ಬಿಡಿಪದ್ಯಗಳು "ಮೌನಗೀತೆ"
--------------
ಕರಿಮೋಡ ಮುಸುಕಿರಲು ಬಾನಿನಂಗಳದಲ್ಲಿ
ಮೆರೆಯುತಿದೆ ನನ್ನೊಳಗೆ ಮೌನ ಸುಗ್ಗಿ ||
ಕರೆದು ಮಾತಾಡಲೀ ನೀನೆ ಮೊದಲೆನ್ನುತ್ತ
ಸರಿಯುತಿದೆ ಸಿರಿಸಮಯ ತಗ್ಗಿಬಗ್ಗಿ ||
"ಭಾವರಾಹಿತ್ಯ"----------------
ಪಿರಿಪಿರಿಯ ದನಿಯಲ್ಲಿ ಮಳೆಹನಿಯು ಹನಿದಿರಲು
ಪರಿಪರಿಯ ಭಾವಗಳೆ ಹೋದಿರೆಲ್ಲಿ ? ||
ಸರಿದೆಲ್ಲಿ ಹೋಗುವಿರಿ ನೀವು ನನ್ನನು ಬಿಟ್ಟು ?
ಕರೆಯುತಿರುವೆನು ನಿಮ್ಮ- ಬನ್ನಿರಿಲ್ಲಿ ||
"ಹೀಗೊಂದು ಆಕಾಶಯಾನ"
-------------------------
ದೂರದಲಿ ತೇಲುತಿಹ ಮೇಘ ಮಾಲೆಯ ಕಂಡುಸಾರಿ ಕರೆದಿತ್ತೆನ್ನ ಹಳೆಯ ಕನಸು ||
ಕೋರಿಕೆಯು ಮನ್ನಿಸಿದ ದೇವತೆಯ ಜೊತೆಯಲ್ಲಿ
ಹಾರಾಡಿ ಬಂದೆ ನಾ - ಎಂಥ ಸೊಗಸು ! ||
"ಮೊಗ್ಗು"
----------
ಅರೆಬಿರಿದ ಮೊಗ್ಗೊಂದು ಮೆಲುನಕ್ಕು ನುಡಿಯುತಿದೆ
ಬರೆಯೆ ಮರುಳೇ ನನ್ನ ಮೇಲೊಂದು ಕವನ ||ಸರಸರನೆ ಬರೆದಿರುವೆ ನಾಲ್ಕಾರು ಸಾಲುಗಳ
ಕಿರಿದು ಸಮಯದಿಯದರ ಮೇಲಿಟ್ಟು ಗಮನ ||
- ಸುರೇಖಾ ಭೀಮಗುಳಿ
14/06/2018
ಚಿತ್ರ ಮೂಲ : ಅಂತರ್ಜಾಲ
No comments:
Post a Comment