ದೇವನಿರುವನು ಮಗುವ ಮುಗ್ಧ ಮನದಲ್ಲಿಯೇ
ಅವನಿಲ್ಲ ಕಟ್ಟಿರುವ ಗುಡಿಯ ಒಳಗೆ ||
ತನ್ಮಯದಿ ಕುಳಿತಿರುವ ಮುದ್ದು ಹುಡುಗಿಯ ನೋಡಿ
ಅವನೋಡಿ ಬಂದಿಹನು ಇವಳ ಬಳಿಗೆ || ೧ ||
ಎಳೆಬಿಸಿಲು ಹೊಸಹಸಿರು ಸ್ವಚ್ಚಂದ ಪರಿಸರವು
ಕಾವಿಕಟ್ಟೆಯ ಮೇಲೆ ಪುಟ್ಟ ಕುವರಿ ||
ತನ್ನಾಟದೊಳಗವಳು ಜಗವನ್ನೆ ಮರೆತಿಹಳು
ಅವಳ ಹಾಡಿಗೆ ಬೇಕೆ ತಾಳ ತಂಬೂರಿ ? || ೨ ||
ಹುಡುಕುತ್ತಲಿಹೆವಲ್ಲ ಗುಡಿಗೋಪುರದ ಒಳಗೆ
ಇಹರೇನು ಗೋವಿಂದ ಶಿವ ಪಾರ್ವತಿ ||
ಮುದ್ದು ಮಕ್ಕಳ ತೆರದಿ ಮೂರ್ತಗೊಂಡಿಹರಲ್ಲ
ಗುರುತಿಸಲು ಬೇಕಿಹುದು ನಮಗೆ ಶಕ್ತಿ || ೩ ||
ಭರತ ಖಂಡವೆ ಗುಡಿಯು ನಾವಿಲ್ಲಿ ಬಂಧುಗಳು
ಹೆಣ್ಣು ಮಕ್ಕಳು ನಮಗೆ ದೇವಿಯಂತೆ ||
ಜನ್ಮಿಸಿದ ಬಾಲಕರು ರಾಘವನ ಪ್ರತಿರೂಪ
ಸಾರ್ಥಕ್ಯಗೊಳ್ಳಲಿದೆ ಜಗದ ಸಂತೆ || ೪ ||
- ಸುರೇಖಾ ಭೀಮಗುಳಿ
05/07/2016
ಚಿತ್ರ : Rohini H S (ನಮ್ ನಗರ ಗ್ರೂಪ್)
No comments:
Post a Comment