Tuesday, May 19, 2015

"ಛಂದಸ್ಸಿನ ಅಂದ"


ಕವನಗಳ ಲೋಕದಲಿ ಸಂಚರಿಸಿ ನೋಡಿದರೆ 
ಜಗಣ ಗುರು ಛಂದಸ್ಸಿನಂದ ತಿಳಿಯುವುದು ||
ಹೊಳೆಯ ನೀರಲಿ ಇಳಿದು ಕೈಕಾಲುಬಡಿಯದಿರೆ 
ಈಜೆಂಬ ವಿದ್ಯೆಯನು ಹೇಗೆ ಕಲಿಯುವುದು ? || 1 ||

ಒಮ್ಮೆ ಕಲಿತರೆ ವಿದ್ಯೆ, ಬಿಟ್ಟರೂ ಬಿಡದೆಮ್ಮೆ
ತಾನ್ತಾನೆ ಛಂದಸ್ಸು, ಅಂದ ತೋರುವುದು || 
ಕೈಕಾಲುಗಳ ಕಟ್ಟಿ ನೀರಿನಲ್ಲೆಸೆದರೂ 
ಮನಮಾಡೆ ತಕ್ಷಣದಿ ಬದುಕಿ ಬರಬಹುದು || 2 ||

ಅತಿಯಲ್ಲದಾ ವಿದ್ಯೆ, ಮಿತಿಯಲ್ಲಿನಾ ಜ್ಞಾನ 
ಹದದಲ್ಲಿ ಇವೆಯಲ್ಲ ಪದದ ಸಂಪತ್ತು ||
ಮನಸಿಟ್ಟು ಬರೆಯುವೆನು ಮನದ ಭಾವವನೆಲ್ಲ
ನನ್ನಿಂದ ಬರದಿರಲಿ ಕವನಕಾಪತ್ತು || 3 ||

- ಸುರೇಖಾ ಭಟ್, ಭೀಮಗುಳಿ
19/05/2015

No comments:

Post a Comment