Sunday, May 22, 2016

" ಶತಕ ಸಂಭ್ರಮ "

ಹಾಗು ಹೀಗೂ ನಾನು ಶತಕ ಬಾರಿಸಿ ಬಿಟ್ಟೆ
ಇಂದಿನದು ನನ್ನಯಾ ನೂರನೆಯ ಕವನ ||
ಒಂದಿಷ್ಟು ಜೊಳ್ಳುಗಳು ಮತ್ತಿಷ್ಟು ಕಾಳುಗಳು
ಆಯ್ದುಕೊಳ್ಳಿರಿ ಕಾಳು ನಿಮಗೆ ನಮನ || ೧ ||

ಮನದಲುಕ್ಕಿದ ಭಾವ ಹಾಡೆಂದು ನಾ ಭ್ರಮಿಸಿ
ಒಂದರಾ ಹಿಂದೊಂದು ದಾಖಲಿಸಿದೆ ||
ಪ್ರೋತ್ಸಾಹವನು ಕೊಡುತ ನನ ಬೆನ್ನ ತಟ್ಟಿದಿರಿ
ಕವಯಿತ್ರಿ ನಾನೆಂದು ಸಂಭ್ರಮಿಸಿದೆ || ೨ ||

ಮಾತ್ರೆ ಛಂದಸ್ಸುಗಳ ಪಾಠ ಕೇಳಿದೆ ನಾನು
ಕಲಿಸಿಕೊಟ್ಟರು ನನ್ನ ಮಾರ್ಗದರ್ಶಿಗಳು ||
ಎಷ್ಟು ಕಲಿತೆನೊ ಏನೊ ? ರಕ್ತಗತವೆಷ್ಟಾಯ್ತೋ ?
ಕಾವ್ಯ ಕನ್ನಿಕೆ ನನ್ನ ಮನಕೊಲಿದಳು || ೩ ||

ಎಷ್ಟು ಸಲ ಎಡವಿದೆನೊ ? ಮಕಾಡೆ ಮಲಗಿದೆನೋ ?
ಮೃದುವಾಗಿ ಸಲಹಿದಿರಿ ಜೊತೆಯ ಬಿಡದೆ ||
ಆವರಿಸಿಕೊಂಡಿಹುದು ಮಧುರ ಭಾವನೆಯೊಂದು
ತೆರೆದಿರುವೆ ಭಾವಗಳ ನಿಮ್ಮ ಮುಂದೆ ||| ೪ ||

- ಸುರೇಖಾ ಭೀಮಗುಳಿ
23/05/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

No comments:

Post a Comment