Thursday, November 23, 2017

" ನಮ್ ಹುಡುಗಿ ... ಕಣ್ ಹಾಕ್ಬೇಡಿ..." - ಕುಸುಮ ಷಟ್ಪದಿಯಲ್ಲಿ ಒಂದು ರಚನೆ


ಮಳೆಯೂರಿನಾ ಹುಡುಗಿ
ಹೊಳೆಯ ನೀರಲಿ ನಡುಗಿ
ಬಳಸಿ ನಿಂತಿಹಳವಳು ಬಿಂದಿಗೆಯನು ||
ಎಳೆನಿಂಬೆಯಂತಿಹಳು
ಹೊಳೆವ ಕಿರುಗಣ್ಣವಳು
ಕಳಿಸಿಹಳು ಸೆರೆಹಿಡಿದ ಚಿತ್ರವನ್ನು || ೧ ||

ನೀರು ತಾರಲು ಹೋಗಿ
ಜಾರಿ ಬಿದ್ದಿಹಳಾಗಿ
ಬಾರೆಂದು ಕರೆದಿಹಳು ಕರೆಯ ಮಾಡಿ ||
ತೌರಿನೆಡೆ ಸುಳಿವುದಕೆ
ಬೇರೆ ಕಾರಣ ಬೇಕೆ
ಸಾರಿ ಹೊರಟಿಹೆನು ನಾನೇರಿ ಗಾಡಿ || ೨ ||

ತೌರಿನಲ್ಲರಳುತಿಹ
ಪಾರಿಜಾತದ ಪುಷ್ಪ
ಮಾರುಹೋಗಿನೆನಿವಳ ನಗುವ ನೋಡಿ ||
ದಾರಿಗಡ್ಡವ ಕಟ್ಟಿ
ಮೂರು ಮುತ್ತನ್ನಿಕ್ಕಿ
’ಬಾರತ್ತೆ’ಯೆನ್ನುವಳು ತನ್ನ ಜೋಡಿ || ೩ ||

ಸಣ್ಣ ಪ್ರಾಯದ ಹುಡುಗಿ
ಕಣ್ಣ ಸೆಳೆಯುವ ಬೆಡಗಿ
ಅಣ್ಣನಾ ಮಗಳೀಕೆ ನನ್ನ ಸೊಸೆಯು ||
ತಣ್ಣಗಿಹಳಿವಳೆಂದು
ಬಣ್ಣನೆಯ ಮಾಡಿದರೆ
ಮಿಣ್ಣಗಿಣುಕುವುದೊಂದು ಪುಟ್ಟ ನಗೆಯು || ೪ ||

- ಸುರೇಖಾ ಭೀಮಗುಳಿ
23/11/2017
ಚಿತ್ರ : ಅಂತರ್ಜಾಲ
ತಿದ್ದುಪಡಿ ಮಾರ್ಗದರ್ಶನ :  Vishwanath Kukian K ಸರ್

Tuesday, November 21, 2017

" ಮೂರು ತುಂಡಿನ ದಿರಿಸು "


ನನ್ನ ಮಗಳಿಗೆಯಿನ್ನು ಸಧ್ಯದಲ್ಲಿಯೆ ಮದುವೆ
ಮುನ್ನವುಳಿದಿಹ ಕೆಲಸ ಸಾಕಷ್ಟಿದೆ ||
ಚಿನ್ನ ಮಾಡಿಸಬೇಕು ಜವಳಿ ಕೊಳ್ಳಲುಬೇಕು
ನನ್ನ ಸಂಭ್ರಮ ನಿಮಗೆ ಗೊತ್ತೇಯಿದೆ ||

ಮೂರು ತುಂಡಿನ ದಿರಿಸು ಸ್ಯಾಟಿನ್ನು ಬಟ್ಟೆಯದು
ಮಾರುಕಟ್ಟೆಗೆ ಬಂದ ರಾತ್ರಿಯುಡುಪು ||
ಜಾರು ಬಟ್ಟೆಯ ಅಂದ ಆಹಾಹವೇನ್ಚಂದ
ತೋರಿಸಿದೆ ಮಗಳಿಂಗೆ ವಸ್ತ್ರದೊನಪು ||

ಬೆಲೆಯಿದ್ದರೇನಂತೆ ಕೊಳ್ಳೋಣ ನಿನಗೊಂದು
ಚಲುವೆ- ಮದುವೆಯ ರಾತ್ರಿ ಧರಿಸು ನೀನು ||
ಮೆಲುನುಡಿದು ಕೊಡಿಸಿದೆನು ಮಗಳ ಖುಷಿಪಡಿಸಿದೆನು
ಸಲುಗೆಯಲ್ಲವಳ ಭುಜ ತಬ್ಬಿ ನಾನು ||

ಮುದದಿ ಧಿರಿಸನು ನೋಡಿ ಪಿಸುನುಡಿದಳೋ ಗೆಳತಿ
’ಮೊದಲ ರಾತ್ರಿಗೆ ಧಿರಿಸದೇನಕಂತೆ ?’ ||
ಬದಲಾದ ಕಾಲದಿಹ ಹೆಣ್ಣು ಮಕ್ಕಳ ಮಾತು
ಕದಪು ಕೆಂಪೇರಿಹುದು ಮನಸು ಸಂತೆ ||

- ಸುರೇಖಾ ಭೀಮಗುಳಿ
21/11/2017
ಚಿತ್ರ : ಅಂತರ್ಜಾಲ
ತಿದ್ದುಪಡಿ ಮಾರ್ಗದರ್ಶನ : ವಿಶ್ವನಾಥ್ ಸರ್.

ಹಿನ್ನೆಲೆ : ಕಾರ್ಪೋರೇಷನ್ ಸಮೀಪದ YWCA ಸ್ವಯಂ ಅಡುಗೆ ವಸತಿಗೃಹದಲ್ಲಿದ್ದ ದಿನಗಳವು... ವಯಸ್ಸು ಇಪ್ಪತ್ತು ದಾಟಿತ್ತು. ಆಗಷ್ಟೇ ಮೂರು ತುಂಡಿನ ರಾತ್ರಿಯುಡುಪು ( 3 ಪೀಸ್ ನೈಟಿ) ಮಾರುಕಟ್ಟೆ ಪ್ರವೇಶಿಸಿತ್ತು. ಸಾಧಾರಣ ಚೂಡಿದಾರಗಳು ನೂರಿನ್ನೂರು ರೂಪಾಯಿಗೆ ದೊರೆಯುತ್ತಿದ್ದ ಕಾಲದಲ್ಲಿ ಈ ತ್ರೀಪೀಸ್ ನೈಟಿಯ ಬೆಲೆ ನಾನೂರರ ಮೇಲೆ ! ನಮಗೋ ಅಂತದ್ದೊಂದು ಕೊಳ್ಳುವ ಬಯಕೆ ! ಆಗಲೇ ರೂಂಮೇಟ್ ಒಬ್ಬಳಿಗೆ ಮದುವೆ ನಿಗದಿಯಾಯ್ತು. ಆವಳು ತ್ರೀಪೀಸ್ ನೈಟಿ ಕೊಂಡಳು... ಮತ್ತದನ್ನು ಮೊದಲರಾತ್ರಿ ಧರಿಸುವುದೆಂದು ನಿರ್ಧರಿಸಿದಳು. ಆಗ ಹಾಸ್ಟೆಲ್ ನಲ್ಲಿದ್ದ ಸ್ವಲ್ಪ ಮುಂದುವರೆದವಳಿಂದ ಬಂದ ಮಾತು ’ಮೊದಲ ರಾತ್ರಿಗೆ ನೈಟಿ ಎಂತಕ್ಕೆ ?’.... ಆಗಿನ ಕಾಲಕ್ಕೆ ನಮಗೆ ಅದೊಂದು ಹೊಸ ಕಲ್ಪನೆ ! ನಾವೋ... ನಮ್ಮ ಮುಗ್ಧತೆಯೋ.... ಕೊನೆಗೂ ನನ್ನ ತ್ರೀಪೀಸ್ ನೈಟಿ ಕನಸು ನನಸಾಗಲೇ ಇಲ್ಲ.... ಹ ಹ ಹಾ...

"ನನ್ನೊಳಗಿನ ಕಾವ್ಯಕನ್ನಿಕೆ"


ನನ್ನ ಕನ್ನಿಕೆಗೀಗ ವಯಸು ಇಪ್ಪತ್ತೊಂದು
ಕನ್ನೆಯವಳಿಗೆ ಬರಿದೆ ಹಗಲುಗನಸು ||
ಚೆನ್ನ ಕವನವ ಬರೆಯಲೆನ್ನ ಕಾಡುತ್ತಿಹಳು
ಮೊನ್ನೆಯಿಂದಲು ಲೀನವೆನ್ನ ಮನಸು || ೧ ||


ಕಟ್ಟಿ ಕೊಟ್ಟಿಹಳೆನಗೆ ತನ್ನ ಕನಸನ್ನೆಲ್ಲ
ಬೆಟ್ಟದಷ್ಟಿಹುದವಳ ನಿಯಮಾವಳಿ ||
ದೃಷ್ಟಿ ತೆಗೆಯುತ್ತವಳ ಹೊಸ ಕವನ ಹೊಸೆದಿರಲು
ಸೃಷ್ಟಿಗೊಂಡಿಹುದಿಲ್ಲಿ ದೀಪಾವಳಿ || ೨ ||


ಮೊದಲು-ಕೊನೆಯಲಿ ಪ್ರಾಸ ಕೂಡಿ ಬರಲೇ ಬೇಕು
ಮಧುರ ಪ್ರೇಮವು ಉಕ್ಕಿ ಹರಿಯಬೇಕು ||
ಬದುಕು ಭಾವವು ಬೇಕು ಮೋಹದುಸಿರೂ ಬೇಕು
ಕದ ತೆರೆದು ಕನಸಿನೊಳ ಜಾರಬೇಕು || ೩ ||


ಮೊಗೆಮೊಗೆದು ಕನಸುಗಳ ಹಿಡಿದಿಡುವ ಸಂಭ್ರಮದಿ
ಮೊಗವರಳುತಿದೆಯಲ್ಲ ಯಾಕೆ ಹೀಗೆ ? ||
ಸೊಗಸು ಕವನವು ಮೂಡೆ ಚಿಗುರುತಿಹುದನುಮಾನ
ಮಗಳರಳುತಿಹಳೇನು ನನ್ನ ಒಳಗೆ ? || ೪ ||


- ಸುರೇಖಾ ಭೀಮಗುಳಿ
17/11/2017
ಚಿತ್ರ : ಅಂತರ್ಜಾಲ
ಸಹಕಾರ : ಮೋಹಿನಿ ದಾಮ್ಲೆ

Wednesday, November 15, 2017

" ಕಾಡುತಿಹ ಕನಸು "


ಹೊಚ್ಚಹೊಸ ಪರಿಸರದಿ ತಂಪು ಸಂಜೆಯ ಸಮಯ
ಬಿಚ್ಚಿಡುವೆ ನಿನ್ನೆದುರು ನನ್ನ ಕನಸು || ಪಲ್ಲವಿ ||
ಮೆಚ್ಚಿ ಬೆಸಗೊಂಡಿರುವ ಮಧುರ ಸಂಬಂಧವಿದು
ಹುಚ್ಚೆದ್ದು ಕುಣಿದಿರುವುದೆನ್ನ ಮನಸು || ಅನುಪಲ್ಲವಿ ||

ಸದ್ದು ಮಾಡದೆಯೆದ್ದು ತಲೆಗೆ ಸ್ನಾನವ ಮಾಡಿ
ಎದ್ದೇಳಿ ಬೆಳಗಾಯಿತೆನ್ನಬೇಕು ||
ಮುದ್ದು ಮಾಡುತ ನೀನು ನನ್ನನೆಬ್ಬಿಸುವಾಗ
ನಿದ್ದೆ ಮಾಡಿದ ತೆರದಿ ನಟಿಸಬೇಕು || ೧ ||

ನಸುಮುನಿಸು ತೋರುತಲಿ ನೀನೆದ್ದು ಹೊರಟಾಗ
ಮುಸುಕು ಸರಿಸುತ ನಿನ್ನನೆಳೆಯಬೇಕು ||
ಹುಸಿಕೋಪದಲಿ ನೀನು 'ಸಾಕುಬಿಡಿ'ರೆನ್ನುತ್ತ
ಕೊಸರಾಡಿ ನನ್ನೊಳೊಂದಾಗಬೇಕು || ೨ ||

- ಸುರೇಖಾ ಭೀಮಗುಳಿ
03/11/2017
ಚಿತ್ರಮೂಲ : ಅಂತರ್ಜಾಲ
ತಿದ್ದುಪಡಿ ಮಾರ್ಗದರ್ಶನ : ವಿಶ್ವನಾಥ್ ಸರ್

" ಜಾತ್ರೆಯ ನೆಪದಲ್ಲಿ ..."


ತುಂಬು ಗಲ್ಲದ ಹುಡುಗ ಹೇಳುವೆನು ನನ್ನೊಳಗ
ತುಂಬಿರುವುದೆನ್ನೊಳಗೆ ನಿನ್ನ ಬಿಂಬ || ಪಲ್ಲವಿ ||
ನಂಬಿರುವ ಮನದನ್ನೆ ಹೇಳುವುದ ನೀ ಕೇಳು
ಸಂಭ್ರಮದಿ ಬದುಕೋಣ ಬಿಟ್ಟು ಜಂಭ || ಅನುಪಲ್ಲವಿ ||

ನಮ್ಮೂರ ಜಾತ್ರೆಯಲಿ ತಿರುಗೋಣ ಬಾರೊಮ್ಮೆ
ಸುಮ್ಮನೆಯೆ ಕೈ ಹಿಡಿದು ಸಡಗರದಲಿ ||
ಘಮ್ಮೆನುವ ಮಲ್ಲಿಗೆಯ ನೀನು ಮುಡಿಸಿದರಾಗ
ಜುಮ್ಮೆನುವುದೆನ್ನ ಮನ ಸಂತಸದಲಿ || ೧ ||

ಬಾನಿನೆತ್ತರವಿರುವ ಚಕ್ರ ತೊಟ್ಟಿಲಿನಲ್ಲಿ
ನಾ ನಿನ್ನ ಜೊತೆಯಲ್ಲಿ ಕೂರುವಾಸೆ ||
ಕಾಣುತಿರೆ ಪಾತಾಳ ಭಯಗೊಂಡು ಬೆದರುತ್ತ
ಕಣ್ಮುಚ್ಚಿ ನಿನ್ನ ತೋಳ್ತಬ್ಬುವಾಸೆ || ೨ ||

ಸುತ್ತ ಜಾತ್ರೆಯ ಗೌಜಿ - ಬೀದಿಯಂಗಡಿ ಸಾಲು
ಹತ್ತು ಮೇಲೆರಡು ಬಳೆ ಕೊಡಿಸಬೇಕು ||
ಮುತ್ತುಸರ ಕೇಳಿದೊಡೆ ನೀಕಣ್ಣು ಮಿಟುಕಿಸುತ
ಮತ್ತೆ ಮನೆಯಲಿ ಕೊಡುವೆನೆನ್ನಬೇಕು || ೩ ||

- ಸುರೇಖಾ ಭೀಮಗುಳಿ
14/11/2017
ಚಿತ್ರ : ಜಾನು ಶೆಟ್ಟಿ ಎಸ್
ತಿದ್ದುಪಡಿ ಮಾರ್ಗದರ್ಶನ : Vishwanath Kukian K ಸರ್