Sunday, December 13, 2015

" ಸಾಧನೆ "

ಹುಟ್ಟಿಷ್ಟು ವರ್ಷದಲಿ ಸಾಧಿಸಿದೆನೇನನ್ನು ?
ಹೇಗೆ ಹೇಳಲಿ ನಾನು ನಿಮ್ಮ ಮುಂದೆ ? ||
ಸಾಧನೆಯೆ ಮುಖ್ಯವೇ ? ಆತ್ಮತೃಪ್ತಿಯ ಮುಂದೆ
ಪ್ರಶ್ನೆಗುತ್ತರವನ್ನು ಹುಡುಕಿ ಬಂದೆ || ೧ ||

ಸಾಧನೆಯ ಅಳೆಯುವರು ಹೊರಗಿರುವ ಮಂದಿಗಳು
ಆತ್ಮ ತೃಪ್ತಿಯ ಭಾವ ನನ್ನದೇನೆ  ||
ಸಾಧನೆಯ ಗುರಿಯಿರಲಿ ಬೇಡವೆಂದವರಾರು ?
ಅದುವೆ ಜೀವನ ಗಮ್ಯವಲ್ಲ ತಾನೆ ?  || ೨ ||   

ಸಹಪಾಠಿಗಳು ಎಲ್ಲ ಸಾಧನೆಯ ಚಪ್ಪರಲಿ
ಕುಳಿತು ಮೆರೆದಿಹರೆಂದು ನಾನು ಬಲ್ಲೆ ||
ಅವರ ಸಾಧನೆ ನೋಡಿ ಕರುಬಲಾರೆನು ನಾನು
ಸ್ಪರ್ಧೆಯಲ್ಲಿನ ಓಟ ನಾನು ಒಲ್ಲೆ || ೩ ||

ನನ್ನ ಜೀವದ ಸೃಷ್ಟಿ ನಾನು ನೋಡುವ ದೃಷ್ಟಿ
ಭಿನ್ನವಾಗಿಹುದಲ್ಲ ಬದುಕಿನೆಡೆಗೆ ||
ಪ್ರೀತಿಯಂಮೃತ ಕಲಶ ಉಕ್ಕಿಹುದು ಹೃದಯದಲಿ
ಹಂಚ ಹೊರಟಿಹೆ ನಾನು ವಿಶ್ವದೆಡೆಗೆ || ೪ ||

- ಸುರೇಖಾ ಭೀಮಗುಳಿ
14/12/2015
ಚಿತ್ರಕೃಪೆ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

No comments:

Post a Comment