ಕರೆಯದೆಲೆ ಬಂದವನು ಮನ ಸೂರೆಗೊಂಡವನು
ಸರಿದು ಹೋದನು ಮತ್ತೆ ಬಾರೆನೆಂದು ||
ಬರಿದಾಯಿತೆನ್ನೆದೆಯು ಬರಡಾಯಿತೀಬದುಕು
ಭರಿಸಲಾರದ ನೋವು ನನ್ನಲಿಂದು || ೧ ||
ತಲೆಭಾರವಾಗಿಹುದು ಕಣ್ಣು ಕೊಳವಾಗಿಹುದು
ಶಿಲೆಯಾಗಿ ಹೋಯ್ತಲ್ಲ ನನ್ನವನ ಹೃದಯ ||
ಕೊಲೆಯಾಯ್ತು ಪ್ರೀತಿಯದು ದೂರು ಸಲ್ಲಿಸಲೆಲ್ಲಿ ?
ಬೆಲೆ ಕೊಡದೆ ಹೋದನೇ ನನ್ನ ಗೆಳೆಯ ? || ೨ ||
ತಪ್ಪು ಮಾಡಿದೆನೇನು ? ಗುರಿಯ ತಪ್ಪಿದೆನೇನು ?
ಒಪ್ಪುವಂತಹ ದಾರಿ ತಿಳಿಯದಾಯ್ತು ||
ಕಪ್ಪು ಆವರಿಸಿಹುದು ಮನಃಪಟಲದಲ್ಲೆಲ್ಲ
ಜಪ್ಪಯ್ಯನೆಂದರೂ ಶನಿ ಬಿಡದೆಹೋಯ್ತು || ೩ ||
ಇವನ ವಾಕ್ಚಾತುರ್ಯಕ್ಕೆ ಬಲಿಬಿದ್ದೆನೇ ನಾನು ?
ಇವನ ಆಳಂಗಕ್ಕೆ ಮರುಳಾದೆನೆ ? ||
ಇವನ ನೆಚ್ಚಿದೆನೇಕೆ ಮಾತು ಕೊಟ್ಟೆನುಯೇಕೆ ?
ಇವನಿಲ್ಲದೆಯೆ ನಾನು ಇರಬಲ್ಲೆನೆ ? || ೪ ||
ಮರೆಯಲೇ ಬೇಕೇನು ಸರಿದು ಹೋದವನನ್ನು
ವಿರಹದುರಿ ತಾಳುವುದು ಸುಲಭವೇನು ? ||
ಬಿರುಗಾಳಿಯೆದ್ದಿಹುದು ಹೃದಯಸಾಮ್ರಾಜ್ಯದಲಿ
ನೆರಳು ಬೆಳಕಿನ ಆಟ ಮುಗಿಯಿತೇನು ? || ೫ ||
- ಸುರೇಖಾ ಭೀಮಗುಳಿ
29/06/2018
ಚಿತ್ರ : NTB Bhat ಅವರ ವಿಡಿಯೋದಿಂದ ಕದಿಯಲಾಗಿದೆ.
No comments:
Post a Comment