Thursday, January 28, 2016

" ಮುದ್ದು ಕಂದ "

" ಮುದ್ದು ಕಂದ "
-------------------
ನಿದ್ದೆಯ ಮಾಡಿಹ ಮುದ್ದಿನ ಕಂದನ
ಮುಖದಲ್ಲೇಕೋ ಮುಗ್ಧ ನಗು ||
ಕಾರಣವೇನೋ ? ಎನ್ನುವ ಯೋಚನೆ
ಏಕೆಂದರೆ ಅವ ನನ್ನ ಮಗು || ೧ ||

ಕನಸಲಿ ದೇವನ ಕಂಡನು ಪುಟ್ಟನು
ಎನ್ನುತಲಿಹಳೂ ಅವನಮ್ಮ ||
ದೇವರು ಪಾಠವ ಮಾಡುತಲಿಹರೋ ?
ಹೇಳಿಬಿಡು ನೀ ’ಹೌದಮ್ಮ’ || ೨ ||

ಮೋದದಿ ನಗುತಿಹ ಪುಟ್ಟನ ಮುಖವೂ
ಅರೆಕ್ಷಣದಲ್ಲಿ ಅಳುಮೋರೆ ||
ಯಾರೋ ನಿನ್ನನು ಹೆದರಿಸ ಬಂದರೆ ?
ಹೇಳಿಬಿಡೋ ನೀ ನನ್ನ ದೊರೆ || ೩ ||

ಪುಟ್ಟನೆ ಕಾಲ್ಗಳೊ ಮುದ್ದಿನ ಕೈಯ್ಯೋ
ಹಸಿಹಸಿ ಮೈಯ್ಯಾ ಹಸುಕೂಸು ||
ಕಲ್ಮಶವೆನ್ನುವ ಭಾವವೆ ಮೂಡದ
ಶುದ್ಧಾತ್ಮನ ನೆಲೆ ಹೂ ಮನಸು || ೪ ||

ರಾಮಚಂದಿರನೊ ಉಡುಪಿಯ ಕೃಷ್ಣನೊ
ಯಾರೈ ನೀನೂ ಹೇಳು ಮರಿ ||
ಮಧುಸೂದನನಾ ಪ್ರತಿರೂಪವು ನೀ
ನನ್ನಯ ಪಾಲಿಗೆ ನೀನೆ ಹರಿ || ೫ ||

- ಸುರೇಖಾ ಭೀಮಗುಳಿ
29/01/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

" ಓ ಮಗುವೇ...... "

" ಓ ಮಗುವೇ...... "
-------------------
ಓ ಮಗುವೆ ಓ ಮಗುವೆ ನನ್ನ ಮುದ್ದಿನ ಮಗುವೆ
ಬಂದೆಯಾ ನನ್ನೆಡೆಗೆ ನಾನು ಕರೆಯೆ ||
ಮಧುಪರ್ಕ ಹೂ ಹಣ್ಣು ಚಾಮರದ ತಂಗಾಳಿ
ಸ್ವಾಗತವು ಈ ಧರೆಗೆ ನನ್ನ ಸಿರಿಯೆ || ೧ ||


ಸಿರಿಯ ಸಂಪತ್ತುಗಳ ಮತ್ತಿಷ್ಟು ರತ್ನಗಳ
ಎಲ್ಲಿಂದ ಹೊಂದಿಸಲಿ ಮುದ್ದು ಮರಿಯೆ ? ||
ತುಂಬು ಪ್ರೀತಿಯ ಮುತ್ತು ನಾ ಕೊಡುವ ಸಿರಿ ನಿನಗೆ
ಧರಿಸಿಕೋ ನೀನದನೆ ನನ್ನ ದೊರೆಯೆ || ೨ ||


ಅರೆಘಳಿಗೆ ವಿಶ್ರಮಿಸು ನನ್ನ ಹೆಗಲಿನ ಮೇಲೆ
ನಿನ್ನ ಮೃದು ಸ್ಪರ್ಷಕೆ ಸೋತೆ ಚಿನ್ನ ||
ಆವ ಪುಣ್ಯದ ಫಲವೊ ಮಗುವಾಗಿ ಜನಿಸಿರುವೆ
ಅಪ್ಪನೆನ್ನವ ಭಾವ ಎಷ್ಟು ಚೆನ್ನ || ೩ ||


ನಿನಗಾಗಿ ನಾವ್ ಕಾದ ನವ ಮಾಸಗಳು ನನಗೆ
ನವಯುಗದ ತೆರದಲ್ಲಿ ತೋರಿತಲ್ಲ ||
ಮುದ್ದು ಮೊಗದಲಿ ನಗುವು ಎಂದು ಮಾಸದೆ ಇರಲಿ
ಬೇರೇನು ಹೊಸ ಆಸೆ ನನಗೆ ಇಲ್ಲ || ೪ ||



ತೋರಿಸುವೆ ಈ ಜಗವ ಹೊತ್ತು ಹೆಗಲಿನ ಮೇಲೆ
ಅಚ್ಚರಿಯ ಕಣ್ಬಿಟ್ಟು ನೀನು ನೋಡು ||
ಎಂಥ ಚಂದದ ಬದುಕು ನೀ ನನ್ನ ಜೊತೆಗಿರಲು
ಬದುಕಿತ್ತ ಸ್ವಾಮಿಗೆ ನಮನ ಮಾಡು || ೫ ||


- ಸುರೇಖಾ ಭೀಮಗುಳಿ
28/01/2016
ಚಿತ್ರ : ಅಂತರ್ಜಾಲ


ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ...... https://www.facebook.com/surekha.bheemaguli

Wednesday, January 27, 2016

" ಅಕೇಷಿಯಾ - ಅಕೇಷಿಯಾ "

ನಡೆವ ಗುರಿಯನೆ ಮರೆತ ನನ್ನೂರ ದಾರಿಯಲಿ
ಹುಡುಕುತಿರುವೆನು ನನ್ನ ಹೆಜ್ಜೆ ಗುರುತು ||
ಹಾದಿಯಾಚೀಚೆಯಲಿ ಬೆಳೆದಿಹುದು ಅಕೇಷಿಯ
ಕಳೆದುಕೊಂಡಿಹೆನಿಲ್ಲಿ ಮನದ ಮಾತು || ೧ ||

ಹಸಿರು ಹುಲ್ಲಿತ್ತಲ್ಲಿ ಗಿಡ ಚಿಗುರುತ್ತಿತ್ತಲ್ಲೆ
ಹುಲ್ಲು ಮೇಯುತಲಿತ್ತು ನಮ್ಮ ಎಮ್ಮೆ ||
ಹುಲ್ಲುಗಾವಲೆ ಇಲ್ಲ ಹಸುವು ಕೊಟ್ಟಿಗೆಯಲ್ಲೆ
ನಿಟ್ಟುಸಿರು ಬಿಟ್ಟಿಹೆನು ನಾನು ಒಮ್ಮೆ || ೨ ||


ನೆಲದ ಸಾರವ ಸೆಳೆವ ನೀರ ಸೆಲೆಯನೆ ಕಸಿವ
ನಮ್ಮೂರದಲ್ಲವೀ ಮರದ ಜಾತಿ ||
ಹೂವಿಲ್ಲ ಹಣ್ಣಿಲ್ಲ ಹೀಚು ಕಾಯಿಗಳಿಲ್ಲ
ದೂರನಿತ್ತಿದೆ ನಮ್ಮ ಕಾಡ ಕೋತಿ || ೩ ||


ಎಲ್ಲಿಂದಲೋ ಬಂದ ಹೊಸ ಬಗೆಯ ಸಸ್ಯವಿದು
ಬೇಗ ಕರಗದು ಎಲೆಯು ಮಣ್ಣಿನೊಳಗೆ ||
ಕೊನೆಗೊಂದು ದಿನ ಯಾರೊ ಮರವ ಕಡಿದೊಯ್ವರೋ
ಬೋಳು ನೆಲವನು ಬಿಟ್ಟು ನಮ್ಮೂರಿಗೆ || ೪ ||


- ಸುರೇಖಾ ಭೀಮಗುಳಿ
27/01/2016
ಚಿತ್ರ : Bellala Gopinath Rao

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Tuesday, January 12, 2016

" ಕಂದನ ಹಾಡು - ಅಪ್ಪ-ಅಮ್ಮನ ಪಾಡು "

ಇನ್ನೇನು ಬೆಳಕಾಯ್ತು ಎದ್ದು ಬಿಡುವೆನು ನಾನು
ಬೆಚ್ಚಗಿಟ್ಟಳು ಮಗನ ಹೊದಿಕೆಯೊಳಗೆ ||
ಕಂದ ಏಳುವ ಮುನ್ನ ಕೆಲಸ ಮುಗಿಸುವೆ ತಾನು
ಎಂದು ಕೊಂಡಳು ತಾಯಿ ಮನದ ಒಳಗೆ || ೧ ||

ತಾಯಿ ಎದ್ದಾ ಒಡನೆ ಪುಟ್ಟಗೆಚ್ಚರವಾಯ್ತು
ಮೈಯ ಮುರಿಯುತಲೆದ್ದ ಹೊರಳಿಸುತ ಕತ್ತು ||
ನನ್ನ ಮುದ್ದಿನ ಮಗುವೆ... ಎದ್ದು ಬಿಟ್ಟೆಯ ಕಂದ ?
ಮಲಗ ಬಹುದಿತ್ತು ನೀ ಇನ್ನಷ್ಟು ಹೊತ್ತು || ೨ ||

ಹಸೆಯಿಂದ ಪಿಡಿದೆತ್ತಿ ಒದ್ದೆ ವಸ್ತ್ರವ ತೆಗೆದು
ಹಣೆಗೆ ಹೂಮುತ್ತಿಟ್ಟು ಅಪ್ಪಿಕೊಳುತ ||
ಎನರನ್ನ ನನಚಿನ್ನ ಎಂಥ ಸೊಗಸಿದು ಮಗುವೆ
ತಾಯ್ತನದ ಸೊಬಗೇ ನೀನೆನ್ನುತ || ೩ ||

ಹೊಟ್ಟೆ ತುಂಬಿದ ಮಗುವ ಅಪ್ಪನೆಡೆ ತಿರುಗಿಸುತ
ಎದ್ದು ಹೊರಟಳು ತಾಯಿ ಬಚ್ಚಲೆಡೆಗೆ ||
ಪುಟ್ಟ ಪಾದಗಳಲ್ಲಿ ಅಪ್ಪನನು ಮೆಟ್ಟುತ್ತ
ಗಮನ ಸೆಳೆಯಿತು ಮಗುವು ತನ್ನ ಕಡೆಗೆ || ೪ ||

ಎದ್ದೆಯಾ ನನಮುದ್ದು - ಏನು ಅವಸರವಿತ್ತು ?
ಬೆಚ್ಚ ಮಲಗುವ ಬಾರೊ ಮುಸುಕು ಹಾಕಿ ||
ಹೊರಗೆ ಚಳಿ ಕೊರೆಯುತಿದೆ ಬಿಸಿಲಿನ್ನು ಬಂದಿಲ್ಲ
ಮುಗಿಸಿಕೊಳ್ಳೋಣ ಬಾ ನಿದ್ದೆ ಬಾಕಿ || ೫ ||

ಕೈಕಾಲು ಬಡಿಯುತ್ತ ಬೊಚ್ಚುಬಾಯಗಲಿಸುತ
ಹೊದಿಕೆ ನೂಕಿದ ಕಂದ ಕಾಲಕಡೆಗೆ ||
ಅಮ್ಮನೆದ್ದಾಗೋಯ್ತು ನಾವು ಏಳೋಣ ನಡಿ
ಸೂರ್ಯ ಬರುತಾನೀಗ ನಮ್ಮ ಮನೆಗೆ || ೬ ||

- ಸುರೇಖಾ ಭೀಮಗುಳಿ
12/01/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Friday, January 8, 2016

" ಭಯವೇಕೆ ಎನ್ನರಸಿ......? "

ವಯಸಾಯ್ತು ನಿನಗೆಂದು ಚಿಂತಿಸಲು ಬೇಡವೇ
ಆಗಿಲ್ಲವೇ ನನಗೆ ನಿನಗಿಂತ ಹೆಚ್ಚು ||
ಮಾಸುತಿದೆ ಸೌಂದರ್ಯ ಎಂದು ಕೊರಗುವೆಯೇಕೆ ?
ಹೇಗೆ ಇರು ನೀ ಎನಗೆ ಅಚ್ಚು ಮೆಚ್ಚು || ೧ ||

ಹೆತ್ತು ನೀ ಕೊಟ್ಟಿರುವೆ ಮುತ್ತಂತ ಮಕ್ಕಳನು
ಸಂಸ್ಕಾರ ಕೊಟ್ಟಿಹೆವು ಜತನದಲ್ಲಿ ||
ಅವರವರ ಬಾಳನ್ನು ಕಟ್ಟಿಕೊಳ್ಳುವರವರು
ದುಗುಡವ್ಯಾತಕೆ ಹೇಳು ನಿನ್ನ ಮನದಲ್ಲಿ ? || ೨ ||

ಮಕ್ಕಳನು ಪ್ರೀತಿಯಲಿ ಬೆಳೆಸುವುದು ಕರ್ತವ್ಯ
ಅದನು ಮಾಡಿಹೆವಲ್ಲ ಶ್ರದ್ಧೆಯಲ್ಲಿ ||
ಬೇಕಿಲ್ಲ ಇನ್ನೇನು ಸಾಕೆನ್ನುವುದೆ ಮಂತ್ರ
ವಿದುರ ಮಾದರಿ ನಮಗೆ ಬದುಕಿನಲ್ಲಿ || ೩ ||

ಈ ದೇಹ ಸೋಲುತಿದೆ ಎಂದೇಕೆ ಮರುಗುವೇ
ಶಾಶ್ವತವು ಯಾವುದಿದೆ ಜಗದ ಒಳಗೆ ||
ಬಂದದ್ದು ಬರುತಿರಲಿ ಎದುರಿಸುವ ಮನವಿರಲಿ
ಹೆಜ್ಜೆ ಇಡು ಧೈರ್ಯದಲಿ ನನ್ನ ಜೊತೆಗೆ || ೪ ||

ವಾಸಕ್ಕೆ ಮನೆಯಿಹುದು ವೆಚ್ಚಕ್ಕೆ ಹೊನ್ನಿಹುದು
ಜೊತೆಗಾತಿಯಾಗಿ ನೀ ಜೊತೆಯಲಿರುವೆ ||
ಕಣ್ಣ ರೆಪ್ಪೆಯ ತರದಿ ನಾ ನಿನ್ನ ಕಾಯುವೆನು
ಭಯವೇಕೆ ಎನ್ನರಸಿ ನಾನಿಲ್ಲವೆ || ೫ ||

ನಾಳಿನಾ ಚಿಂತೆಯಲಿ ಇಂದು ಬೆದರುವೆಯೇಕೆ ?
ಆಗಬೇಕೆನ್ನುವುದು ಆಗೆ ಸಿದ್ಧ ||
ಹಣೆಯ ಬರಹವನಂದು ಆ ಬ್ರಹ್ಮ ಬರೆದಾಯ್ದು
ಬದುಕು ಅದರಂತೆಯೇ ಆಗಿ ಬದ್ಧ || ೬ ||

- ಸುರೇಖಾ ಭೀಮಗುಳಿ
07/01/2016
ಚಿತ್ರ : ಅಂತರ್ಜಾಲ

 ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Tuesday, January 5, 2016

" ಸಾಂತ್ವನ "

ಓ ಗಂಡಸೇ....  ನೀನೆಷ್ಟು ಒಳ್ಳೆಯವನು..... ನೊಂದಿರುವ ನಿನಗಾಗಿಯೇ ಈ ಪದ್ಯವನ್ನು ಬರೆದೆ.... ನಿನ್ನ ಸ್ವಂತ(?) ಹೆಂಡತಿಯೇ ನಿನಗಾಗಿ ಈ ಹಾಡನ್ನು ಹಾಡುವಂತಾಗಲಿ ಎಂಬ ಆಶಯ ನನ್ನ ಮನದಲ್ಲಿ ....................

" ಸಾಂತ್ವನ "
----------------
ನನ್ನ ಬೇಗುದಿಯನ್ನು ಕೇಳುವವರಾರಿಲ್ಲ
ಎಂದು ನೀ ನೋಯದಿರು ಮನದ ಒಳಗೆ ||
ನಿನ ನೋವುಗಳಿಗೆಲ್ಲ ಕಿವಿಯಾಗ ಬಲ್ಲೆ ನಾ
ಬಿಚ್ಚಿಟ್ಟು ಹಗುರಾಗು ಅರ್ಧ ಘಳಿಗೆ || ೧ ||

ನಿನ್ನ ಸಂಕಟಕೆಲ್ಲ ಕಾರಣವು ನಾನಲ್ಲ
ಅವುಗಳಿಗೆ ಪರಿಹಾರ ನಾನು ಕಾಣೆ ||
ನೋವುಗಳ ಮನದಲ್ಲೇ ಕಟ್ಟಿ ಹಾಕುವೆಯೇಕೆ ?
ಇರುವೆನಾ ನಿನ್ನೊಡನೆ ದೇವರಾಣೆ || ೨ ||

ಹೊಂಬೆಳಕು ಮೂಡುವುದು ಕತ್ತಲೆಯ ನಂತರದಿ
ಸಂಕಟವ ಸರಿಸುವುದು ಸುಖದ ಕನಸು ||
ಕಾಯೋಣ ತಾಳ್ಮೆಯಲಿ ಆ ದೈವನಣತಿಯಲಿ
ಕುಗ್ಗದಿರಲೆಂದೆಂದು ನಿನ್ನ ಮನಸು || ೩ ||

ದುಃಖ ದುಮ್ಮಾನಗಳು ನಿನ್ನ ಕೊಲ್ಲುತ್ತಿಹವು
ಅರ್ಥವಾಗದು ನನಗೆ ನಿನ್ನ ಮೌನ ||
ನೀ ಹೇಳದೆ ಹೇಗೆ ಅರಿತುಕೊಳ್ಳುವೆ ನಾನು ?
ಬೇಕೊ ಬೇಡವೊ ಹೇಳು ನನ್ನ ಸಾಂತ್ವನ ? || ೪ ||

- ಸುರೇಖಾ ಭೀಮಗುಳಿ
 06/01/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli