Tuesday, January 12, 2016

" ಕಂದನ ಹಾಡು - ಅಪ್ಪ-ಅಮ್ಮನ ಪಾಡು "

ಇನ್ನೇನು ಬೆಳಕಾಯ್ತು ಎದ್ದು ಬಿಡುವೆನು ನಾನು
ಬೆಚ್ಚಗಿಟ್ಟಳು ಮಗನ ಹೊದಿಕೆಯೊಳಗೆ ||
ಕಂದ ಏಳುವ ಮುನ್ನ ಕೆಲಸ ಮುಗಿಸುವೆ ತಾನು
ಎಂದು ಕೊಂಡಳು ತಾಯಿ ಮನದ ಒಳಗೆ || ೧ ||

ತಾಯಿ ಎದ್ದಾ ಒಡನೆ ಪುಟ್ಟಗೆಚ್ಚರವಾಯ್ತು
ಮೈಯ ಮುರಿಯುತಲೆದ್ದ ಹೊರಳಿಸುತ ಕತ್ತು ||
ನನ್ನ ಮುದ್ದಿನ ಮಗುವೆ... ಎದ್ದು ಬಿಟ್ಟೆಯ ಕಂದ ?
ಮಲಗ ಬಹುದಿತ್ತು ನೀ ಇನ್ನಷ್ಟು ಹೊತ್ತು || ೨ ||

ಹಸೆಯಿಂದ ಪಿಡಿದೆತ್ತಿ ಒದ್ದೆ ವಸ್ತ್ರವ ತೆಗೆದು
ಹಣೆಗೆ ಹೂಮುತ್ತಿಟ್ಟು ಅಪ್ಪಿಕೊಳುತ ||
ಎನರನ್ನ ನನಚಿನ್ನ ಎಂಥ ಸೊಗಸಿದು ಮಗುವೆ
ತಾಯ್ತನದ ಸೊಬಗೇ ನೀನೆನ್ನುತ || ೩ ||

ಹೊಟ್ಟೆ ತುಂಬಿದ ಮಗುವ ಅಪ್ಪನೆಡೆ ತಿರುಗಿಸುತ
ಎದ್ದು ಹೊರಟಳು ತಾಯಿ ಬಚ್ಚಲೆಡೆಗೆ ||
ಪುಟ್ಟ ಪಾದಗಳಲ್ಲಿ ಅಪ್ಪನನು ಮೆಟ್ಟುತ್ತ
ಗಮನ ಸೆಳೆಯಿತು ಮಗುವು ತನ್ನ ಕಡೆಗೆ || ೪ ||

ಎದ್ದೆಯಾ ನನಮುದ್ದು - ಏನು ಅವಸರವಿತ್ತು ?
ಬೆಚ್ಚ ಮಲಗುವ ಬಾರೊ ಮುಸುಕು ಹಾಕಿ ||
ಹೊರಗೆ ಚಳಿ ಕೊರೆಯುತಿದೆ ಬಿಸಿಲಿನ್ನು ಬಂದಿಲ್ಲ
ಮುಗಿಸಿಕೊಳ್ಳೋಣ ಬಾ ನಿದ್ದೆ ಬಾಕಿ || ೫ ||

ಕೈಕಾಲು ಬಡಿಯುತ್ತ ಬೊಚ್ಚುಬಾಯಗಲಿಸುತ
ಹೊದಿಕೆ ನೂಕಿದ ಕಂದ ಕಾಲಕಡೆಗೆ ||
ಅಮ್ಮನೆದ್ದಾಗೋಯ್ತು ನಾವು ಏಳೋಣ ನಡಿ
ಸೂರ್ಯ ಬರುತಾನೀಗ ನಮ್ಮ ಮನೆಗೆ || ೬ ||

- ಸುರೇಖಾ ಭೀಮಗುಳಿ
12/01/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

No comments:

Post a Comment