Friday, May 13, 2016

" ಪದ್ಯ ಬಂಡಿ "

ಕವನ ಕಟ್ಟುವುದಕ್ಕೆ ಕಾರಣವೆ ಬೇಕಿಲ್ಲ
ರೇಖ- ಮೋಹಿನಿ ಎಂಬ ನಾರಿಯರಿಗೆ ||
ಸುಮ್ಮನೇ ಕುಳಿತಿರಲು ಮನಸು ಬಂದಿತು ಎಂದು
ಪದ್ಯ ಹೊಸೆವೆವು ನಾವು ಗೊತ್ತೆ ನಿಮಗೆ ? || ೧ ||

ಸಮಯ ಜಾರದ ಹೊತ್ತು- ಮನವು ಅರಳಿದ ಹೊತ್ತು
"ಪದ್ಯ ಕಟ್ಟೋಣವೇ ?" ಎಂಬ ಕರೆಯು ||
ಅವರಲ್ಲಿ ನಾನಿಲ್ಲಿ ಪದ್ಯ ಕಟ್ಟುವ ಆಟ
ಎಂಥ ಸೊಗಸೋ ಅದು ಪದ್ಯ ಸುರೆಯು || ೨ ||

ಯಾವುದೋ ಚಿತ್ರವನು ಕಳಹುತ್ತ ಕೇಳುವರು
ಪದ್ಯ ಕಟ್ಟೋಣವೇ ಇದನು ಕುರಿತು ? ||
ಮಳೆ ಬರುವ ಹಾಗಿದೆ ಅದರ ಕುರಿತೇ ಬರೆವ
ಆಗದೇ ? ಎನ್ನುವೆನು ನಾನು ಅರಿತು || ೩ ||

ಚಿತ್ರವಾದರೆ ಏನು ? ಭಾವವಾದರೆ ಏನು ?
ಕವನ ಕಟ್ಟುವುದಕ್ಕೆ ಯಾವುದೇನು ? ||
ಅವರೊಂದು-ನಾನೊಂದು ಪದ್ಯ ಬರೆದರೆ ಆಗ
ಪದ್ಯ ಬಂಡಿಯ ಚಕ್ರ ಅವರು - ನಾನು || ೪ ||

ನಾವು ಕಟ್ಟಿದ ಪದ್ಯ ಹೊಸೆದಿರುವ ಹೊಸ ಕವನ
ಎಲ್ಲದಕು ವೇದಿಕೆಯು ಫೇಸು ಬುಕ್ಕು ||
ವೇದಿಕೆಯ ಸಲ್ಲಾಪ ನಿಮ್ಮನಾದರಿಸಿಹುದು
ಇಷ್ಟವಾದರೆ ಒತ್ತಿ ಒಂದು ಲೈಕು || ೫ ||

- ಸುರೇಖಾ ಭೀಮಗುಳಿ
13/05/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

No comments:

Post a Comment