Saturday, March 21, 2015

"ಹೊಂಗೆಯ ಗುಂಗು"

ಹೊಂಗೆಯ ಗಾಳಿಯು ತೀಡುತ ಬರುತಿರೆ
ನನ್ನಯ ಮನಸಿಗೆ ಮುದನೀಡಿ ||
ಹಚ್ಚ ಹಸಿರಿನಾ ಸ್ವಚ್ಛ ಪರಿಸರ
ಹೊಂಗೆಯ ಪ್ರಭಾವದಾ ಮೋಡಿ ! || 1 ||

ಅಂಗಳ ಗುಡಿಸಿದ ಕೆಲವೇ ಕ್ಷಣದಲಿ
ಹೊಂಗೆಯ ಹೂಗಳ ನೆಲಹಾಸು ||
ಮನೆಯಂಗಳಕೆ ಹೂವಿನ ರಂಗೋಲಿ
ಕೇಳದೆ ನನ್ನನು ಬಿಡಿಗಾಸು || 2 ||

ಮಧುವನು ಹುಡುಕುತ ಜೇನ್ನೊಣ ಬಂದಿದೆ
ಹೂವಿನ ಜಾಡನು ಅರಸುತ್ತಾ || 
ಮರದಲಿ ತುಂಬಿದ ಹೂಗಳ ನೋಡಿದೆ
ಯಾವುದನ್ನಾಯಲಿ ಎನ್ನುತ್ತಾ || 3 ||

ಹೊಂಗೆಯ ನೆರಳದು ಅಂಗಳ ತುಂಬಿದೆ
ತಂಪಿನ ಭಾವವ ನೀಡುತಲಿ ||
ಬೀಸಿದ ಗಾಳಿಗೆ ಎಲೆಗಳ ನರ್ತನ
ಹರುಷದ ಹೊನಲನು ಹರಿಸುತಲಿ || 4 ||

-ಸುರೇಖಾ ಭಟ್, ಭೀಮಗುಳಿ
21/03/2015

"ಯುಗಾದಿ ಆಶಯ"

ಯುಗಾದಿ ಬಂದಿದೆ ಹಿಗ್ಗನು ತಂದಿದೆ
ಬಾಳಿನ ನಂದನ ವನದಲ್ಲಿ ||
ಸುಖ ಸಂಭ್ರಮಗಳು ತುಂಬಿ ತುಳುಕಲಿ
ನಮ್ಮಯ ಬಾಳಿನ ಪಥದಲ್ಲಿ || 1 ||

ಹೊಂಗೆಯ ಮರದಲಿ ಹೂವುಗಳರಳಿವೆ
ದುಂಬಿಯ ನರ್ತನ ಒಡನಾಟ ||
ಹಸಿರಿನ ಹೆಮ್ಮರ ಬಿಳಿಬಿಳಿ ಹೂಗಳು
ಅಂಗಳದಲ್ಲಿನ ತಿಳಿನೋಟ || 2 ||

ಇಂದಿನವರೆಗಿನ ಕಹಿ ನೆನಪೆಲ್ಲವು 
ಮರೆಯಾಗಲಿ ಮನದೊಡಲಿಂದ ||
ತುಂಬಲಿ ಸಂತಸ - ಉಕ್ಕಲಿ ಹರುಷ
ನಮ್ಮಯ ಬಾಳಿನ ಕಡಲಿಂದ || 3 ||

ಪ್ರಕೃತಿ ಹಸಿರಿನ ಉಡುಗೆಯ ತೊಟ್ಟು
ಬಂದಳು ನಮ್ಮನು ಹರಸುತ್ತ ||
ಕರುಣೆಯ ಸವಿಯನು ಸವಿಯುವ ಬನ್ನಿರಿ
ಆಕೆಯ ಪಾದಕೆ ನಮಿಸುತ್ತ || 4 ||

- ಸುರೇಖಾ ಭಟ್, ಭೀಮಗುಳಿ
21/03/2015

Sunday, March 1, 2015

"ಇದು ಪದ್ಯವೂ ಅಲ್ಲ - ಗದ್ಯವೂ ಅಲ್ಲ !"

ಓ ಮುದ್ದು ಮಕ್ಕಳೇ ! 
ನೀವೇಕೆ ಮುಚ್ಚಿ ಕುಳಿತಿರಿ ಕಿವಿ-ಬಾಯಿ-ಕಣ್ಣು ?
ಗಾಂಧೀಜಿಯ ಮಂಗಗಳಂತೆ
ಹಾಗೆ ಕುಳಿತುಕೊಳ್ಳಬೇಕಾದವರು ನಾವು....
ಪೋಷಕರು ! ಏಕೆ ಗೊತ್ತೇ ?

ನಿಮ್ಮನ್ನು ಸಭ್ಯ ರೀತಿಯಲ್ಲಿ ಬೆಳೆಸಲರಿಯದೆ
ನಾವೀಗ ಕುಳಿತಿದ್ದೇವೆ ತಲೆಯ ಮೇಲೆ ಕೈ ಹೊತ್ತು
ಥೇಟು ಈ ಮಂಗಗಳಂತೆ !

ಕಂಡದ್ದನ್ನೆಲ್ಲ ಬೇಕೆನ್ನುವ ನಿಮ್ಮನ್ನು 
ಸುಮ್ಮನಾಗಿಸುವ ದಾರಿ ಕಾಣದಾಗಿದೆ ನಮಗೆ
ಕೇಳಿದ್ದೆಲ್ಲ ಕೊಡಿಸಿದರೆ ಹಠಮಾರಿಗಳಾಗುತ್ತೀರಿ
ಕೊಡಿಸದಿದ್ದರೆ ಹಠಮಾಡಿ ನಮ್ಮ ಮೇಲೆ ಸಿಟ್ಟಾಗುತ್ತೀರಿ !
ನಿಮ್ಮ ಬೇಡಿಕೆಗೆ ಜಾಣ ಕಿವುಡನ್ನು ಪ್ರದರ್ಶಿಸದಿದ್ದರೆ ಹೇಗೆ ?

ನಾವು ಹೇಳುವ ನೀತಿ-ಬುದ್ಧಿವಾದ ನಿಮಗೆ ಬೇಕಿಲ್ಲ
ನಿಮಗೆ ಬೇಡದ ಬುದ್ಧಿವಾದ ಹೇಳುವುದಕ್ಕಿಂತ 
ಮೂಗರಂತಿರುವುದೇ ಲೇಸಲ್ಲವೇ ?

ಬೇಡವೆಂದರೂ ಬೆನ್ನು ಹತ್ತಿದ್ದೀರಿ ಟಿವಿ-ಮೊಬೈಲು-ಇಂಟರ್ನೆಟ್ಟು !
ಆಟ-ಪಾಠ-ಸಂಗೀತ ಎಲ್ಲಕ್ಕೂ ಬೇಕು ನಮ್ಮ ಒತ್ತಾಯ
ನಮ್ಮ ಒತ್ತಾಯವೇ ಇಲ್ಲದೆ ನೀವು ಮಾಡುವ ಕೆಲಸ 
ಟಿವಿ-ಮೊಬೈಲು-ಇಂಟರ್ನೆಟ್ಟಿನ ಸಹವಾಸ
ಹಾಗಾದಾಗ ನಾವು ಕುರುಡರಂತಿರುವುದೇ ಲೇಸಲ್ಲವೇ ?

ಸ್ವತಂತ್ರ ಬಂದದ್ದು ಯಾರಿಗೆ ? ನಿಮಗೋ ? ನಮಗೋ ?
ಈಗ ಹೇಳಿ : ಕಿವಿ-ಬಾಯಿ-ಕಣ್ಣು ಮುಚ್ಚಿ 
ಕುಳಿತುಕೊಳ್ಳಬೇಕಾದವರು ನಾವೋ ನೀವೋ ?

-ಸುರೇಖಾ ಭಟ್, ಭೀಮಗುಳಿ
01/03/2015