Sunday, December 4, 2016

" ತೆರೆ "

ನಿನ್ನೆಯ "ಅನಿವಾರ್ಯತೆ" ಕವನದ ಮುಂದುವರೆದ ಭಾಗ .....
ನಮ್ಮ 80 ರ ದಶಕದ ಹೆಣ್ಮಗಳ ಸಮಸ್ಯೆಗೊಂದು ಪರಿಹಾರ ಬೇಕಲ್ಲವಾ ?.....
ಹೇಗಿದ್ದರೂ ಓದಿದ್ದಾಳೆ... ಕೆಲಸಕ್ಕೆ ಸೇರಲಿ.... ಸ್ವಂತ ಸಂಪಾದಿಸಲಿ.....
ಅವಳ ಸಮಸ್ಯೆಯನ್ನು ಅವಳೇ ಪರಿಹರಿಸಿಕೊಂಡಾಳು.... ಏನಂತೀರಿ ?

ನನ್ನ ದಾರಿಯ ನಾನು ಕಂಡುಕೊಳ್ಳುವೆನಪ್ಪ
ವಿದ್ಯೆ ಇದೆ ಬುದ್ಧಿ ಇದೆ ಯಾಕೆ ಚಿಂತೆ ? ||
ನನ್ನ ಹೆಗಲಿನ ಹೊರೆಯ ಇನ್ನು ನಾನೇ ಹೊರುವೆ
ಹೆದರದಿರಿ ಈ ಜಗವು ಮರುಳು ಸಂತೆ || ೧ ||

ನಿನ್ನ ಅಳಿಯನ ನಾನೆ ಹುಡುಕಿ ತರುವೆನೆ ಅಮ್ಮ
ನೋಡಿಕೊಳ್ಳುವೆ ನಾನು ನನ್ನ ಸೌಖ್ಯ ||
ಹುಡುಗ ಸಿಕ್ಕರೆ ಮದುವೆ- ಇಲ್ಲದಿರೆ ಕೊರಗಿಲ್ಲ
ಆತ್ಮಗೌರವವೊಂದೆ ನನಗೆ ಮುಖ್ಯ || ೨ ||

ಸ್ವಂತ ಬದುಕಿದು ಚೆನ್ನ ನನ್ನ ದುಡಿಮೆಯ ಫಲವು
ಹೆಚ್ಚಿಸಿದೆ ನನ್ನಲ್ಲಿ ಆತ್ಮಸ್ಥೈರ್ಯ ||
ಒಂದಾಗಿ ಬಾಳ್ವುದಕೆ ಹಿರಿಯರಾಶೀರ್ವಾದ
ಕೊಂಚ ಸಹಕಾರ ಇರುವುದನಿವಾರ್ಯ || ೩ ||

ವರದಕ್ಷಿಣೆಯ ಪಿತ್ತ ಹಿರಿಯ ಪೀಳಿಗೆಗಿರಲಿ
ಮಕ್ಕಳದರೊಳ ಬಿದ್ದು ನೋಯದಿರಲಿ ||
ಹೆಣ್ಣು ಮಕ್ಕಳ ಶಾಪ ತಟ್ಟದಿರಲೀ ಜಗಕೆ
ಸುಮಧುರದ ದಾಂಪತ್ಯ ಕೂಡಿಬರಲಿ || ೪ ||

- ಸುರೇಖಾ ಭೀಮಗುಳಿ
05/12/2016
ಚಿತ್ರ : ಅಂತರ್ಜಾಲ

ಅಯ್ಯೋ... ತಟ್ಟಿಯೇ ಬಿಟ್ಟಿತೇ ಹೆಣ್ಣು ಮಕ್ಕಳ ಬಿಸಿಯುಸಿರ ಶಾಪ.....???!!! ಓಂ ಶಾಂತಿ ... ಶಾಂತಿ... ಶಾಂತಿ.....!!!

Saturday, December 3, 2016

" ಅನಿವಾರ್ಯತೆ " (ನನ್ನ 132 ನೆಯ ಕವನ)


ನಿನ್ನೆಯ ’ಭ್ರಮಾನಿರಸನ’ ಕವನದ ಮುಂದುವರಿಕೆ....
80 ರ ದಶಕದ ಹೆಣ್ಣಿಗೆ ಬಂದೊದಗಿದ ಅನಿವಾರ್ಯತೆ !

ಕಂಡ ದೇವರಿಗೆಲ್ಲ ಹರಕೆ ಹೊತ್ತಿಹಳಮ್ಮ
ಅಪ್ಪನಾ ಮುಖದಲ್ಲು ಚಿಂತೆ ಗೆರೆಯು ||
ಬಂದ ವರಗಳು ಏಕೆ ತಪ್ಪಿ ಹೋಗುತ್ತಿಹರು ?
ಎಂದು ಬೀಳುವುದಿದಕೆ ಕೊನೆಯ ತೆರೆಯು ? || ೧ ||

ಕಾರಿನಲಿ ಬಂದವರ ಮೋರೆಯಲಿ ನಗುವಿಲ್ಲ
ಮತ್ತೆ ಘಟಿಸುತ್ತದೆಯೆ ಹಳೆಯ ಘಟನೆ ? ||
ಕನಸುಗಳ ಮೂಟೆಯನು ಕಟ್ಟಿ ಅಟ್ಟದಲಿಟ್ಟು
ಬಂದವರ ಎದುರಲ್ಲಿ ನನ್ನ ನಟನೆ || ೨ ||

ಹಣೆಯ ಬರಹದ ಮುಂದೆ ನಾವೆಷ್ಟರವರ್ಹೇಳು ?
ವಿಧಿಯಾಟ ಮೀರುವುದು ಹೇಗೆ ಸಾಧ್ಯ ? ||
ಕಾಯೋಣ ಇನ್ನಷ್ಟು ಹುಡುಕೋಣ ಮತ್ತಷ್ಟು
ಅಪ್ಪ ಅಮ್ಮನ ಮಾತು ಎಷ್ಟು ವೇದ್ಯ ? || ೩ ||

ಬೇಡೆಂದು ಭಾವಗಳ ತಡೆಹಿಡಿಯಲಾದೀತೆ ?
ಬೇಕೆಂದರೂ ಮನವು ಅರಳುತಿಲ್ಲ ||
ಘಾಸಿಯಾಗಿಹುದೆನ್ನ ಮಲ್ಲಿಗೆಯ ಹೃದಯಕ್ಕೆ
ನಷ್ಟ ತುಂಬುವುದಕ್ಕೆ ಯಾರು ಇಲ್ಲ || ೪ ||

ಬಂದವರ ಎದಿರಿನಲಿ ಕುರಿಯಂತೆ ನಿಲಲಾರೆ
ಸ್ವಾಭಿಮಾನವ ಬಿಟ್ಟು ಬದುಕಲಾರೆ ||
ನನ್ನ ಧ್ವನಿಗೂ ಒಂದು ಅವಕಾಶವಿರಬೇಕು
ನನ್ನತನಕೂ ಸ್ವಲ್ಪ ಬೆಲೆಯುಬೇಕು || ೫ ||

ಹೆಣ್ಣೇನು ಇವರೆದುರು ದರ್ಶನದ ಗೊಂಬೆಯೇ ?
ಹೆಣ್ಣ ಅನಿಸಿಕೆಗಳಿಗೆ ಬೆಲೆಯಿಲ್ಲವೆ ? ||
ಜಗದೆದುರು ತಲೆಯೆತ್ತಿ ನಿಲ್ಲಲಾರಳೆ ಹೆಣ್ಣು
ಹೆಣ್ಣಿನಾ ಶೋಷಣೆಗೆ ಕೊನೆಯಿಲ್ಲವೆ ? || ೬ ||

ನನ್ನ ಬದುಕಿನ ಬಗೆಗೆ ನಾನೆ ಯೋಚಿಸಬೇಕು
ಅನಿವಾರ್ಯ ಈ ನಿಲುವು ನನಗೆ ಮಾತ್ರ ||
ದೃಢಮನಸಿನಲ್ಲೊಮ್ಮೆ ಕೈಗೆತ್ತಿಕೊಳ್ಳುವೆನು
ಆ ಬ್ರಹ್ಮ ನನಗಿತ್ತ ಬಾಳ ಸೂತ್ರ || ೭ ||

- ಸುರೇಖಾ ಭೀಮಗುಳಿ
04/12/2016
ಚಿತ್ರ : ಅಂತರ್ಜಾಲ

Friday, December 2, 2016

" ಭ್ರಮಾನಿರಸನ ! " (ನನ್ನ 131 ನೆಯ ಕವನ)

ನಿನ್ನೆಯ "ಜಾರುತಿದೆ ಮನಸು" ಕವನದ ಮುಂದುವರೆದ ಭಾಗ.....
ಪಾಪಕಣ್ರೀ.... 80 ರ ದಶಕದ ಹೆಣ್ಮಕ್ಕಳು.... ಅಲ್ಲಲ್ಲ ಗಂಡ್ ಮಕ್ಳು ಸಹ.... ಹ ಹ ಹಾ.....

ಶ್ಯಾನುಭೋಗರ ಮನೆಗೆ ಹೋಗಿದ್ದ ಅಪ್ಪಯ್ಯ
ಹಿಂತಿರುಗಿ ಬಂದಾಗ ಮುಖವು ಪೆಚ್ಚು ||
ಹುಡುಗ ಉತ್ತಮನಂತೆ ತಾಯಿ ಜೋರಿಹರಂತೆ
ತಂದೆಗಿದೆ ಧನದಾಹ ಸ್ವಲ್ಪ ಹೆಚ್ಚು || ೧ ||

ಕಂಡ ಕನಸುಗಳೆಲ್ಲ ನೀರ ಪಾಲಾಗೋಯ್ತೆ ?
ಶ್ಯಾನುಭೋಗರ ಮಗನ ಮರೆಯಬೇಕೆ ? ||
ಧನದಾಹವಿಲ್ಲದಿಹ ಮನೆಯ ಹುಡುಕುವುದೆಂತು ?
ಮುಗ್ಧ ಮನಗಳ ಬಾಳು ಬಾಡಬೇಕೆ ? || ೨ ||

ಭಾವಗಳ ಮನದೊಳಗೆ ಬಿಡಬೇಕೊ ಬೇಡವೋ ?
ಕನಸಗಳಿಗವಕಾಶ ತಪ್ಪೊ ಸರಿಯೊ ? ||
ಯಾರನ್ನು ಮೆಚ್ಚುವುದೊ ಯಾರನ್ನು ನೆಚ್ಚುವುದೊ ?
ಇವರೆಲ್ಲರೆದುರಲ್ಲಿ ನಾನು ಕುರಿಯೊ ? || ೩ ||

ಮೃದು ಮನಸು ದಿನದಿನಕೆ ಕಲ್ಲಾಗುತಿಹುದೇಕೋ ?
ಭ್ರಮೆಯ ನಿರಸನ ಎನ್ನ ಕೊಲ್ಲುತಿಹುದು ||
ಅಪ್ಪ ಅಮ್ಮನ ಮನವ ನೋಯಿಸಲು ಮನಸಿಲ್ಲ
ಒಳಗೊಳಗೆ ಅತಿಹಿಂಸೆ ಎನಿಸುತಿಹುದು || ೪ ||

- ಸುರೇಖಾ ಭೀಮಗುಳಿ
03/12/2016
ಚಿತ್ರ : ಅಂತರ್ಜಾಲ

Thursday, December 1, 2016

" ಜಾರುತಿದೆ ಮನಸು " ( ನನ್ನ 130 ನೆಯ ಕವನ )

ಒಂದಾನೊಂದು ಕಾಲದಲ್ಲಿ ..... 22 ನೆಯ ವಯಸ್ಸಿನ ಹೆಣ್ಮಗಳು..... ನಾನಲ್ಲಪ್ಪಾ... ಹಹಹಾ.....

ರಾಮ ಭಟ್ಟರ ಮಗನೊ ಕೃಷ್ಣ ಭಟ್ಟರ ಮಗನೊ
ಕನಸಲ್ಲಿ ಬಂದವನು ಯಾರು ಅವನು ? ||
ಪೇಟೆಲೆದುರಾದವನು ಜಾತ್ರೆಯಲಿ ಕಂಡವನು
ಸೊಗಸು ಮೀಸೆಯ ತರುಣ ಮನದಲಿಹನು || ೧ ||

ಹೇಗಿದ್ದರೂ ಸರಿಯೆ ಕೊಂಕನಾಡದೆ ಇರಲಿ
ಮೃದು ಮನದ ಒಬ್ಬಾತ ನನಗೆ ಸಿಗಲಿ ||
ಕನಸು ಕಾಣುವ ವಯಸು ವಿಧಿ ಸಂಚದೇನಿದೆಯೊ ?
ಚೊಕ್ಕನೆಯ ಹೃದಯದವ ಬೇಗ ಬರಲಿ || ೨ ||

ಕೊಂಚ ಕಾಡಿಗೆ ಹೆಚ್ಚೆ ? ಮುಡಿದ ಮಲ್ಲಿಗೆ ಸಾಕೆ ?
ಸಿಂಗಾರವೆನ್ನದಿದುವತಿಯಲ್ಲವೆ ?  ||
ಅವನನ್ನು ಸೆಳೆವುದಕೆ ಈ ಕೋಲವೇತಕೇ ?
ನನ್ನೊಂದು ಕಿರುನೆಗೆಯು ಸಾಕಲ್ಲವೆ ? || ೩ ||

ಸಡಗರದಿ ಬಂದವನು ಶ್ಯಾನುಭೋಗರ ಮಗನು
ಹಗಲಿನಲು ಕಾಡುತಿದೆ ಅವನ ಕನಸು ||
ನೋಟವೊಂದರ ಒಳಗೆ ಹೀಗೇಕೆ ಆಗೋಯ್ತು ?
ಅವನೆಡೆಗೆ ಜಾರುತಿದೆ ನನ್ನ ಮನಸು || ೪ ||

- ಸುರೇಖಾ ಭೀಮಗುಳಿ
02/12/2016
ಚಿತ್ರ : ಅಂತರ್ಜಾಲ