ನನ್ನ ನಾದಿನಿ ಇವಳು ಬಹಳ ಒಳ್ಳೆಯ ಹುಡುಗಿ
ಇವಳ ರೇಗಿಸುವಾಸೆ ಯಾಕೊ ಕಾಣೆ ||
ಕಾಡುವೆನು ಈಕೆಯನು ಲಘು ಹಾಸ್ಯಗೈಯ್ಯುತ್ತ
ನೋಯಿಸುವ ಮನವಿಲ್ಲ ದೇವರಾಣೆ || 1 ||
ಧೈರ್ಯ ಸಾಲುವುದಿಲ್ಲ ಹೆಂಡತಿಯ ರೇಗಿಸಲು
ಉಪವಾಸ ವನವಾಸ ಭಯದ ನೆರಳು ||
ಅಪಾಯಗಳಿನಿತಿಲ್ಲ ನಾದಿನಿಯ ಕಾಡಿದರೆ
ಇವಳು ಅತ್ತೆಯ ಮನೆಯ ಮುದ್ದು ಮಗಳು || 2 ||
ನಾದಿನಿಯ ಹುಸಿಮುನಿಸು ಸಂತಸವ ನೀಡುವುದು
ಕಾರಣವು ಏನೆಂದು ನಾನು ಅರಿಯೆ ||
ತಂಗಿ ಕಣ್ಣಂಚಿನಲಿ ಕಣ್ಣೀರು ತುಳುಕಿದರೆ
ಪತ್ನಿ ತಡೆಯೊಡ್ಡುವಳು ಸಾಕು ದೊರೆಯೆ || 3 ||
ಅತ್ತೆ ಮಾವನಿಗಿವಳು ಅಚ್ಚು ಮೆಚ್ಚಿನ ಮಗಳು
ಮುದ್ದು ತಂಗಿಯು ಇವಳು ನನ್ನೊಡತಿಗೆ ||
ಮನದಲ್ಲಿ ತುಂಬಿಹುದು ಕಾಳಜಿಯ ಮೃದು ಭಾವ
ಶುಭವನ್ನೆ ಕೋರುವೆನು ನನ್ನ ನಾದಿನಿಗೆ || 4 ||
- ಸುರೇಖಾ ಭೀಮಗುಳಿ
27/06/2016
ಚಿತ್ರ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
ಬಾವ ಇಂಥವರೆಂದು ನನಗೆ ಗೊತ್ತಿರಲಿಲ್ಲ
ಗೋಳುಹೊಯ್ವರು ನನ್ನ ಮತ್ತೆ ಮತ್ತೆ ||
ವೇದನೆಯ ಭಾವವಿದು ಮನದೊಳಗೆ ಅವಿತಿಹುದು
ನಾನು ನೊಂದಿಹುದೇಕೆ ನಿಮಗೆ ಗೊತ್ತೆ ? || ೧ ||
ನನ್ನ ಗೋಳಾಡಿಸುವ ಚಟವೇಕೋ ಇವರಿಗೆ ?
ನೋಯುವೆನು ಒಳಗೊಳಗೆ ಹಿಂಸೆಯಾಗಿ ||
ಅಂತರಾಳದ ಬೇನೆ ಇವರ ಗಮನದಲಿಲ್ಲ
ಹೃದಯ ನರಳಿಹುದಿಂದು ನೋವು ತಾಗಿ || ೨ ||
ಮುನಿಸಿಕೊಂಡರು ಕೂಡ ಗೋಳುಗುಡಿಸುವರಲ್ಲ
ಚಂದ ಕಾಣುವೆ ಈಗ ನೀನು ಜಾಣೆ ||
ಒಂದು ಮೆಚ್ಚುಗೆ ನೋಟ ಮತ್ತೊಂದು ಸಿಹಿಮಾತು
ಕಾಯುವುದು ನನ್ನ ಮನ ಯಾಕೊ ಕಾಣೆ || ೩ ||
ಹುಸಿಮುನಿಸು ತೋರಿದರೆ ಕೇಳುವರು ಬಾವಯ್ಯ
ಒಂದು ಕನ್ನಡಿಯನ್ನು ನೀನು ತಾರೆ ||
ಕನ್ನಡಿಯ ನನ್ನೆಡೆಗೆ ತಿರುಗಿಸುತ ಹೇಳುವರು
’ನೋಡಿಕೋ ನಿನ್ನಯಾ ಗಡಿಗೆ ಮೋರೆ’ || ೪ ||
ಮೌನಿಯಾದರೆ ಕೂಡ ಮಾತಿಗೆಳೆಯುವರಾಗ
’ಮೌನದಲಿ ಇಹುದಲ್ಲ ಎಷ್ಟು ಶಾಂತಿ ?’ ||
ಸುಮ್ಮನುಳಿಯಲು ಬಿಡದೆ ರೇಗಿಸುವ ಹುನ್ನಾರ
’ ಅರಳಿದರೆ ನಿನ್ನ ಮುಖ ಸೂರ್ಯಕಾಂತಿ...... ’ || ೫ ||
- ಸುರೇಖಾ ಭೀಮಗುಳಿ
24/06/2016
ಚಿತ್ರ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
ನನ್ನಯ ಹೆಂಡತಿ ಕೋಪಿಸಿಕೊಂಡರೆ ಮನೆಯಲಿ ಒಂಥರ ಹಬ್ಬ
ಮನದಲಿ ಮೌನವು ಆವರಿಸುವುದೂ ತಡೆಯಲು ಆಗದು ’ಅಬ್ಬಾ !’ || ಪ ||
ಮೋಹದ ಮಡದಿಯು ದುಮುಗುಡುತಿದ್ದರೆ ಮುಖವೋ ಗಡಿಗೆಯ ರೀತಿ
ನಾನೂ ಅವಳನು ರಮಿಸುವ ಪ್ರಕ್ರಿಯೆ ಅವಳಿಗು ಬಹಳಾ ಪ್ರೀತಿ
ಕೋಪಿಸಿಕೊಂಡರೆ ಕರಗಿಯೆ ಹೋಗುವೆ ಎಂಬುದು ಅವಳಿಗೆ ಗೊತ್ತು
ಹುಸಿಮುನಿಸಿನಲೀ ಆಡುವ ನಾಟಕ ಮುನಿಸೂ ಅವಳಿಗೆ ಸೊತ್ತು || ೧ ||
ಪ್ರೇಮಿಸಿದವಳೂ ಕೈಹಿಡಿದವಳೂ ದೇವನು ಕೊಟ್ಟಿಹ ವರವು
ನೆಮ್ಮದಿ ಜೀವನ ಆಕೆಯ ಜೊತೆಯಲಿ ಅವಳಿಂದಲೆ ನನ್ನಿರುವು
ಅವಳಿಗೆ ನಾನೂ ನನಗೇ ಅವಳೂ ಬ್ರಹ್ಮನೆ ಬರೆದಿಹನಲ್ಲ
ಮುನಿದರು ತವರಿಗೆ ಹೋಗದೆ ಉಳಿವಳು .. ’ನಾನೇ ಅವಳಿಗೆ ಎಲ್ಲ’ || ೨ ||
- ಸುರೇಖಾ ಭೀಮಗುಳಿ
18/06/2016
ಚಿತ್ರ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
ಮಾವನಾ ತಿಥಿಯೆಂದು ಇವರೂರಿಗೋಗಿಹರು
ನನ್ನ ಕೇಳುವರಾರು ಈ ಮನೆಯಲಿ ? || ಪಲ್ಲವಿ ||
"ಬೆಳಗಾಯ್ತು ಎದ್ದೇಳು ಮಕ್ಕಳಿಗೆ ತಡವಾವ್ತು"
ಎಂದೆನ್ನ ಇಂದಾರು ಎಬ್ಬಿಸುವರಿಲ್ಲ ||
ಅಂಗಳವ ಗುಡಿಸುತ್ತ ನೀರನ್ನು ಚಿಮುಕಿಸುತ
ರಂಗವಲ್ಲಿಯನಿಡಲು ಕರೆವರಿಲ್ಲ || ೧ ||
ಅಡಿಗೆಮನೆ ಕೆಲಸದಲಿ ಜೊತೆಯನ್ನು ಒದಗಿಸುತ
ಈರುಳ್ಳಿ ಹೆಚ್ಚಿಡುವ ಇನಿಯನಿಲ್ಲ ||
ಮನೆಕೆಲಸ ಸಮಯದಲಿ ದಣಿವಾಯ್ತೆ ಎನ್ನುತಲಿ
ಕನಿಕರಿಪ ಪತಿರಾಯ ಮನೆಯೊಳಿಲ್ಲ || ೨ ||
ಬಿಟ್ಟು ಬಾ ಗಣಕವನು ಎಸೆದು ಬಿಡು ಚರವಾಣಿ
ಬಂದು ಬಿಡು ನೀ ಬೇಗ ಎನುವರಿಲ್ಲ ||
ಅವರಿರುವ ಸಮಯದಲಿ ಸೆಳೆಯುವುದು ವಾಟ್ಸಾಪು
ಇಂದೇತಕೋ ಏನೊ ಸೆಳೆಯುತಿಲ್ಲ ! || ೩ ||
- ಸುರೇಖಾ ಭೀಮಗುಳಿ
16/06/2016
ಚಿತ್ರ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
( ಅಷ್ಟೆಲ್ಲ ಏನೂ ಕೋಲ ಇಲ್ಲ... ನಾಳೆ ವಾಪಾಸ್ ಬರ್ತಾರೆ.... ಏನೋ ಎಲ್ಲರು ಫೇಸ್ ಬುಕ್ ನಲ್ಲಿ "ಅವರಿಲ್ದೂಟ" ಅಂಥ ಪದ್ಯ(Mohini damle) ... ಲೇಖನ (Rajanikant mrugavade) ಬರೆದ್ರಲ್ಲ.... ನಾನೂ ಏನಾದ್ರು ಬರೆಯೋಣ ಅಂಥ ಶುರುಮಾಡ್ದೆ... ಹೀಗಾಯ್ತು ನೋಡಿ ಕಥೆ.... ಏನು ಪ್ರೇಮಕವಿ ಬರೆದ್ರೆ ಮಾತ್ರ ಪ್ರೇಮಗೀತೆನಾ ? ... ನಾವು ಬರೆದ್ರೆ ಅದಕ್ಕೆ ವ್ಯಾಲ್ಯೂನೆ ಇಲ್ವಾ... ? ಹ್ಹಹ್ಹಹ್ಹಾ.... )

ಇಂದೇಕೊ ಮನದಲ್ಲಿ ಮಲ್ಲಿಗೆಯ ಹೂಗಂಧ
ಪ್ರೇಮಕವಿ ಹಾಡುಗಳ ಬಿಡದ ಗುಂಗು ||
ಪ್ರೀತಿ ಪ್ರೇಮದ ಒರತೆ, ವಿರಹ ಭಾವದ ಕವಿತೆ
ಬರೆದು ಮುಗಿಸಿಹರಲ್ಲ ಎಂಬ ಕೊರಗು || ೧ ||
ಹುಡುಕಿಹೆನು ತಡಕಿಹೆನು ಬೇಡಿಹೆನು ಕಾಡಿಹೆನು
ನನ್ನ ಕವನಕೆ ಬರಲಿ ಹೊಸತು ಜೀವ ||
ಹೊಳೆದು ಬಿಟ್ಟಿತು ನೋಡಿ ಮನವ ಸೆಳೆಯಿತು ಕಾಡಿ
ಬಾವ - ನಾದಿನಿ ಎಂಬ ಮಧುರ ಭಾವ || ೨ ||
ನನ್ನ ಮನವಿದು ಈಗ ಕಳೆದು ಹೋಗಿದೆಯಲ್ಲ
ಕಾಲು ಶತಮಾನದಾ ಹಿಂದೆ ಹಿಂದೆ ||
ಆ ಕಾಲದಾ ನೆನಪ ಮತ್ತೆ ನಾ ಸವಿಯುತ್ತ
ಇಡುತಿರುವೆ ಹೊಸಕವನ ನಿಮ್ಮ ಮುಂದೆ || ೩ ||
ಪ್ರೇಮಕವಿಯನು ನೆನೆದು ನಾನಿಂದು ಬರೆದಿರುವೆ
ಕಲ್ಪನೆಯ ಹೊಸ ಕೂಸು ನಿಮ್ಮೆದುರಲಿ ||
ಹೇಗಿಹುದು ಹೇಳಿಬಿಡಿ ತಪ್ಪಿದ್ದ ತಿದ್ದಿಬಿಡಿ
ನಿಮ್ಮ ಹರಕೆಯು ನನ್ನ ಕಾಯುತಿರಲಿ || ೪ ||
*********************************
ಕವನದೊಳಗಿನ ಕವನ : " ನಾದಿನಿಯ ಮನ "
------------------------------------------------
ಅಮ್ಮ ಮೆಚ್ಚಿದ ಅಳಿಯ, ಅಪ್ಪ ಹುಡುಕಿದ ಹುಡುಗ
ಎಂಬ ವಿಷಯಗಳೆಲ್ಲ ಅತ್ತ ಇರಲಿ ||
ಮನದ ಮೂಲೆಯಲೇಕೊ ಸಣ್ಣನೆಯ ಬಿರುಗಾಳಿ
ಮುದ್ದು ಅಕ್ಕನ ಬಾಳು ಚೆನ್ನವಿರಲಿ || ೧ ||
ಅಕ್ಕ-ಬಾವಗೆ ಮದುವೆ ಎಂಬ ಸಂಭ್ರಮದೊಡನೆ
ನನ್ನ ಮನದಲು ಏಕೊ ಏನೋ ಕನಸು ||
ಅಕ್ಕ ಹೇಗೂ ಸ್ವಂತ ನಾನವರ ಹಕ್ಕಲ್ಲ
ಲಘು ಸಲಿಗೆ ಬಯಸುತಿದೆ ನನ್ನ ಮನಸು || ೨ ||
ಅಕ್ಕನೆದುರಲೆ ನನ್ನ ಮತ್ತೆ ಮತ್ತೇ ಕರೆದು
ಸೆಳೆಯುತ್ತಲಿಹರಲ್ಲ ನನ್ನ ಗಮನ ||
ನನ್ನ ಹೆಸರೂ ಕೂಡ ಇಷ್ಟು ಮುದ್ದಾಗಿದೆಯೆ ?
ಪ್ರಶ್ನೆ ಕೇಳಿದೆಯಲ್ಲ ನನ್ನ ಸುಮನ || ೩ ||
ಅಕ್ಕ ಮೆಚ್ಚಿದ ಗಂಡ, ಅಮ್ಮಗೊಪ್ಪಿದ ಅಳಿಯ,
ಅಪ್ಪನಿಗು ಬಲು ಮೆಚ್ಚು ನನ್ನ ಬಾವ ||
ನನ್ನ ಮನದಲು ಒಂದು ಸವಿಯಾದ ಮೆಚ್ಚಿಗೆಯು
ತಪ್ಪೇನು ? ಎನುತಲಿದೆ ನನ್ನ ಭಾವ || ೪ ||
ಅಕ್ಕ ಬಾವನ ನೋಡಿ ಮನವಿಂದು ಅರಳುತಿದೆ
ಮಲ್ಲಿಗೆಯ ಹೂವಂತೆ ಗಂಧ ಬೀರಿ ||
ಗುಪ್ತಗಾಮಿನಿಯಾಗಿ ಪ್ರೇಮರಸ ಹರಿಯುತಿದೆ
ಮನದಲ್ಲಿ ಹೊಸಭಾವ ಕಾವನೇರಿ || ೫ ||
ಬಾವ ನೋಡಿಹರಂತೆ ನನಗಾಗಿ ಗಂಡೊಂದ
ಸುಳ್ಳು ನುಡಿಯರು ಎಂದು ನನಗೆ ಗೊತ್ತು ||
ಆ ಹುಡುಗನೂ ಕೂಡ ಬಾವನನು ಹೋಲುವನೆ ?
ಎಂದು ಮನ ಕೇಳಿಹುದು ಮತ್ತು ಮತ್ತು || ೬ ||
- ಸುರೇಖಾ ಭೀಮಗುಳಿ
13/06/2016
ಚಿತ್ರ : ಅಂತರ್ಜಾಲ
ಕೆಲವು ಕವಿಗಳ ಕವನ ಕೊಳಗತಪ್ಪಲೆಯಂತೆ
ಮೇಲಿಂದ ಕೆಳವರೆಗೆ ಒಂದೆ ಮಾಟ ||
ಅಂಕುಡೊಂಕುಗಳಿಲ್ಲ ಲಾಲಿತ್ಯವಿನಿತಿಲ್ಲ
ಕೊನೆಯ ಅಕ್ಷರ ಮಾತ್ರ ಒಂದೆ ನೋಟ || ೧ ||
ಇನ್ನು ಕೆಲವರ ಪದ್ಯ ಗದ್ಯಗಳ ಹರಿದಂತೆ
ರಾಗ-ಪ್ರಾಸದ ಇನಿತು ಸ್ಪರ್ಶವಿಲ್ಲ ||
ಏನು ಹೇಳಲು ಇವರು ಹೊರಟಿಹರು ಎಂಬುದನು
ಅರಿಯದೆಲೆ ನಾ ಸೋತು ಹೋದೆನಲ್ಲ || ೨ ||
ಇನ್ನು ಕೆಲವರ ಕವಿತೆ ನಾಲ್ಕಾರು ಪದಕುಸುಮ
ಚುಟುಕು-ಗುಟುಕುಗಳೆಂದು ಇವರ ಸೊಲ್ಲು ||
ಬಾಯ್ವರೆಗೆ ಬಂದದ್ದು ಉದರ ತಲಪುವುದಿಲ್ಲ
ಅಷ್ಟರಲಿ ಆ ಕವನ ಮುಗಿದು ಹೋಯ್ತಲ್ಲ || ೩ ||
ಮತ್ತೆ ಕೆಲವರ ಕಾವ್ಯ ಕಬ್ಬಿಣದ ಕಡಲೆಗಳು
ಅರಗಿಸಲು ಸಾಧ್ಯವೇ ಪಾಮರರಿಗೆ ? ||
ಮಿತಿಯ ಜ್ಞಾನವ ಪಡೆದ ನನ್ನಂಥ ಕವಿ(ಪಿ)ಗಳಿಗೆ
ಮೆದುಳಿಗೆಟಕುವುದಿಲ್ಲ ಇವರ ಗುಳಿಗೆ || ೪ ||
ಕವನವೆಂಬುದು ನಮ್ಮ ಮುದ್ದು ಹೆಣ್ಮಗಳಂತೆ
ಬೇಕೆನಿಸದೇ ಕೊಂಚ ಒನಪು ಒಯ್ಯಾರ ? ||
ಜಡೆಹೆಣೆದು ಹೂಮುಡಿಸಿ ಲಂಗ ದಾವಣಿ ತೊಡಿಸಿ
ದೃಷ್ಟಿ ತೆರೆದರೆ ಆಯ್ತು ಅವಳ ಸಿಂಗಾರ || ೫ ||
- ಸುರೇಖಾ ಭೀಮಗುಳಿ
03/06/2016
ಚಿತ್ರ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
ಗುಡುಗುಡನೆ ಗುಡುಗುಡನೆ ಬಾನು ಗುಡುಗುತ್ತಿಹುದು
ಆರ್ಭಟವು ಕೇಳುತಿದೆ ಬಾನ ಬಯಲಿಂದ ||
ಯಾರೆಲ್ಲರಿಗೆ ಬೇಕು ವರ್ಷ ಕಾಲದ ಸೊಬಗು
ಬನ್ನಿರೈ ನಮ್ಮನೆಗೆ ನಿಮ್ಮ ಊರಿಂದ || ೧ ||
ಪಳಪಳನೆ ಪಳಪಳನೆ ಬೆಳಕೊಂದು ಮಿಂಚುತಿದೆ
ಕಣ್ಣು ಕೋರೈಸಿಹುದು ಬಲು ಸೊಗಸಿನಿಂದ ||
ಯಾರೆಲ್ಲರಿಗೆ ಬೇಕು ವರ್ಷಕಾಲದ ಚಿತ್ರ
ಅರ್ಜಿಯನು ಸಲ್ಲಿಸಿರಿ ನಿಮ್ಮ ಕಡೆಯಿಂದ || ೨ ||
ರಪರಪನೆ ರಪರಪನೆ ಜಲಧಾರೆ ಸುರಿಯುತಿದೆ
ಆಗಸದ ಒಡೆಯನಾ ಹಸ್ತದಿಂದ ||
ಯಾರೆಲ್ಲರಿಗೆ ಬೇಕು ವರ್ಷರಾಯನ ಕರುಣೆ
ನಮಿಸ ಬನ್ನಿರಿ ಹಾಗೆ ಭಕ್ತಿಯಿಂದ || ೩ ||
- ಸುರೇಖಾ ಭೀಮಗುಳಿ
01/06/2016
ಚಿತ್ರ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli