Friday, June 29, 2018

" ಪತ್ರಡೆ - ಕೆಸುಪುರಾಣ ...."



ಊರ ಮನೆಯಂಗಳದಿ ಕೆಸುವಿನೆಲೆ ನಗುತಿರಲು
ತಾರದುಳಿಯಲಿ ನಾನು ಹೇಗೆ ಹೇಳಿ ? ||
ಬೇರೊಂದು ಯೋಚನೆಯೆ ಮಾಡದೆಯೆ ಕೊಯ್ದಿಟ್ಟೆ
ಬಾರದುಳಿವುದೆ ನೆನಪು ಪತ್ರಡೆ-ಹುಳಿ || ೧ ||

ಹತ್ತೆಲೆಯ ಕೊಯ್ವಲ್ಲಿ ಮತ್ತಷ್ಟು ಕೊಯ್ದಾಯ್ತು
ಹೊತ್ತೊಯ್ದು ತಂದಿರುವೆ ಬೆಂಗ್ಳೂರಿಗೆ ||
ಮತ್ತೆಯುಳಿಯುವುದಿಲ್ಲ ಬೇಕೆಂದರಿನ್ನಿಲ್ಲ
ಸುತ್ತಿ ಕೊಂಡೊಯ್ಯಿರೀ ನಿಮ್ಮ ಮನೆಗೆ || ೨ ||

ಮನೆಯ ಮಂದಿಗೆ ಬಿತ್ತು ಪತ್ರಡೆಯ ಕನಸುಗಳು
ನೆನೆಹಾಕಬೇಕಕ್ಕಿಯಿಂದು ನಾನು ||
ಮನವಿಟ್ಟು ಮಾಡುವೆನು ಕೆಸುವಿನೆಲೆಯಡುಗೆಯನು  
ಘನವಾದ ತಿನಿಸಿದುವು - ಬರುವಿರೇನು ? || ೩ ||

ಸಿಗದೆ ಹೋಯಿತುಯೆಂದು ಸಂಕಟವ ಪಡಬೇಡಿ
ಬಿಗಿಗೊಳಿಸಿ ತುಟಿಯನ್ನು ಹೊಲೆಯಬೇಡಿ ||
ತಗಲಿಸುವೆ ಪತ್ರಡೆಯ ಪಟವ ಫೇಸ್ಬುಕ್ಕಿನಲಿ
ಮೊಗದಿ ಕಿರುನಗೆ ಸೂಸಿ ಪ್ರತಿಕ್ರಿಯಿಸಿರಿ || ೪ ||

- ಸುರೇಖಾ ಭೀಮಗುಳಿ
29/06/2018
ಚಿತ್ರ : Padma Shrinivas Huilgol

No comments:

Post a Comment