Saturday, November 28, 2015

"ಎಣ್ಣೆ ರೊಟ್ಟಿ"

"ಎಣ್ಣೆ ರೊಟ್ಟಿ"
**************

ನಮ್ಮ ಮನೆಯ ಎಣ್ಣೆ ರೊಟ್ಟಿ
ನೋಡಿರಣ್ಣ ಹೇಗಿದೆ ? ||
ಸಣ್ಣ ಸಣ್ಣ ರಂಧ್ರದಲ್ಲು
ಧೂಮವನ್ನು ಉಗುಳಿದೆ ! || ೧ ||

ಅಕ್ಕಿ ರಾಗಿ ಬಿಸಿಯ ನೀರು
ಉಪ್ಪು ಶುಂಠಿ ಬೆರೆಯಿತು ||
ಹದದಿ ತಟ್ಟಿ ರಂಧ್ರ ಹೊಂದಿ
ಬಿಸಿಯ ಕಾವ್ಲಿ ಏರಿತು ! || ೨ ||

ಎಣ್ಣೆಯೊಡನೆ ಬಿಸಿಗೆ ಬೆಂದು
ಕವಚಿ ಕುಳಿತು ನಕ್ಕಿತು ||
ಎಣ್ಣೆ ಹನಿಯು ಮೇಲೆ ಬಿದ್ದು
ಧೂಮ ರಂಧ್ರವೆನಿಸಿತು || ೩ ||

ಬೆಣ್ಣೆ ಬೆಲ್ಲ ಜೇನು ತುಪ್ಪ
ತೆಂಗು ಚಟ್ನಿಯೊಟ್ಟಿಗೆ ||
ಬಿಸಿಯ ರೊಟ್ಟಿ ಬಾಯಿಗಿಡಿರಿ
ಬನ್ನಿ ಎಲ್ಲರೊಟ್ಟಿಗೆ ||  ೪ ||

- ಸುರೇಖಾ ಭೀಮಗುಳಿ
28/11/2015
ಚಿತ್ರ: ಸುಮಂತ ಭೀಮಗುಳಿ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Tuesday, November 24, 2015

" ಮತ್ತೆ ಬಂದ ಸೂರ್ಯ ನಮ್ಮ ಊರಿಗೆ ....."

" ಮತ್ತೆ ಬಂದ ಸೂರ್ಯ ನಮ್ಮ ಊರಿಗೆ ....."
------------------------------------------
ಅಪರೂಪವಾಗಿದ್ದ ಸೂರ್ಯ ರಶ್ಮಿಯ ಸೊಬಗು
ಮತ್ತೊಮ್ಮೆ ಊರನ್ನು ಬೆಳಗಿದೆಯಲ್ಲ ||
ಹದಿನೈದು ದಿನದಿಂದ ರಜೆಹಾಕಿ ಹೋಗಿದ್ದ
ನಮ್ಮ ಸೂರ್ಯನು ಇಂದು ಬಂದಿಹನಲ್ಲ || ೧ ||

ನಿನ್ನೆನಿನ್ನೆಯವರೆಗೂ ಮಳೆಯದೇ ಕಾರ್ಬಾರು
ಇಂದು ಮಳೆಮೋಡಗಳ ಸುಳಿವೆ ಇಲ್ಲ ||
ಆಕಾಶದಂಗಳವು ಶುಭ್ರವಾಗಿದೆಯಲ್ಲ
ಎಲ್ಲಿ ಹೋದವು ಮೋಡ ದೇವಬಲ್ಲ || ೨ ||

ನನ್ನ ಹಲಸಿನ ಮರವು ರವಿಯ ರಶ್ಮಿಯ ಕಂಡು
ಮಿರಮಿರನೆ ಮಿನುಗುತಿದೆ ನೋಡಿರೆಲ್ಲ ||
ಮೇಘನಿಲ್ಲದ ಬಾನ ಆ ಭಾನು ಆಳಿಹನು
ತಂಗಾಳಿ ಬೀಸುತಿದೆ ಸುಖಿಸಿರೆಲ್ಲ || ೩ ||

ಬಾಲ್ಯದಾ ನೆನಪಿನಲಿ ಬೆನ್ನ ಒಡ್ಡಿಸಿ ಕುಳಿತೆ
ಚಳಿಕಾಯಿಸುವ ಆಸೆ ಮನಸಿನಲ್ಲಿ ||
ಕ್ಷಣ ಕಾಲ ಕಳೆಯುತಲೆ ಚರ್ಮ ಚುರುಗುಟ್ಟಿತದೋ
ಸೂರ್ಯ ಮೆರೆಯುತ ನಕ್ಕ ಬಾನಿದಲ್ಲಿ ! || ೪ ||

- ಸುರೇಖಾ ಭೀಮಗುಳಿ
25/11/2015
ಚಿತ್ರ : ನನ್ನ ಹಲಸಿನ ಮರ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Thursday, November 19, 2015

" ಪ್ರಕೃತಿ ಹೇಗಿರಬೇಕೆಂದರೆ............"

" ಪ್ರಕೃತಿ ಹೇಗಿರಬೇಕೆಂದರೆ............"
------------------------------
ಹಗಲು ಹೊತ್ತು ಸೂರ್ಯ ಬರಲಿ
ಕೆಲಸ ಕಾರ್ಯ ಸಾಗಲಿ ||
ರಾತ್ರಿ ಪೂರ ಮಳೆಯು ಸುರಿದು
ಪೃಥ್ವಿ ತುಷ್ಟಿ ಹೊಂದಲಿ || ೧ ||

ನಿದ್ದೆ ಬರುವ ಸಮಯದಲ್ಲಿ
ಚಳಿಯು ನಮ್ಮ ಕಾಡಲಿ ||
ಚಳಿರಾಯನ ಮಡಿಲಿನಲ್ಲಿ
ಹೊಸತು ಕನಸು ಬೀಳಲಿ || ೨ ||

ಮಳೆಯ ಮಧುರ ಸದ್ದಿನೊಡನೆ
ಭಾವ-ಬದುಕು ಸಂಗಮ ||
ಹೊರಗೆ ಮಳೆಯು ಜಡಿಯುತಿರಲು
ಮಲಗಲೆಂಥ ಸಂಭ್ರಮ || ೩ ||

ಮಳೆಯು-ಬಿಸಿಲು-ಚಳಿಯು ನಮಗೆ
ಮಿತದಿ ಬೇಕು ಅಲ್ಲವೆ ? ||
ಅತಿಯಾದರೆ ಅಮೃತವೂ
ವಿಷದ ಹಾಗೆ ಅಲ್ಲವೆ ? || ೪ ||

- ಸುರೇಖಾ ಭೀಮಗುಳಿ
19/11/2015
ಚಿತ್ರ : ಸುಮಂತ್ ಭೀಮಗುಳಿ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Wednesday, November 18, 2015

" ಬೆಳಗು ಬಾ ಭಾಸ್ಕರನೆ........"

" ಬೆಳಗು ಬಾ ಭಾಸ್ಕರನೆ........"
*****************************
ಬೆಳಗು ಬಾ ಭಾಸ್ಕರನೆ ಬೆಂಗ್ಳೂರ ಹಗಲನ್ನು
ಕುಳಿತಲ್ಲೆ ಜನರೆಲ್ಲ ತೂಕಡಿಸುತಿಹರು ||
ಎದ್ದೇಳಲೇ ಬೇಕೆ ? ಶಾಲೆಗ್ಹೋಗಲೆ ಬೇಕೆ ?
ಗಂಡ-ಮಕ್ಕಳು ಎಲ್ಲ ಗೊಣಗುತಿಹರು || ೧ ||

ನೀಬರದೆ ಹೋದರೇ ನನಗೇನು ಅನ್ನಿಸದು
ಕಳೆದು ಬಿಡುವುದು ಹಾಗೆ ನನ್ನ ದಿನಚರಿಯು ||
ಹೊತ್ತು ಹೋಗುವುದಿಲ್ಲ- ಕೆಲಸ ಸಾಗುವುದಿಲ್ಲ
ಬಟ್ಟೆ ಒಣಗುವುದಿಲ್ಲ ಅದುವೆ ಸಂಕಟವು || ೨ ||

ಕಾರ್ಯಭಾರದ ಚಿಂತೆ ನನ್ನಲ್ಲಿ ಇನಿತಿಲ್ಲ
ಚಳಿರಾಯನ ಜೊತೆಗೆ ನನ್ನ ಸಖ್ಯ ||
ಮನೆಮಂದಿಯೆಲ್ಲರು ಹಾಗೆ ಕೂರುವುದಕುಂಟೆ ?
ಪರಿಪರಿಯ ಕೆಲಸಗಳು ಇಹವು ಮುಖ್ಯ || ೩ ||

ನಿನಗೆ ಹಬ್ಬದ ರಜೆಯು ಅತಿಯಾಗಿ ಹೋಯಿತು
ವಾರದಿಂದೀಚೆಗೆ ಪತ್ತೆ ಇಲ್ಲ ||
ಇನ್ನು ಬಾರದೆ ಇರಲು ಜನ ನಿನ್ನ ಮರೆಯುವರು
ಮತ್ತೆ ನಿನ್ನನು ಯಾರು ಕರೆಯುವುದೆ ಇಲ್ಲ ! ||

- ಸುರೇಖಾ ಭೀಮಗುಳಿ
18/11/2015
ಚಿತ್ರ : ಸುಮಂತ್ ಭೀಮಗುಳಿ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

" ಪಶ್ಚಿಮ ಘಟ್ಟದ ಚಾರಣ "


" ಪಶ್ಚಿಮ ಘಟ್ಟದ ಚಾರಣ "
***********************
( " ಯೂತ್ ಹಾಸ್ಟೆಲ್ " ಸಂಸ್ಥೆ ಆಯೋಜಿತ " ಕೇರಳ ಚಾರಣ"ಕ್ಕೆ ಹೊರಟ ಸಂಭ್ರಮದಲ್ಲಿ.....)

ಪಶ್ಚಿಮ ದಿಕ್ಕಿನ ಘಟ್ಟದ ಸಾಲಿನ
ಚಾರಣ ಮಾಡಲು ಹೊರಟಿಹೆವು ||
ದೇವರ ನಾಡಿನ ಪ್ರಕೃತಿ ಸೊಬಗನು
ಸೂರೆಗೊಳ್ಳುವಾ ಸಂಭ್ರಮವು || ೧ ||

ಮೂರು ದಿನಗಳ ಚಾರಣವಿರುವುದು
ಹೇಗಾಗುವುದೋ ಗೊತ್ತಿಲ್ಲ ||
ಅನುಭವವೆಲ್ಲವ ಲೇಖನ ರೂಪದಿ
ಹಂಚುವೆ ನಾನು ನಿಮಗೆಲ್ಲ ||

ಹಬ್ಬದ ತಿಂಡಿಯ ಮೆಲ್ಲುತ ತಣಿಯಿರಿ
ನಿಮ್ಮಯ ಮನೆಯಲಿ ನೀವೆಲ್ಲ ||
ಕಾಡಿನ ಇಂಬಳ ದರ್ಶಿಸಿ ಬರುವೆನು
ಹಬ್ಬದ ಶುಭಾಶಯ ನಿಮಗೆಲ್ಲ ||

- ಸುರೇಖಾ ಭೀಮಗುಳಿ
12/11/2015
ಚಿತ್ರ : ಸುಮಂತ ಭೀಮಗುಳಿ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Sunday, November 8, 2015

" ಬೆಂಗಳೂರಲಿ ಇಂದು ...... "

" ಬೆಂಗಳೂರಲಿ ಇಂದು ...... "
***************************
ಬೆಂಗಳೂರಲಿ ಇಂದು ಎಂಥ ಚಂದದ ಹವೆಯು
ಬೆಳಗೆ ಬೆಳಗೆಯೆ ಮಳೆಯು ಸುರಿಯುತಿಹುದು ||
ಮನೆಯ ಬಾಗಿಲ ಮುಚ್ಚಿ ಕಿಟಗಿ ಪರದೆಯ ಎಳೆದು
ಹೊದ್ದು ಮಲಗಲು ಜೀವ ಎಳೆಯುತಿಹುದು || ೧ ||

ಸೋಮಾರಿಯಾಗಿಹೆನು ಸಂತಸದಿ ಬೀಗಿಹೆನು
ಇಂಥ ತಣ್ಣನೆ ಹವೆಯು ನನಗೆ ಇಷ್ಟ ||
ಕೆಲಸ ಸಾಗುವುದಿಲ್ಲ ಬೈಗುಳದ ಭಯವಿಲ್ಲ
ದುರ್ಲಬವೆ ಅಲ್ಲವೇ ಇಂಥ ಅದೃಷ್ಟ ? || ೨ ||

ಮನೆಯ ಮುಂದಿನ ಹೊಂಗೆ ಹಲಸಿನಾ ಮರಗಳಿಗು
ಇಷ್ಟವಾಗುವುದಂತೆ ಈ ಪಿರಿಪಿರಿ ಮಳೆಯು ||
ಆ ರವಿಗು ರಜೆಯಂತೆ ಮನೆಯಲ್ಲಿ ಮಲಗಿರಲಿ
ನನಗು ದೊರಕಿಹುದಿಂದು ಹೊಸತು ರಜೆಯ  || ೩ ||

ಹೇಳುವರು ಯಾರಿಲ್ಲ -ಯಾರೂ ಕೇಳುವುದಿಲ್ಲ
ಹೊದ್ದು ಮಲಗಲೆ ನಾನು ಹಾಡುಹಗಲು ? ||
ವರುಣನಾ ಜೋಗುಳವ ಖುದ್ದು ನಾ ಆಲಿಸುತ
ಕಳೆದು ಹೋಗಲೆ ನನ್ನ ಭಾವಲೋಕದೊಳು ? || ೪ ||

- ಸುರೇಖಾ ಭೀಮಗುಳಿ
09/11/2015
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

" ನನ್ನ ಮಗಳು "


" ನನ್ನ ಮಗಳು "
 ****************
ಕಪ್ಪು ಕೂದಲ ಚಲುವೆ ಮುದ್ದು ವದನವ ಹೊತ್ತು
ಬಂದು ನಿಂತಳು ನನ್ನ ಮನದ ಮುಂದೆ ||
’ಕಾವ್ಯಕನ್ನಿಕೆ ನಾನು- ನನ್ನ ಸಲಹುವೆ ಏನು ?
ಕಳಿಸಿ ಕೊಟ್ಟಿಹನಲ್ಲ ನನ್ನ ತಂದೆ’ || ೧ ||

ಸ್ವಾಗತಿಸಿದೆ ಅವಳ- ಒಳ ಕರೆದು ನೆರಳಿತ್ತೆ
ಮಗಳಾಗಿ ಸ್ವೀಕರಿಸಿ ಆದರಿಸಿದೆ ||
ಅವಳ ಖುಷಿಯಲ್ಲಿ ನಾ ನನ್ನ ಸುಖವನು ಕಂಡೆ
ಸುತೆಯ ನೋವಲಿ ನಾನು ಕರಗಿ ಹೋದೆ || ೨ ||

ಲಂಗ-ದಾವಣಿ ಕೊಟ್ಟೆ, ರೇಷ್ಮೆ ಲಂಗವ ಹೊಲಿದೆ
ಜರತಾರಿಯನು ಉಡಿಸಿ ಸಿಂಗರಿಸಿದೆ ||
ಕಾಲ್ಗೆಜ್ಜೆಯನು ತೊಡಿಸಿ- ಮೊಗ್ಗ ಜಡೆಯನು ಹೆಣೆದೆ
ನನ್ನ ಸರಗಳ ತೊಡಿಸಿ ದೃಷ್ಟಿ ತೆಗೆದೆ || ೩ ||

ನವ್ಯತೆಯ ಹಂಗಿಲ್ಲ- ಕೃತಕತೆಯ ಸೋಗಿಲ್ಲ
ಸಹಜ ಸುಂದರಿ ಈಕೆ ನನ್ನ ಮಗಳು ||
ಕಾವ್ಯಕನ್ನಿಕೆ ಎಂಬ ಬ್ರಹ್ಮ ಮಾನಸ ಪುತ್ರಿ
ಮೃದುವಾಗಿ ಮಿಡಿದಿಹುದು ನನ್ನ ಕರುಳು || ೪ ||

ಏರು ಜವ್ವನೆ ಈಕೆ ಮೈಕೈಯಿ ತುಂಬಿಹುದು
ಹಗುರಾಗಿ ಹಾರಿಹುದು ಅವಳ ಕುರುಳು ||
ಮಗಳಂದ ನೋಡುತ್ತ ನನ್ನನ್ನೆ ಮರೆತಿಹೆನು
ನನಗೇಕೆ
ಹಿಡಿಯಿತೋ ಇಂಥ ಮರುಳು ? || ೫ ||

- ಸುರೇಖಾ ಭೀಮಗುಳಿ
07/11/2015
ಚಿತ್ರ :ಅಂತರ್ಜಾಲ
ಶುದ್ಧರೂಪ : ಸುಧನ್ವ ಭೀಮಗುಳಿ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Friday, November 6, 2015

" ಕಾವ್ಯಕನ್ನಿಕೆ "

" ಕಾವ್ಯಕನ್ನಿಕೆ "
********************
ಮುದ್ದು ಮಗಳನು ಸಾಕಿ ಮುದಗೊಳ್ಳುವಂತೆಯೇ
ಕಾವ್ಯಕನ್ನಿಕೆ ಇವಳು ನಮ್ಮ ಮಗಳು ||
ಅವಳು ಅರಳುವ ಸಮಯ ಅವಗಣನೆ ಸರಿಯಲ್ಲ
ಗಮನವಿರಲೀ ಈಕೆ ನಮ್ಮ ನೆರಳು || ೧ ||

ಕವನಗಳ ನಿಯಮವನು ಪಾಲಿಸುವ ತಪವಿರಲಿ
ಕಾವ್ಯ ಕನ್ನಿಕೆ ಸೌಖ್ಯ ಮುಖ್ಯ ನಮಗೆ ||
ಕ್ರಮವು ಒಪ್ಪಿದ ಹಾದಿ - ತಾಳ ತಪ್ಪದ ಕಾವ್ಯ
ವ್ಯರ್ಥವೆನಿಸುವುದಿಲ್ಲ ನಾಡ ನುಡಿಗೆ || ೨ ||

ನಡಿಗೆ ಕಲಿಯುವ ಸಮಯ ಸರಿ ಕಲಿಯದಿದ್ದರೆ
ಹೆಜ್ಜೆಗಳು ತಪ್ಪುವವು ಸಹಜವಾಗಿ ||
ಚಪ್ಪಲಿಯ ಚರಪರದ ಶಬ್ದವನು ಮಾಡದಲೆ
ಇಡುವ ಸದೃಢ ಹೆಜ್ಜೆ ಭದ್ರವಾಗಿ || ೩ ||

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ?
ತಿದ್ದುವುದಕಾದೀತೆ ಬಲಿತಮತ್ತೆ ? ||
ಮೂಲದಲ್ಲಿಯೇ ನಾವು ಕಟ್ಟಿನೊಳ ಬೆಳೆಯೋಣ
ಆ ತಾಯಿ ಶಾರದೆಯು ಮೆಚ್ಚುವಂತೆ || ೪ ||

- ಸುರೇಖಾ ಭೀಮಗುಳಿ
06/11/2015
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Thursday, November 5, 2015

" ಭೂತ - ಭವಿಷ್ಯ- ವರ್ತಮಾನ "

" ಭೂತ - ಭವಿಷ್ಯ- ವರ್ತಮಾನ "
*******************************

ಕಳೆದ ಭೂತದ ಬಗೆಗೆ ಹಲುಬುವುದು ಯಾತಕೇ ?
ಮತ್ತೇನು ಅದು ಚಿಗುರಿ ಎದುರು ನಿಲದು ||
ಭವಿಷ್ಯದ ಕುರಿತಾದ ಚಿಂತೆಯೂ ಬೇಕಿಲ್ಲ
ನಾಳೆ ಇರುತೇವೆಂಬ ಭರವಸೆಯೆ ಇಲ್ಲ ! || ೧ ||

ಹಿಂದಿನದು ನೆನಪಿರಲಿ ನೋವುಗಳ ಮರೆತುಬಿಡಿ
ಹಾಸ್ಯಲೇಪವ ಹಚ್ಚಿ ಖುಷಿಯಪಡಿರಿ ||
ಹಳೆಯದೆಲ್ಲವ ಗೆದ್ದ ಹೆಮ್ಮೆಯನು ಹೊಂದುತಲಿ
ಇಂದು ತಲುಪಿದ ಸ್ಥಿತಿಯ ಒಪ್ಪಿಕೊಳಿರಿ || ೨ ||

ಭವಿಷ್ಯದ ಬಗೆಗೊಂದು ಕನಸಿರಲಿ ಮನಸಿನಲಿ
ಒಳ್ಳೆಯದೆ ಬರಲೆಂಬ ನಿರೀಕ್ಷೆಯಿರಲಿ ||
ಮುಂಬರುವ ಕಷ್ಟಗಳ ಎದುರಿಸುವ ಭಾವದಲಿ
ನಮ್ಮ ಒಳಗಿನ ಮನಸು ಸಿದ್ಧವಿರಲಿ || ೩ ||

ನಿನ್ನೆಯಾ ನೆನಪಿನಲಿ ಮುಂದಿನಾ ಕನಸಿನಲಿ
ಇಂದು ಸುಖಿಸುವ ಕ್ಷಣವು ಜಾರದಿರಲಿ ||
ಈ ಬಾಳನಿತ್ತವಗೆ ಕೊನೆಗೊಳಿಸಬಲ್ಲವಗೆ
ಎಲ್ಲವನು ಹೊರಿಸಿ ಮನ ಹಗುರಗೊಳಲಿ || ೪ ||

- ಸುರೇಖಾ ಭೀಮಗುಳಿ
05/11/2015
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Monday, November 2, 2015

" ಅನಾನಾಸು ಸಂಭ್ರಮ !"

" ಅನಾನಾಸು ಸಂಭ್ರಮ !"
***********************

ಪೆರಿಯ ಶಾಂತಿಯ ಅನಾನಾಸದು
ನಮ್ಮ ಬಿಡದೇ ಸೆಳೆವುದು ||
ಎಷ್ಟು ತಿಂದರು ತೃಪ್ತಿಯಾಗದು
’ಹೀಗೆ ಯಾತಕೆ ?’ ತಿಳಿಯದು || ೧ ||

ಮಂಗಳೂರಿನ ಮುಖ್ಯ ರಸ್ತೆಯ
ಬಲ
ಕೆ ತಿರುಗಿದ ಮಾರ್ಗವು ||
ಹಸಿರು ಕಾನನ ನೆರಳ ಪರಿಸರ
ಸುತ್ತ ಮಂಗನ ಆಟವು ! || ೨ ||

ಹಣ್ಣ ಸಿಪ್ಪೆಗೆ - ಕೊಳೆತ ಹಣ್ಣಿಗೆ
ಕಾದು ಕುಳಿತಿವೆ ಮರ್ಕಟ ||
ಮರದ ಮೇಲಿನ ಮಂಗನಾಟಕೆ
ಮರೆವ ಗ್ರಾಹಕ ಸಂಕಟ || ೩ ||

ಹಳದಿ ಹಣ್ಣಿಗೆ ಉಪ್ಪು ಖಾರಾ
ಹಣ್ಣ ತಟ್ಟೆಯು ಮೆರೆವುದು ||
ಬಾಯಿಗಿಟ್ಟರೆ ’ಇನ್ನು ಬೇಕೂ’
ಎಂದು ಮನವೂ ಬೇಡ್ವುದು || ೪ ||

ನಮಗು ಗೊತ್ತಿದೆ ಬಹಳ ತಿಂದರೆ
ದೇಹ ಉಷ್ಣವ ತಡೆಯದು ||
ಬಿಟ್ಟರುಂಟೇ ಇಂಥ
ಸಂಭ್ರಮ ?
ಬೇಕು ಎಂದರು ಸಿಕ್ಕದು || ೫ ||

ನಾಲ್ಕೆ ಜನರೇ ಹತ್ತು ತಟ್ಟೆಯ
ತಿಂದು ತೇಗುತ ಬಂದೆವು ||
ಇಂದು ಮನೆಯಲಿ ಹಾಲು- ಮೆಂತ್ಯದ
ಬೊಂಡ ನೀರಿನ ಪಥ್ಯವು ! || ೬ ||

- ಸುರೇಖಾ ಭೀಮಗುಳಿ
03/11/2015.
ಚಿತ್ರ : ಸುಮಂತ ಭೀಮಗುಳಿ
ರೂಪದರ್ಶಿ : ಶ್ಯಾಮ್ ಭೀಮಗುಳಿ ಮತ್ತು ಅನಾನಾಸು ಗಾಡಿ !

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli