Sunday, April 29, 2018

"ಹೀಗೊಂದು ನೆನಪು"




(ಇಪ್ಪತ್ತೆಂಟು ವರ್ಷದ ಹಿಂದೆ ನಡೆದ ಅಕ್ಕನ ಮದುವೆಯ ನೆನಪಿನಲ್ಲಿ.... )
ಹೊಂಗನಸಿನೊಡಗೂಡಿ ಭಾವಯ್ಯ ಬರುವಾಗ
ಹೊಂಗೆ ಹೂ ಹಾಸಿದ್ದ ಹಾದಿಯಿತ್ತು ||| 
ತಂಗಾಳಿಯಲಿ ತೇಲಿ ತವರೂರು ಸುಖಿಸಿತ್ತು 
ಸಿಂಗಾರಗೊಂಡಿದ್ದ ಹೆಣ್ಣು ಹೊತ್ತು || ೧ ||
ಮರೆಯಿಂದಲಿಣುಕಿದ್ದ ನಮಗೆ ಕಂಡದ್ದೇನು 
ಮರೆಯ ಮಾಚದೆ ಪೇಳ್ವೆ ಕೇಳಿರೀಗ ||
ಅರೆಬಿರಿದ ತುಟಿಯಲ್ಲಿ ಭಾವಯ್ಯ ನಗುತಿರಲು
ಮೆರೆದಿತ್ತು ಮೊಗದಲ್ಲಿ ಪ್ರೇಮರಾಗ || ೨ ||
ತುಸುನಕ್ಕ ನನ್ನಕ್ಕ ನಾಚಿ ನೀರಾಗುತಿರೆ
ನಸುಗೆಂಪು ಕದಪಿನಲಿ ರಾರಾಜಿಸಿ ||
ಪಿಸುಮಾತಿನಲ್ಲುಲಿದು ಭಾವನನು ಕಾಡಿದೆವು
ಬೆಸೆದ ಬದುಕಿನ ಬಗೆಗೆ ತುಸು ರೇಗಿಸಿ || ೩ ||
ಮನೆಯೊಳಾಗಿರಲಿಲ್ಲ ಪರಿಪರಿಯ ಜರಿಸೀರೆ
ಮನದೊಳಗೆ ಬತ್ತದಿಹ ಉತ್ಸಾಹವಿತ್ತು ||
ಕನಸುಗಳೆ ನಮಗಿದ್ದ ಬಂಗಾರದೊಡವೆಗಳು 
ನನಗಾಗ ಹದಿಹರೆಯ ಬಂದ ಹೊತ್ತು || ೪ ||
- ಸುರೇಖಾ ಭೀಮಗುಳಿ
13/04/2018
ಚಿತ್ರ : ನನ್ನ ನಾಲ್ಕನೆಯ ಅಕ್ಕನ ಮದುವೆಯ ಫೋಟೋ.

No comments:

Post a Comment