Saturday, December 3, 2016

" ಅನಿವಾರ್ಯತೆ " (ನನ್ನ 132 ನೆಯ ಕವನ)


ನಿನ್ನೆಯ ’ಭ್ರಮಾನಿರಸನ’ ಕವನದ ಮುಂದುವರಿಕೆ....
80 ರ ದಶಕದ ಹೆಣ್ಣಿಗೆ ಬಂದೊದಗಿದ ಅನಿವಾರ್ಯತೆ !

ಕಂಡ ದೇವರಿಗೆಲ್ಲ ಹರಕೆ ಹೊತ್ತಿಹಳಮ್ಮ
ಅಪ್ಪನಾ ಮುಖದಲ್ಲು ಚಿಂತೆ ಗೆರೆಯು ||
ಬಂದ ವರಗಳು ಏಕೆ ತಪ್ಪಿ ಹೋಗುತ್ತಿಹರು ?
ಎಂದು ಬೀಳುವುದಿದಕೆ ಕೊನೆಯ ತೆರೆಯು ? || ೧ ||

ಕಾರಿನಲಿ ಬಂದವರ ಮೋರೆಯಲಿ ನಗುವಿಲ್ಲ
ಮತ್ತೆ ಘಟಿಸುತ್ತದೆಯೆ ಹಳೆಯ ಘಟನೆ ? ||
ಕನಸುಗಳ ಮೂಟೆಯನು ಕಟ್ಟಿ ಅಟ್ಟದಲಿಟ್ಟು
ಬಂದವರ ಎದುರಲ್ಲಿ ನನ್ನ ನಟನೆ || ೨ ||

ಹಣೆಯ ಬರಹದ ಮುಂದೆ ನಾವೆಷ್ಟರವರ್ಹೇಳು ?
ವಿಧಿಯಾಟ ಮೀರುವುದು ಹೇಗೆ ಸಾಧ್ಯ ? ||
ಕಾಯೋಣ ಇನ್ನಷ್ಟು ಹುಡುಕೋಣ ಮತ್ತಷ್ಟು
ಅಪ್ಪ ಅಮ್ಮನ ಮಾತು ಎಷ್ಟು ವೇದ್ಯ ? || ೩ ||

ಬೇಡೆಂದು ಭಾವಗಳ ತಡೆಹಿಡಿಯಲಾದೀತೆ ?
ಬೇಕೆಂದರೂ ಮನವು ಅರಳುತಿಲ್ಲ ||
ಘಾಸಿಯಾಗಿಹುದೆನ್ನ ಮಲ್ಲಿಗೆಯ ಹೃದಯಕ್ಕೆ
ನಷ್ಟ ತುಂಬುವುದಕ್ಕೆ ಯಾರು ಇಲ್ಲ || ೪ ||

ಬಂದವರ ಎದಿರಿನಲಿ ಕುರಿಯಂತೆ ನಿಲಲಾರೆ
ಸ್ವಾಭಿಮಾನವ ಬಿಟ್ಟು ಬದುಕಲಾರೆ ||
ನನ್ನ ಧ್ವನಿಗೂ ಒಂದು ಅವಕಾಶವಿರಬೇಕು
ನನ್ನತನಕೂ ಸ್ವಲ್ಪ ಬೆಲೆಯುಬೇಕು || ೫ ||

ಹೆಣ್ಣೇನು ಇವರೆದುರು ದರ್ಶನದ ಗೊಂಬೆಯೇ ?
ಹೆಣ್ಣ ಅನಿಸಿಕೆಗಳಿಗೆ ಬೆಲೆಯಿಲ್ಲವೆ ? ||
ಜಗದೆದುರು ತಲೆಯೆತ್ತಿ ನಿಲ್ಲಲಾರಳೆ ಹೆಣ್ಣು
ಹೆಣ್ಣಿನಾ ಶೋಷಣೆಗೆ ಕೊನೆಯಿಲ್ಲವೆ ? || ೬ ||

ನನ್ನ ಬದುಕಿನ ಬಗೆಗೆ ನಾನೆ ಯೋಚಿಸಬೇಕು
ಅನಿವಾರ್ಯ ಈ ನಿಲುವು ನನಗೆ ಮಾತ್ರ ||
ದೃಢಮನಸಿನಲ್ಲೊಮ್ಮೆ ಕೈಗೆತ್ತಿಕೊಳ್ಳುವೆನು
ಆ ಬ್ರಹ್ಮ ನನಗಿತ್ತ ಬಾಳ ಸೂತ್ರ || ೭ ||

- ಸುರೇಖಾ ಭೀಮಗುಳಿ
04/12/2016
ಚಿತ್ರ : ಅಂತರ್ಜಾಲ

No comments:

Post a Comment