Tuesday, March 29, 2016

" ಮನದ ಮಾಲಿ "

ಹಿರಿಯತನವನು ನಾವು ಒಪ್ಪಿಕೊಳದಿರಬೇಕೆ ?
ಯೌವ್ವನದ ಕಳೆಯಲ್ಲಿ ಮೆರೆಯವೇಕೆ ? ||
ಕೃತಕತೆಯ ಸೋಗಿನಲಿ ಕಳೆದು ಹೋಗಲೆ ಬೇಕೆ ?
ದೇವರಿಟ್ಟಂತೆ ನಾವ್ ಇದ್ದು ಬಿಡಬೇಕೆ ? || ೧ ||

ಕಪಟ ನಟನೆಯು ಏಕೆ ? ಹುಂಬತನ ನಮಗೇಕೆ ?
ಇದ್ದರಾಗದೆ ನಾವು ಇದ್ದ ಹಾಗೆ ? ||
ಶುಭಗಿ ನಾನೇ ಎಂಬ ಮುಖವಾಡ ಕಿತ್ತೊಗೆದು
ಇದ್ದು ಬಿಡುವೆನು ನಾನು ನನ್ನ ಹಾಗೆ || ೨ ||

ಬಿಡಿಸಿ ನಾ ಇಟ್ಟಿರುವೆ ಮನದ ಪದರುಗಳನ್ನು
ಬಿಡುಬೀಸು ಜೀವನವು ಇನ್ನು ಮುಂದೆ ||
ಬದುಕಿದ್ದು ಬಿಡಲಿನ್ನು ತೆರೆದ ಪುಸ್ತಕದಂತೆ
ಕದ್ದು ಮುಚ್ಚಿದ ಕಥೆಯು ಬೇಡ ತಂದೆ || ೩ ||

ಜಗದೆದುರು ತೆರೆದಿರುವೆ ಕಹಿಸಿಹಿಗಳೆಲ್ಲವನು
ನಾನು ಈ ಕ್ಷಣದಲ್ಲಿ ಖಾಲಿ ಖಾಲಿ ||
ಹೃದಯ ಸಿಂಹಾಸನದಲ್ಲಿ ಪವಡಿಸಿಹ ಪರಮಾತ್ಮ
ಅವನೆ ಇನ್ಮುಂದೆ ಈ ಮನದ ಮಾಲಿ || ೪ ||

- ಸುರೇಖಾ ಭೀಮಗುಳಿ
28/03/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Wednesday, March 23, 2016

" ಇನ್ನಷ್ಟು ಒಂದು ನೆನಪುಗಳು.... "

ಉದ್ದ ಹಗ್ಗವ ಕಟ್ಟಿ ಜೋಕಾಲೆ ಜೀಕುತಿರೆ
ಮಣೆಜಾರಿ ಬಿದ್ದಂಥ ಒಂದು ನೆನಪು ||
ಬಾಗಿಲಿನ ಸಂಧಿಯಲಿ ಕೈ ಬೆರಳು ಸಿಕ್ಕಿದ್ದು
ಆ ನೋವನುಂಡಿದ್ದು ಒಂದು ನೆನಪು || ೧ ||

ಸಂಪಿಗೆಯ ಮರ ಹತ್ತಿ ಹೂವು ಕೊಯ್ಯಲು ಹೋಗಿ
ನೇರ ಕೆಳಗುರುಳಿದ್ದ ಒಂದು ನೆನಪು ||
ಹಪ್ಪಳವ ಸುಡ ಹೊರಟು ಕೈಸುಟ್ಟುಕೊಂಡಂತೆ
ಕೈಬೊಬ್ಬೆ ಬಂದಂತೆ ಒಂದು ನೆನಪು || ೨ ||

ಗಡಿಬಿಡಿಯ ಓಟದಲಿ ಮುಗ್ಗರಿಸಿ ಬಿದ್ದಂಥೆ
ಮಂಡಿ ತರಚಿದ ಗಾಯ ಒಂದು ನೆನಪು ||
ಪಾದರಕ್ಷೆಯೆ ಇರದ ಪುಟ್ಟ ಪಾದದ ತುದಿಗೆ
ಕಲ್ಲು ಎಡವಿದ ನೋವು ಒಂದು ನೆನಪು || ೩ ||

ಪಿರಿಪಿರಿಯ ಮಳೆಯಲ್ಲಿ ಜಾರುವಂಗಳದಲ್ಲಿ
ಕಾಲು ಜಾರುತ ಬಿದ್ದ ಒಂದು ನೆನಪು ||
ಬಿದ್ದದ್ದೆ ಹೆಳೆಮಾಡಿ ಕೆಸರಾಟವಾಡುತ್ತ
ಜಗವನ್ನು ಮರೆತದ್ದು ಒಂದು ನೆನಪು || ೪ ||

ಸಣ್ಣ ಅಂಚಲಿ ಓಡಿ ಗದ್ದೆ ಕೆಸರಲಿ ಬಿದ್ದು
ಬಟ್ಟೆ ಕೊಳೆಯಾದಂತೆ ಒಂದು ನೆನಪು ||
ಹಸಿಹುಲ್ಲು ಕೊಯ್ಯುತಲಿ ಕೈಗಂದು ಚುಚ್ಚಿದ್ದು
ನಾಚಿಕೆಯ ಮುಳ್ಳೆಂದು ಒಂದು ನೆನಪು || ೫ ||

ಹಿಪ್ಪುನೇರಳೆ ಹಣ್ಣು ಮಿತಿಯ ಮೀರುತ ತಿಂದು
ನೀಲ್ನೀಲಿ ಕಕ್ಕಿದ್ದು ಒಂದು ನೆನಪು ||
ತಾರೆಕಾಯಿಯ ತಿಂದು ಪಿತ್ತ ನೆತ್ತಿಗೆ ಏರಿ
ತಲೆತಿರುಗಿ ಬಿದ್ದದ್ದು ಒಂದು ನೆನಪು || ೬ ||

ಅನುಭವದ ಪಾಡುಗಳು ಗೈದ ಪ್ರಮಾದಗಳು
ಅಷ್ಟಿಷ್ಟು ಅಲ್ಲೆಂದು ಒಂದು ನೆನಪು ||
ಬರೆದಷ್ಟು ಮುಗಿಯದೋ ನೆನಪಿನಂಗಳದಲ್ಲಿ
ಬೆಂಬತ್ತಿ ಕಾಡುತಿವೆ ’ಒಂದು ನೆನಪು’ || ೭ ||

- ಸುರೇಖಾ ಭೀಮಗುಳಿ
23/03/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Monday, March 14, 2016

" ಒಂದು ನೆನಪು.... "

ಮಲೆನಾಡ ಚಪ್ಪರದಿ ಸಂಜೆ ಇಳಿ ಬಿಸಿಲಿನಲಿ
ವಿರಮಿಸಿದ ಸುಖಘಳಿಗೆ ಒಂದು ನೆನಪು ||
ಸೂರ್ಯಾಸ್ತ ವೇಳೆಯಲಿ ಕೈತುತ್ತ ಕೊಟ್ಟಂಥ
ಅಕ್ಕನನು ನೆನೆಸುತಿದೆ ಒಂದು ನೆನಪು || ೧ ||

ಬಾನಿನಂಗಳದಲ್ಲಿ ಪಕ್ಷಿ ಗುಂಪದು ಹಾರಿ
ಚಿತ್ರಿಸಿದ ಚಿತ್ತಾರ ಒಂದು ನೆನಪು ||
ಬಣ್ಣದೋಕುಳಿಯಲ್ಲಿ ಮಿಂದೆದ್ದ ಆಗಸದ
ಸವಿರಂಗ ನೆನೆಸಿಹುದು ಒಂದು ನೆನಪು || ೨ ||

ರಾತ್ರಿಯಾಕಾಶದಲಿ ಮಿನುಗುತಿಹ ತಾರೆಗಳ
ಎಣಿಸಲೆತ್ನಿಸಿದಂಥ ಒಂದು ನೆನಪು ||
ಅಡಿಕೆ ಮರಗಳ ತೋಟ ತಂಗಾಳಿಯಲಿ ತೂಗಿ
ಮನವ ಮುದಗೊಳಿಸಿದ್ದ ಒಂದು ನೆನಪು || ೩ ||

ಅಂಗಳದ ಕೊನೆಯಲ್ಲಿ ಪೇರಲೆಯ ಮರದಿಂದ
ದೊರೆಗಾಯಿ ಸವಿದಂಥ ಒಂದು ನೆನಪು ||
ಸೂರಗೆಯ ಹೂಗಂಧ ಹೊತ್ತು ತಂದಿರುತಿದ್ದ
ತಂಗಾಳಿ ಬೀಸಿನಲಿ ಒಂದು ನೆನಪು || ೪ ||

ಅಡಿಕೆ-ಬಾಳೇ-ಕಾಫಿ ತುಂಬಿ ತೂಗಿದ ತೋಟ
ಹಚ್ಚಹಸುರಿನ ನೋಟ ಒಂದು ನೆನಪು ||
ಗೋಧೂಳಿ ಸಮಯದಲಿ ಹಟ್ಟಿಯಲಿ ಕಟ್ಟಿದ್ದ
ಎಮ್ಮೆ ಅಮ್ಮನ ಕರೆದ ಒಂದು ನೆನಪು || ೫ ||

ಮಲ್ಲಿಗೆಯ ಗಿಡದಿಂದ ಮೊಗ್ಗ ಕೀಳುವ ಹೊತ್ತು
ದರೆಗೆ ಉರುಳಿಯೆ ಬಿದ್ದ ಒಂದು ನೆನಪು ||
ಬಚ್ಚಲಿನ ಕೊಳೆನೀರು ಕುಡಿದು ಹಸುರಾಗಿದ್ದ
ತೊಂಡೆ ಚಪ್ಪರವೆಂಬ ಒಂದು ನೆನಪು || ೬ ||

ನಿತ್ಯ ಪೂಜೆಗೆ ಒದಗಿ ಸತ್ಯ ಸೇವೆಯ ಗೈದ
ರತ್ನಗಂಧಿಗೆ ಗಿಡದ ಒಂದು ನೆನಪು ||
ಮನೆಯ ಅಂಗಳದಲ್ಲಿ ತಾನಾಗಿ ಅರಳಿದ್ದ
ಕಾಶಿತುಂಬೆಯ ಹೂವು ಒಂದು ನೆನಪು || ೭ ||

ಹಾಡ್ಯದಾ ಮಧ್ಯದಲಿ ಹೆಮ್ಮರದ ಬುಡದಲ್ಲಿ
ರಂಜದಾ ಹೂವಾಯ್ದ ಒಂದು ನೆನಪು ||
ಉದ್ದುದ್ದ ಮಾಲೆಯನು ಮಡಿಕೆ ಮಾಡುತ ಮುಡಿದು
ಹೆಮ್ಮೆ ಭಾವದಿ ಮೆರೆದ ಒಂದು ನೆನಪು || ೮ ||

ಮಧ್ಯಾಹ್ನ ಮಲ್ಲಿಗೆಯೊ ಗೋರಟೆಯ ಮೊಗ್ಗುಗಳೊ
ದಂಡೆ ಹೆಣೆಯುತ್ತಿದ್ದ ಒಂದು ನೆನಪು ||
ಕಾಡು ಗುಡ್ಡವ ಅಲೆದು ಬಗೆಬಗೆಯ ಹಣ್ಣುಗಳ
ಸವಿದಂತ ಬಾಲ್ಯದಾ ಒಂದು ನೆನಪು || ೯ ||

ಒಂದೊಂದೆ ಎನ್ನುತ್ತ ರಂಜ ಹೂವನು ಹೆಕ್ಕಿ
ಪೋಣಿಸಿಹ ಹೂಮಾಲೆ "ಒಂದು ನೆನಪು" ||
ಘಮಘಮವ ಸೂಸುತಲಿ ನಿಮ್ಮ ಮನವರಳಿತೇ ?
ಹಂಚಿಕೊಳ್ಳಿರಿ ನಿಮ್ಮ ಒಂದು ನೆನಪು || ೧೦ ||

- ಸುರೇಖಾ ಭೀಮಗುಳಿ
14/03/2016
ಚಿತ್ರ : Shankar Hebbar

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Tuesday, March 1, 2016

" ಮುದ್ದು ಮಗಳ ಓಲೈಕೆ "

ಮುದ್ದು ಮಗಳನ್ನೊಮ್ಮೆ ಬಿಗಿದಪ್ಪಿ ಮುದ್ದಿಸುತ
ಮೃದುವಾಗಿ ಮೈದಡವಿ ಸಂತೈಸಿದೆ ||
ತಲೆಯ ನೇವರಿಸುತ್ತ ನೆತ್ತಿಯಾಘ್ರಾಣಿಸುತ
ಹೂಮುತ್ತ ಹಣೆಗೊತ್ತಿ ಓಲೈಸಿದೆ || ೧ ||

ಸ್ನೇಹಿತರ ಗುಂಪಿನಲ್ಲಿ ನಿನ್ನ ಬಗ್ಗೆಯೆ ಚರ್ಚೆ
ಶುಭವ ಹಾರೈಸಿಹರು ನೋಡು ಮಗಳೆ ||
ಸಣ್ಣ ವಿಷಯವನೆತ್ತಿ ಕೊರಗಿನೀ ಕರಗದಿರು
ಒಮ್ಮೆ ನೀ ನಕ್ಕುಬಿಡು ಬಿಟ್ಟು ರಗಳೆ || ೨ ||

ಹುಸಿಮುನಿಸ ತೋರದಲೆ ನಗುನಗುತ ಇದ್ದುಬಿಡು
ಹೂದೋಟದರಳಿರುವ ಹೂವಿನಂತೆ ||
ಹದಿನಾರ ಮೀರದಿರು ಯಕ್ಷಕನ್ಯೆಯರಂತೆ
ಹಾದಿಹೋಕರ ದೃಷ್ಟಿ ತಾಕದಂತೆ || ೩ ||

ನನ್ನ ಮುದ್ದಿನ ಮಗಳ ನಾನು ಮರೆಯುವುದುಂಟೆ
ನಿನಗೇತಕೀಬಗೆಯ ಅನುಮಾನ ಕಂದ ? ||
ಎಂಥ ಸೊಗಸಿದು ಮಗಳೆ ನಿನ್ನ ಸಹಚರ್ಯದಲಿ
ಮನವು ಅರಳಿಹುದಲ್ಲ ಅದುವು ನಿನ್ನಿಂದ ||

- ಸುರೇಖಾ ಭೀಮಗುಳಿ
02/03/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli