Thursday, July 28, 2016

" ಬೆಳಗಿನ ಉಪಹಾರ "



ಬೆಳಗಿನಾ ಉಪಹಾರ ಹೊಂದಿಸುವ ಚಿಂತೆಯೇ ?
ಬಲುಸುಲಭ ಪರಿಹಾರ ನಾ ತಿಳಿಸುವೆ ||
ದಿನಕೊಂದು ತಿಂಡಿಯನು ಮಾಡುವುದೆ ಸರಿದಾರಿ
ಆಗಲೇ ಈ ವ್ಯಥೆಗೆ ಮುಕ್ತಾಯವೆ || ೧ ||

ಹುಳಿದೋಸೆ, ಸೆಟ್ದೋಸೆ, ಬರಿಯ ಅಕ್ಕಿಯ ದೋಸೆ
ಮತ್ತೊಂದು ದಿನದಲ್ಲಿ ಅಕ್ಕಿ ಇಡ್ಲಿ ||
ಅವಲಕ್ಕಿ ಉಪ್ಪಿಟ್ಟು ರಜೆಯ ದಿನಗಳಿಗಿರಲಿ
ನಡುವೊಂದು ದಿನಕಾಗಿ ರವೆಯ ಇಡ್ಲಿ || ೨ ||

ದೋಸೆ ಜೊತೆಯಲಿ ರುಚಿಯು ತೆಂಗಿನ್ಕಾಯಿಯ ಚಟ್ನಿ
ಆಲು ಸಾಗುವು ಸೊಗಸು ಸೆಟ್ದೋಸೆಗೆ ||
ಬರಿಯಕ್ಕಿ ದೋಸೆ ಜೊತೆ ಬೆಣ್ಣೆ ಬೆಲ್ಲವು ಚಂದ
ಟೊಮೆಟೊ ಗೊಜ್ಜದು ಬೇಕು ಇಡ್ಲಿ ಜೊತೆಗೆ || ೩ ||

ಚಿತ್ರನ್ನ ಮೊಸರನ್ನ ತರಕಾರಿ ಅನ್ನಗಳು
ಬಿಸಿಬೇಳೆ ಬಾತು ಜೊತೆ ಖಾರ ಬೂಂದಿ ||
ಪಲಾವು ಮೊಸರ್ಬಜ್ಜಿ ವಾಂಗಿಬಾತಾದೀತು
ಸೊಪ್ಪು ಅನ್ನವು ಒಮ್ಮೆ ಮಧ್ಯ ದಿನದಿ || ೪ ||

ರೊಟ್ಟಿ ಚಪಾತಿಗಳೋ ರಾತ್ರಿ ಹೊತ್ತಿಗೆ ಸಮವು
ಸಮಯ ಹೊಂದುವುದಿಲ್ಲ ಬೆಳಗಿನೊತ್ತು ||
ಪೂರಿ ಬನ್ಸು ವಡೆಗಳು ತಿಂಗಳೊಪ್ಪತ್ತಿನಲಿ
ಮನೆಮಂದಿ ಆರೋಗ್ಯ ನಮ್ಮ ಸೊತ್ತು || ೫ ||

ಹೋಟೆಲಿನ ತಿಂಡಿಗಳು ಅನಿವಾರ್ಯ ದಿನಕಿರಲಿ
ಹೊರಹೊರಟ ಸಮಯದಲಿ ಒದಗಿಬರಲಿ ||
ರುಚಿಗೆಂದೊ ಮಜಕೆಂದೊ ಯಾವಾಗಲೋ ಒಮ್ಮೆ
ಕೊಂಡು ತಿನ್ನುವ ನಾವು ಖುಷಿಖುಷಿಯಲಿ || ೬ ||

- ಸುರೇಖಾ ಭೀಮಗುಳಿ
28/07/2016
ಚಿತ್ರ : ಅಂತರ್ಜಾಲ

No comments:

Post a Comment