ನಿಮಗೆ || ೬ ||

- ಸುರೇಖಾ ಭೀಮಗುಳಿ
25/11/2016
ಚಿತ್ರ : ಅಂತರ್ಜಾಲ

Thursday, November 24, 2016

" ನಾಯಿ ಚಿಂತೆ " (ನನ್ನ 124 ನೆಯ ಕವನ)


ನಮ್ಮ ಎದುರು ಮನೆಯಲಿಹವು
ಎರಡು ಸಾಕು ನಾಯಿ ||
ಮೂರು ಹೊತ್ತು ಬೊಗಳುತಾವೆ
ಮುಚ್ಚದೇನೆ ಬಾಯಿ || ೧ ||

ರಸ್ತೆಯಲ್ಲಿ ಕಾಗೆ-ದನವು
ಬಂದರಿವಕೆ ರಗಳೆ ||
ಯಾರು ಸ್ವಲ್ಪ ಕೆಮ್ಮಿದ್ರೂನು
ಶುರುವೆ ನಾಯಿ ಕಹಳೆ || ೨ ||

ಇವುಗಳ್ಹೀಗೆ ಕೂಗುತಿರಲು
ಮನೆಯ ಅಮ್ಮ ಒಳಗೆ ||
ಟೀವಿ  ಬಿಟ್ಟು ಕದವ ತೆರೆದು
ಬರರು ಎಂದು ಹೊರಗೆ || ೩ ||

ಎದುರು-ಬದರು ಮನೆಯು ನಮದು
ಬಿಡುಗಡೆಯೇ ಇಲ್ಲ ||
ಫೋನು-ಧ್ಯಾನ-ಮನದ ಮಾತು
ಸಾಂಗವಾಗುತಿಲ್ಲ || ೪ ||

ಎಲ್ಲರದ್ದು ಸ್ವಂತ ಸೂರು
ಬದುಕ ಬೇಕು ಸಹಿಸಿ ||
ಬಿಡುಗಡೆಯಾ ದಾರಿ ಏನು ?
ಕರುಣೆ ತೋರಿ ತಿಳಿಸಿ || ೫ ||

- ಸುರೇಖಾ ಭೀಮಗುಳಿ
24/11/2016
ಚಿತ್ರ : ಅಂತರ್ಜಾಲ

Friday, November 18, 2016

" ಮಿತಿ " (ನನ್ನ 123 ನೆಯ ಕವನ)


ಬದುಕೆಂಬ ಪಥದಲ್ಲಿ ನಮ್ಮ ರಥಗಳು ಬೇರೆ
ಪ್ರತಿ ಭೇಟಿ ಸಹ ಒಂದು ವಿಧಿಯ ಲೀಲೆ ||
ಪರರ ಮಿತಿಯನು ನಾವು ಅರಿಯಬೇಕಲ್ಲದೆ
ಹೊರಿಸಬಾರದು ಹೊರೆಯ ಅವರ ಮೇಲೆ ||  ೧ ||

ಪಥದಿ ಕಂಡವರೊಡನೆ ಸೌಹಾರ್ದ ಮಾತುಕತೆ
ತಪ್ಪಿಲ್ಲ ಮಾತಿನಲಿ ಹಾಲು-ಜೇನು ||
ಎದುರಾದ ಸ್ನೇಹಕ್ಕೆ ಸಿಹಿ ಮನದ ಹಾರೈಕೆ
ಬಯಸಬಾರದು ಬಿಟ್ಟು ಬೇರೆ ಏನು || ೨ ||

ಬದುಕಿಗಿದೆ ಚೌಕಟ್ಟು ತಪ್ಪಬಾರದು ನಾವು
ನಮ್ಮೊಳಿತಿಗಾಗಿಯೇ ನೀತಿ ನಿಯಮ ||
ಹಠದಿ ಮಿತಿ ಮೀರಿದರೆ ಜೀವನವು ಕಗ್ಗಂಟು
ಅರಳದೆಲೆ ಬಾಡುವುದು ಬಾಳ ಕುಸುಮ || ೩ ||

- ಸುರೇಖಾ ಭೀಮಗುಳಿ
18/11/2016
ಚಿತ್ರ : ಅಂತರ್ಜಾಲ

Thursday, November 10, 2016

" ಯಾಕೆ ಈ ದ್ವಂದ್ವ ? "



ಮನಸು ಏತಕೆ ಹೀಗೆ ತೂಗಾಡುತಿಹುದಲ್ಲ ?
ದ್ವಂದ್ವ ಕಾಡಿಹುದೇಕೆ ನಿಲುವ ಕಸಿದು ||
ಚಿನಕುರುಳಿಯಂತಿದ್ದ ಹೂಮನಸು ಸಹ ಇಂದು
ಕೈಕಟ್ಟಿ ಕುಳಿತಿಹುದು ಮೂಲೆ ಹಿಡಿದು ||

ಹೊರಜಗಕೆ ಸ್ಪಂದಿಸಲೆ ? ನನಗೇಕೆ ಎನ್ನಲೇ ?
ಇರಲೇನು ಸ್ವಾರ್ಥದಲಿ ನನ್ನಷ್ಟಕೆ ? ||
ನನದಾದ ಮೇಲೇಕೆ ಪರರ ಬಗೆಗಿನ ಚಿಂತೆ ?
ಯಾಕೆನಗೆ ಬೇಕು ಈ ಹೊಣೆಗಾರಿಕೆ ? ||

ಕಣ್ಣಿದ್ದು ಕುರುಡಾಗಿ ಕಿವಿಯಿದ್ದು ಕಿವುಡಾಗಿ
ಮನವಿದ್ದು ಮರುಗದೆಲೆ ಬರಡಾಗಲೆ ? ||
ಸಹಜೀವಿಗಳಿಗೆಲ್ಲ ಸ್ಫೂರ್ತಿತುಂಬುತಲೊಮ್ಮೆ
ಜಗದೊಡನೆ ಸ್ಪಂದಿಸಲು ಅಣಿಯಾಗಲೆ ? ||

- ಸುರೇಖಾ ಭೀಮಗುಳಿ
10/11/2016
ಚಿತ್ರ : ಅಂತರ್ಜಾಲ