Friday, July 8, 2016

"ಸಂಸಾರ ಆಶಯ"







ಮನೆಹೊರಗೆ ಚಳಿಗಾಳಿ ತುಂತುರಿನ ಮಳೆಹನಿಯು
ಕರಿಮೋಡ ಕವಿದಿಯುದು ಭೂಮಿ-ಬಾನು ||
ಆ ದೇವ ಒದಗಿಸಿದ ಬೆಚ್ಚನೆಯ ಮನೆದೊಳಗೆ
ಸಂಸಾರ ಸಾಗರದಿ ನಾನು ನೀನು || ೧ ||

ಹಲವಾರು ಬಡವರಿಗೆ ಬೆಚ್ಚನೆಯ ಸೂರಿಲ್ಲ
ಎಂಬ ಸತ್ಯದ ಅರಿವು ನನಗೆ ಉಂಟು ||
ಬೆಚ್ಚನೆಯ ಮನೆಯಿದ್ದು ನೆಮ್ಮದಿಯ ಸುಳಿವಿಲ್ಲ
ಮನದೊಳಗೆ ಅವಿತಿಹವು ನೂರು ಗಂಟು || ೨ ||

ಇನ್ನು ಕೆಲವರಿಗಂತು ಕೈತುಂಬ ಕಾಸಿಹುದು
ಸುಖಿಸೆ ಸಮಯವೆ ಇಲ್ಲ ಅವರ ಬದುಕ ||
ಮತ್ತಿಷ್ಟು ಮನುಜರಿಗೆ ಸಮಯವಿದೆ ಧಾರಾಳ
ವ್ಯಯಿಸೆ ಹಣವೇ ಇಲ್ಲ ಎಂಥ ಕುಹಕ ! || ೩ ||

ಹಣ-ಸಮಯ ಅನುಕೂಲ, ಬೆಚ್ಚನೆಯ ಮನೆ-ಮನಸು
ಜೊತೆಗೊಂದು ಸಹೃದಯ ಇಲ್ಲೆಂಬ ಕೊರಗು ||
ಎಲ್ಲದರ ಮೇಳದಲಿ ಜೊತೆಕೊಡಲಿ ಸಾಂಗತ್ಯ
ಒಂಟಿ ಬದುಕಿಗೆ ಇಲ್ಲ ಪ್ರಾಕೃತಿಕ ಮೆರುಗು || ೪ ||

ವೆಚ್ಚಕ್ಕೆ ಹೊನ್ನಿರಲಿ ವಾಸಕ್ಕೆ ಮನೆಯಿರಲಿ
ಮುದ್ದಾದ ಸಂಸಾರ ಜೊತೆಯಲಿರಲಿ ||
ಬಂಧುತ್ವ ಬಲಗೊಳಲಿ ಬಾಂಧವ್ಯ ನೆಲೆಗೊಳಲಿ
ದೇವನಿತ್ತಿಹ ಬಾಳು ಸಫಲಗೊಳಲಿ || ೫ ||

- ಸುರೇಖಾ ಭೀಮಗುಳಿ
08/07/2016
ಚಿತ್ರ : ಅಂತರ್ಜಾಲ

No comments:

Post a Comment