Monday, March 14, 2016

" ಒಂದು ನೆನಪು.... "

ಮಲೆನಾಡ ಚಪ್ಪರದಿ ಸಂಜೆ ಇಳಿ ಬಿಸಿಲಿನಲಿ
ವಿರಮಿಸಿದ ಸುಖಘಳಿಗೆ ಒಂದು ನೆನಪು ||
ಸೂರ್ಯಾಸ್ತ ವೇಳೆಯಲಿ ಕೈತುತ್ತ ಕೊಟ್ಟಂಥ
ಅಕ್ಕನನು ನೆನೆಸುತಿದೆ ಒಂದು ನೆನಪು || ೧ ||

ಬಾನಿನಂಗಳದಲ್ಲಿ ಪಕ್ಷಿ ಗುಂಪದು ಹಾರಿ
ಚಿತ್ರಿಸಿದ ಚಿತ್ತಾರ ಒಂದು ನೆನಪು ||
ಬಣ್ಣದೋಕುಳಿಯಲ್ಲಿ ಮಿಂದೆದ್ದ ಆಗಸದ
ಸವಿರಂಗ ನೆನೆಸಿಹುದು ಒಂದು ನೆನಪು || ೨ ||

ರಾತ್ರಿಯಾಕಾಶದಲಿ ಮಿನುಗುತಿಹ ತಾರೆಗಳ
ಎಣಿಸಲೆತ್ನಿಸಿದಂಥ ಒಂದು ನೆನಪು ||
ಅಡಿಕೆ ಮರಗಳ ತೋಟ ತಂಗಾಳಿಯಲಿ ತೂಗಿ
ಮನವ ಮುದಗೊಳಿಸಿದ್ದ ಒಂದು ನೆನಪು || ೩ ||

ಅಂಗಳದ ಕೊನೆಯಲ್ಲಿ ಪೇರಲೆಯ ಮರದಿಂದ
ದೊರೆಗಾಯಿ ಸವಿದಂಥ ಒಂದು ನೆನಪು ||
ಸೂರಗೆಯ ಹೂಗಂಧ ಹೊತ್ತು ತಂದಿರುತಿದ್ದ
ತಂಗಾಳಿ ಬೀಸಿನಲಿ ಒಂದು ನೆನಪು || ೪ ||

ಅಡಿಕೆ-ಬಾಳೇ-ಕಾಫಿ ತುಂಬಿ ತೂಗಿದ ತೋಟ
ಹಚ್ಚಹಸುರಿನ ನೋಟ ಒಂದು ನೆನಪು ||
ಗೋಧೂಳಿ ಸಮಯದಲಿ ಹಟ್ಟಿಯಲಿ ಕಟ್ಟಿದ್ದ
ಎಮ್ಮೆ ಅಮ್ಮನ ಕರೆದ ಒಂದು ನೆನಪು || ೫ ||

ಮಲ್ಲಿಗೆಯ ಗಿಡದಿಂದ ಮೊಗ್ಗ ಕೀಳುವ ಹೊತ್ತು
ದರೆಗೆ ಉರುಳಿಯೆ ಬಿದ್ದ ಒಂದು ನೆನಪು ||
ಬಚ್ಚಲಿನ ಕೊಳೆನೀರು ಕುಡಿದು ಹಸುರಾಗಿದ್ದ
ತೊಂಡೆ ಚಪ್ಪರವೆಂಬ ಒಂದು ನೆನಪು || ೬ ||

ನಿತ್ಯ ಪೂಜೆಗೆ ಒದಗಿ ಸತ್ಯ ಸೇವೆಯ ಗೈದ
ರತ್ನಗಂಧಿಗೆ ಗಿಡದ ಒಂದು ನೆನಪು ||
ಮನೆಯ ಅಂಗಳದಲ್ಲಿ ತಾನಾಗಿ ಅರಳಿದ್ದ
ಕಾಶಿತುಂಬೆಯ ಹೂವು ಒಂದು ನೆನಪು || ೭ ||

ಹಾಡ್ಯದಾ ಮಧ್ಯದಲಿ ಹೆಮ್ಮರದ ಬುಡದಲ್ಲಿ
ರಂಜದಾ ಹೂವಾಯ್ದ ಒಂದು ನೆನಪು ||
ಉದ್ದುದ್ದ ಮಾಲೆಯನು ಮಡಿಕೆ ಮಾಡುತ ಮುಡಿದು
ಹೆಮ್ಮೆ ಭಾವದಿ ಮೆರೆದ ಒಂದು ನೆನಪು || ೮ ||

ಮಧ್ಯಾಹ್ನ ಮಲ್ಲಿಗೆಯೊ ಗೋರಟೆಯ ಮೊಗ್ಗುಗಳೊ
ದಂಡೆ ಹೆಣೆಯುತ್ತಿದ್ದ ಒಂದು ನೆನಪು ||
ಕಾಡು ಗುಡ್ಡವ ಅಲೆದು ಬಗೆಬಗೆಯ ಹಣ್ಣುಗಳ
ಸವಿದಂತ ಬಾಲ್ಯದಾ ಒಂದು ನೆನಪು || ೯ ||

ಒಂದೊಂದೆ ಎನ್ನುತ್ತ ರಂಜ ಹೂವನು ಹೆಕ್ಕಿ
ಪೋಣಿಸಿಹ ಹೂಮಾಲೆ "ಒಂದು ನೆನಪು" ||
ಘಮಘಮವ ಸೂಸುತಲಿ ನಿಮ್ಮ ಮನವರಳಿತೇ ?
ಹಂಚಿಕೊಳ್ಳಿರಿ ನಿಮ್ಮ ಒಂದು ನೆನಪು || ೧೦ ||

- ಸುರೇಖಾ ಭೀಮಗುಳಿ
14/03/2016
ಚಿತ್ರ : Shankar Hebbar

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

No comments:

Post a Comment