Wednesday, June 14, 2017

ಹೂ ಹುಡುಗಿ ........


ಮಾರುದ್ದ ಹೂಕೋದು ಬುಟ್ಟಿಯಲಿ ತುಂಬಿಸುತ
ಮಾರಹೊರಟಿಹಳವಳು ಹೂವ ಹುಡುಗಿ ||
ದಾರಿಯಲಿ ಕಂಡೆಲ್ಲ ಮಂದಿಯಲಿ ಕೋರುವಳು
ಬಾರಿ ಚಂದದ ಮೊಲ್ಲೆ - ಕೊಳ್ವರಾಗಿ || ೧ ||


ಕಾರಿನಲಿ ಬಂದವರೆ ಹೂವು ಬೇಡವೆ ನಿಮಗೆ ?
ಸೀರೆಯೊಡತಿಯೆ ಕೊಂಚ ಹೂವ ಕೊಡಲೆ ? ||
ಚೂರು ಹೂ ಮುಡಿಗೇರೆ ಎಂಥ ಲಕ್ಷಣ ನೀವು !
ದಾರಿಹೋಕರ ದೃಷ್ಟಿ ತೆಗೆದು ಬಿಡಲೆ ? || ೨ ||


ಕೆಲಜನರು ಹೇಳುವರು ಕೈಯಳತೆ ಕಿರಿದಾಯ್ತು
ಹಲವು ಮಂದಿಗೆ ಬೇಡವವಳ ಹೂವು ||
ಮಲತಾಯಿ ಕಾಟದಲಿ ಬೆಂದಿರುವ ಮೃದುಮನವು
ತಲೆಯೊಳಗೆ ಚಿಂತೆಗಳು ಬಿಡದ ನೋವು || ೩ ||


ಸರಳ ಮನಸಿನ ಹುಡುಗ ಮೊಳ ಹೂವ ಕೊಳ್ಳುತಲಿ
ಬಿರಿದಿತ್ತು ಸಂತಸದಿ ಹುಡುಗಿ ಮೊಗವು ||
ದರದ ಮುಖ ನೋಡದೆಲೆ ಹೂವ ಕೊಳ್ಳುವರಿರಲು
ಮರೆಯಿತಂದಿನ ಕಷ್ಟವರಳಿ ನಗುವು || ೪ ||


ಕೊಂಡು ಕಟ್ಟಿದ ಹೂವು ಮಾರಿ ಮುಗಿಸುವ ಮುನ್ನ
ಉಂಡು ಮಲಗುವ ಯೋಗವಾಕೆಗಿಲ್ಲ ||
ಕೊಂಡುಕೊಳ್ಳಲು ಮಂದಿ- ಹಗುರಾಯ್ತು ಹೂಬುಟ್ಟಿ
ಬೆಂಡಾಯ್ತು ಹೂಹುಡುಗಿ - ಮೊಲ್ಲೆಯಲ್ಲ ! || ೫ || 


- ಸುರೇಖಾ ಭೀಮಗುಳಿ
14/06/2017
ಚಿತ್ರ : ಅಂತರ್ಜಾಲ
ಸ್ಫೂರ್ತಿ : ’ಸಹೆ’ ಕವನಗಳು

ನಂದೂ - ಮೋಹಿನಿದೂ ಕಥೆ !


ಕಬ್ಬ ಹಬ್ಬದ ಹೆಳೆಯ ಹಿಡಿಯುತ
ಬಂದ ಗೆಳತಿಯು ಮೋಹಿನಿ ||
ನಮ್ಮ ಊರಿನ ಹಲಸು ತೋಟದಿ
ಸವಿದ ಸ್ನೇಹದ ಮಧುಹನಿ || ೧ ||


ವನವಿಹಾರದಿ ದಾಳಿಯಿಟ್ಟವು
ಸೊಳ್ಳೆ ದಂಡದು ಒಮ್ಮೆಗೆ ||
ಕಚ್ಚಿದೊಡನೆಯೆ ಪ್ರಾಣ ಬಿಟ್ಟವು
ನಮ್ಮ ಮುದ್ದಿನ ಪೆಟ್ಟಿಗೆ || ೨ ||


ಸಣ್ಣ ಗುಜ್ಜೆಯ ಬಲಿತ ಕಾಯಿಯ
ಹಲಸು ಹಣ್ಣನು ಕೊಂಡಳು ||
ಅಲ್ಲೆ ಮೇಯುತಲಿದ್ದ ಹಸುವನು
ಬಿಡದೆ ಮುದ್ದಿಸಿ ಹೋದಳು || ೩ ||


ಹಲಸು ಬಾಗಿನ ಕೊಟ್ಟು ಕಳಿಸಿಹೆ
ನಮ್ಮ ಸರಸತಿ ಕೂಸಿಗೆ ||
ನಮ್ಮನೆಲ್ಲರ ನೆನೆದು ಸವಿಯಲಿ
ಗುಜ್ಜೆ ಪಲ್ಯವ ಮೆಲ್ಲಗೆ || ೪ ||


- ಸುರೇಖಾ ಭೀಮಗುಳಿ
13/06/2017
ಚಿತ್ರ : ರಾಮಕೃಷ್ಣ ದಾಮ್ಲೆ ಸರ್

Tuesday, June 6, 2017

" ಶೃಂಗಾರ ಗೀತೆ ! "



ಈ ವಯಸ್ಸಲ್ಲಿ ಶೃಂಗಾರ ಗೀತೆ ಬರೀಬಾರ್ದಾ ? ಬರೆಯೋದಕ್ಕೆ ಏನಡ್ಡಿ ?
ವಯಸ್ಸಿಗೂ ರಚಿಸುವ ಕವನಕ್ಕೂ ಸಂಬಂಧ ಇದೆಯಾ ?
ಪ್ರಬುದ್ಧತೆಯ ಈ ವಯಸ್ಸಲ್ಲಿ ಪ್ರೀತಿ-ಪ್ರೇಮದ ಬಗ್ಗೆ ಬರೆದರೆ ಸರಿ ಕಾಣಲ್ಲ ಅನ್ಸತ್ತೆ ನಂಗೆ !
ಅಷ್ಟಕ್ಕೂ ’ಶೃಂಗಾರ’ ಅಂದರೆ ಏನು ? ಅಲಂಕಾರ ಅಂಥ ಅರ್ಥ. ಅಷ್ಟೇ ತಾನೆ ?
ಅನುಪ್ರಾಸ - ಅಂತ್ಯಪ್ರಾಸದೊಂದಿಗೆ ನನ್ನದೊಂದಿಷ್ಟು ಪ್ರಯತ್ನ...
ತಪ್ಪಿದ್ರೆ ನಂಗೇಳಿ.... ತಿದ್ದೋಣ್ವಂತೆ.....

" ಶೃಂಗಾರ ಗೀತೆ ! "
=====================
ನನ್ನ ಕೇಶದ ಗಂಧ ಘಮ್ಮೆಂದರೂ ಕೂಡ
ಚೆನ್ನಮಲ್ಲಿಗೆ ದಂಡೆ ಬೇಕು ಮುಡಿಗೆ ||
ಹೊನ್ನ ಕೊಡಿಸೆನ್ನುತ್ತ ನಿನ್ನ ಕಾಡುವುದಿಲ್ಲ
ಚಿನ್ನ ನೀನಾಗಿರುವೆ ಸಿರಿಬಾಳಿಗೆ || ೧ ||


ಕೆಂಡಸಂಪಿಗೆ ಹೂವು ಗಾಢ ಪರಿಮಳವಹುದು
ಮಂಡೆ ನೋಯುವುದೆನಗೆ ದಟ್ಟ ವಾಸನೆಗೆ ||
ಕೊಂಡು ತಂದರೆಯದನು ನಾನು ಮುಡಿಯುವುದಿಲ್ಲ
ದಂಡವೆನ್ನುತ ನನ್ನ ದೂರದಿರು ಕೊನೆಗೆ || ೨ ||


ಝಲ್ಲೆ ಹೂವನು ತಂದು ಕಣ್ಣೆದುರಿನಲ್ಲಿಡುತ
ಗೆಲ್ಲ ಹೊರಡಲು ಬೇಡ ನನ್ನ ಮನವ ||
ಒಲ್ಲೆ ಮುಡಿಯಲು ನಾನು ಸೀತಾಳ ದಂಡೆಯನು
ಮೊಲ್ಲೆ ಮಾಲೆಯ ತಂದು ತಣಿಸು ತನುವ || ೩ ||


ಬೊಟ್ಟಿಟ್ಟು ಬೈತಲೆಗೆ ಕಿವಿಗೆ ಜುಮುಕಿಯನಿಟ್ಟು
ತೊಟ್ಟಿರುವೆ ಕೊರಳಲ್ಲಿ ಚಂದ್ರಹಾರ ||
ಪುಟ್ಟನೆಯ ತುಟಿಗಿಷ್ಟು ನಸುಗೆಂಪು ಮೆತ್ತಿರುವೆ
ಜುಟ್ಟಿನಲಿ ಘಮಘಮಿಪ ಮೊಲ್ಲೆ ಹಾರ || ೪ ||


ಮಾರುದ್ದ ಮಲ್ಲಿಗೆಯ ನಾನು ಕೇಳಲೆಯಿಲ್ಲ
ಬೇರೇನು ಬೇಡಿಕೆಯು ನನ್ನದಿಲ್ಲ ||
ಮಾರುಹೋಗಿಹ ಮೊಲ್ಲೆ ನನ್ನ ಕೊರಳನು ಬಳಸಿ
ಚಾರುಲತೆ ನೀನೆಂದು ನುಡಿದವಲ್ಲ || ೫ ||


- ಸುರೇಖಾ ಭೀಮಗುಳಿ
06/06/2017
ಚಿತ್ರ : Chandrika Khadilkar
ಕವನಕ್ಕೆ ಸ್ಫೂರ್ತಿ : ಸಹೆ ಕವನಗಳು
ತಿದ್ದುಪಡಿ : ವಿಶ್ವ ಸರ್

Thursday, June 1, 2017

"ಸೀತಾಳದಂಡೆ" ಕುರಿತ ನನ್ನ ಭಾಮಿನಿಗಳು.....


ಮುತ್ತಿನಂತಹ ಮುದ್ದು ಹೂಗಳು
ಒತ್ತುವೊತ್ತಾಗರಳಿ ನಗುತಿವೆ
ಸುತ್ತ ಬನವನು ಮರೆಸುವಂತಹ ಸೆಳೆತವೇಕಿವಕೆ ? ||
ಕತ್ತಲೆಯ ಮಳೆಸಂಜೆ ಸಮಯದಿ
ಪತ್ತೆಹಚ್ಚಲು ಗಂಧ ಬೀರದೆ
ಹತ್ತಿ ಕುಳಿತಿವೆ ಮರದ ಮೇಗಡೆ ಯಾತಕಿವು ಹೀಗೆ ? || ೧ ||

ಮುಡಿವೆವೆಂದರೆ ಮುಡಿಯಲಾಗದು
ಬಿಡಿಸಿ ತಿರುಗಿಸಿ ಕಟ್ಟಲಾಗದು
ಕಡೆಗೆ ಬರಿದೇ ನೋಡಿ ತಣಿವುದು ಸಾಧ್ಯವಿದೆಯೆಮಗೆ ||
ಪಡೆದೆನೆಂಬುವುದೊಂದೆ ಸಂಭ್ರಮ
ಜಡೆಯಲಿರಿಸುವ ಖುಷಿಯ ದಕ್ಕದು
ಕಡಿದು ತಾರದೆ ಮರದಲುಳಿಸುವುದದುವೆವೊಳಿತೆಮಗೆ || ೨ ||

ತರಿದು ತಂದರೆ ಉಳಿಯಲಾರದು
ಮುರುಟಿಕೊಳ್ಳುವವೆಲ್ಲ ಹೂಗಳು
ಮರದಲಿದ್ದರೆ ನಗುತಲುಳಿವವುವಿನ್ನು ನಾಲ್ಕು ದಿನ |||
ಸರದ ತರದಲಿ ಕಟ್ಟಲಾರೆವು
ಕೊರಳ ಹಾರವ ಮಾಡಲಾರೆವು
ಇರಲಿ ವನದೇವತೆಯ ಮಡಿಲಲಿ ಸೆಳೆಯುತೆಮ್ಮ ಮನ || ೩ ||

- ಸುರೇಖಾ ಭೀಮಗುಳಿ
02/06/2017
ಚಿತ್ರಕೃಪೆ : ಶ್ರೀವತ್ಸ ಜೋಷಿಯವರ ಗೋಡೆಯಿಂದ ಹಾರಿಸಿದ್ದು .....