ವೈಶಾಖ ಬಂತೆಂದು ನಿನಗಾರು ಹೇಳಿದರು ?
ತೆಲೆತುಂಬ ಹೂ ಮುಡಿದು ನಿಂತೆಯಲ್ಲೆ ||
ಹನ್ನೊಂದು ಮಾಸಗಳ ತಪವಿಂದು ಮುಗಿದಿಹುದೆ ?
ಸೌಂದರ್ಯ ಸೂಸುತಿಹೆ ಮೀರಿ ಎಲ್ಲೆ || 1 ||
ಎಲ್ಲಿಂದ ಬಂದು ನೀ ನಮ್ಮೂರ ಸೇರಿದೆಯೋ
ಈ ನೆಲದ ಗಟ್ಟಿತನ ಹೊಂದಲಿಲ್ಲ ||
ಬಿರುಗಾಳಿ ಮಳೆಯೆಂದು ಕೊಂಬೆ ರೆಂಬೆಯೆ ಮುರಿದು
ಧರೆಗುರುಳುವುದೇಕೆ ತಿಳಿಯಲಿಲ್ಲ || 2 ||
ವರ್ಷಕೊಂದಾವರ್ತಿ ಬುಟ್ಟಿಗಟ್ಟಲೆ ಹೂವು
ಹೆಣ್ಣಿನಾ ಮುಡಿಯನ್ನು ಏರಲಿಲ್ಲ ||
ರಕ್ತವರ್ಣದ ಪುಷ್ಪ ಪರಿಪೂರ್ಣವಾದರೂ
ದೇವರಾ ಪೂಜೆಯಲಿ ಸಲ್ಲಲಿಲ್ಲ || 3 ||
-ಸುರೇಖಾ ಭೀಮಹುಳಿ
18/05/2015
ಚಿತ್ರಕೃಪೆ : ಇಂಟರ್ ನೆಟ್
No comments:
Post a Comment