Wednesday, September 30, 2015

" ಜೋಕಾಲಿಯ ಜೋಗುಳದಲ್ಲಿ "

" ಜೋಕಾಲಿಯ ಜೋಗುಳದಲ್ಲಿ "
****************************
ಬಲಭಾಗದಲ್ಲಿಹುದು ಅಟ್ಟ ಹತ್ತುವ ಏಣಿ
ಅದರಾಚೆ ಮೆರೆಯುತಿದೆ ಮುರದ ಒಲೆಯು ||
ಹಸಿಹುಲ್ಲು ಕಡಿಅಕ್ಕಿ ತೌಡನ್ನು ಬೇಯಿಸಲು
ಅದರಿಂದ ಬರುತಿಹುದು ಮುರದ ಘಮಲು || 1 ||

ಹಿಂದೆ ಭತ್ತದ ಪಣಥ ಎಡಕೆ ಹೊರಗಿನ ದ್ವಾರ
ಮುಂಭಾಗದಲ್ಲಿಹುದು ಹಸು ಕೊಟ್ಟಿಗೆ ||
ಅಟ್ಟದೆತ್ತರದಿಂದ ಇಳಿದು ಬಂದಿದೆ ಹಗ್ಗ
ಅದರೆ ಮೇಲಿಟ್ಟಿಹೆವು ಮರದ ಹಲಗೆ || 2 ||

ಜೋಕಾಲಿಯಲಿ ಕುಳಿತು ಜೀಕುವಾ ಮೋಜೇನು
ಸಮಯ ಕಳೆಯಲು ಇರುವ ಏಕದಾರಿ ||
ಬೇಸರಕು, ಸಂತಸಕು, ಕೋಪದುಪಶಮನಕ್ಕು
ಜೋಕಾಲಿ ಸಹಚರ್ಯ ನಮಗೆ ಹೆದ್ದಾರಿ || 3 ||

ಜೀಕಿದಾ ರಭಸಕ್ಕೆ ಹಗ್ಗ ತಪ್ಪಿತು ಮಣೆಯು
ಭೂತಾಯಿ ಜೊತೆಯಲ್ಲಿ ನನ್ನ ಜೋಡು ||
ಕೆಳ ಜಾರಿ ಬಿದ್ದರೂ 'ಅಯ್ಯೋ' ಎನ್ನುವರಿಲ್ಲ
ನನ್ನ ಸಂತೈಸಿಹುದು ಅಟ್ಟದಾ ಮಾಡು || 4 ||

- ಸುರೇಖಾ ಭೀಮಗುಳಿ
30/09/2015
ಚಿತ್ರಕೃಪೆ : ಅಂತರ್ಜಾಲ

Monday, September 28, 2015

" ನರಕದ ದಾರಿ "

" ನರಕದ ದಾರಿ "
**************
ಹಬ್ಬದ ನೆನಪಲಿ ಖುಷಿಯಲ್ಲೊಮ್ಮೆ
ಹೊರಟೆನು ನಾನು ಬೀದಿಯಲಿ ||
ಕಂಡವು ಕುರಿಗಳು ರಸ್ತೆರಸ್ತೆಯಲಿ
ನಮ್ಮಯ ಬೆಂಗ್ಳೂರ್ ಪೇಟೆಯಲಿ || 1 ||


ಕಡುಬಿನ ಸವಿಯದು ಆರಿಯೆ ಇಲ್ಲವೆ
ವಾರದ ಹಿಂದಿನ ಸಿಹಿಯೂಟ ||
ಹೊಟ್ಟೆಯು ತೊಳೆಸಿತು ಮನ ಕಹಿಯಾಯಿತು
ಕೊಬ್ಬಿದ ಕುರಿಗಳ ಮಾರಾಟ || 2 ||


ಮಾಂಸದ ಅಂಗಡಿ ದರ್ಶನ ಮಾತ್ರದಿ
ಹೊಟ್ಟಯ ಒಳಗೇ ಸಂಕಟವು ||
ಮನೆಯ ಒಳಗಡೆ ಮಾಡಿದರಾಗದೆ
ಬೀದಿಯಲೇಕೆ ಪ್ರದರ್ಶನವು ? || 3 ||


ಸಿಂಹವು ತಿನ್ನದು ಸಸ್ಯಾಹಾರವ
ಎನ್ನುವ ಸತ್ಯದ ಅರಿವುಂಟು ||
ಕೊಲ್ಲುವ ಮೊದಲೇ ಹಿಂಸೆಯ ಕೊಡದಿರಿ
ಎನ್ನುವ ಬೇಡಿಕೆ ನನದುಂಟು || 4 ||


ಕೋಳಿಯ ಒಯ್ವರು ವಸ್ತುವಿನಂದದಿ
ಕಾಲನು ಕಟ್ಟುತ ತಲೆಕೆಳಗೆ ||
ಕರುಣೇ ಎನ್ನುವ ಪದವನೆ ಅರಿಯರೆ ?
ಪಾಪಿಗಳಲ್ಲವೆ ಈ ಧರೆಗೆ ? || 5 ||


ಅಸುರರ ತಿದ್ದಲು ಹರಿಯೇ ಸೋತನು
ಅವನೆದುರು ನಾವ್ ಹುಲುಕಡ್ಡಿ ||
ಮಾಂಸಭಕ್ಷಕರ ತಿದ್ದಿಲಾಗುವುದೇ ?
ತುಂಬಿದೆ ತಲೆಯಲಿ ಬರಿಮಡ್ಡಿ || 6 ||


ಗಿಡವದು ಫಲವನು ಬಿಡುವುದೆ ತಿನ್ನಲು
ಎನ್ನುವ ಸತ್ಯದ ಅರಿವಿಹುದು ||
ಮಾಂಸವ ತಿನ್ನುವ ಅಗತ್ಯ ಇದೆಯೇ ?
ಎನ್ನುವ ಸಮಸ್ಯೆ ಕಾಡಿಹುದು || 7 ||


ಸಸ್ಯಾಹಾರದ ಬೆಲೆಯನು ಅರಿಯಿರಿ
ಸಾತ್ವಿಕ ಗುಣವೂ ಬೆಳೆಯುವುದು ||
ತಾಮಸ ಗುಣವನು ಹೊಂದಿದಿರಾದರೆ
ನರಕದ ದಾರಿಯು ಸೆಳೆಯುವುದು || 8 ||


- ಸುರೇಖಾ ಭೀಮಗುಳಿ
25/09/2015
ಚಿತ್ರಕೃಪೆ : ಅಂತರ್ಜಾಲ

" ಹಬ್ಬಗಳ ನೆನಪು "

" ಹಬ್ಬಗಳ ನೆನಪು "
****************

ಸಂಕ್ರಾಂತಿ ನೆನೆಸಿತು ಸುಗ್ಗಿಯ ಸಂಭ್ರಮ
ಹೊಸಧಾನ್ಯಗಳ ರಾಶಿಯನು ||
ಯುಗಾದಿ ತಂದಿತು ನವೀನ ವರುಷವ
ಬೇವ್ಬೆಲ್ಲದ ಸಿಹಿ ಕಹಿಯನ್ನು || 1 ||


ದೀಪಾವಳಿಯಾ ಸಂಭ್ರಮ ಬೆಸೆಯಿತು
ಡಂಡಂಗುಟ್ಟುವ ಪಟಾಕಿಯು ||
ಗೌರೀ -ಗಣಪತಿ ಜೊತೆಯಲಿ ಬೆರೆತವು
ಕಡಬೂ ಕಜ್ಜಾಯ ಮೋದಕವು || 2 ||


ಕ್ರಿಸ್ಮಸ್ ಹಬ್ಬವು ಕೇಕನು ನೆನೆಸಿತು
ಚರ್ಚಿನ ದೀಪದ ಸರಮಾಲೆ ||
ಕ್ರಿಸ್ಮಸ್ ಮರವೂ ಕಣ್ಮನ ಸೆಳೆಯಿತು
ಮೇರಿಯಮ್ಮನಾ ಎಳೆಬಾಲೆ || 3 ||


ರಂಜಾನ್ ಹಬ್ಬದ ಸಂಭ್ರಮ ತೋರಿತು
ನೆನೆಸಿತು ಹಗಲಿನ ಉಪವಾಸ ||
ಬಕ್ರೀದ್ ಹಬ್ಬವು ಕಣ್ಮುಂದೆ ತಂದಿತು
ಕೊಬ್ಬಿದ ಮೇಕೆಯ ಹಸಿಮಾಂಸ || 4 ||


- ಸುರೇಖಾ ಭೀಮಗುಳಿ
25/09/2015
ಚಿತ್ರಕೃಪೆ : ಅಂತರ್ಜಾಲ

Wednesday, September 23, 2015

" ಮೊದಲ ಬಾಣಂತನದ ಸೊಬಗು "


" ಮೊದಲ ಬಾಣಂತನದ ಸೊಬಗು "
*********************************

ಮಗುವಿನಾಗಮನದಾ ನಿರೀಕ್ಷೆಯು ನಮಗಿತ್ತು
ಊರಿನಲಿ ಕಾದದ್ದು ನನ್ನತ್ತಿಗೆ ||
'ಬಾಣಂತಿ ಕಾಡ'ವದು ನನಗಾಗಿ ಕಾದಿತ್ತು
ಗಸಗಸೆಯ ಲೇಹವು ಅದರೊಟ್ಟಿಗೆ || 1 ||

ಒಂಟಿ ಮಂಚದ ಮೇಲೆ ನನ್ನ ಬಾಣಂತನವು
ಪುಟ್ಟನಿಗೆ ಕಟ್ಟಿದ್ದು ಸೀರೆ ಜೋಲಿ ||
ಸುತ್ತು ಔಷಧಿ ಅರೆದು ಮಗುವಿಗಿತ್ತಳು ತಾಯಿ
ಅತ್ತಿಗೆಯ ಹೊಟ್ಟೆಯೂ ತಣ್ಣಗಿರಲಿ || 2 ||

ತುಪ್ಪದನ್ನದ ಜೊತೆಗೆ ಸೀಗೆ ಸೊಪ್ಪಿನ ಸಾರು
ನನಗಿಂತ ಇಷ್ಟವದು ನನ್ನವರಿಗೆ ||
ಬಾಣಂತಿ ಯಾರೆಂದು ಅತ್ತಿಗೇ ನಕ್ಕಳೋ
ಸಾರು ಮುಗಿದೇ ಹೋಯ್ತು ಅಷ್ಟೊತ್ತಿಗೆ || 3 ||

ಕಾಳುಜೀರಿಗೆ ಎಣ್ಣೆ ಮೈಗೆ ಮೆತ್ತುವುದಕ್ಕೆ
ಬಚ್ಚಲಿನ ಹಂಡೆಯಲಿ ಬಿಸಿಯ ನೀರಿತ್ತು ||
ಮಿಂದು ಬರುತ್ತಿದಂತೆ ಹೊದ್ದು ಮಲಗುವ ಶಿಕ್ಷೆ
ಮೈ ಚಟ್ಟುತ್ತಿಲ್ಲವೇ ಎಂಬ ಕೊರಗಿತ್ತು || 4 ||

ಮಲೆನಾಡ ಚಳಿಯಲ್ಲಿ ಅರಳಿತೋ ಹೊಸಬಾಲ್ಯ
ಮನಸೆಲ್ಲ ಬೆಂಗ್ಳೂರ ಹಾದಿಯೊಡನೆ ||
ಎಂಬತ್ತು ದಿನದಲೇ ಎದ್ದು ಹೊರಟೇ ಬಿಟ್ಟೆ
ಮದ್ದು ಮಗುವಿನ ಜೊತೆಗೆ ಗಂಡನೊಡನೆ || 5 ||

- ಸುರೇಖಾ ಭೀಮಗುಳಿ
23/09/2015

Saturday, September 19, 2015

" ನಮ್ಮ ಮನೆಯ ಅಟ್ಟ"

" ನಮ್ಮ ಮನೆಯ ಅಟ್ಟ"
**********************

ಮನೆಯ ಮೇಲಿನ ಅಟ್ಟ ಬಿಸಿ-ಮಸಿಯ ಜಾಗವದು
ಹಳೆಪಾತ್ರೆ ಬೇಡದಾ ವಸ್ತುಗಳ ಜಾತ್ರೆ ||
ವರ್ಷಕ್ಕೊಂದಾವರ್ತಿ ಸ್ವಚ್ಚಗೊಳಿಸುವ ತಾಣ
ಮನದಲ್ಲಿ ನೆನಪುಗಳ ತೀರ್ಥಯಾತ್ರೆ || 1 ||

ಉಪ್ಪಿನಾ ಕಾಯಿಯಾ ಭರಣಿಯೂ ಇಹುದಿಲ್ಲಿ
ದೊಡ್ಡ ಮಡಕೆಯಲಿರುವ ಉಪ್ಪಿನೊಡನೆ ||
ಹಣ್ಣು ಮಾಗಲು ಇಡುವ ಬೆಚ್ಚಗಿನ ಜಾಗವಿದು
ಡಬ್ಬಿಗಳು ಕುಳಿತಿಯವು ಹಂಡೆಯೊಡನೆ || 2 ||

ಕೊಟ್ಟೆಗೆಯ ಮೇಲಿನ ಅಟ್ಟದಾ ನೆನಪಿಹುದು
ಧೂಳಿನಾ ಮಧ್ಯದಲಿ ಜ್ಞಾನಭಂಡಾರ ||
ಬೈಹುಲ್ಲ ನಡುವಿನಲಿ ಕದ್ದು ಕುಳಿತಿಹ ಬೆಕ್ಕು
ಮರಿಗಳಾ ಜೊತೆಯಲ್ಲಿ ಪುಟ್ಟ ಸಂಸಾರ || 3 ||

ಹೆಂಚಿನಾ ಮಾಡಿನಲಿ ಗಾಜಿನಾ ಬೆಳಕಿಂಡಿ
ಅದಕೂನು ಮೆತ್ತಿಹುದು ಒಂದಿಷ್ಟು ಧೂಳು ||
ಮಬ್ಬು ಬೆಳಕಲ್ಲಿಯೇ ಓದುವಾ ಹುನ್ನಾರ
ಕುಳಿತಿರಲು ಮೆಲ್ಲುತ್ತ ಹುರಿದ ಕಾಳು || 4 ||

- ಸುರೇಖಾ ಭೀಮಗುಳಿ
19/09/2015
ಚಿತ್ರ :  Lavina D'souza

Saturday, September 12, 2015

" ಬಾವಲಿಯೊಡನೊಂದು ಸಂವಾದ "

" ಬಾವಲಿಯೊಡನೊಂದು ಸಂವಾದ "
****************************

ಬಾವಲಿಯೊಂದು ಹಲಸಿನ ಮರದಲಿ
ತಲೆಕೆಳಗಾಗಿ ನೇಲಿಹುದು ||
ನಮ್ಮನು ಕಂಡು ಹೆದರಿತೊ ಏನೋ
ಭಯದಲಿ ಕಣ್ ಕಣ್ ಬಿಡುತಿಹುದು || 1 ||

ಹೆದರಿಕೆ ಯಾಕೆ ? ನಾಚಿಕೆ ಬೇಕೆ ?
ಹೇಳುವೆಯೇನು ನಿನ್ನ ಕಥೆ ? ||
ವಿಷಯ ತಿಳಿಯುವ ಆಸೆಯು ನನಗಿದೆ
ಅರಿಕೆ ಮಾಡಿಕೊ ನಿನ್ನ ವ್ಯಥೆ || 2 ||

’ಪುಟ್ಟ ಸಸ್ತನಿ’ ನಿನ್ನದೇ ಬಿರುದು
ಗೊತ್ತೇ ನಿನಗೆ ಬಾವಲಿಯೆ ? ||
ನಿಶಾಚರಿ ಎಂಬ ಕೀರ್ತಿಯು ನಿನಗಿದೆ
ಜೈ ಜೈ ನಿರ್ಭಯ ಸಾಹಸಿಯೆ || 3 ||

ಪಾಳು ಮನೆಗಳು ನಿನ್ನದೇ ಠಾವು
ಎನ್ನುವ ವಿಷಯ ಅರಿತಿರುವೆ ||
ಮಾಡಿನ ಪಕಾಸಿಗೆ ನೇತಾಡುತ್ತ
ಮಗುವನು ಹೇಗೆ ಸುಧಾರಿಸುವೆ ? || 4 ||

- ಸುರೇಖಾ ಭೀಮಗುಳಿ
12/09/2015
ಚಿತ್ರ : ಸುಮಂತ ಭೀಮಗುಳಿ

Friday, September 11, 2015

" ಕಂದಗೊಂದು ಬುಟ್ಟಿ "

" ಕಂದಗೊಂದು ಬುಟ್ಟಿ "
******************

ತೊಟ್ಟಿಲಲ್ಲಿ ನಗುವ ಮಗುವ
ಬುಟ್ಟಿಯಲ್ಲಿ ಹಾಕಿಕೊಂಡು
ಒಟ್ಟು ನೂಕಿ ಒಯ್ವರಲ್ಲ
ಕೆಟ್ಟ ಬೇಸರ || 1 ||

ಎತ್ತಿಕೊಳಿರಿ ಎನಲು ಬರದ
ಹೊತ್ತುಕೊಳದೆ ಮುದ್ದು ಮಗುವ
ವಸ್ತುವಂತೆ ಕಾಣ್ವರಲ್ಲ
ಸುಸ್ತು ಸಂಕಟ || 2 ||

ಕಂದಗೊಂದು ಬುಟ್ಟಿಯೇಕೆ ?
ಚಂದವಾಗಿ ಎತ್ತಿಕೊಂಡು
ಮಂದಗಮನವಾದರೂನು
ಅಂದವಲ್ಲವೇ ? || 3 ||

ಎಳವೆಯಲ್ಲಿ ಎತ್ತಬೇಕು
ಬೆಳೆದ ಮಗುವು ಕೇಳ್ವುದೇನು
ಕಳೆದ ಬಾಲ್ಯ ಮತ್ತೆ ಮತ್ತೆ
ಮೊಳೆಯಲಾರದು  || 4 ||

ಪುಟ್ಟ ಮಗು ನಿಮದೆ ಸಿರಿಯು
ಬೆಟ್ಟದಷ್ಟು ಭಾರವಿಲ್ಲ
ಉಟ್ಟಬಟ್ಟೆ ನೆರಿಗೆ ಬಿದ್ದ
ರಷ್ಟು ಚಿಂತೆಯೇ ? || 5 ||

ಕಂದನನ್ನು ಎತ್ತಿಕೊಳಿರಿ
ಹೃದಯ ಹೃದಯ ಬೆಸೆದುಕೊಳಿರಿ
ಇಂದು ಖುಷಿಯು, ನಾಳೆ ಹೇಗೊ
ಮಂದಮತಿಗಳೇ || 6 ||

- ಸುರೇಖಾ ಭೀಮಗುಳಿ
11/09/2015
ಚಿತ್ರಕೃಪೆ : ಅಂತರ್ಜಾಲ

Monday, September 7, 2015

"ಗೋಕುಲದ ದಾರಿಯಲ್ಲಿ"

"ಗೋಕುಲದ ದಾರಿಯಲ್ಲಿ"
********************

ಗೋಕುಲದ ದಾರಿಯಲಿ ಗೋಧೂಳಿ ಸಮಯದಲಿ
ಗೋವು- ಗೆಳೆಯರ ಜೊತೆಗೆ ಕೃಷ್ಣನೊಡನೆ ||
ಗೋವಿಂದನಾ ಕೊಳಲ ನಾದದಲಿ ಮೈಮರೆತು
ಗಾನ ವೈಭವ ಸವಿವ ಸಕಲರೊಡನೆ || 1 ||

ಯಮುನೆಯಾ ತಟದಿಂದ ಬೀಸಿತದೊ ತಂಗಾಳಿ
ಬೆರೆಯುತಿದೆ ಮುರಲಿಯಾ ಇಂಪಿನೊಡನೆ ||
ಮುದ್ದು ಮೊಗದಾ ಹಸುವು "ಅಂಬಾ" ಎನ್ನುತ್ತಲಿದೆ
ಗಾಯನದಿ ಜೊತೆಗೊಡುತ ಕೊಳಲಿನೊಡನೆ || 2 ||

ಚಂಪಕದ ಪರಿಮಳವು ಪಸರಿಸಿದೆ ವನವನ್ನು
ನಾಸಿಕದ ಹೊಳ್ಳೆಗಳು ಅರಳವೇನು ? ||
ಸೂರಗೆಯ ಕಂಪದೋ ತಾ ತೇಲಿ ಬರುತಲಿದೆ
ಮೈಯ ಮರೆಸುವ ಸಂಚು ಇರುವುದೇನು ? || 3 ||

ಸಂಜೆಗತ್ತಲ ಹೊತ್ತು ಬಹುಬೇಗ ಬಂದಿಹುದು
ಯಾಕಿಷ್ಟು ಅವಸರವೋ ನೇಸರನಿಗೆ ? ||
ಅರೆಗಳಿಗೆ ತಾಳಿಕೋ ನಮ್ಮೊಡನೆ ನಲಿದಾಡು
ಗೋಪಾಲನಾ ಸಖ್ಯವಿರುವವರೆಗೆ ! || 4 ||

- ಸುರೇಖಾ ಭೀಮಗುಳಿ
05/09/2015
ಚಿತ್ರಕೃಪೆ : ಅಂತರ್ಜಾಲ