ಕಟ್ಟಿ ಕುಳಿತಿಹೆವಿಂದು ನೆಮ್ಮದಿಯ ಸೂರೊಂದ
ಬೆಲೆಕಟ್ಟಲಾದೀತೇ ಬೆವರ ಹನಿಗೆ ||
ಕಳ್ಳಕಾಕರ ಭಯದಿ ಮನವಿಂದು ನಲುಗಿರಲು
ಸುತ್ತ ಕಬ್ಬಿಣ ಜೈಲು ನಮ್ಮ ಮನೆಗೆ || ೧ ||
ಕಳ್ಳರೋ ನೂರಾರು ಕಳ್ಳತನ ಹಲವಾರು
ದಿನದಿನಕೆ ಹೊಸಮಾರ್ಗ ಕಲಿವರವರು ||
ಕಂಡದ್ದ ಕದಿಯುವರು ಕನ್ನವಿಟ್ಟೆಲ್ಲವನು
ಬಲಿಪಶುಗಳಾಗುವೆವು ಅವರ ಎದುರು || ೨ ||
ಕಷ್ಟಾರ್ಜಿತವು ನಮದೆ ಇಷ್ಟದಾ ಮನೆ ನಮದೆ
ನಮ್ಮಿಚ್ಛೆಯಂತೆ ನಾವ್ ಇರಬಾರದೆ ? ||
ಕಳ್ಳಕಾಕರ ದೃಷ್ಟಿ ಬೀಳದೇ ಇರುವಂತೆ
ರಕ್ಷಿಸೋ ನರಹರಿಯೆ ನಮ್ಮ ಬಿಡದೆ || ೩ ||
ಕಳ್ಳಿರಿಗು ಬುದ್ಧಿಕೊಡು ಕದಿಯದೇ ಇರುವಂತೆ
ಆತನೂ ಹೆಮ್ಮೆಯಲಿ ದುಡಿದುಣ್ಣಲಿ ||
ಶ್ರೀಮಂತ ಹಂಚುತಲಿ ತನ್ನ ಸಿರಿಯಲಿ ಸ್ವಲ್ಪ
ದಾನಧರ್ಮವ ಮಾಡಿ ಸುಖಿಗೊಳ್ಳಲಿ || ೪ ||
- ಸುರೇಖಾ ಭೀಮಗುಳಿ
30/05/2016
ಚಿತ್ರ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
ನಮ್ಮ ಮುದ್ದಿನ ಗೃಹಕೆ ಹದಿನೈದು ತುಂಬಿಹುದು
ಎಂಥ ತೃಪ್ತಿಯ ಭಾವ ನಮ್ಮ ಮನದಿ ||
ಹದಿನೈದು ವರ್ಷದಲಿ ಏರಿಳಿತಗಳಿದ್ದರೂ
ಕೊಟ್ಟಿಹುದು ನೆಮ್ಮದಿಯ ಅಂಥ ಕ್ಷಣದಿ || ೧ ||
ನನಗೊಂದು ಸ್ಥಾನವನು ಹುಟ್ಟೂರು ಕೊಡಲಿಲ್ಲ
ಜನ್ಮ ಕೊಟ್ಟಿತು ಜೊತೆಗೆ ನೆನಪು ನೂರು ||
ಕೊಟ್ಟ ಮನೆ ಎನ್ನಿಸಿತು ನನ್ನ ಬಾವನ ಮನೆಯು
ಆ ದೇವ ಒದಗಿಸಿದ ಹೊಸತು ಸೂರು || ೨ ||
ಹಲಸು-ಹೊಂಗೆಯ ಮರವು ಸೊಂಪಾಗಿ ತೂಗಿಹುದು
ನೋಟವೂ ಹಸಿರಸಿರು ಶುದ್ಧ ಗಾಳಿ ||
ಮನೆಯ ಮೇಲಿನ ನೆತ್ತಿ ತಂಪಾಗಿ ಕಾದಿಹುದು
ಹಿತಮಿತದ ಪರಿಸರವು ಕಾದಿಹಳು ಕಾಳಿ || ೩ ||
ನಮ್ಮ ಪ್ರೀತಿಯ ಗೃಹಕೆ ನಾಮಕರಣವೆ ಹಾಗೆ
’ವಿವೇಕ’ ಎಂಬ ಹೆಸರು ನಮ್ಮ ಮನೆಗೆ ||
ವಿವೇಕವಿದ್ದವರಿಗೆ ಎಂದೆಂದು ಸ್ವಾಗತವು
ಸ್ನೇಹಹಸ್ತವು ನಮದು ನಿಮ್ಮ ಕಡೆಗೆ || ೪ ||
- ಸುರೇಖಾ ಭೀಮಗುಳಿ
24/05/2016
ಚಿತ್ರ : ’ವಿವೇಕ’ ಮನೆ
ಛಾಯಾಗ್ರಹಣ : ಸುಧನ್ವ ಭೀಮಗುಳಿ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
ಹಾಗು ಹೀಗೂ ನಾನು ಶತಕ ಬಾರಿಸಿ ಬಿಟ್ಟೆ
ಇಂದಿನದು ನನ್ನಯಾ ನೂರನೆಯ ಕವನ ||
ಒಂದಿಷ್ಟು ಜೊಳ್ಳುಗಳು ಮತ್ತಿಷ್ಟು ಕಾಳುಗಳು
ಆಯ್ದುಕೊಳ್ಳಿರಿ ಕಾಳು ನಿಮಗೆ ನಮನ || ೧ ||
ಮನದಲುಕ್ಕಿದ ಭಾವ ಹಾಡೆಂದು ನಾ ಭ್ರಮಿಸಿ
ಒಂದರಾ ಹಿಂದೊಂದು ದಾಖಲಿಸಿದೆ ||
ಪ್ರೋತ್ಸಾಹವನು ಕೊಡುತ ನನ ಬೆನ್ನ ತಟ್ಟಿದಿರಿ
ಕವಯಿತ್ರಿ ನಾನೆಂದು ಸಂಭ್ರಮಿಸಿದೆ || ೨ ||
ಮಾತ್ರೆ ಛಂದಸ್ಸುಗಳ ಪಾಠ ಕೇಳಿದೆ ನಾನು
ಕಲಿಸಿಕೊಟ್ಟರು ನನ್ನ ಮಾರ್ಗದರ್ಶಿಗಳು ||
ಎಷ್ಟು ಕಲಿತೆನೊ ಏನೊ ? ರಕ್ತಗತವೆಷ್ಟಾಯ್ತೋ ?
ಕಾವ್ಯ ಕನ್ನಿಕೆ ನನ್ನ ಮನಕೊಲಿದಳು || ೩ ||
ಎಷ್ಟು ಸಲ ಎಡವಿದೆನೊ ? ಮಕಾಡೆ ಮಲಗಿದೆನೋ ?
ಮೃದುವಾಗಿ ಸಲಹಿದಿರಿ ಜೊತೆಯ ಬಿಡದೆ ||
ಆವರಿಸಿಕೊಂಡಿಹುದು ಮಧುರ ಭಾವನೆಯೊಂದು
ತೆರೆದಿರುವೆ ಭಾವಗಳ ನಿಮ್ಮ ಮುಂದೆ ||| ೪ ||
- ಸುರೇಖಾ ಭೀಮಗುಳಿ
23/05/2016
ಚಿತ್ರ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
ಕಾದ ಭೂರಮೆ ಮೇಲೆ ವರುಣ ಸಿಂಚನ ಗೈಯೆ
ಬರುವ ಮಣ್ಣಿನ ಘಮಲು ನನಗೆ ಇಷ್ಟ ||
ಭೂತಾಯ ಮಡಿಲಲ್ಲಿ ಹಸಿರು ಹುಲ್ಲಿನ ಮೇಲೆ
ನೀರಬಿಂದುವಿನಾಟ ನನಗೆ ಇಷ್ಟ || ೧ ||
ಕಾರ್ಮೋಡ ಮುಸುಕುತ್ತ ವರ್ಷಧಾರೆಯು ಸುರಿಯೆ
ಗುಡುಗು ಮಿಂಚಿನ ಸಮಯ ನನಗೆ ಇಷ್ಟ ||
ಭಾರಿ ಬೆಟ್ಟವನೇರಿ ಪ್ರಕೃತಿಯ ಜೊತೆಸೇರಿ
ಗಡಸು ಗಾಳಿಯ ಬೀಸು ನನಗೆ ಇಷ್ಟ || ೨ ||
ಹಳೆ ನೆನಪ ಕೆದಕುತ್ತ ಲಘು ದಾಟಿ ಬೆರೆಸುತ್ತ
ಕಥೆಯನ್ನು ಹಂಚುವುದು ನನಗೆ ಇಷ್ಟ ||
ಭಾವಲೋಕದಿ ಬೆರೆತು ಭವದ ಕಷ್ಟವ ಮರೆತು
ಹೊಸ ಕವನ ಹೊಸೆಯುವುದು ನನಗೆ ಇಷ್ಟ || ೩ ||
ಇನ್ನಷ್ಟು ಮತ್ತಷ್ಟು ಬರೆಯುತ್ತ ಸಾಗಿದರೆ
ಮುಗಿವ ಲಕ್ಷಣ ಕಾಣೆ ನನ್ನ ಇಷ್ಟ ||
ನನ್ನ ವಿಷಯವನಿಲ್ಲಿ ನಾನು ನಿಲ್ಲಿಸಿ ಬಿಡುವೆ
ಹೇಳಿರೈ ನೀವೀಗ ನಿಮ್ಮ ಇಷ್ಟ || ೪ ||
- ಸುರೇಖಾ ಭೀಮಗುಳಿ
18/05/2016
ಚಿತ್ರ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
ಕವನ ಕಟ್ಟುವುದಕ್ಕೆ ಕಾರಣವೆ ಬೇಕಿಲ್ಲ
ರೇಖ- ಮೋಹಿನಿ ಎಂಬ ನಾರಿಯರಿಗೆ ||
ಸುಮ್ಮನೇ ಕುಳಿತಿರಲು ಮನಸು ಬಂದಿತು ಎಂದು
ಪದ್ಯ ಹೊಸೆವೆವು ನಾವು ಗೊತ್ತೆ ನಿಮಗೆ ? || ೧ ||
ಸಮಯ ಜಾರದ ಹೊತ್ತು- ಮನವು ಅರಳಿದ ಹೊತ್ತು
"ಪದ್ಯ ಕಟ್ಟೋಣವೇ ?" ಎಂಬ ಕರೆಯು ||
ಅವರಲ್ಲಿ ನಾನಿಲ್ಲಿ ಪದ್ಯ ಕಟ್ಟುವ ಆಟ
ಎಂಥ ಸೊಗಸೋ ಅದು ಪದ್ಯ ಸುರೆಯು || ೨ ||
ಯಾವುದೋ ಚಿತ್ರವನು ಕಳಹುತ್ತ ಕೇಳುವರು
ಪದ್ಯ ಕಟ್ಟೋಣವೇ ಇದನು ಕುರಿತು ? ||
ಮಳೆ ಬರುವ ಹಾಗಿದೆ ಅದರ ಕುರಿತೇ ಬರೆವ
ಆಗದೇ ? ಎನ್ನುವೆನು ನಾನು ಅರಿತು || ೩ ||
ಚಿತ್ರವಾದರೆ ಏನು ? ಭಾವವಾದರೆ ಏನು ?
ಕವನ ಕಟ್ಟುವುದಕ್ಕೆ ಯಾವುದೇನು ? ||
ಅವರೊಂದು-ನಾನೊಂದು ಪದ್ಯ ಬರೆದರೆ ಆಗ
ಪದ್ಯ ಬಂಡಿಯ ಚಕ್ರ ಅವರು - ನಾನು || ೪ ||
ನಾವು ಕಟ್ಟಿದ ಪದ್ಯ ಹೊಸೆದಿರುವ ಹೊಸ ಕವನ
ಎಲ್ಲದಕು ವೇದಿಕೆಯು ಫೇಸು ಬುಕ್ಕು ||
ವೇದಿಕೆಯ ಸಲ್ಲಾಪ ನಿಮ್ಮನಾದರಿಸಿಹುದು
ಇಷ್ಟವಾದರೆ ಒತ್ತಿ ಒಂದು ಲೈಕು || ೫ ||
- ಸುರೇಖಾ ಭೀಮಗುಳಿ
13/05/2016
ಚಿತ್ರ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
ಕವನ ಕಟ್ಟುವ ಕೆಲಸ ಶ್ರಮವ ಬೇಡುವುದಿಲ್ಲ
ಭಾವ ಒಂದಿಷ್ಟಂತು ಬೇಕೆ ಬೇಕು ||
ಪದವ ಹೆಣೆಯುವ ಜಾಣ್ಮೆ ಮತ್ತಿಷ್ಟು ಆಸಕ್ತಿ
ತುಸು ಪ್ರಾಸ ಹೊಂದಿಸಿದರಷ್ಟೆ ಸಾಕು || ೧ ||
ಮೊಗ್ಗೊಂದು ಹೂವಾಗಿ ವಿಕಸಿಸುವ ಅಂದದಲಿ
ಕವನ ಹೊರ ಚಿಮ್ಮುವವು ಹಿಡಿದು ಪಟ್ಟು ||
ಹೂವಿಂದ ಹೂಗಂಧ ಪಸರಿಸುವ ರೀತಿಯಲಿ
ಭಾವಗಳು ಹೊಮ್ಮುವುದೆ ಕವಿತೆ ಹುಟ್ಟು || ೨ ||
ಕವನ ಹುಟ್ಟುವುದೆನಗೆ ನವಿರಾದ ಭಾವದಲಿ
ಒಂದರಾ ಹಿಂದೊಂದು ಸಾಲು ಸಾಲು ||
ನನ್ನ ಬರೆ ನನ್ನ ಬರೆ ಎಂದು ಕಾಡುವವೆನ್ನ
ಬಿಟ್ಟುಬಿಡದೆಲೆ ಹಿಡಿದು ನನ್ನ ಕಾಲು || ೩ ||
ಪ್ರಾಸ ಹೊಂದಿದ ಪದ್ಯ ಹಿತಮಿತದ ಸೋಮರಸ
ಹಾಡ ತೊಡಗುವುದಲ್ಲ ಮುದದಿ ಮನಸು ||
ಒಂದು ಚಂದದ ರಾಗ ಹೊಂದಿಕೊಂಡರೆ ಆಗ
ಸಾರ್ಥಕ್ಯ ಹೊಂದುವುದು ಕವನ ಕನಸು || ೪ ||
- ಸುರೇಖಾ ಭೀಮಗುಳಿ
12/05/2016
ಚಿತ್ರ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
ಬಂದಿಹನು ಮಳೆರಾಯ ನಮ್ಮ ಕರೆಯನು ಕೇಳಿ
ಎತ್ತಿ ಆರತಿಯನ್ನು ನಮ್ವರುಣಗೆ ||
ಒಂದಿಷ್ಟು ದಿನವಿದ್ದು ಆತಿಥ್ಯ ಸ್ವೀಕರಿಸು
ಎಂದು ಒತ್ತಾಯಿಸಿರಿ ನನ್ನೊಟ್ಟಿಗೆ || ೧ ||
ಹನಿಯುತಿದೆ ಮಳೆ ಹೊರಗೆ ಪಿರಿಪಿರಿಯ ಶಬ್ದದಲಿ
ಗುಡುಗುಡುನೆ ಗುಡುಗುತಿದೆ ಬಾನ ಬಯಲು ||
ಶಬ್ದವನು ಕೇಳುತ್ತ ಮಳೆಯನ್ನು ನೋಡುತ್ತ
ಕವನವನು ಕಟ್ಟುವುದು ಎಂಥ ಅಮಲು || ೨ ||
ಮಲೆನಾಡ ಮುಂಗಾರು ಹೇಗಿತ್ತು ಗೊತ್ತೇನು ?
ಅಡಿಕೆ ಮರಗಳು ಹಾಗೆ ತೂಗುತಿತ್ತಲ್ಲ ||
ಬೆಂಗಳೂರಲಿ ಅದನು ಕಲ್ಪಿಸಲು ಆದೀತೆ ?
ಮನವಿಂದು ಹುಟ್ಟೂರ ನೆನೆಯುತಿದೆಯಲ್ಲ || ೩ ||
ಮಳೆಬಂದ ಸಂಭ್ರಮದಿ ನಿತ್ಯವಿಧಿ ತಪ್ಪೋಯ್ತು
ಸಂಜೆ ನಡಿಗೆಗೆ ಇಂದು ಬಿತ್ತು ರಜೆಯು ||
ಮನೆಹೊರಗೆ ಕುಳಿತು ನಾ ಮಳೆಯನಾಸ್ವಾದಿಸುವೆ
ಯಾರಿಗೇ ಬೇಕು ಆ ನಡಿಗೆ ಸಜೆಯು || ೪ ||
- ಸುರೇಖಾ ಭೀಮಗುಳಿ
06/05/2016
ಚಿತ್ರ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ...... https://www.facebook.com/surekha.bheemaguli