ಪ್ರಾಸಹೊಂದಿಸುವುದನು ತ್ರಾಸವೆಂದೆಣಿಸದಿರಿ
ಬಲು ಸೊಗಸು ವ್ಯಾಯಾಮ ನಂಮಿದುಳಿಗೆ ||
ಜತನದಲಿ ಹೊಸೆಯುವುದೆ ತೃಪ್ತಿಯೀಯುವ ಕೆಲಸ
ಶೋತೃವಿನ ಹಂಗಿಲ್ಲ ನಿಜಗವಿತೆಗೆ || ೧ ||
ಗುರಿಯೆಡೆಗೆ ಪಯಣಿಸುವ ಅನುಭವದಿ ಆಹ್ಲಾದ
ತಲುಪಿದೊಡೆ ಏನುಂಟು ಬರಿಯ ಗಮ್ಯ ||
ಪದಕೆ ಪದವನು ಹೊಸೆದು ಮಾತ್ರೆ ಪ್ರಾಸದಿ ಬೆಸೆದು
ಛಂದಸ್ಸು ಹೊಂದಿಸುವ ಕೆಲಸ ರಮ್ಯ || ೨ ||
ನಸುಬಿರಿದ ಮೊಗ್ಗುಗಳ ಸೂತ್ರದೊಲು ಬಂಧಿಸಲು
ಶೃಂಗಾರಗೊಳ್ಳುವುದು ಕುಸುಮ ಹಾರ ||
ಮನದಲರಳಿದ ಭಾವ ಕ್ರಮದಲ್ಲಿ ಹೊಂದಿಸಲು
ಸೃಷ್ಟಿಗೊಳ್ಳುವುದಲ್ಲಿ ಕಾವ್ಯ ಸಾರ ||
ಮನಸು ಇದ್ದರೆ ಸಾಕು ಕೊಂಚ ಪರಿಶ್ರಮ ಬೇಕು
ಕ್ರಮ ಬಿಡದೆ ಮುನ್ನೆಡೆವ ದೃಢತೆ ಬೇಕು ||
ಕವಿ ಬರೆದ ಕವನವನು ಓದುಗನು ಗುನುಗುನಿಸೆ
ಸಾರ್ಥಕ್ಯವೆನ್ನಿಪುದು ಕವಿಯ ಬದುಕು || ೩ ||
- ಸುರೇಖಾ ಭೀಮಗುಳಿ
17/10/2016
ಚಿತ್ರ ಕೃಪೆ : ಅಂತರ್ಜಾಲ
ಪ್ರೀತಿ ಎಂಬ ಭಾವದಲ್ಲಿ
ಬಂಧಿಸಿಡುವಿರೇಕೆ ? ||
ಪಕ್ಷಿಯೊಂದ ಹಿಡಿದು ತಂದು
ಗೂಡಲಿಟ್ಟ ಹಾಗೆ || ೧ ||
ಇಟ್ಟ ಗೂಡು ಚಿನ್ನವೆಂದು
ಹಕ್ಕಿಗೇನು ಗೊತ್ತು ? ||
ಉಸಿರುಕಟ್ಟಿ ಸಾಯದಿರಲಿ
ಗಗನವದರ ಸೊತ್ತು || ೨ ||
ಶುದ್ಧವಾದ ಪ್ರೀತಿಗಿರದು
ಕಳೆದು ಹೋಗೊ ಭೀತಿ ||
ಕಟ್ಟಿ ಹಾಕಿ ಕೊಲ್ಲ ಬೇಡಿ
ಅದುವೆ ನಿಮಗೆ ನೀತಿ || ೩ ||
- ಸುರೇಖಾ ಭೀಮಗುಳಿ
14/10/2016
ಚಿತ್ರ : ಅಂತರ್ಜಾಲ
ಭಾವ ಋಣ : Raghavendra Raghu ಅವರ ಪದ್ಯದಿಂದ ಕದ್ದದ್ದು.
ಮೆಲ್ಲಮೆಲ್ಲನೆ ನನ್ನ ಆವರಿಸದಿರು ನೆನಪೆ
ಸಲ್ಲದಿಹ ವ್ಯಾಮೋಹ ನಿನಗದೇಕೆ ? ||
ಕೊಲ್ಲಲಾರೆಯೊ ನೀನು ಮತ್ತೊಮ್ಮೆ ಎದುರಾಗಿ
ತಲ್ಲಣವ ಸೃಷ್ಟಿಸುವ ಸಂಚದೇಕೆ ? || ೧ ||
ನಿನ್ನ ಇರುವಿಕೆ ನನಗೆ ಹೆಚ್ಚೇನು ಬಾಧಿಸದು
ನಿನ್ನಿಂದ ಕಲಿತಿಹೆನು ಬದುಕ ಪಾಠ ||
ನಿನ್ನಿಂದಲೇ ನನ್ನ ಜೀವನಕೆ ಒಂದರ್ಥ
ನಿನ್ನೊಂದಿಗೇ ನನ್ನ ಬಾಳ ಓಟ || ೨ ||
ಕಹಿನೆನಪುಗಳೆ ಬನ್ನಿ ಕಹಿಯನಲ್ಲಿಯೆ ಬಿಟ್ಟು
ಸಿಹಿನೆನಪುಗಳೆ ನಿಮಗೆ ನನ್ನ ಕರೆಯು ||
ಸಹಿಹಾಕಿ ತೆರಳುತಲಿ ಹೊಸನೆನಪನೊಯ್ಯಿರೀ
ದಹಿಸದಿರಿ ಆತ್ಮವನು ಇದುವೆ ಮೊರೆಯು || ೩ ||
- ಸುರೇಖಾ ಭೀಮಗುಳಿ
04/10/2016
ಚಿತ್ರ : ಅಂತರ್ಜಾಲ