Tuesday, July 28, 2015

" ಓ ಕಲಾಂ ... ನಿನಗೆ ಸಲಾಂ..... ರಾಷ್ಟ್ರಪುರುಷನಿಗೊಂದು ನಮನ "

ನೀ ಏರಿದೆತ್ತರವ ಕಂಡು ಬೆರಗಾಗಿಹೆನು
ಸಲ್ಲಿಸುವೆ ನಿನ್ನಲ್ಲಿ ನನ್ನ ನಮನ ||
ಭಾರತಾಂಬೆಯ ಮಡಿಲ ಹೆಮ್ಮೆಯಾ ಪುತ್ರನೇ
ಶ್ರದ್ಧಾಂಜಲಿಯು ನಿನಗೆ ನನ್ನ ಕವನ || 1 ||

ಕನಸ ಕಾಣುವುದನ್ನು ಹೇಳಿಕೊಟ್ಟಿಹೆ ನೀನು
’ವಿಶ್ವಗುರು’ ಕನಸಿಹುದು ನನ್ನ ಮನದೆ ||
ಭಾರತಾಂಬೆಯು ಇನ್ನು ತಲೆಎತ್ತಿ ನಿಲ್ಲುವಳು
ಪೂರ್ವದಲೆ ನೀನೇಕೆ ನಿರ್ಗಮಿಸಿದೆ ?  || 2 ||

ಗುರುವನಾರಾಧಿಸುತ ಗುರು ಸ್ಥಾನಕ್ಕೇರಿದೆ
ಎಲ್ಲರಾ ಪ್ರೀತಿಯನು ನೀ ಗಳಿಸಿದೆ ||
ಪ್ರತಿಭೆಗಳನರಳಿಸುತ ನಮಗೆ ಮಾದರಿಯಾದೆ
ವಿಜ್ಞಾನ ಪತಾಕೆಯನು ಎತ್ತಿ ಹಿಡಿದೆ || 3 ||

ಮುಗ್ದತೆಗೆ ಇನ್ನೊಂದು ಹೆಸರಾಗಿ ಕಾಣಿಸಿದೆ
ಸರಳತೆಗೆ ರೂಪಕವೆ ನೀನಾಗಿ ಹೋದೆ ||
ತಂತ್ರಜ್ಞಾನದ ಜೊತೆಗೆ ಸಂಸಾರವನು ನಡೆಸಿ
ದೇಶದುದ್ಧಾರಕ್ಕೆ ನಿನ್ನನರ್ಪಿಸಿದೆ || 4 ||

ನಿನ್ನ ಪಾಲಿನ ಕೆಲಸ ಚಂದದಲಿ ನೀ ಮಾಡಿ
ಸಾರ್ಥಕ್ಯಗೊಳಿಸಿದೆ ನಿನಜೀವನ ||
ಪುಣ್ಯಗರ್ಭೆಯು ತಾಯಿ ನನ್ನ ಭಾರತಮಾತೆ
ಮತ್ತೊಮ್ಮೆ ಆಗಲೀ ನಿನ್ನ ಜನನ || 5 ||

- ಸುರೇಖಾ ಭಟ್ ಭೀಮಗುಳಿ
28/07/2015
ಚಿತ್ರಕೃಪೆ : ಇಂಟರ್ ನೆಟ್

Tuesday, July 21, 2015

" ವರುಣದೇವನಿಗೊಂದು ಸಲಹೆ "


ಕಾರ್ಮೋಡ ಮುಸುಕಿತೇ ಮಲೆನಾಡಿನ ಪರಿಸರವ ?
ಹೊರನೋಟವೆಲ್ಲವೂ ಮಸುಕು ಮಸುಕು ||
ಮಳೆರಾಯ ಆವರಿಸಿ ಬಿಗಿದಪ್ಪಿ ಕುಳಿತಿಹನೆ ?
ಸಂಕಟಕೆ ಸಿಕ್ಕಿದೆಯೆ ನಿಮ್ಮ ಬದುಕು ? || 1 ||

ಮಳೆಧಾರೆ ಸುರಿಯುತಿರೆ ರವಿಯು ಮುಷ್ಕರ ಹೂಡೆ
ಆಯ್ತು ಜನ ಜೀವನವು ಅಸ್ತವ್ಯಸ್ತ |
ನಾಲ್ಕು ದಿನ ಕಳೆಯಲಿ - ಹದಗೊಳಲಿ ಪರಿಸ್ಥಿತಿ
ಮಲೆನಾಡ ಜೀವನವೆ ಅತಿ ಪ್ರಶಸ್ತ ! || 2 ||

ಮಳೆಗಾಗಿ ಪರಿತಪಿಸಿ ಕಂಗಾಲು ಆಗಿಹರು
ಬಯಲುಸೀಮೆಯ ಜನರು ಗೊತ್ತೆ ಸ್ವಾಮಿ ? |
ಮಳೆಯಿಲ್ಲ ಬೆಳೆಯಿಲ್ಲ ನೆಲದಲ್ಲಿ ತಂಪಿಲ್ಲ
ಒಣಗಿ ನಿಂತಿಹುದಲ್ಲ ಅವರ ಭೂಮಿ || 3 ||

ಶುದ್ಧ ಗಾಳಿಯ ಹರವು - ಸ್ವಚ್ಛ ನೀರಿನ ಸೆಳವು
ಪ್ರಕೃತಿಯ ಕೃಪೆಯಿಹುದು ಮಲೆನಾಡಿನಲ್ಲಿ ||
ವರುಣದೇವನಿಗೊಂದು ಸಲಹೆಯನು ಕೊಟ್ಟುಬಿಡಿ 
ಸುರಿಯಬಾರದೆ ಬಯಲು ಸೀಮೆಯಲ್ಲಿ ? || 4 ||

- ಸುರೇಖಾ ಭಟ್ ಭೀಮಗುಳಿ
21/07/2015

Friday, July 17, 2015

"ಶುಕ ನೀಡಿದ ಸುಖ"

ರತ್ನಗಂಧಿಗೆ ಗಿಡವು ಮರವಾಗಿ ಶೋಭಿಸಿದೆ
ನಮ್ಮ ಮನೆಯಾ ಎದುರು ಮಣ್ಣಿನಲ್ಲಿ ||
ಕಡಿದೆನಾದರೆ ಅದು ಮತ್ತಷ್ಟು ಚಿಗುರುವುದು
ಆದರೂ ನಾ ಕಡಿಯೆ ಕತ್ತಿಯಲ್ಲಿ || 1 ||

ರತ್ನಗಂಧಿಗೆ ಗಿಡವು ನನ್ನ ಕರೆದುಲಿಯಿತದೊ
ನಿನ್ನ ಪ್ರೀತಿಯ ಗಿಡವು ನಾನುತಾನೆ ? ||
ಕಾಯಿ ಬಿಟ್ಟೆನು ಎಂದು ಕಡಿಯದಿರು ನನ್ನನ್ನು
ಶುಕನೊಲುಮೆಯೂ ನನಗೆ ಪೂಜೆತಾನೆ ? || 2 ||

ದೇವರಾರಾಧನೆಗೆ ಹೂವನೀಯುವುದು ಗಿಡ
ಹರೆಗಳಲಿ ಕಾಯ್ಬಿಟ್ಟು ನಿಂತಿರುವುದು || 
ತನ್ನ ಬೀಜವ ಮೆಲಲು ಶುಕರಾಯ ಬರಬಹುದು
ಎಂಬ ಆಸೆಯನಿಟ್ಟು ಕಾದಿರುವುದು || 3 ||

ಶುಕವೊಂದು ಬಂದಿತ್ತು ಬೀಜವನು ಮೆಲ್ಲಿತ್ತು  
ನನಗಿಡದ ಕಾಯುವಿಕೆ ಫಲ ನೀಡಿತು ||
ರತ್ನಗಂಧಿಗೆ ಮನದ ಬಯಕೆ ಈಡೇರಿತದೊ
ಆ ದೃಶ್ಯ ನನಮನಕೆ ಸುಖ ನೀಡಿತು || 4 ||

- ಸುರೇಖಾ ಭಟ್ ಭೀಮಗುಳಿ
18/07/2015
ಚಿತ್ರ :ಸುಮಂತ ಭೀಮಗುಳಿ

Saturday, July 4, 2015

"ತಿರುವು"

ಪಯಣದಲಿ ತಿರುವುಗಳು ಸಹಜವೋ ಓ ಮನುಜ
ಜಾಗ್ರತೆಯ ಜೊತೆಯಲ್ಲಿ ಮುಂದೆ ಸಾಗು ||
ಸುತ್ತಮುತ್ತಲು ಮಂಜು ಕವಿದು ಕುಳಿತಿಹುದಿಲ್ಲಿ
ದೈವದಾ ಲೀಲೆಯಿದು ತಲೆಯ ಬಾಗು || 1 ||

ಪ್ರಕೃತಿಯ ಸೊಗವನ್ನು ಒಂದುಕ್ಷಣ ಸವಿದುಬಿಡು
ತಡೆಹಾಕು ನಿನ್ನಯಾ ಬಿರು ಓಟಕೆ ||
ಬೇಕು ಎಂದರು ನಾಳೆ ದೊರಕದಿದು ಇನ್ನೊಮ್ಮೆ 
ಉಣಿಸಿಬಿಡು ಹಬ್ಬವನು ನಿನ್ನ ನೋಟಕೆ || 2 ||

ಸಸ್ಯಶ್ಯಾಮಲೆಗಿಂದು ಇಬ್ಬನಿಯ ಮಜ್ಜನಾ
ನೇಸರನ ಕಿರಣಗಳ ಗಂಧ -ಧೂಪ ||
ಮಿಂದು ಮಡಿಯುಟ್ಟು ಶುದ್ಧಳಾದಳು ತಾಯಿ
ತುಂಬಿಕೋ ಮನದಲ್ಲಿ ಅವಳ ರೂಪ || 3 ||

- ಸುರೇಖಾ ಭಟ್ ಭೀಮಗುಳಿ
04/07/2015
ಚಿತ್ರಕೃಪೆ : Vishwas AV - "ನಮ್ ನಗರ" ಗ್ರೂಪ್

Friday, July 3, 2015

" ಭುವನೇಶ್ವರಿ "


ನನ್ನ ಮನದಂಗಳದಿ ಬೆಳೆದಿರುವ ಪುಷ್ಪಗಳ
ಅರ್ಪಿಸಲು ಕಾದಿರುವೆ ಹೃದಯೇಶ್ವರಿ ||
ಜಾಜಿ ಸಂಪಿಗೆ ಕಮಲ ಮಲ್ಲಿಗೆಯ ದಂಡೆಗಳ
ಸ್ವೀಕರಿಸು ಬಾ ತಾಯಿ ಭುವನೇಶ್ವರಿ || 1 ||


ನಾ ಬರೆದ ಕವನಗಳು ಬರಿಬಿಡಿಯ ಹೂವುಗಳು

ಭಾವ ಲೋಕದಲಿ ವಿಹರಿಸಿದ ಪರಿಣಾಮ ||
ಪರಿಪರಿಯ ಪರಿಮಳದ ಬಗೆಬಗೆಯ ಬಣ್ಣಗಳು 
ಅರ್ಪಿಸುವೆ ನಿನ್ನಡಿಗೆ ಮಾಡಿ ಪ್ರಣಾಮ || 2 ||


"ಪ್ರವಾಸ - ಪ್ರಯಾಸ" ನಿಜವಾದ ಕಥನಗಳು

ನಾ ಪಡೆದ ಅನುಭವದ ಹೊನ್ನ ಮೂಟೆ ||
"ಸ್ವಗತಗಳ ಸರಮಾಲೆ" ಪುರಾಣದ ಪಾತ್ರಗಳು
ಪೂರ್ವಜರ ಜೊತೆಯಲ್ಲಿ ನನ್ನ ಹರಟೆ || 3 ||


ಲಘು ಹಾಸ್ಯ ಬರಹಗಳು ಕಲ್ಪನೆಯ ಮಿಶ್ರಬೆಳೆ

ಹಳೆನೆನಪು- ಹೊಸಹುರುಪು- ಮೊಗೆದುಕೊಂಡಷ್ಟು ||
ಹಸಿಸುಳ್ಳು- ಕಟ್ಟುಕತೆ- ಆಮೋದ- ಪ್ರಮೋದ
ಓದುಗರ ಮನವನ್ನು ಸೆಳೆದುಬಿಡಲಿಷ್ಟು || 4 || 


"ಸ್ವಗತಗಳ ಸರಮಾಲೆ" ಕೊರಳಲ್ಲಿನಾ ಹಾರ

ಕವಿತೆಗಳ ಬಿಡಿ ಹೂವು ಪಾದಕಾದೀತೇ ? ||
ಲಘುಹಾಸ್ಯ ಬರಹಗಳು ಕೇಶಕ್ಕೆ ಅಲಂಕಾರ
ಅನುಭವದ ಕಥನಗಳು ನಿನ್ನಿಚ್ಚೆಯಂತೆ || 5 ||

- ಸುರೇಖಾ ಭೀಮಗುಳಿ

04/07/2015
ಚಿತ್ರಕೃಪೆ : ಇಂಟರ್ ನೆಟ್