Wednesday, May 18, 2016

" ನನಗೆ ಇಷ್ಟ "..... ( 99 ನಾಟ್ ಔಟ್....)

ಕಾದ ಭೂರಮೆ ಮೇಲೆ ವರುಣ ಸಿಂಚನ ಗೈಯೆ
ಬರುವ ಮಣ್ಣಿನ ಘಮಲು ನನಗೆ ಇಷ್ಟ ||
ಭೂತಾಯ ಮಡಿಲಲ್ಲಿ ಹಸಿರು ಹುಲ್ಲಿನ ಮೇಲೆ
ನೀರಬಿಂದುವಿನಾಟ ನನಗೆ ಇಷ್ಟ || ೧ ||

ಕಾರ್ಮೋಡ ಮುಸುಕುತ್ತ ವರ್ಷಧಾರೆಯು ಸುರಿಯೆ
ಗುಡುಗು ಮಿಂಚಿನ ಸಮಯ ನನಗೆ ಇಷ್ಟ ||
ಭಾರಿ ಬೆಟ್ಟವನೇರಿ ಪ್ರಕೃತಿಯ ಜೊತೆಸೇರಿ
ಗಡಸು ಗಾಳಿಯ ಬೀಸು ನನಗೆ ಇಷ್ಟ || ೨ ||

ಹಳೆ ನೆನಪ ಕೆದಕುತ್ತ ಲಘು ದಾಟಿ ಬೆರೆಸುತ್ತ
ಕಥೆಯನ್ನು ಹಂಚುವುದು ನನಗೆ ಇಷ್ಟ ||
ಭಾವಲೋಕದಿ ಬೆರೆತು ಭವದ ಕಷ್ಟವ ಮರೆತು
ಹೊಸ ಕವನ ಹೊಸೆಯುವುದು ನನಗೆ ಇಷ್ಟ || ೩ ||

ಇನ್ನಷ್ಟು ಮತ್ತಷ್ಟು ಬರೆಯುತ್ತ ಸಾಗಿದರೆ
ಮುಗಿವ ಲಕ್ಷಣ ಕಾಣೆ ನನ್ನ ಇಷ್ಟ ||
ನನ್ನ ವಿಷಯವನಿಲ್ಲಿ ನಾನು ನಿಲ್ಲಿಸಿ ಬಿಡುವೆ
ಹೇಳಿರೈ ನೀವೀಗ ನಿಮ್ಮ ಇಷ್ಟ || ೪ ||

- ಸುರೇಖಾ ಭೀಮಗುಳಿ
18/05/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

No comments:

Post a Comment