Thursday, July 12, 2018

" ಹೊಸ ಚಿಗುರು "





ಬರೆಯಬೇಕಿದೆ ನನಗೆ ಮತ್ತೊಂದು ಹೊಸ ಕವನ
ಬೆರಗಿನಲಿ ಭಾವಗಳ ಹೆಕ್ಕಿ ಹೊಸೆದು ||
ದೊರೆಬದುಕು ಬೇಕಿಹುದು ಮತ್ತೆ ಹೊಸ ಹುರುಪಿನದು
ಮರುಳು ಕಹಿನೆನಪುಗಳ ಕಳೆಯ ತೆಗೆದು || ೧ ||
ಸಡಗರದ ನೆನಪುಗಳು ಮನದ ಪುಟಪುಟಗಳಲಿ
ಹಿಡಿದಂಟಿ ಕುಳಿತಿಹವು- ಗೊತ್ತು ನನಗೆ ||
ತಡೆಗೋಡೆಯನ್ನೊಮ್ಮೆ ಕಟ್ಟಿಬಿಡುವೆನು ನಾನು
ಬಡಿದೋಡಿಸುವೆ ಕಹಿಯ ಮನದ ಹೊರಗೆ || ೨ ||
ಬಿಡಗಡೆಯ ಬಯಸಿ ನಾ ಕಹಿನೆನಪ ಬಿಸುಟಿರಲು
ಬಿಡಲಾರೆ ನಾ ನಿನ್ನನೆನ್ನುತಿಹವು ||
ಸುಡುವಾಸೆಯೆಮಗಿಲ್ಲ ಹೊರಹೋಗೆವೆನ್ನುತಲಿ
ಜಡಿದು ಕುಳಿತಿವೆಯೊಳಗೆ ಮಿಸುಕಾಡವು || ೩ ||
ಹಳೆ ನೆನಪುಗಳ ಬಿಡದೆ ನಾನದರ ಮೇಲೆಯೇ
ಒಳಿತಾದ ಮಹಲೊಂದ ಕಟ್ಟಬೇಕು ||
ಮಳೆಬಂದ ಕಾಲಕ್ಕೆ ಹೊಸಚಿಗುರು ಮೊಳೆವಂತೆ
ಕಳೆಕಳೆಯ ಹೊಸಬದುಕು ಕೊನರಬೇಕು || ೪ ||
- ಸುರೇಖಾ ಭೀಮಗುಳಿ
12/07/2018
ತಿದ್ದುಪಡಿ ಮಾರ್ಗದರ್ಶನ : ವಿಶ್ವ ಸರ್.
ಚಿತ್ರ : ಅಂತರ್ಜಾಲ

No comments:

Post a Comment