Sunday, April 29, 2018

"ಹೀಗೊಂದು ನೆನಪು"




(ಇಪ್ಪತ್ತೆಂಟು ವರ್ಷದ ಹಿಂದೆ ನಡೆದ ಅಕ್ಕನ ಮದುವೆಯ ನೆನಪಿನಲ್ಲಿ.... )
ಹೊಂಗನಸಿನೊಡಗೂಡಿ ಭಾವಯ್ಯ ಬರುವಾಗ
ಹೊಂಗೆ ಹೂ ಹಾಸಿದ್ದ ಹಾದಿಯಿತ್ತು ||| 
ತಂಗಾಳಿಯಲಿ ತೇಲಿ ತವರೂರು ಸುಖಿಸಿತ್ತು 
ಸಿಂಗಾರಗೊಂಡಿದ್ದ ಹೆಣ್ಣು ಹೊತ್ತು || ೧ ||
ಮರೆಯಿಂದಲಿಣುಕಿದ್ದ ನಮಗೆ ಕಂಡದ್ದೇನು 
ಮರೆಯ ಮಾಚದೆ ಪೇಳ್ವೆ ಕೇಳಿರೀಗ ||
ಅರೆಬಿರಿದ ತುಟಿಯಲ್ಲಿ ಭಾವಯ್ಯ ನಗುತಿರಲು
ಮೆರೆದಿತ್ತು ಮೊಗದಲ್ಲಿ ಪ್ರೇಮರಾಗ || ೨ ||
ತುಸುನಕ್ಕ ನನ್ನಕ್ಕ ನಾಚಿ ನೀರಾಗುತಿರೆ
ನಸುಗೆಂಪು ಕದಪಿನಲಿ ರಾರಾಜಿಸಿ ||
ಪಿಸುಮಾತಿನಲ್ಲುಲಿದು ಭಾವನನು ಕಾಡಿದೆವು
ಬೆಸೆದ ಬದುಕಿನ ಬಗೆಗೆ ತುಸು ರೇಗಿಸಿ || ೩ ||
ಮನೆಯೊಳಾಗಿರಲಿಲ್ಲ ಪರಿಪರಿಯ ಜರಿಸೀರೆ
ಮನದೊಳಗೆ ಬತ್ತದಿಹ ಉತ್ಸಾಹವಿತ್ತು ||
ಕನಸುಗಳೆ ನಮಗಿದ್ದ ಬಂಗಾರದೊಡವೆಗಳು 
ನನಗಾಗ ಹದಿಹರೆಯ ಬಂದ ಹೊತ್ತು || ೪ ||
- ಸುರೇಖಾ ಭೀಮಗುಳಿ
13/04/2018
ಚಿತ್ರ : ನನ್ನ ನಾಲ್ಕನೆಯ ಅಕ್ಕನ ಮದುವೆಯ ಫೋಟೋ.

"ಸ್ಯಾರಿ- ಸ್ವಾರಿ-ಸ್ಟೋರಿ" (Saree-Sorry-Story)

Image may contain: 3 people, people smiling, people sitting and indoor

ತರಳೆಯರು ಮುಳುಗಿಹರು ಕನಸುಗಳ ಜಾಲದಲಿ
ಅರಳಿ ನಿಲ್ಲಲಿಯವರ ಭವಿತವ್ಯವು ||
ಪರಿಪರಿಯ ಭಾವಗಳ ಸ್ಫುರಿಸುತಿವೆ ನಯನಗಳು
ಮೆರೆಯುತಿದೆ ಪ್ರಜ್ವಲಿಸುತಿರುವ ಮೊಗವು|| ೧ ||😍😍😍

ಯಾರಿವರು ಕನ್ನಿಕೆಯರೆಂದು ಯೋಚಿಸುತಿದ್ದೆ
ಬಂಗಾರದಂಗಡಿಯ ರೂಪಸಿಯರು ||
ಸಾರಿ ಕುಳಿತಿಹರಿಲ್ಲಿ ಭಾರಿ ಮಾತಾಡುತ್ತ
ಸೀರೆಯೊಡನೊಡವೆಯನು ಮೆರೆಸುತಿಹರು || ೨ || 😜😜😜

ಅಂದು ಸಂಜೆಯ ವೇಳೆ ಚಂದನೆಯ ಚಿತ್ರವಿದ
ಮುಂದಿಟ್ಟು ತೋರಿದೆನು ನನ್ನವರಿಗೆ ||
'ಅಂದಗಾತಿಯರಿವರು ಮೇರು ಸೌಂದರ್ಯದಲಿ'
ಎಂದು ಹೊಗಳಿದರಿವರು ನನ್ನೆದುರಿಗೆ ! || ೩ || 😳😳😳

ತೋರಿದ್ದು ಸೀರೆಯನು ಕಂಡದ್ದು ನಾರಿಯರು
ಬಾರದಿರುವುದೆ ನನಗೆ ಕೊಂಚ ಸಿಟ್ಟು ? ||
ಬೇರೆ ಮಾತಾಡದಲೆ ತನ್ನಿರಿಂಥದ್ದೊಂದು
ಸೀರೆ ಬೇಕೆನಗೆಂದೆ ಬಿಡದೆ ಪಟ್ಟು || ೪ || 😡😡😡

ದಾರಿಕಾಣದೆಯಿವರು ನಾರಿಯರ ಪಟಪಿಡಿದು 
ಸೀರೆಯಂಗಡಿಯಲ್ಲಿ ಹುಡುಕಿ ಹುಡುಕಿ ||
ಮೋರೆ ಕಪ್ಪಾಯಿತದೊ 'sorry' ಕೇಳಿಹರೀಗ
'ಬೇರೆ ನಾರಿಯ ಹೊಗಳೆನಿನ್ನು ದುಡುಕಿ' || ೫ || 😥😥😥

ಛೇ ! ಪಾಪ ! 😁😁😁

- ಸುರೇಖಾ ಭೀಮಗುಳಿ
26/03/2018
ಚಿತ್ರ : kavana TN jois ಅವರ ಗೋಡೆಯಿಂದ.
ತಿದ್ದುಪಡಿ ಮಾರ್ಗದರ್ಶನ : ವಿಶ್ವ ಸರ್.